ಭ್ರಷ್ಟಾಚಾರವೇ ನಿಮ್ಮ ತಾಯಿ-ತಂದೆ, ಭ್ರಷ್ಟಾಚಾರವೇ ನಿಮ್ಮ ಬಂಧು ಬಳಗ : ಬಿಜೆಪಿ-ಜೆಡಿಎಸ್ ನಾಯಕರನ್ನು ಕುಟುಕಿದ ಡಿಕೆಶಿ
ಬೆಂಗಳೂರು: ‘ಭ್ರಷ್ಟಾಚಾರವೇ ನಿಮ್ಮ ತಾಯಿ-ತಂದೆ, ಭ್ರಷ್ಟಾಚಾರವೇ ನಿಮ್ಮ ಬಂಧು-ಬಳಗ, ಭ್ರಷ್ಟಾಚಾರ ಮಾಡಿರುವ ನಿಮ್ಮನ್ನು ಮೆಚ್ಚನಾ ಪರಮಾತ್ಮನು’ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ-ಜೆಡಿಎಸ್ ನಾಯಕರನ್ನು ಲೇವಡಿ ಮಾಡಿದ್ದಾರೆ.
ಶನಿವಾರ ರಾಮನಗರದಲ್ಲಿ ಬಿಜೆಪಿ-ಜೆಡಿಎಸ್ ಪಾದಯಾತ್ರೆ ವಿರುದ್ಧ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ-ಜೆಡಿಎಸ್ ನಾಯಕರು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಅವರ ಭ್ರಷ್ಟಾಚಾರ ವಿಚಾರಗಳನ್ನು ಅನಾವರಣಗೊಳಿಸುವುದರ ಜತೆಗೆ ನಮ್ಮ ಪಕ್ಷ ಸಂಘಟನೆಗೂ ಅವಕಾಶ ಕಲ್ಪಿಸಿದ್ದಾರೆ’ ಎಂದು ಹೇಳಿದರು.
ನನ್ನ ನಾಯಕತ್ವಕ್ಕೆ 135 ಸೀಟು, ನಿಮ್ಮ ನಾಯಕತ್ವಕ್ಕೆ 19 ಸೀಟು: ‘ಮಿಸ್ಟರ್ ಕುಮಾರಸ್ವಾಮಿ, ನಾನು ತಿಹಾರ್ ಜೈಲನ್ನೂ ನೋಡಿ ಆಗಿದೆ, ನೀವು ನನ್ನ ಹಾಗೂ ನನ್ನ ಕುಟುಂಬದ ಮೇಲೆ ಹಾಕಿರುವ ಕೇಸ್‍ಗಳನ್ನು ನೋಡಿ ಆಯಿತು. ಇದಾದ ನಂತರವೇ ಜನ ಈ ಡಿ.ಕೆ. ಶಿವಕುಮಾರ್ ನಾಯಕತ್ವಕ್ಕೆ 135 ಸೀಟುಗಳನ್ನು ಕೊಟ್ಟು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ನಿನ್ನ ನಾಯಕತ್ವಕ್ಕೆ ಜನ ಬರೀ 19 ಸೀಟು ಕೊಟ್ಟಿದ್ದಾರೆ’ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.
‘ಪೆನ್‍ಡ್ರೈವ್ ಪ್ರಕರಣ’ ಬಿಜೆಪಿ ಮೌನವೇಕೆ?: ಮಾಜಿ ಶಾಸಕ ಪ್ರೀತಂಗೌಡನನ್ನು ವೇದಿಕೆಯಲ್ಲಿಟ್ಟುಕೊಂಡು ನನ್ನನ್ನು ಪಾದಯಾತ್ರೆ, ಸಭೆಗೆ ಕರೆಯುತ್ತಾರೆ. ಹೀಗಾಗಿ ನಾನು ಭಾಗವಹಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಹೋಗಿದ್ದಾರೆ. ಅವರ ಮಾತಿಗೂ ಕೃತಿಗೂ ಸಂಬಂಧವೇ ಇರುವುದಿಲ್ಲ. ಪೆನ್‍ಡ್ರೈವ್ ಪ್ರಕರಣ ಹೊರ ಬಂದಾಗ, ನನಗೂ ಪ್ರಜ್ವಲ್ ರೇವಣ್ಣಗೂ ಸಂಬಂಧವಿಲ್ಲ, ನನಗೂ ರೇವಣ್ಣ ಕುಟುಂಬಕ್ಕೂ ಸಂಬಂಧವಿಲ್ಲ. ಅವರ ಕುಟುಂಬವೇ ಬೇರೆ, ನಮ್ಮ ಕುಟುಂಬವೇ ಬೇರೆ ಎಂದು ಹೇಳಿದ್ದರು. ಈಗ ನಿಮ್ಮ ಮಾತು ಎಲ್ಲಿ ಹೋಯ್ತು? ನೀವು ಒಂದಾಗಿಯೇ ಇರಿ. ನಿಮ್ಮನ್ನು ಬೇರೆ ಮಾಡುವ ಉದ್ದೇಶ ನನ್ನದಲ್ಲ. ಆದರೆ ನಿಮ್ಮ ಮಾತು ಕಾಲಕ್ಕೆ ತಕ್ಕಂತೆ ಬದಲಾಗದಿರಲಿ’ ಎಂದು ಅವರು ಟೀಕಿಸಿದರು.
