ರಾಮನಗರ | ನೆರೆಮನೆಯ ಮಗುವನ್ನು ಅಪಹರಿಸಿ ಹಣದ ಬೇಡಿಕೆ ಇಟ್ಟ ಆರೋಪಿಯ ಬಂಧನ
ರಾಮನಗರ: ಸಾಲ ತೀರಿಸುವುದಕ್ಕಾಗಿ ನೆರೆಮನೆಯ ಐದು ವರ್ಷದ ಹೆಣ್ಣು ಮಗುವನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ ಚಿತ್ರ ಕಲಾವಿದನೊಬ್ಬನನ್ನು ಸ್ಥಳೀಯರೇ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿ, ಮಗುವನ್ನು ರಕ್ಷಿಸಿದ ಘಟನೆ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಡೆದಿದೆ.
ಆರೋಪಿ ದರ್ಶನ್(24) ಬಂಧಿತ ಆರೋಪಿ. ಆತನ ವಿರುದ್ಧ ಮಗು ಅಪಹರಣ ಹಾಗೂ ಎಸ್ ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಐಜೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಘಟನೆ ವಿವರ: ರವಿವಾರ ಸಂಜೆ 7:30ರ ಸುಮಾರಿಗೆ ಮನೆಯಲ್ಲಿದ್ದ ಮಗು ನಾಪತ್ತೆಯಾಗಿತ್ತು. ಇದರಿಂದ ಗಾಬರಿಗೊಂಡ ಮನೆಮಂದಿ ಸ್ಥಳೀಯರ ಜೊತೆ ಸೇರಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಈ ನಡುವೆ ರಾತ್ರಿ 9ರ ಸುಮಾರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಮಗುವಿನ ತಂದೆಗೆ ಕರೆ ಮಾಡಿದ ವ್ಯಕ್ತಿಯೋರ್ವ ‘ನಿಮ್ಮ ಮಗಳು ನನ್ನ ಬಳಿ ಇದ್ದಾಳೆ. ಈ ವಿಷಯವನ್ನು ಯಾರಿಗೂ ತಿಳಿಸಬೇಡಿ ನನಗೆ 2 ಲಕ್ಷ ರೂ. ಕೊಡಬೇಕು. ಇಲ್ಲದಿದ್ದರೆ, ನಿಮ್ಮ ಮಗಳನ್ನು ಸಾಯಿಸುತ್ತೇನೆ’ ಎಂದು ಬೆದರಿಸಿದ್ದಾನೆ. 2-3 ಬಾರಿ ಕರೆ ಮಾಡಿದ ಅಪರಿಚಿತ ಹಣದ ಬೇಡಿಕೆ ಮುಂದಿಟ್ಟು ಬೆದರಿಸಿದ್ದಾನೆ.
ಈ ನಡುವೆ ಮನೆಮಂದಿ, ಸ್ಥಳೀಯರು ಮಗುವಿಗಾಗಿ ಹುಡುಕಾಟ ತೀವ್ರಗೊಳಿಸಿದರು. ರಾತ್ರಿ 9:45ರ ಸುಮಾರಿಗೆ ಸಮೀಪದಲ್ಲಿರುವ ಸಿಮೆಂಟ್ ಗೋದಾಮಿನ ಒಳಗೆ ಗಮ್ ಟೇಪಿನಿಂದ ಕೈ ಕಾಲು ಬಾಯಿ ಹಾಗೂ ದೇಹ ಸುತ್ತಿ ಬೆಡ್ಶೀಟ್ ನಲ್ಲಿ ಮುಚ್ಚಿಟ್ಟ ಸ್ಥಿತಿಯಲ್ಲಿ ಮಗುವನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ.
ಅಪಹರಣಕಾರನಿಗಾಗಿ ಹುಡುಕಾಟ ಮುಂದುವರಿಸಿದಾಗ ಅನುಮಾನಾಸ್ಪದ ರೀತಿಯಲ್ಲಿ ಅವಿತಿದ್ದ ದರ್ಶನ್ ಪತ್ತೆಯಾಗಿದ್ದಾನೆ. ಆತನನ್ನು ಹಿಡಿದು ವಿಚಾರಿಸಿದಾಗ ಅಪಹರಣ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಸಾಲ ತೀರಿಸಲು ಹಣಕ್ಕಾಗಿ ಕೃತ್ಯ ಎಸಗಿರುವುದಾಗಿ ಬಾಯಿಬಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ಸೆರೆ ಹಿಡಿದಿರುವ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ದರ್ಶನ್ನನ್ನು ವಶಕ್ಕೆ ಪಡೆದು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ತಾಯಿ, ತಂಗಿಯೊಂದಿಗೆ ವಾಸವಿರುವ ಆರೋಪಿ ದರ್ಶನ್, ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ. ಸುಮಾರು 2 ಲಕ್ಷ ರೂ.ವರೆಗೆ ಕೈ ಸಾಲ ಮಾಡಿಕೊಂಡಿದ್ದ ಆತ ಸಾಲ ತೀರಿಸುವುದಕ್ಕಾಗಿ ಮಗುವನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.