ರಾಯಚೂರು | ಕಳಪೆ ತೊಗರಿ, ಬಿಳಿ ಜೋಳ ಬೀಜ ಮಾರಾಟ : ಕಂಪನಿಗಳ ವಿರುದ್ದ ಕ್ರಮಕ್ಕೆ ಆಗ್ರಹ
ರಾಯಚೂರು : ಮುಂಗಾರು ಹಂಗಾಮಿನಲ್ಲಿ ಮಾರಾಟ ಮಾಡಿದ ಜಿಆರ್ಜಿ 152 ತೊಗರಿ ಬೀಜ ಹಾಗೂ ಹಿಂಗಾರು ಹಂಗಾಮಿನ ಬಿಳಿ ಜೋಳ ಬೀಜಗಳು ಕಳಪೆಯಾಗಿದ್ದು, ಕಂಪನಿಗಳ ವಿರುದ್ದ ಪ್ರಕರಣ ದಾಖಲಿಸಿ ನಷ್ಠಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಲಿಂಗಸುಗೂರು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಮುಂಗಾರು ಸಮಯದಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಿಂದ ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ಲಿಮಿಟೆಡ್ ಭಾರತ ಸರಕಾರದ ಅಧಿನಕ್ಕೊಳಪಟ್ಟ ಕಂಪನಿಯ ಜಿಆರ್ಜಿ 152 ತೊಗರಿ ಬೀಜವನ್ನು ಖರೀದಿಸಿ ಬಿತ್ತನೆ ಮಾಡಿದ್ದು ಸುಮಾರು ಐದಾರು ತಿಂಗಳು ಕಳೆದರೂ ತೊಗರಿ ಗಿಡಗಳು ಹೂ ಬಿಡುವುದಾಗಲಿ ಕಾಳು ಕಟ್ಟಿರುವುದಿಲ್ಲ. ಐದಾರು ಭಾರೀ ಔಷಧಿ ಸಿಂಪಡಣೆ ಮಾಡಿದರೂ ಬೆಳೆ ಬಾರದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ದೂರಿದರು.
ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಕಂಪನಿಯ ಎಂ-15-1 ಬಿಳಿ ಜೋಳ ಬೀಜವನ್ನು ಖರೀದಿಸಿ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿ ಎರಡು ತಿಂಗಳು ಕಳೆದರೂ ಬೆಳೆ ಬೆಳೆದಿಲ್ಲ. ರೈತರು ನಷ್ಟ ಅನುಭವಿಸುವಂತಾಗಿದೆ. ಕಳಪೆ ಬೀಜ ಮಾರಾಟ ಮಾಡಿದ ಕಂಪನಿಗಳ ವಿರುದ್ದ ಪ್ರಕರಣ ದಾಖಲಿಸಬೇಕು. ರೈತರಿಗೆ ನಷ್ಠ ಪರಿಹಾರ ನೀಡಬೇಕು. ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿ ಕಂಪನಿಗಳ ವಿರುದ್ದ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಶಿವಪುತ್ರ ನಂದಿಹಾಳ, ತಾಲ್ಲೂಕು ಅಧ್ಯಕ್ಷ ದುರ್ಗಾ ಪ್ರಸಾದ್, ಲಾಲ್ಸಾಬ, ಆನಂದ, ಬಸವರಾಜ ಅಂಗಡಿ, ಹನುಮನಗೌಡ, ವೀರನಗೌಡ, ಮಲ್ಲಯ್ಯ ಸ್ವಾಮಿ ಸೇರಿದಂತೆ ಅನೇಕರಿದ್ದರು.