ರಾಜ್ಯಪಾಲರನ್ನು ಮುಂದಿಟ್ಟು ಬಿಜೆಪಿ ಸರಕಾರವನ್ನು ಹೆದರಿಸುತ್ತಿದೆ: ಡಾ.ಜಿ.ಪರಮೇಶ್ವರ್
ರಾಮನಗರ, ಆ.2: ರಾಜ್ಯದ ಜನತೆ 136 ಸ್ಥಾನಗಳನ್ನು ಗೆಲ್ಲಿಸಿ ಆಶೀರ್ವಾದ ಮಾಡಿರುವ ಸರ್ಕಾರವನ್ನು ಬಿಜೆಪಿಯವರು ರಾಜ್ಯಪಾಲರನ್ನು ಇಟ್ಟುಕೊಂಡು ಹೆದರಿಸುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಆರೋಪಿಸಿದ್ದಾರೆ.
ಬಿಡದಿಯಲ್ಲಿ ಇಂದು ನಡೆದ ಕೇಂದ್ರ ಎನ್ಡಿಎ ಸರಕಾರವು ಕರ್ನಾಟಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಸರಕಾರದ ಅವಧಿಯ ಭ್ರಷ್ಟಚಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ 'ಜನಾಂದೋಲನ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆ ಎದುರಿಸಿದ್ದೆವು. ಜನರಿಗೆ ಭರವಸೆಗಳನ್ನು ಕೊಟ್ಟಿದ್ದೆವು. ಭ್ರಷ್ಟಚಾರದಿಂದ ಕೂಡಿದ್ದ ಬಿಜೆಪಿಯನ್ನು ಕಿತ್ತೊಗೆದು ನಮಗೆ ಅಧಿಕಾರ ಕೊಡಿ. ಸಾಮಾಜಿಕ ನ್ಯಾಯ ನೀಡುವ ಆಡಳಿತ ನೀಡುವುದಾಗಿ ಹೇಳಿದ್ದೆವು. ಬಡವರು, ಶೋಷಿತರು, ಅಲ್ಪಸಂಖ್ಯಾತರನ್ನು ಮೇಲೆತ್ತಲು ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದೆವು. ಕಾಂಗ್ರೆಸ್ ಪಕ್ಷ ಪೊಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಬಿಜೆಪಿ ಟೀಕಿಸಿದ್ದರು. ಅಧಿಕಾರಕ್ಕೆ ಬಂದ ಕೂಡಲೇ ಭರವಸೆಗಳನ್ನು ಈಡೇರಿಸಿದ್ದೇವೆ. ನೀರಾವರಿ ಯೋಜನೆ, ರಸ್ತೆ ಅಭಿವೃದ್ಧಿ ಕಾರ್ಯಗಳೆಲ್ಲವು ಸುಸಜ್ಜಿತವಾಗಿ ನಡೆಯುತ್ತಿವೆ. ಇದೆಲ್ಲವನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ನವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿಯೊಂದಿಗೆ ಕೈಜೋಡಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ಲಾಟರಿ ಹೊಡೆದು, ಕೇಂದ್ರ ಸಚಿವರಾಗಿದ್ದಾರೆ. ನಮ್ಮ ಜೊತೆ ಸೇರಿಕೊಂಡು 14 ತಿಂಗಳ ನಂತರ ಬಿಟ್ಟು ಹೋದರು. ಮುಂದೆ ಬಿಜೆಪಿಯವರಿಗೆ ಗೊತ್ತಾಗಲಿದೆ. ನಿನ್ನೆ ನಡೆದ ಘಟನೆಯೇ ಇದಕ್ಕೆ ಸಾಕ್ಷಿ. ದಾರಿಯಲ್ಲಿ ಎಲ್ಲೂ ಜನತಾದಳ ಬಾವುಟಗಳು ಇಲ್ಲ. ಹೆಚ್ಚು ದಿನ ಅವರ ಮೈತ್ರಿ ಉಳಿಯುವುದಿಲ್ಲ. ಶೀಘ್ರವಾಗಿ ಮುರಿದು ಬೀಳುತ್ತದೆ ಎಂದು ಭವಿಷ್ಯ ನುಡಿದರು.
1935ರಲ್ಲಿ ಖರೀದಿ ಮಾಡಿದಂತ ಜಮೀನನ್ನು ಮೂಡಾದವರು ನಿವೇಶನ ಮಾಡಿದ್ದನ್ನು ಈಗ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಒಂದೇ ಒಂದು ಫೈಲ್ನಲ್ಲಿ ಸಹಿ ಮಾಡಿದ್ದರೆ, ಈ ಬಗ್ಗೆ ನಿರ್ದೇಶನ ನೀಡಿದ್ದರೆ ಬಿಜೆಪಿಯವರು ಸಾಬೀತುಪಡಿಸಲಿ. ಜನರಿಗೆ ಸತ್ಯವನ್ನು ತಿಳಿಸಬೇಕು ಎಂಬ ಉದ್ದೇಶದಿಂದ ಸಭೆ ನಡೆಸಿದ್ದೇವೆ. ಬಿಜೆಪಿಯವರ ಅಧಿಕಾರವಧಿಯಲ್ಲಿ ನಡೆದ ಹಗರಣಗಳ ಪಟ್ಟಿಯನ್ನು ನೀಡುತ್ತೇವೆ. ಅವರಿಗೆ ಸಾಧ್ಯವಾದರೆ ಪಟ್ಟಿ ನೀಡಲಿ ಎಂದು ಸವಾಲು ಹಾಕಿದರು.
