ರಾಯಚೂರು | ಬಾಂಗ್ಲಾ ಹಿಂದೂಗಳ ಪರ ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಬಳಕೆಗೆ ಟೀಕೆ

Update: 2024-12-04 08:40 GMT

ರಾಯಚೂರು : ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಹಿಂದುತ್ವ ಸಂಘಟನೆಗಳಿಂದ ಬುಧವಾರ ನಡೆದ ಬಾಂಗ್ಲಾದೇಶದ ಹಿಂದೂಗಳ ಪರ ನಡೆದ ಪ್ರತಿಭಟನೆಯಲ್ಲಿ ಕಾಲೇಜುಗಳ ವಿದ್ಯಾರ್ಥಿಗಳನ್ನು‌ ಬಳಸಿಕೊಂಡಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

ಬಾಂಗ್ಲಾ ದೇಶದಲ್ಲಿ ಇಸ್ಕಾನ್‌ನ ಚಿನ್ಮಯ‌ಕೃಷ್ಣ ದಾಸ್ ಅವರ ಬಂಧನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ‌ ವಿವಿಧ ಸ್ವಾಮೀಜಿಗಳು, ವಿವಿಧ ಸಂಘಟನೆಗಳ ಮುಖಂಡರು, ಬಿಜೆಪಿ ನಾಯಕರು ಭಾಗವಹಿಸಿದ್ದರು.

ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿದ್ದಲ್ಲದೇ ಸುಡು ಬಿಸಿಲಿನಲ್ಲಿ ವಿದ್ಯಾರ್ಥಿನಿಯರನ್ನು ಕೂರಿಸಿಕೊಂಡು ರಾಜಕೀಯವಾಗಿ ಮತ್ತು ಧಾರ್ಮಿಕ ಪರವಾಗಿರುವ ವೇದಿಕೆಗಳಲ್ಲಿ ವಿದ್ಯಾರ್ಥಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಪ್ರಗತಿಪರ ಸಂಘಟನೆಗಳ‌ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತೀಯ ಕ್ರಾಂತಿಕಾರಿ ಯುವಜನ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ದಲಿತಪರ ಸಂಘಟನೆಗಳ ಮುಖಂಡರಾದ ಅಜೀಜ ಜಾಗೀರದಾರ್, ರವಿಚಂದ್ರ ಪರಶುರಾಮ ಅರೋಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಎಬಿವಿಪಿ ಮೂಲಕ ಪ್ರತಿಭಟನೆಯಲ್ಲಿ ಭಾಗಿದ್ದಾರೆ ಎನ್ನಲಾಗಿದ್ದು, ಪೊಲೀಸರು, ಕಾಲೇಜಿನ ಪ್ರಾಚಾರ್ಯರ ಅನುಮತಿಯ ಮೇರೆಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.

ಈ ಕುರಿತು ಕಾಲೇಜಿನ ಪ್ರಾಚಾರ್ಯ ಗೋಪಾಲ ನಾಯಕ ಪ್ರತಿಕ್ರಿಯಿಸಿ, ಎಬಿವಿಪಿ ಸಂಘಟನೆಯವರು ನಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಅನುಮತಿ ಪಡೆದಿದ್ದರು. ನಾವು ಪ್ರತಿಭಟನೆಯಲ್ಲಿ ಭಾಗವಹಿಸುವುದು ವಿದ್ಯಾರ್ಥಿನಿಯರ ಇಚ್ಛೆಗೆ ಬಿಡಲಾಗಿತ್ತು. ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News