ಏನೇ ಕುತಂತ್ರ ಮಾಡಿದರೂ ಜನ ನನ್ನ ಕೈಬಿಡುವುದಿಲ್ಲ: ನಿಖಿಲ್ ಕುಮಾರಸ್ವಾಮಿ
ರಾಮನಗರ : ಚನ್ನಪಟ್ಟಣದಲ್ಲಿ ಏನೇ ಕುತಂತ್ರ ರಾಜಕಾರಣ ಮಾಡಿದರೂ ಜನತೆ ನನ್ನ ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಪಚಾರ ಕೈಗೊಂಡಿದ್ದ ವೇಳೆ ಅಣಿಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಚುನಾವಣೆ ತಂತ್ರ ಅವರು ಮಾಡಲಿ. ನಮ್ಮ ಕೆಲಸ ನಾವು ಮಾಡೋಣ ಎಂದು ಹೇಳಿದರು.
ಕುಮಾರಸ್ವಾಮಿ ಕುಟುಂಬ ರಾಜಕಾರಣ ಬಗ್ಗೆ ಕಾಂಗ್ರೆಸ್ ನಾಯಕರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರ ಮಾತುಗಳನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ನ.13ಕ್ಕೆ ಎಲ್ಲದಕ್ಕೂ ಉತ್ತರವನ್ನು ಅವರೇ ಕೊಡುತ್ತಾರೆ. ತೀರ್ಪು, ತೀರ್ಮಾನ ಕೊಡೊದು ಕ್ಷೇತ್ರದ ಮತದಾರರು. ಎಲ್ಲವನ್ನೂ ಅವರಿಗೆ ಬಿಟ್ಟಿದ್ದೇನೆ ಎಂದು ನಿಖಿಲ್ ತಿಳಿಸಿದರು.
ಇಂದು ಬೇವೂರು ಜಿ.ಪಂ.ವ್ಯಾಪ್ತಿಯಲ್ಲಿ ಪ್ರಚಾರ ಮಾಡುತ್ತಿದ್ದೇನೆ ಇನ್ನೂ ಪ್ರಚಾರಕ್ಕೆ ಒಂದು ವಾರ ಮಾತ್ರ ಬಾಕಿ ಇದೆ. ಜನರ ಉತ್ಸಾಹ ನೋಡಿದರೆ ಅಧಿಕ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ. ಜನ ಕುಮಾರಸ್ವಾಮಿ ಹಾಗೂ ದೇವೇಗೌಡರ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಇಂದು ನನ್ನ ಪತ್ನಿ ರೇವತಿ ನನ್ನ ಪರ ಪ್ರಚಾರ ಮಾಡಿದ್ದಾರೆ. ವಿದ್ಯಾರ್ಥಿಗಳ ಬಳಿ ಮತಯಾಚನೆ ಮಾಡಿದ್ದಾರೆ. ಮಹಿಳಾ ಕಾರ್ಯಕರ್ತರು ಒತ್ತಾಯ ಮಾಡಿ ಪ್ರಚಾರಕ್ಕೆ ಕರೆತಂದಿದ್ದಾರೆ. ರೇವತಿ ಅವರ ತಾಯಿ ಸಾಮಂದಿಪುರು ಗ್ರಾಮದವರು. ಹಾಗಾಗಿ ಅಲ್ಲಿಗೆ ಹೋಗಿದ್ದಾಗ ಅದರ ಬಗ್ಗೆ ಮಾತನಾಡಿದೆ ಅಷ್ಟೇ. ಅದನ್ನೇ ಪ್ರಚಾರಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ನಿಖಿಲ್ ತಿಳಿಸಿದರು.