17 ಕೆರೆ ತುಂಬಿಸಿದ ವ್ಯಕ್ತಿಯನ್ನು ಭಗೀರಥ ಎನ್ನುವುದಾರೆ, 107 ಕೆರೆ ತುಂಬಿಸಿದ ನನ್ನನ್ನು ಏನೆಂದು ಕರೆಯುತ್ತೀರಿ?: ಎಚ್‍ಡಿಕೆ
ಬೆಂಗಳೂರು : ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರದಲ್ಲಿ ಹದಿನೇಳು ಕೆರೆಗಳಿಗೆ ನೀರು ತುಂಬಿಸಿದ ವ್ಯಕ್ತಿಯನ್ನು ಭಗೀರಥ ಎನ್ನುವುದಾದರೆ, 107 ಕೆರೆಗಳಿಗೆ ನೀರು ತುಂಬಿಸಿದರನ್ನು ಏನೆಂದು ಕರೆಯಬೇಕು? ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಶುಕ್ರವಾರ ಚನ್ನಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾನು ಸಿಎಂ ಆಗಿ ಹಾಗೂ ಐದು ವರ್ಷ ಚನ್ನಪಟ್ಟಣ ಶಾಸಕನಾಗಿ ನಾನು 107 ಕೆರೆಗಳಿಗೆ ನೀರು ತುಂಬಿಸಿದ್ದೇನೆ. ಅವರದೇ ಸರಕಾರ ಇದೆ, ಕಡತಗಳನ್ನು ತೆಗೆದು ನೋಡಲಿ. ‘ನಾನು ಹದಿನೇಳು ಕೆರೆಗಳಿಗೆ ನೀರು ತುಂಬಿಸಿದೆ’ ಎಂದು ಹೇಳುತ್ತಾರೆ. ಆದರೆ, 107 ಕೆರೆಗಳಿಗೆ ನೀರು ತುಬಿಸಿದ್ದನ್ನು ಇವರು ಯಾಕೆ ಮರೆ ಮಾಚುತ್ತಾರೆ? ನಿಜ ಹೇಳುವುದಕ್ಕೆ ಏನಾಗಿದೆ ಅವರಿಗೆ? ಎಂದು ಕಿಡಿಕಾರಿದರು.
ದೇವೇಗೌಡರು ಇಗ್ಗಲೂರು ಜಲಾಶಯ ಕಟ್ಟಿಸದಿದ್ದರೆ ಇವರು 17 ಕೆರೆಗಳಿಗೆ ನೀರು ತುಂಬಿಸಲು ಸಾಧ್ಯ ಆಗುತ್ತಿತ್ತಾ? ಇವತ್ತು ಚನ್ನಪಟ್ಟಣ, ರಾಮನಗರ ತಾಲೂಕಿನ ಜನರಿಗೆ ಆ ಜಲಾಶಯ ಜೀವನಾಧಾರ. ಅದನ್ನೇಕೆ ಇವರು ಹೇಳುವುದಿಲ್ಲ? ಹಾಗಾದರೆ ಒಂದು ಜಲಾಶಯವನ್ನೇ ಕಟ್ಟಿಸಿದ ದೇವೇಗೌಡರನ್ನು ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದರು.
ಚನ್ನಪಟ್ಟಣಕ್ಕೆ ಡಿ.ಕೆ.ಸುರೇಶ್ ಕೊಡುಗೆ ಏನು? ದಿನವೂ ರಾತ್ರಿ ಮತ್ತಿಕೆರೆ ಹತ್ತಿರ ಲೋಡುಗಟ್ಟಲೇ ಕಲ್ಲು ಬರುತ್ತಲ್ಲಾ.. ಹೊರ ದೇಶಕ್ಕೆ ಕಳಿಸುವುದಕ್ಕಾ.. ಅದೇ ಅವರ ಕೊಡುಗೆ. ಅಂತಹವರ ಜತೆ ನಾನು ಬಹಿರಂಗ ಚರ್ಚೆಗೆ ಬರಬೇಕಾ?. ನಿಖಿಲ್ ಕಣ್ಣೀರು ಹಾಕಿದ್ದನ್ನೇ ಲೇವಡಿ ಮಾಡುವ ಕಾಂಗ್ರೆಸ್ ನಾಯಕರಿಗೆ ಕಣ್ಣೀರೇ ಬರುವುದಿಲ್ಲವೇ? ಕಣ್ಣೀರು ಬರದಿದ್ದರೆ ಅವರು ಮನುಷ್ಯರೇ ಅಲ್ಲ ಎಂದು ಟೀಕಿಸಿದರು.
ಜೆಡಿಎಸ್ ಸೇರ್ಪಡೆ: ಇದೇ ಸಂದರ್ಭದಲ್ಲಿ ಕುರುಬ ಸಮುದಾಯದ ನಾಯಕಿ ಮಂಗಳವಾರಪೇಟೆಯ ಗೀತಾ ಶಿವರಾಂ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಗೀತಾ ಶಿವರಾಂ ನಗರಸಭೆ ಮಾಜಿ ಸದಸ್ಯರಾಗಿದ್ದು, ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ನಿವಾಸಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿ, ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.