ಕನಕಪುರದ ನಿವಾಸದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಜನಸ್ಪಂದನ
ಕನಕಪುರ : ಸರಕಾರದ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ, ಸಹಾಯ ಧನ, ನಿವೇಶನ, ಮನೆ, ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆ ಬಾವಿ, ಸರಕಾರಿ ಶಾಲೆ ಶಿಕ್ಷಕರ ನೇಮಕ, ಕಾಲೇಜು ಶುಲ್ಕ ಪಾವತಿಗೆ ಸಹಾಯ ಸೇರಿದಂತೆ ಅರ್ಜಿ ಹೊತ್ತು ತಂದ ನೂರಾರು ಜನರ ಸಮಸ್ಯೆಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪರಿಹಾರ ನೀಡುವ ಭರವಸೆ ಕೊಟ್ಟರು.
ರವಿವಾರ ಕನಕಪುರದಲ್ಲಿರುವ ತಮ್ಮ ನಿವಾಸದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ ಶಿವಕುಮಾರ್, ನೂರಾರು ಜನರ ಅಹವಾಲುಗಳನ್ನು ಸ್ವೀಕರಿಸಿದರು. ಉಯ್ಯಂಬಳ್ಳಿ ಪಂಚಾಯ್ತಿ ಸದಸ್ಯ ರಮೇಶ್ ನಾಯಕ್ ಎಂಬವರು ತಮ್ಮ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿದರು. ಗ್ರಾಮಸ್ಥ ಮಲ್ಲೇಶ್ ಎಂಬವರು ತೋಟಗಾರಿಕೆ ಇಲಾಖೆಯ ಫಾರಂ ಗೇಟ್ ಯೋಜನೆಯಲ್ಲಿ ಕೊಟ್ಟಿಗೆ ಕಟ್ಟಲು ಸಹಾಯ ದೊರಕಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.
ಲತಾ ಬಾಯಿ ಎಂಬವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದರು. ಸಿದ್ದ ನಾಯಕ್ ಎಂಬವರು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆಸಿಕೊಡಬೇಕು ಎಂದು ಮನವಿ ಸಲ್ಲಿಸಿದರು. ಈ ಎಲ್ಲ ಮನವಿಗಳನ್ನು ಪರಿಶೀಲಿಸಿದ ಉಪ ಮುಖ್ಯಮಂತ್ರಿ, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಈ ಅರ್ಜಿಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.
ಮಾಲಪ್ಪನ ದೊಡ್ಡಿಯ ನಿವಾಸಿ ಮಹದೇವಸ್ವಾಮಿ ಎಂಬವರು ಟ್ಯಾಕ್ಸಿ ಖರೀದಿ ಮಾಡಲು ಸರಕಾರದಿಂದ ನೀಡುವ 3 ಲಕ್ಷ ರೂ. ಸಹಾಯಧನ ಕೊಡಿಸಬೇಕು ಎಂಬ ಮನವಿಗೆ ಶಿವಕುಮಾರ್ ಸಹಿ ಹಾಕಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರು.
ಉಯ್ಯಂಬಳ್ಳಿ, ಯಡಮಾರನಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕು ಎಂಬ ಗ್ರಾಮಸ್ಥರ ಮನವಿ ಒಪ್ಪಿದ ಶಿವಕುಮಾರ್, ಸಮುದಾಯ ಭವನ ನಿರ್ಮಾಣದ ಭರವಸೆ ನೀಡಿದರು.
ಮೆಲ್ಲಕೋಟೆ ರೆಹಮಾನಿಯ ನಗರದ ಮುಹಮ್ಮದ್ ಅಸ್ಲಮ್ ಎಂಬವರು, ವಾರ್ಡ್ 31ರಲ್ಲಿ ಕೊಳವೆ ಬಾವಿ ಇದ್ದರೂ ನೀರಿಲ್ಲ. ಸ್ಲಂ ಬೋರ್ಡ್‍ನ 20 ಮನೆಗಳಿದ್ದರೂ ನೀರಿನ ಸೌಲಭ್ಯವಿಲ್ಲ ಎಂದು ಅಹವಾಲು ಸಲ್ಲಿಸಿದರು. ಈ ಬಗ್ಗೆ ಕೂಡಲೆ ಗಮನ ಹರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಸೂಚನೆ ನೀಡಿದರು.
ಕನಕಪುರ ಟೌನ್ ಮುತ್ತತ್ತಿ ವಠಾರ ನಿವಾಸಿ ಜಯಲಕ್ಷ್ಮಿ ಎಂಬವರು ತಮಗೆ ನಿವೇಶನ ಆಗಿದ್ದು, ಮನೆ ಕಟ್ಟಿಕೊಡಲು ಹಣವನ್ನೂ ಪಾವತಿಸಿದ್ದು, ಕಲ್ಲು ಸಿಕ್ಕಿದೆ ಎಂಬ ಕಾರಣಕ್ಕೆ ಇನ್ನು ಮನೆ ಆಗಿಲ್ಲ ಎಂದರು. ಇವರ ಸಮಸ್ಯೆ ಬಗೆಹರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಶಿವಕುಮಾರ್ ಸೂಚನೆ ನೀಡಿದರು.
ಚನ್ನಪಟ್ಟಣದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಹಂಶಿಕಾ, ಹಂಶಿಣಿ ಅವರು ಕಾಲೇಜು ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಮನೆಗೆ ಕಳುಹಿಸಿದ್ದು, ಅವರಿಗೆ ಶುಲ್ಕ ಪಾವತಿಗೆ ನೆರವು ನೀಡಬೇಕು ಎಂದು ಶಶಾಂಕ್ ಎಂಬವರು ಮನವಿ ಸಲ್ಲಿಸಿದರು. ಇವರ ಅರ್ಜಿ ಸ್ವೀಕರಿಸಿದ ಶಿವಕುಮಾರ್ ಕಾಲೇಜಿನ ಜತೆ ಚರ್ಚೆ ಮಾಡಿ ನೆರವು ನೀಡುವುದಾಗಿ ಭರವಸೆ ನೀಡಿದರು.
ಕೂತಗೊಂಡನ ಹಳ್ಳಿ, ಸರಕಾರಿ ಶಾಲೆಯಲ್ಲಿ 80 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರಿದ್ದಾರೆ ಎಂದು ಗ್ರಾಮಸ್ಥರು ಮನವಿ ನೀಡಿದಾಗ, ಕೂಡಲೇ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಶಿವಕುಮಾರ್ ಭರವಸೆ ನೀಡಿದರು.