ರಾಯಚೂರು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ : ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಧಿಸೂಚನೆ
ರಾಯಚೂರು : ರಾಯಚೂರು ನಗರಸಭೆಯನ್ನು ರಾಯಚೂರು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ರಾಜ್ಯ ಸರಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ಇತ್ತೀಚೆಗೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ನಗರಸಭೆಯನ್ನು ಮಹಾ ನಗರಪಾಲಿಕೆಯನ್ನಾಗಿಸುವ ಬಗ್ಗೆ ತಿರ್ಮಾನಿಸಲಾಗಿತ್ತು. ಬಳಿಕ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದೇ ಇರುವುದರಿಂದ ಅಧಿಕೃತ ಅಧಿಸೂಚನೆಯನ್ನು ನಗರಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಹೊರಡಿಸಿದ್ದಾರೆ.
ನಗರಸಭೆ ವ್ಯಾಪ್ತಿಗೆ 43.85 ಕಿ.ಮೀ. ವ್ಯಾಪ್ತಿ ಹಾಗೂ ಮೂರು ಲಕ್ಷ ಜನಸಂಖ್ಯೆಯನ್ನು ಪರಿಗಣಿಸಲಾಗಿದೆ. ಹೊಸದಾಗಿ ಯಾವುದೇ ಪ್ರದೇಶ ಸೇರ್ಪಡೆಗೊಳಿಸದೇ ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿರುವ ಪ್ರದೇಶವನ್ನೇ ಮಹಾನಗರ ಪಾಲಿಕೆ ವ್ಯಾಪ್ತಿಯನ್ನಾಗಿಸಲು ನಿರ್ಧರಿಸಲಾಗಿದೆ.
ನಗರದ ಬಹು ವರ್ಷಗಳ ಬೇಡಿಕೆಯಾಗಿದ್ದ ಮಹಾನಗರ ಪಾಲಿಕೆಯ ಮಾಡುವ ಬೇಡಿಕೆ ಈಡೇರಿಕೆಯಾಗಿದ್ದು, ರಾಜ್ಯ ಸರಕಾರ ಮಹಾನಗರ ಪಾಲಿಕೆ ಅಗತ್ಯ ಸಿಬ್ಬಂದಿ, ಅಧಿಕಾರಿಗಳು ಹಾಗೂ ಸಕಲ ಸೌಕರ್ಯಗಳನ್ನು ಒದಗಿಸಲು ಸರಕಾರ ಮುಂದಾಗಬೇಕಾಗಿದೆ.