ಅಗ್ನಿಕುಂಡಗಳ ನಡುವೆ ಕಲಬುರ್ಗಿ ಎಂಬ ಬೆಳಕು...
ನಾಟಕ: ರಕ್ತ ವಿಲಾಪ ರಚನೆ: ಡಾ.ವಿಕ್ರಮ್ ವಿಸಾಜಿ ನಿರ್ದೇಶನ: ಪ್ರವೀಣ್ ರೆಡ್ಡಿ ಗುಂಜಹಳ್ಳಿ ಸಹನಿರ್ದೇಶನ: ನಿರ್ಮಲಾ ವೇಣುಗೋಪಾಲ ಸಂಗೀತ: ಇನ್ಸಾಫ್ ಹೊಸಪೇಟೆ, ಮಹೇಶ ಬೆಳಕು: ಲಕ್ಷ್ಮಣ ಮಂಡಲಗೇರಾ ಪ್ರಸಾಧನ: ವೆಂಕಟ್ ನರಸಿಂಹಲು ರಂಗಸಜ್ಜಿಕೆ: ನಾಗರಾಜ ಸಿರಿವಾರ ರಂಗದ ಮೇಲೆ ಸಾಗರ್ ಇಟೇಕರ್, ನಿರ್ಮಲಾ ವೇಣುಗೋಪಾಲ, ಶಿವರಾಜ್ ಹೆಗ್ಗಸನಹಳ್ಳಿ, ವೆಂಕಟನರಸಿಂಹಲು, ಮಹೇಶ ಸಿರವಾರ, ಗೋಪಾಲಕೃಷ್ಣ ಸಿರವಾರ, ಗಣೇಶ ಸಿರವಾರ, ವಿಮಲಾ, ಚಂದ್ರಕಲಾ, ಶಾಂತಮೂರ್ತಿ ಗಬ್ಬೂರು, ಪ್ರವೀಣ್ ರೆಡ್ಡಿ ಗುಂಜಹಳ್ಳಿ.
ಮೈಸೂರು ರಂಗಾಯಣವು ಆಯೋಜಿಸಿದ್ದ ವಾರಾಂತ್ಯ ರಂಗಪ್ರದರ್ಶನದಲ್ಲಿ ಕಳೆದ ರವಿವಾರ ಪ್ರದರ್ಶನಗೊಂಡ ನಾಟಕ ‘ರಕ್ತ ವಿಲಾಪ’. ಇದನ್ನು ರಾಯಚೂರಿನ ಸಮುದಾಯ ಪ್ರಸ್ತುತಪಡಿಸಿತು. ಕಲಬುರ್ಗಿ ಸೆಂಟ್ರಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ವಿಕ್ರಮ್ ವಿಸಾಜಿ ಅವರ ಸಶಕ್ತ ನಾಟಕವನ್ನು ಸಮರ್ಥವಾಗಿ ರಂಗದ ಮೇಲೆ ತಂದವರು ನಿರ್ದೇಶಕ ಪ್ರವೀಣ್ ರೆಡ್ಡಿ ಗುಂಜಹಳ್ಳಿ. ಅವರು ಸಂಶೋಧಕನ ಪಾತ್ರ ನಿರ್ವಹಿಸಿ ಇಡೀ ನಾಟಕವನ್ನು ತೂಗಿಸಿಕೊಂಡು ಹೋದರು. ಅವರಿಗೆ ಪೂರಕವಾಗಿ ಸಾಗರ್ ಇಟೇಕರ್, ನಿರ್ಮಲಾ ವೇಣುಗೋಪಾಲ ಹಾಗೂ ಶಿವರಾಜ್ ಹೆಗ್ಗಸನಹಳ್ಳಿ ಅಭಿನಯಿಸಿದರು. ಕೆಲ ವಿದ್ಯಾರ್ಥಿಗಳು ನಟಿಸಿದರು ಎನ್ನುವ ಕಾರಣಕ್ಕೆ ರಿಯಾಯಿತಿ ನೀಡಬಹುದು. ಆದರೂ ಕಡಿಮೆ ರಂಗಪರಿಕರದಲ್ಲಿ ನಾಟಕವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವಲ್ಲಿ ತಂಡ ಯಶಸ್ವಿಯಾಗಿದೆ. ಕೆಲ ಕಡೆ ಸಂಭಾಷಣೆ ಉತ್ತರ ಕರ್ನಾಟಕದಲ್ಲಿಯೂ ಕೆಲ ಬಾರಿ ಗ್ರಾಂಥಿಕವಾಗಿಯೂ ಇತ್ತು. ಇದನ್ನು ತಪ್ಪಿಸಬಹುದಿತ್ತು.