‘ಪೆನ್‍ಡ್ರೈವ್ ಅನ್ನು ಪ್ರೀತಂಗೌಡ ಹಂಚಿದ್ದಾನೆಂದು ಕುಮಾರಸ್ವಾಮಿ ನೀಡಿರುವ ಹೇಳಿಕೆ ಬಗ್ಗೆ ಬಿಜೆಪಿ ನಾಯಕರೇಕೆ ಚರ್ಚೆ ಮಾಡುತ್ತಿಲ್ಲ. ಮಹಿಳೆಯರ ರಕ್ಷಣೆ ಬಗ್ಗೆ ಮಾತನಾಡುವ ದೇಶದ ಪ್ರಧಾನಿ ಈ ಪ್ರಕರಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಬಿಜೆಪಿ ನಾಯಕರು ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ? ಈ ಬಗ್ಗೆ ಚರ್ಚೆ ಮಾಡಿ ಎಂದು ಅವರು ಆಗ್ರಹಿಸಿದರು.
ನಿಮ್ಮ ತಂದೆ ರಾಜೀನಾಮೆ ಕೊಟ್ಟಿದ್ದೇಕೆ?: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ನಿಮ್ಮ ತಂದೆ ವಿಧಾನಸೌಧದಲ್ಲಿ ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಿದ್ದು ಏಕೆ? ಈ ಬಗ್ಗೆ ನೀವು ಉತ್ತರ ನೀಡಬೇಕು. ಈ ಹಿಂದೆ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಜೈಲಿಗೆ ಹೋಗಿದ್ದೇಕೆ? ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿದ್ದೇಕೆ? ವಿಜಯೇಂದ್ರ ಪಾದಯಾತ್ರೆ ಬದಲು, ಯಡಿಯೂರಪ್ಪ ಜೈಲಿಗೆ ಹೋಗಲು ಜೆಡಿಎಸ್ ಕಾರಣವಾಗಿದ್ದರ ಬಗ್ಗೆಯೂ ಉತ್ತರ ನೀಡಬೇಕು ಎಂದು ಡಿಕೆಶಿ ಸವಾಲು ಹಾಕಿದರು.
ಗೌಡರ ಕುಟುಂಬದ ಬಗ್ಗೆ ಬಿಜೆಪಿ ಜಾಹೀರಾತು: ‘ವಿಧಾನಸಭೆ ಚುನಾವಣೆ ಮುನ್ನ ಬಿಜೆಪಿಯವರು ‘ದೇವೇಗೌಡರ ಕುಟುಂಬದ ಭೂಕಬಳಿಕೆಯ ಪಕ್ಷಿನೋಟ’ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಮುಡಾದಲ್ಲಿ ಆ ಕುಟುಂಬ ಮಾಡಿದ ಅಕ್ರಮ ನಿವೇಶನಗಳ ಬಗ್ಗೆ ಕುಮಾರಸ್ವಾಮಿ ಅರ್ಜಿ ಸಮೇತ ಪ್ರಕಟಣೆ ಮಾಡಿದ್ದಿರಿ. ಈ ಬಗ್ಗೆ ಉತ್ತರ ನೀಡುವಿರಾ ಯಡಿಯೂರಪ್ಪನವರೇ? ಅಶೋಕಣ್ಣ, ಸಿ.ಟಿ.ರವಿ ಇದಕ್ಕೆ ಉತ್ತರ ಕೊಡ್ರಪ್ಪ? ಎಂದು ಆಗ್ರಹಿಸಿದರು.
ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ, ಬೊಮ್ಮಾಯಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಿವೇಶನ ನೀಡಿದ್ದೀರಿ. ಈ ನಿವೇಶನಗಳನ್ನು ಈಗ ಸಚಿವರಾಗಿರುವ ಭೈರತಿ ಸುರೇಶ್ ಕೊಟ್ಟಿದ್ದಾರಾ? ಸಿದ್ದರಾಮಯ್ಯ ಈ ನಿವೇಶನ ನೀಡಲು ಸಹಿ ಹಾಕಿದ್ದಾರಾ? ಬಿಜೆಪಿಯವರು ಮುಡಾದಲ್ಲಿ ಅಧಿಕಾರ ಹೊಂದಿದ್ದಾಗ ಈ ನಿವೇಶನ ಹಂಚಿಕೆ ಮಾಡಲಾಗಿದೆ. ಮುಡಾದವರು ತಮ್ಮ ತಪ್ಪಿಗೆ ಪರಿಹಾರವಾಗಿ ಸಿದ್ದರಾಮಯ್ಯ ಪತ್ನಿಗೆ ನಿವೇಶನ ನೀಡಿದ್ದಾರೆ. ಈ ವಿಚಾರ ಚರ್ಚೆ ಮಾಡುವ ಮುನ್ನ ನೀವು ಜೆಡಿಎಸ್ ನಾಯಕರ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಚರ್ಚೆ ಮಾಡಿ ಎಂದು ಹೇಳಿದರು.