ಹುಬ್ಬಳ್ಳಿ-ಧಾರವಾಡ ಮಾದರಿಯಲ್ಲೇ ರಾಮನಗರ-ಚನ್ನಪಟ್ಟಣ ಅವಳಿ ನಗರಗಳ ಅಭಿವೃದ್ದಿ : ಎಚ್‍ಡಿಕೆ
ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಾದರಿಯಲ್ಲಿಯೇ ಚನ್ನಪಟ್ಟಣ ಮತ್ತು ರಾಮನಗರವನ್ನು ಅವಳಿ ನಗರಗಳನ್ನಾಗಿ ಅಭಿವೃದ್ದಿ ಮಾಡಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಮಂಗಳವಾರ ಚನ್ನಪಟ್ಟಣ ಕ್ಷೇತ್ರದ ನೀಲಕಂಠನಹಳ್ಳಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಅವಳಿ ಪಟ್ಟಣಗಳನ್ನು ಅವಳಿ ನಗರಗಳನ್ನಾಗಿ ಪರಿವರ್ತಿಸಲಾಗುವುದು. ಇದರಿಂದ ಈ ಭಾಗದ ಆರ್ಥಿಕತೆಗೆ ಶಕ್ತಿ ಬರುವುದರ ಜತೆಗೆ ಜನಜೀವನ ಮಟ್ಟವೂ ಸುಧಾರಿಸುತ್ತದೆ. ಅಭಿವೃದ್ಧಿ ಮಾಡುವುದು ಎಂದರೆ ಯಾವುದೇ ದುರುದ್ದೇಶಕ್ಕೆ ಬೆಂಗಳೂರಿಗೆ ಸೇರುವುದಲ್ಲ, ಆಯಾ ಪ್ರದೇಶಗಳನ್ನು ಆಯಾ ಭೌಗೋಳಿಕ ವ್ಯಾಪ್ತಿಯಲ್ಲಿಯೇ ವಿಸ್ತೃತವಾಗಿ ಅಭಿವೃದ್ಧಿ ಮಾಡುವುದು ಎಂದು ಹೇಳಿದರು.
ಯುಜಿಡಿ ಯೋಜನೆ ನೆನೆಗುದಿಗೆ: ಕ್ಷೇತ್ರದಲ್ಲಿ ಒಳಚರಂಡಿ ವ್ಯವಸ್ಥೆ ಆಗಿಲ್ಲ. ನಾನು ಸಿಎಂ ಆಗಿದ್ದಾಗ ಯೋಜನೆಗೆ ಒಪ್ಪಿಗೆ ನೀಡಿದ್ದೆ. 97 ಕೋಟಿ ರೂ.ಹಣ ಬಿಡುಗಡೆಯಾಗಿ 3 ವರ್ಷವಾಗಿದೆ. ಟೆಂಡರ್ ಕರೆದು ಹಣ ಬಿಡುಗಡೆ ಮಾಡಿದರೆ ಕೆಲಸ ಆಗುತ್ತಿದೆ. ಅದನ್ನು ಮಾಡುವುದು ಬಿಟ್ಟು ಗುತ್ತಿಗೆದಾರರಿಗೆ ‘ಮನೆ ಹತ್ತಿರ ಬಂದು ನೋಡಿ' ಎಂದು ತಾಕೀತು ಮಾಡುತ್ತಿದ್ದಾರೆ. ಕಮೀಶನ್ ದುರಾಸೆಗೆ ಯುಜಿಡಿ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಕುಮಾರಸ್ವಾಮಿ ದೂರಿದರು.
ಕಾರ್ಖಾನೆಗೆ ಸ್ಥಾಪನೆ: ನೀಲಕಂಠನಹಳ್ಳಿ ಗ್ರಾಮದ ಹೆಣ್ಣು ಮಕ್ಕಳು ಸಿದ್ಧ ಉಡುಪು ಕಾರ್ಖಾನೆ ಬೇಕೆಂದು ಕೇಳಿದ್ದಾರೆ. ಅವರ ಮನವಿ ನಾನು ಸ್ಪಂದಿಸುತ್ತೇನೆ. ಹೆಣ್ಣು ಮಕ್ಕಳಿಗೆ ಟೈಲರಿಂಗ್ ತರಬೇತಿ ಕೊಡಿಸಿ, ಗಾರ್ಮೆಂಟ್ಸ್ ಕಾರ್ಖಾನೆ ಸ್ಥಾಪನೆ ಮಾಡುವ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪ್ರಧಾನಿ ಮೋದಿ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಹೀನ ರಾಜಕೀಯವನ್ನು ಕಾಂಗ್ರೆಸ್ ಮಾಡುತ್ತಿದೆ. ಅಂಬೇಡ್ಕರ್ ರನ್ನು ಎರಡು ಬಾರಿ ಸೋಲಿಸಿ ಅವರನ್ನು ರಾಜಕೀಯವಾಗಿ ನಿರ್ನಾಮ ಮಾಡಿದ್ದು ಕಾಂಗ್ರೆಸ್. ಆದರೆ, ಮೋದಿ, ಅಂಬೇಡ್ಕರ್ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಸಂಕಲ್ಪ ತೊಟ್ಟಿದ್ದಾರೆ. ಸಂವಿಧಾನ ಅಂಗೀಕರಿಸಲಾದ ನ.26ರನ್ನು ಶಾಶ್ವತವಾಗಿ ಸಂವಿಧಾನ ದಿನವನ್ನಾಗಿ ಆಚರಿಸಲು ಅವರು ನಿರ್ಧಾರ ಮಾಡಿದ್ದಾರೆ ಎಂದು ಅವರು ಹೇಳಿದರು.