ಇದು ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ಕುರಿತ ನಾಟಕ. ಆದರೆ ಇಡೀ ನಾಟಕದಲ್ಲಿ ಎಲ್ಲಿಯೂ ಕಲಬುರ್ಗಿ ಅವರ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ನಾಟಕದ ಕೊನೆಗೆ ಕಲಬುರ್ಗಿ ಅವರು ಹಾಡಿದ ಹಾಡನ್ನು ಪರದೆ ಮೇಲೆ ತೋರಿಸಲಾಗುವುದು.
ನಾಟಕ ಶುರುವಾಗುವುದೇ ಸಂಶೋಧಕನ ಹತ್ಯೆಯಿಂದ. ಆಮೇಲೆ ಸಂಶೋಧಕ ಹಾಗೂ ಯುವಕನ ನಡುವೆ ದೀರ್ಘ ಸಂಭಾಷಣೆಯು ಹದಿನೈದು ನಿಮಿಷಗಳವರೆಗೆ ನಡೆಯುತ್ತದೆ. ‘‘ಈಗೀಗ ಸಂಶೋಧಕ ಮಾನಸಿಕ ಹಿಂಸೆ ಅಥವಾ ದೈಹಿಕ ಹಿಂಸೆಗಳ ಕತ್ತಲ ಕೂಪದಲ್ಲಿ ನರಳಬೇಕಾಗಿದೆ. ನನ್ನ ಎದುರಾಳಿಗಳು ಸಂಶೋಧನಾತ್ಮಕವಾಗಿಯೇ ಸವಾಲು ಹಾಕಿದ್ದರೆ ಎದುರಿಸುವುದು ಅಂಥ ಕಷ್ಟವೇನಿರಲಿಲ್ಲ. ನಾನದನ್ನು ಧೈರ್ಯವಾಗಿ ಎದುರಿಸುತ್ತಿದ್ದೆ. ಆದರೆ ಮುಗ್ಧ ಜನರ ಧಾರ್ಮಿಕ ಭಾವನೆ ಕೆರಳಿಸಿ ಅವರನ್ನು ಧರ್ಮಯುದ್ಧಕ್ಕೆ ಸನ್ನದ್ಧರಾದ ಗಣಾಚಾರಿಗಳಾಗಿಸಿದರು’’ ಎಂದು ಸಂಶೋಧಕ ಹೇಳುವಲ್ಲಿಗೆ ನಾಟಕ ಆರಂಭಗೊಳ್ಳುತ್ತದೆ. ಹಾಗೆಯೇ ಯುವಕನೊಬ್ಬ ಭೇಟಿಯಾಗಲು ಬಂದಾಗ ಪಿಎಚ್.ಡಿಗೆ ವಿಷಯ ಕೇಳಲು ಬಂದವನೆಂದು ತಿಳಿಯುತ್ತಾರೆ ಸಂಶೋಧಕ. ಅದಕ್ಕಲ್ಲವೆಂದಾಗ ಪುಸ್ತಕ ಕೇಳಲು ಬಂದಿರುವನೆಂದು ತಿಳಿದು ‘‘ಪುಸ್ತಕವನ್ನು ಯಾರಿಗೂ ಕೊಡುವುದಿಲ್ಲ. ಪುಸ್ತಕಂ ವನಿತಾ ವಿತ್ತಂ ಪರಹಸ್ತಂ ಗತಂ ಗತಃ’’ ಎಂದಾಗ ಪ್ರೇಕ್ಷಕರು ನಗುತ್ತಾರೆ. ಅತಿಥಿಯಾಗಿ ಕರೆಯಲು ಬಂದಿಯೇನೋ ಎಂದು ಸಂಶೋಧಕ ಕೇಳಿದಾಗ ಇಲ್ಲವೆನ್ನುತ್ತಾನೆ ಯುವಕ. ‘‘ಹಂಗಾದ್ರ ಕೊಲೆ ಮಾಡ್ಲಿಕ್ಕೆ ಬಂದಿಯೇನೋ?’’ ಎಂದು ನಗುತ್ತಾರೆ. ಮುಂದೆ ದೇವರು, ಧರ್ಮ ಕುರಿತು ಇಬ್ಬರ ನಡುವೆ ತುರುಸಿನ ಸಂಭಾಷಣೆ ನಡೆಯುತ್ತದೆ. ‘‘ದೇವರನ್ನ ನಂಬ್ತೀನಿ. ಶ್ರಮ ನನ್ನ ದೇವರು’’ ಎನ್ನುವ ಸಂಶೋಧಕ ‘‘ನಾನು ಮಾಡೋ ಬರವಣಿಗೇನೇ ನನ್ನ ಸತ್ಯದ ಹುಡುಕಾಟ. ನನ್ನ ದೇಶಭಕ್ತಿ’’ ಎನ್ನುತ್ತಾರೆ. ’ನ್ಯಾಯಕ್ಕಾಗಿ ಮಾಡೋದು ಹೋರಾಟ, ಸ್ವಾರ್ಥಕ್ಕಾಗಿ ಮಾಡೋದು ಕಾದಾಟ. ಅರಸರ ಸಾಮ್ರಾಜ್ಯ ಸ್ಥಾಪನೆಗಳು ಕಾದಾಟ. ಬ್ರಿಟಿಷರ ವಿರುದ್ಧ ಜನತೆ ಮಾಡಿದ್ದು ಹೋರಾಟ. ಗಾಂಧಿ, ಅಂಬೇಡ್ಕರ್ ಮಾಡಿದ್ದು ಹೋರಾಟ. ನಮ್ಮ ರಾಜಕಾರಣಿಗಳು ಮಾಡ್ತಾರಲ್ಲ ಅದು ಕಾದಾಟ’’ ಎನ್ನುವ ಮೂಲಕ ಸಂಶೋಧಕರು ಪ್ರಚಲಿತ ವಿದ್ಯಮಾನಗಳನ್ನು ತೆರೆದಿಡುತ್ತಾರೆ. ಇದಕ್ಕೆ ಯುವಕ ‘‘ನೀವು ಮಾಡೋದು ಹೋರಾಟ?’‘ ಎಂದು ಕೇಳುತ್ತಾನೆ. ಇದಕ್ಕೆ ‘‘ನನ್ನ ಕಣ್ಣೆದುರು ಎರಡು ಪ್ರಶ್ನೆಗಳಿದಾವ. ಕೆಟ್ಟ ವ್ಯವಸ್ಥೆಯೊಂದಿಗೆ ಹೊಂದ್ಕೊಂಡು ವರ್ತಮಾನದಾಗ ಬದುಕಬೇಕೋ ಅಥವಾ ಕೆಟ್ಟ ವ್ಯವಸ್ಥೆ ಪ್ರತಿಭಟಿಸಿ ಭವಿಷ್ಯತ್ತಿನ್ಯಾಗ ಬದುಕಬೇಕೋ? ಇಲ್ಲಿ ಬದುಕಿದವರು ಅಲ್ಲಿ ಸಾಯತಾರ. ಅಲ್ಲಿ ಬದುಕಬೇಕಾದವ್ರ ಇಲ್ಲಿ ಸಾಯಬೇಕಾಗ್ತದ’’ ಎಂದು ಮಾರ್ಮಿಕವಾಗಿ ಸಂಶೋಧಕ ಉತ್ತರಿಸುತ್ತಾರೆ.
