ಚನ್ನಪಟ್ಟಣ ಉಪ ಚುನಾವಣೆ | ನಾನೇ ಎನ್‍ಡಿಎ ಮೈತ್ರಿ ಅಭ್ಯರ್ಥಿ : ಸಿ.ಪಿ.ಯೋಗೇಶ್ವರ್ ವಿಶ್ವಾಸ
ರಾಮನಗರ : ‘ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಎನ್‍ಡಿಎ ಮೈತ್ರಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ. ವರಿಷ್ಠರು ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಪ್ರಕಟಿಸಿದ್ದಾರೆ.
ಬುಧವಾರ ರಾಮನಗರದ ಖಾಸಗಿ ರೆಸಾರ್ಟ್‍ನಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಅವರು, ಚನ್ನಪಟ್ಟಣ ಕ್ಷೇತ್ರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜಕೀಯ ಮಾಡುವುದಿಲ್ಲ. ಆದುದರಿಂದ, ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಆತಂಕ ಪಡುವುದು ಬೇಡ ಎಂದು ಸ್ಪಷ್ಟನೆ ನೀಡಿದರು.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಯಬೇಕಾದರೆ ಚನ್ನಪಟ್ಟಣ ಕ್ಷೇತ್ರದ ಈ ಉಪ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಅನಿವಾರ್ಯ. ಬಿಜೆಪಿ ಹಾಗೂ ಜೆಡಿಎಸ್ ವರಿಷ್ಠರು ನನ್ನ ಹೆಸರು ಅಂತಿಮಗೊಳಿಸಿದ್ದಾರೆ ಎಂಬ ಮಾಹಿತಿಯಿದೆ. ನನಗೆ ಟಿಕೆಟ್ ಸಿಗುವು ವಿಶ್ವಾಸ ಇದೆ ಎಂದು ಯೋಗೇಶ್ವರ್ ಇದೇ ಸಂದರ್ಭದಲ್ಲಿ ಭರವಸೆ ವ್ಯಕ್ತಪಡಿಸಿದರು.
ನನ್ನ ಅಭಿಮಾನಿಗಳು ಹಾಗೂ ಕ್ಷೇತ್ರದಲ್ಲಿರುವ ನಮ್ಮ ಕಾರ್ಯಕರ್ತರು ಈ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ಕುಮಾರಸ್ವಾಮಿ ಪ್ರಜ್ಞಾವಂತರಿದ್ದು, ಎಲ್ಲರನ್ನೂ ಸಮಾಧಾನಗೊಳಿಸಿ, ನನಗೆ ಟಿಕೆಟ್ ಕೊಡಿಸುತ್ತಾರೆ ಎಂದು ಅವರು ಹೇಳಿದರು.
ಒಂದು ವೇಳೆ ನನಗೆ ಟಿಕೆಟ್ ಸಿಗದಿದ್ದರೆ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಹೇಳಿವಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ತಮಗೆ ಟಿಕೆಟ್ ಕೈತಪ್ಪಿದ್ದಲ್ಲಿ ಸ್ವತಂತ್ರ ಸ್ಪರ್ಧೆ ಮಾಡುವ ಮುನ್ಸೂಚನೆಯನ್ನು ಯೋಗೇಶ್ವರ್ ಇದೇ ಸಂದರ್ಭದಲ್ಲಿ ನೀಡಿದರು.