ರಾಯಚೂರು | ಸಿಂಧನೂರು ಕಳ್ಳತನ ಪ್ರಕರಣ; 90 ಗ್ರಾಂ ಚಿನ್ನ,1368 ಗ್ರಾಂ ಬೆಳ್ಳಿ ಜಪ್ತಿ
ರಾಯಚೂರು : ಜಿಲ್ಲೆಯ ಸಿಂಧನೂರು ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯ ಮಾರವಾಡಿ ಗಲ್ಲಿಯಲ್ಲಿ ನ.7 ರಂದು ನಡೆದ ಎರಡು ಮನೆಗಳ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ಬುಧವಾರ 90 ಗ್ರಾಂ ಚಿನ್ನ ಮತ್ತು 1368 ಗ್ರಾಂ. ಬೆಳ್ಳಿ ಜಪ್ತಿ ಮಾಡಿಕೊಂಡಿದ್ದಾರೆ.
ಸಬ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಅವರು ಕಾರ್ಯಚರಣೆ ಮಾಡುವ ಮೂಲಕ ಕಳ್ಳತನದ 90 ಗ್ರಾಂ ಚಿನ್ನ ಮತ್ತು 1368 ಗ್ರಾಂ.ಬೆಳ್ಳಿ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಮಾರವಾಡಿ ಗಲ್ಲಿಯಲ್ಲಿ ನ.7 ರಂದು ಎರಡು ಮನೆಗಳಲ್ಲಿ ಬಂಗಾರ ಹಾಗೂ ಬೆಳ್ಳಿಯ ಆಭರಣಗಳ ಕಳ್ಳತನ ನಡೆದ ಹಿನ್ನೆಲೆಯಲ್ಲಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಹರ್ ಠಾಣೆ ಇನ್‌ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ನ.13 ರಂದು ಬೆಳಗಿನ ಜಾವ ಗಂಗಾವತಿ ರಸ್ತೆಯ ವಿನಯ್ ರೆಸಿಡೆನ್ಸಿ ಕ್ರಾಸ್ನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿ ಮಸ್ತಾನ್ ಅಲಿಯಾಸ್ ಮಚ್ಚು ಚಾಂದಪಾಷ ಎಂಬಾತನನ್ನು ಬಂಧಿಸಿ ಕಳ್ಳತನದ ಎರಡು ಪ್ರಕರಣಗಳಿಗೆ ಸಂಬಂಧಿಸಿದ 7,20,320 ರೂ.ಬೆಲೆ ಬಾಳುವ 90.04 ಗ್ರಾಂ ಚಿನ್ನದ ಆಭರಣ, 1,27,224 ರೂ. ಮೌಲ್ಯದ 1368 ಗ್ರಾಂ ಬೆಳ್ಳಿ ಆಭರಣ, 9,200 ರೂ. ಅಂದಾಜು ಮೌಲ್ಯದ ರಿಯಲ್ ಮಿ ಮೊಬೈಲ್ ಹೀಗೆ ಒಟ್ಟು 8,56,744 ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಅತ್ಯಂತ ತ್ವರೀತ ಗತಿಯಲ್ಲಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ವಿಶೇಷ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ.
ವಿಶೇಷ ತಂಡದಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳಾದ ಬಸವರಾಜ, ಬೆಟ್ಟಯ್ಯ, ಸಿಬ್ಬಂದಿ ಸಂಗನಗೌಡ, ಶರಣರೆಡ್ಡಿ, ಆದಯ್ಯ, ಸಿದ್ದಪ್ಪ, ಖಲಿಲಪಾಷ, ಶರಣಬಸವ ಇದ್ದರು.