ಹೀಗೆಯೇ ಧರ್ಮದ ಕುರಿತು ಸಂಶೋಧಕರು ‘‘ಧರ್ಮ ಇರೋದು ಭಾವನೆ ಕೆರಳಿಸೋದಕ್ಕಲ್ಲ, ವಿಚಾರ ಅರಳಿಸೋದಕ್ಕ. ಧರ್ಮ ಹೊರಗಿನ ಶತ್ರುಗಳಿಂದ ಅಲ್ಲ, ಒಳಗಿನ ಶತ್ರುಗಳಿಂದ ಸಾಯ್ತದ’’ ಎನ್ನುವ ಮೂಲಕ ತಿಳಿವಳಿಕೆ ನೀಡುವ ಮಾತು ಪ್ರೇಕ್ಷಕರನ್ನು ತಟ್ಟುತ್ತವೆ.
ಎರಡನೆಯ ದೃಶ್ಯದಲ್ಲಿ ನ್ಯಾಯಾಲಯ. ನ್ಯಾಯಾಧೀಶೆ ಕೇಳುತ್ತಾರೆ ‘‘ಕೇವಲ ಒಂದು ವಚನ ಮೂಲಕ ಒಬ್ಬರ ಹುಟ್ಟಿನ ಆಧಾರ ಹೇಳೋದು ಅತಿರೇಕ ಅನ್ನಿಸೋದಿಲ್ವೆ?’’ ಆಗ ಸಂಶೋಧಕ ‘‘ಕೇವಲ ಒಂದು ವಚನ ಅಲ್ಲ. ಬ್ಯಾರೆ ಬ್ಯಾರೆ ವಚನ ಓದೀನಿ. ಪುರಾಣ, ಕಾವ್ಯ, ಜನಪದ ಹಾಡು, ಕತಿ, ಶಾಸನ ಓದೀನಿ. ಸಂತಿಗಿ ಮೂರು ಮೊಳ ನೇಯೋ ಸಂಶೋಧಕ ಅಲ್ಲ ನಾನು. ಹಾಡಿದ್ದೇ ಹಾಡೋ ಸಂಶೋಧಕನೂ ಅಲ್ಲ. ಇಪ್ಪತ್ನಾಲ್ಕು ತಾಸು ನಾನು ಸಂಶೋಧಕನೇ’’ ಎಂದು ಪ್ರತಿಪಾದಿಸುತ್ತಾರೆ.
‘‘ಸಂಶೋಧನೆಯ ತಿಳಿವಳಿಕೆ ವಿದ್ವತ್ ವಲಯಕ್ಕಷ್ಟೇ ಸೀಮಿತ ಇರಂಗಿಲ್ಲ. ಅದು ಜನಮುಖಿಯಾಗ್ಬೇಕು. ಜನರ ಬದುಕನ್ನು ಹಸನುಗೊಳಿಸ್ಬೇಕು. ಸಂಶೋಧಕ ಮಾರ್ಗದರ್ಶನ ಮಾಡ್ಬೇಕು ಅಶಾಂತಿ ಅಲ್ಲ ಅದು’’ ಎಂದು ತಿಳಿವಳಿಕೆ ಹೇಳುತ್ತಲೇ ‘‘ನೋವು ನನ್ನ ತಾಯಿ, ಸ್ಥಾಯಿ. ಯಾವ ಪದವಿ ಪ್ರಶಸ್ತಿಗಳಿಂದಲೂ ಮರೆಯಲಾಗದ ಗಾಯಕ್ಕ ಗುರಿಯಾಗೀನಿ. ಇಂಥ ಗಾಯ ಉದಾತ್ತೀಕರಿಸಿಕೊಂಡು ಬೆಳೆಯೋದು ಮನೋಧರ್ಮವಾಗಿ ಬಿಟ್ಯಾದ. ನಾನು ಮಾಡಿದ ಕೆಲಸ ನೋವಿನೊಳಗ ಹುಟ್ಕೊಂಡಾವ’ ಎಂದು ವ್ಯಥೆಪಡುತ್ತಾರೆ. ಹೀಗೆ ಯುವಕ ಬೇರೆ ಬೇರೆ ಪ್ರಶ್ನೆಗಳನ್ನು ಕೇಳುತ್ತ ಹೋಗುತ್ತಾನೆ. ‘‘ಯಾವ್ಯಾವ ಸಂಸ್ಥೆಗಳು ಎಷ್ಟೆಲ್ಲ ದುಡ್ಡು ಕೊಟ್ಟಿವೆ ಅನ್ನೊ ಮಾಹಿತಿ ನನ್ನಲ್ಲಿ ಇದೆ’’ ಎಂದು ಯುವಕ ಕೇಳಿದಾಗ ‘‘ಅದೆಲ್ಲ ಸಂಶೋಧನೆಗೆ, ಪುಸ್ತಕ ಪ್ರಕಟಣೆಗೆ ಬಳಕೆಯಾದ ದುಡ್ಡು. ಕೆಲಸ ಮಾಡಲಾರದೇನೇ ಬಿಲ್ ಹಚ್ಚಿ ದುಡ್ಡು ತಗೊಳ್ಳೊ ವ್ಯಕ್ತಿ ನಾನಲ್ಲ. ಅಂಬಲಿ ಕಂಬಳಿ ಆಸ್ತಿ, ಮಿಕ್ಕಿದ್ದೆಲ್ಲ ಜಾಸ್ತಿ. ನೀರಿನಂಗ ಗಳಿಸಬೇಕು. ತೀರ್ಥದಂಗ ಬಳಸಬೇಕು ಅನ್ನೋದನ್ನ ಹಿರಿಯರಿಂದ ಕಲ್ತೀನಿ’’ ಎನ್ನುವ ಮಾತು ಅರಿವನ್ನು ಹೆಚ್ಚಿಸುತ್ತದೆ.
‘‘ಆತ್ಮೋದ್ಧಾರದ ಸೋಗಿನಲ್ಲಿ ಲಿಂಗಭೇದ, ವರ್ಗಭೇದ, ವರ್ಣಭೇದ ಕಲ್ಪಿಸಿ ಸಮಾಜವನ್ನ ಕತ್ತಲ ಕೂಪಕ್ಕ ತಳ್ಳಿದರು. ಈ ಭೇದ ಅಳಿದು ಸಾಮಾಜಿಕ ನ್ಯಾಯ ಸ್ಥಾಪನೆಯಾಗಬೇಕು. ಇದಕ್ಕೆಲ್ಲ ಮುಖ್ಯವಾಗಿ ಪುರೋಹಿತಶಾಹಿ, ಬಂಡವಾಳಶಾಹಿ, ಅಧಿಕಾರಶಾಹಿಯ ದುಷ್ಟತೆ ಎದುರು ಹಾಕ್ಕೋಬೇಕು. ಇದಕ್ಕ ಹೆದರಿ ಅನೇಕ ಧಾರ್ಮಿಕ ಮಹಾಪುರುಷರು ಆತ್ಮೋದ್ಧಾರದ ಮಾತು ಆಡತೊಡಗಿದರು. ಅಮೂರ್ತ ವಿಚಾರ ಮಂಡಿಸಿ ಸಾಮಾಜಿಕ ಅಗತ್ಯ ಕಡೆಗಣಿಸಿದ್ರು. ಇದು ಸುಲಭದ ದಾರಿ ಅನ್ನಿಸ್ತದ ನನಗ. ಇಂಥ ಆತ್ಮೋದ್ಧಾರದೊಳಗ ಸ್ವಾರ್ಥ ಅದ. ಇದನ್ನ ಹಿಡಕೊಂಡು ಭಾಳ ದೂರ ಹೋಗಾಕ ಆಗಂಗಿಲ್ಲ. ಬದಲಾವಣೆಗೆ ಕೈ ಹಾಕಿ ಹೊಸ ಸಮಾಜ ಸೃಷ್ಟಿಸೊ ಕನಸು ಇಲ್ದೆ ಇರೋ ಆತ್ಮೋದ್ಧಾರಕನ ಕಲ್ಪನೆ ಒಂದು ಮೋಸ’’ ಎಂದು ಸಂಶೋಧಕರ ಸ್ಪಷ್ಟ ಮಾತು.
