ಜನರಿಂದಲೇ ಲೂಟಿ ಮಾಡಿ, 2 ಸಾವಿರ ಕೊಟ್ಟರೆ ಏನು ಪ್ರಯೋಜನ : ರಾಜ್ಯ ಸರಕಾರದ ವಿರುದ್ಧ ಎಚ್‌ಡಿಕೆ ವಾಗ್ದಾಳಿ

Update: 2024-11-08 16:12 GMT
PC:X/@hd_kumaraswamy

ಬೆಂಗಳೂರು : ಜನರಿಂದಲೇ ಹಣ ಲೂಟಿ ಮಾಡಿ, ಆನಂತರ 2 ಸಾವಿರ ಕೊಟ್ಟರೆ ಏನು ಪ್ರಯೋಜನ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಶುಕ್ರವಾರ ಚನ್ನಪಟ್ಟಣ ವ್ಯಾಪ್ತಿಯ ಗ್ರಾಮಗಳಲ್ಲಿ ಎನ್‍ಡಿಎ ಅಭ್ಯರ್ಥಿ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಈಗ ವಿದ್ಯುತ್‍ನ ಟಿಸಿ ಹಾಕಿಸಲು 2.5 ಲಕ್ಷ ಬೇಕು. ಜನರ ದುಡ್ಡು ಕಸಿದುಕೊಂಡು 2 ಸಾವಿರ ಕೊಟ್ಟರೆ ಏನು ಪ್ರಯೋಜನ? ಮುಂದೆ ಈ ಸರಕಾರ ದಿವಾಳಿ ಆಗಲಿದ್ದು, ಇದರಲ್ಲಿ ಅನುಮಾನ ಇಲ್ಲ ಎಂದು ಟೀಕಿಸಿದರು.

ಕೆರೆಗಳಲ್ಲಿ ಮೀನು ಹಿಡಿದು ನೆಮ್ಮದಿಯ ಜೀವನ ಮಾಡುತ್ತಿದ್ದ ಗಂಗಾ ಮತಸ್ತರ ಜೀವನ ಹಾಳು ಮಾಡಿದ ವ್ಯಕ್ತಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಗಂಗಾ ಮತಸ್ತರು ಕೆರೆಗಳನ್ನು ನಂಬಿಕೊಂಡಿದ್ದರು. ಅಂತಹ ಕೆರೆಗಳಲ್ಲಿ ಮೀನು ಹಿಡಿಯುವುದನ್ನು ಟೆಂಡರ್ ಕರೆದು ಬಲಿಷ್ಟರಿಗೆ ಕೆರೆಗಳನ್ನು ಒಪ್ಪಿಸಲಾಯಿತು. ತಲೆತಲಾಂತರಿಂದ ಕೆರೆಗಳನ್ನು ನಂಬಿದ್ದ ಗಂಗಾ ಮತಸ್ತರು ಬೀದಿ ಪಾಲಾದರು ಎಂದು ಆರೋಪಿಸಿದರು.

ಇನ್ನೂ, ಸಿ.ಪಿ.ಯೋಗೇಶ್ವರ್ ತಮಗೆ ರಾಜಕೀಯ ಮರುಜನ್ಮ ನೀಡಿದ ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಇನ್ನಿಲ್ಲದ ನೋವು ಕೊಟ್ಟರು. ಅವರ ವ್ಯಕ್ತಿತ್ವವನ್ನು ಹಾಳು ಮಾಡುವ ಪ್ರಯತ್ನ ಮಾಡಿದರು. ಹಾಗೆಯೇ ಸದಾನಂದ ಗೌಡರ ಬಗ್ಗೆಯೂ ಈ ವ್ಯಕ್ತಿ ಅತ್ಯಂತ ಕೆಟ್ಟದ್ದಾಗಿ ನಡೆದುಕೊಂಡರು. ಅವರ ಬಗ್ಗೆ ಅನುಕಂಪ ಹೊಂದಿದ್ದ ಎಲ್ಲ ಬಿಜೆಪಿ ನಾಯಕರಿಗೆ ಟೋಪಿ ಹಾಕಿ ಕಾಂಗ್ರೆಸ್ ಸೇರಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News