ಕೋವಿಡ್ ಸಂದರ್ಭದಲ್ಲಿ ಜನರಿಗೆ ನೀಡಿದ ಔಷಧಿಯಲ್ಲಿ ಸುಧಾಕರ್ ನಾಲ್ಕು ಸಾವಿರ ಕೋಟಿ ರೂ. ದುಡ್ಡು ಹೊಡೆದಿದ್ದಾರೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದರು. ಭೋವಿ ನಿಗಮದಲ್ಲಿ 47 ಕೋಟಿ ರೂ. ಹಗರಣ ಆಗಿದೆ ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ. ದೇವರಾಜು ಅರಸ್ ಟ್ರಕ್ ಟರ್ಮಿನಲ್ನಲ್ಲಿ ಡಿ.ಎಸ್.ವೀರಯ್ಯ ಚೆಕ್ ಮೂಲಕ ದುಡ್ಡು ತೆಗೆದುಕೊಂಡು ಮನೆ ಕಟ್ಟಿಸಿಕೊಂಡಿದ್ದಾರೆ. ಸಾವಿರಾರು ಕೋಟಿ ರೂ. ಲೂಟಿ ಹೊಡೆದು ಸಿದ್ದರಾಮಯ್ಯ ರ ಮೇಲೆ ಆರೋಪ ಮಾಡುವುದಕ್ಕೆ ನಾಚಿಕೆ ಆಗುವುದಿಲ್ಲವೆ ಎಂದು ಹರಿಹಾಯ್ದರು.
ಟಿ.ಜೆ.ಅಬ್ರಹಾಂ ಜುಲೈ 26ರಂದು ಗವರ್ನರ್ಗೆ ದೂರು ಕೊಟ್ಟಿದ್ದ. ಈ ಕುರಿತು ಸರಕಾರದ ಮುಖ್ಯ ಆಯುಕ್ತರು ರಾಜ್ಯಪಾಲರಿಗೆ ಸ್ಪಷ್ಟವಾಗಿ ಉತ್ತರಿಸಿದ್ದರು. ಆದರೂ ಕೂಡಲೇ ಹೆದರಿಸುತ್ತೀರ? ಇತಿಹಾಸದಲ್ಲಿ ಇಲ್ಲದ ಶೋಕಾಸ್ ನೀಡುತ್ತೀರ? ನೀವು ಮಾಡುತ್ತಿರುವುದು ತಪ್ಪು, ನೋಟಿಸ್ ಹಿಂಪಡೆಯುವಂತೆ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಸರ್ಕಾರದಲ್ಲಿ ಯಾರು ಸಹ ತಪ್ಪು ಮಾಡಿಲ್ಲ. ಮುಂದಿನ ನಾಲ್ಕು ವರ್ಷವೂ ಸ್ವಚ್ಛವಾದ ಆಡಳಿತವನ್ನು ನೀಡುತ್ತೇವೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಜನಾಂದೋಲನ ಸಭೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ ಪ್ರತಿಪಕ್ಷಗಳ ನಡೆ ವಿರುದ್ಧ ಹರಿಹಾಯ್ದರು.
ಸಚಿವರಾದ ಝಮೀರ್ ಅಹ್ಮದ್ ಖಾನ್, ಡಾ ಎಂ ಸಿ ಸುಧಾಕರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ರೇವಣ್ಣ, ಶಾಸಕರಾದ ಮಾಗಡಿ ಬಾಲಕೃಷ್ಣ, ಅಜಯ್ ಸಿಂಗ್, ಆನೇಕಲ್ ಶಿವಣ್ಣ, ಎಂ ಸಿ ಶ್ರೀನಿವಾಸ್, ನೆಲಮಂಗಲ ಶ್ರೀನಿವಾಸ್, ಭೀಮಣ್ಣ ನಾಯಕ್, ಎಂಎಲ್ಸಿಗಳಾದ ಪುಟ್ಟಣ್ಣ, ಎಸ್ ರವಿ, ನಸೀರ್ ಅಹ್ಮದ್, ರಾಮೋಜಿಗೌಡ, ಹಿರಿಯ ನಾಯಕರಾದ ಸಿ ಎಂ ಲಿಂಗಪ್ಪ, ಪ್ರಕಾಶ್ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.