ಮೂರನೆಯ ದೃಶ್ಯದಲ್ಲಿ ವಿದ್ವಾಂಸರ ನಡುವೆ ನಡೆಯುವ ಚರ್ಚೆ. ವಿದ್ವಾಂಸರೊಬ್ಬರು ಹೇಳುವ ಮಾತು- ‘‘ಕವಿಗಳಲ್ಲಿ ಮೂರು ತರಹದವ್ರ ಇರ್ತಾರ. ಕೆಲವರು ತಮ್ಮ ಪಾಡಿಗೆ ತಾವು ಒಳ್ಳೆ ಕಾವ್ಯ ಬರೀತಾರ. ವೈಯಕ್ತಿಕ ಬದುಕಿಗೂ ಅವರ ಕಾವ್ಯಕ್ಕೂ ಸಂಬಂಧ ಇರೂದಿಲ್ಲ. ಇನ್ನ ಎರಡನೇ ಮಾದರಿಯವ್ರ ಒಳ್ಳೆ ಕಾವ್ಯ ಬರೀತಾರ ಹಂಗ ಬದುಕ್ತಾರ. ಇನ್ನ ಮೂರನೇ ಮಾದರಿಯವ್ರ ಒಳ್ಳೆ ಕಾವ್ಯ ಬರ್ದು, ಬದುಕಿ, ಸಮಾಜಕ್ಕೂ ವಿಸ್ತಾರ ಮಾಡ್ತಾರ. ಇದರಲ್ಲಿ ಶ್ರೇಷ್ಠ, ಕನಿಷ್ಠಕ್ಕಿಂತ ಮೂರು ತರಹದ ಕಾವ್ಯ ವ್ಯಕ್ತಿತ್ವಗಳಿವು. ಮೂರನೇ ಮಾದರಿ ಹೆಚ್ಚು ರಿಸ್ಕಿನದು. ಮೊದಲನೇ ಮಾದರಿ ಪಂಪನದು. ಎರಡನೇ ಮಾದರಿ ಹರಿಹರನದು, ಮೂರನೇ ಮಾದರಿ ಬಸವಣ್ಣನದು. ನಮ್ಮ ಕಾಲದೊಳಗೂ ಇಂಥ ಮಾದರಿಗಳದಾವ’’ ಎನ್ನುವುದು ನಿಜ. ಇನ್ನೊಬ್ಬ ವಿದ್ವಾಂಸರು ಕಲಬುರ್ಗಿ ಅವರು ಹೇಳುವ ಮಾತನ್ನು ಪುನರುಚ್ಚರಿಸುತ್ತಾರೆ- ‘‘ಭಾರತದಂಥ ದೇಶದಾಗ ಸಂಶೋಧಕ ಸಣ್ಣ ಸಣ್ಣ ಶಿಲುಬೆ ಏರಬೇಕಾಗ್ತದ. ಅಗ್ನಿಕುಂಡ ಹಾಯಬೇಕಾಗ್ತದ. ಕಾಲ ಕೆಳಗ ಕೆಲವು ಅಗ್ನಿಕುಂಡಗಳಿದ್ದಾವ. ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಳಕು ದೊಡ್ಡದು...’’ ಎನ್ನುವ ಮೂಲಕ ಸಂಶೋಧಕರು ಹೇಗಿರಬೇಕೆಂದು ತಿಳಿಸುತ್ತಾರೆ. ಹೀಗೆಯೇ ಪ್ರೊಫೆಸರ್ ಸಿಕ್ಕಾಗ ‘‘ಏನು ಮಾಡ್ತಿದ್ದಿ?’’ ಎಂದು ಸಂಶೋಧಕರು ಕೇಳಿದಾಗ ‘‘ಮುಂಜಾನೆ, ಸಂಜೆ ವಾಕ್ ಮಾಡ್ತೀನಿ. ಬಿ.ಪಿ, ಶುಗರ್ ಇಲ್ಲ’’’ ಎನ್ನುತ್ತಾರೆ ಪ್ರೊಫೆಸರ್. ಆಗ ಸಂಶೋಧಕರು ‘‘ನಿನಗ ಬಿ.ಪಿ, ಶುಗರ್ ಬರಲ್ಲ. ಯಾಕಂದ್ರ ಗೂಟಕ್ಕ ಹಾಕಿದ ಅಂಗಿ ಎಂದಾದ್ರೂ ಹರಿತಾವೇನು?’’ ಎಂದು ಕೇಳಿ ‘‘ಎಂದಾದ್ರೂ ರಾತ್ರಿ ಬೆಳಗನ ಓದಿದೇನು? ಹಸ್ತಪ್ರತಿ, ಶಾಸನ ಅಂತ ಊರೂರು ತಿರುಗಾಡಿಯೇನು? ಏನೂ ಮಾಡಿಲ್ಲ ಅಂದ್ರ ನೀನು ಗೂಟಕ್ಕ ಹಾಕಿದ ಅಂಗಿ’’ ಎಂದು ಬಯ್ಯುತ್ತಾರೆ. ಇದರಿಂದ ಸಂಶೋಧನೆ ಎಂದರೆ ಗೂಟಕ್ಕೆ ಹಾಕಿದ ಅಂಗಿಯಲ್ಲ ಎನ್ನುವ ಅವರ ಮಾತು ಪ್ರಚಲಿತವಾಯಿತು.
