ಮೈತ್ರಿ ಧರ್ಮ ಪಾಲನೆ ಮಾಡದೇ ಸೋಲಿಸಿದ್ದು ಯಾರು? : ಕಾಂಗ್ರೆಸ್ ನಾಯಕರ ವಿರುದ್ಧ ನಿಖಿಲ್ ಆಕ್ರೋಶ
ರಾಮನಗರ : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಶನಿವಾರ ತಮ್ಮ ಚುನಾವಣಾ ಪ್ರಚಾರವನ್ನು ಮುಂದುವರೆಸಿದರು.
ತಾಲೂಕಿನ ವಿರುಪಾಕ್ಷಿಪುರ ಗ್ರಾಮದಿಂದ ಚುನಾವಣಾ ಪ್ರಚಾರ ಆರಂಭಿಸಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು.
ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ʼದೀಪಾವಳಿ ಹಬ್ಬ ಇದ್ದರೂ ಸಹ ಎರಡು ಪಕ್ಷದ, ಮುಖಂಡರು, ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದಾರೆ. ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗ್ತಿದೆ. ಈ ಬಾರಿ ಜನ ನನಗೆ ಬೆಂಬಲ ನೀಡುವ ವಿಶ್ವಾಸ ಇದೆʼ ಎಂದು ತಿಳಿಸಿದರು.
ಉದ್ದೇಶ ಪೂರ್ವಕವಾಗಿ ಕಣ್ಣೀರು ಹಾಕಿಲ್ಲ :
ನಿಖಿಲ್ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಕಾಂಗ್ರೆಸ್ ನಾಯಕರ ವ್ಯಂಗ್ಯ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ʼನಾವು ಮಾಡಿರುವ ಅಭಿವೃದ್ಧಿ ವಿಚಾರ ಮನವರಿಕೆ ಮಾಡಿ ಮತ ಕೇಳ್ತಿದ್ದೇವೆ. ನಾನು ಉದ್ದೇಶ ಪೂರ್ವಕವಾಗಿ ಮತಗಿಟ್ಟಿಸಲು ಕಣ್ಣೀರು ಹಾಕಿಲ್ಲ. ನನ್ನ ನೋವನ್ನು ಜನರ ಬಳಿ ಹೇಳಿಕೊಳ್ಳುವಾಗ ಕಣ್ಣೀರು ಹಾಕಿದ್ದೇನೆ. ಇದರಲ್ಲಿ ಯಾವುದೇ ಬೇರೆ ಉದ್ದೇಶ ಇಲ್ಲʼ ಎಂದು ತಿಳಿಸಿದರು.
ಕಾಂಗ್ರೆಸ್ ನವರು ಆತ್ಮಾವಲೋಕನ ಮಾಡಿಕೊಳ್ಳಲಿ :
ಇಂದಿನ ನಿಖಿಲ್ ಪರಿಸ್ಥಿತಿಗೆ ಅವರ ತಂದೆ-ತಾಯಿ ಕಾರಣ ಎಂಬ ಡಿ.ಕೆ.ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನನ್ನ ಪರಿಸ್ಥಿತಿಗೆ 2019ರ ಚುನಾವಣೆಯಲ್ಲಿ ಯಾರು ಕಾರಣ ಅಂತ ಇಡೀ ರಾಜ್ಯಕ್ಕೆ ಗೊತ್ತು. ಮೈತ್ರಿ ಧರ್ಮ ಪಾಲನೆ ಮಾಡದೇ ಸೋಲಿಸಿದ್ದು ಯಾರು ಅಂತ ಪ್ರತಿಯೊಬ್ಬರಿಗೂ ಗೊತ್ತು. ಅವರೇ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ನನ್ನ ಸೋಲಿಗೆ ಯಾರೂ ಕಾರಣ ಅಲ್ಲ. ಮಂಡ್ಯ ಜನ, ರಾಮನಗರ ಜನ ಪ್ರೀತಿ ಕೊಟ್ಟಿದ್ದಾರೆ. ಕಾಂಗ್ರೆಸ್‌ನವರು ಏನೇನು ಮಾತನಾಡ್ತಿದ್ದಾರೆ ಅದಕ್ಕೆ ಜನ ಉತ್ತರ ಕೊಡ್ತಾರೆʼ ಎಂದು ತಿಳಿಸಿದರು.