‘‘ಒಬ್ಬ ಸಂಶೋಧಕ ಅನೇಕ ರೀತಿ ಕೊಲೆಯಾಗ್ತಿರ್ತಾನ. ಸಹೋದ್ಯೋಗಿಗಳ ಅಸೂಯೆಯಲ್ಲಿ, ಸಹವಿದ್ವಾಂಸರ ಅಸಡ್ಡೆಯಲ್ಲಿ, ದಡ್ಡರ ಕುತಂತ್ರದಲ್ಲಿ, ಶಿಷ್ಯರ ಆರಾಧನೆಯಲ್ಲಿ, ಹೊಸ ಪೀಳಿಗೆಯ ಅನಾದರದಲ್ಲಿ...’’ ಎನ್ನುವ ಇನ್ನೊಬ್ಬ ವಿದ್ವಾಂಸರ ಮಾತು ನಿಜ. ಹೀಗೆಯೇ ‘‘ಮನುಷ್ಯರು ಮನುಷ್ಯರನ್ನ ಬೇಟೆ ಆಡೋ ಕಾಲ ಇದು. ಸಿದ್ಧಾಂತಗಳು ಸಿದ್ಧಾಂತಗಳನ್ನ ಬೇಟೆ ಆಡೋ ಕಾಲ ಇದು. ಒಟ್ನಲ್ಲಿ ಬೇಟೆ ತಪ್ಪಿದ್ದಲ್ಲ. ಎಂದೆಂದೂ ಮುಗಿಯದ ಬೇಟೆ. ಇದು ಹಸಿದವರ ಬೇಟೆ ಅಲ್ಲ. ಹೊಟ್ಟೆ ತುಂಬಿದವರ ಬೇಟೆ. ಇದು ಮಾಡೋ ಅನಾಹುತ ಹೆಚ್ಚು ಭೀಕರವಾಗಿರ‌್ತದ’’ ಎನ್ನುವ ಮೂಲಕ ಪ್ರಸಕ್ತ ಜಗತ್ತಿನ ವಿದ್ಯಮಾನಗಳ ಅನಾವರಣವಿದೆ.
ಹೀಗೆ ನಾಟಕವು ನಮ್ಮನ್ನು ಕಾಡುತ್ತದೆ. ವಿಕ್ರಮ್ ವಿಸಾಜಿ ಅವರು ಎಂ.ಎಂ. ಕಲಬುರ್ಗಿ ಅವರ ವಿಚಾರಧಾರೆಗಳನ್ನು, ಸಂಶೋಧನೆಯ ಕುರಿತ ಅವರ ಮಾತುಗಳನ್ನು ಸಮರ್ಥವಾಗಿ ಕಟ್ಟಿಕೊಡುವ ಮೂಲಕ ಗೆದ್ದಿದ್ದಾರೆ. ಇದನ್ನು ಅಷ್ಟೇ ಸಮರ್ಥವಾಗಿ ನಾಟಕ ಕಟ್ಟಿಕೊಡುತ್ತದೆ. ಈ ನಾಟಕವು ಎಲ್ಲ ವಿಶ್ವವಿದ್ಯಾನಿಲಯಗಳ ಎಲ್ಲ ವಿಭಾಗಗಳಲ್ಲಿ ಅದರಲ್ಲೂ ಕನ್ನಡ ವಿಭಾಗದಲ್ಲಿ ಆಡಿಸಬೇಕಾದ ಅಗತ್ಯವಿದೆ.