ಸಾಗರ: ಪ್ರೊ. ರಾಜೇಂದ್ರ ಚೆನ್ನಿ ಅವರಿಗೆ ರೆ|| ಫಾ. ಕಿಟೆಲ್ ಪ್ರಶಸ್ತಿ ಪ್ರದಾನ

Update: 2024-01-14 09:52 GMT

ಸಾಗರ: ರೆ|| ಫಾ. ಕಿಟೆಲ್ ಸೂಕ್ಷ್ಮಮತಿ ಮತ್ತು ಸಾಮಾನ್ಯ ವ್ಯಕ್ತಿಯಾಗಿದ್ದರು. ಆ ಕಾಲದಲ್ಲಿ ಕನ್ನಡಿಗರು ವ್ಯವಹಾರಕ್ಕೆ ಬಳಸುತ್ತಿದ್ದ ಭಾಷೆ, ದೈನಂದಿನ ಬದುಕಿನಲ್ಲಿ ಬಳಕೆ ಮಾಡುತ್ತಿದ್ದ ಉಪ ಭಾಷೆಯನ್ನು ಗುರುತಿಸಿ ಅವರು ತಯಾರಿಸಿದ ನಿಘಂಟು ಒಂದು ಸಾಂಸ್ಕೃತಿಕ ಪಠ್ಯ ಇದ್ದಂತೆ ಎಂದು ಲೇಖಕ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು.

ಮಲೆನಾಡು ಸಿರಿ ಸಭಾಂಗಣದಲ್ಲಿ ಭಾನುವಾರ ಪರಸ್ಪರ ಸಾಹಿತ್ಯ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ರೆ|| ಫಾ. ಕಿಟೆಲ್ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. 

ಕ್ರೈಸ್ತ ಪಾದ್ರಿಗಳು ಕನ್ನಡ ಭಾಷೆ ಮತ್ತು ವಿದ್ವತ್ತಿಗೆ ನೀಡಿದ ಕೊಡುಗೆ ಅಪಾರವಾದದ್ದು. ಕನ್ನಡ ಸಾಹಿತ್ಯ ಪರಂಪರೆಯನ್ನು ಮುನ್ನಡೆಸುವಲ್ಲಿ ಅವರು ವಿವಿಧ ಹಂತದಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. ಕಿಟೆಲ್ ಅವರು ಕನ್ನಡ ಭಾಷೆಗೆ ನೀಡಿದ ಕೊಡುಗೆ ಗಮನಾರ್ಹವಾದದ್ದು. ಕನ್ನಡ ಸಾಹಿತ್ಯ ಪರಂಪರೆಗೆ ತಮ್ಮದೇ ಕೃತಿಗಳನ್ನು ನೀಡುವ ಜೊತೆಗೆ ಅನೇಕ ಕೃತಿಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ನಮ್ಮ ಶ್ರೀಮಂತ ಕಲೆ ಜಾನಪದದ ಬಗ್ಗೆ ಸಹ ಅವರು ಕೆಲಸ ಮಾಡಿದ್ದಾರೆ. ಅವರ ಹೆಸರಿನಲ್ಲಿ ಕೊಡುವ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.

ಸಾಹಿತ್ಯದ ಜೊತೆ ನಾವು ಪರಿಸರದ ಬಗ್ಗೆ ಸಹ ಗಮನ ಹರಿಸಬೇಕಾಗಿದೆ. ಪಶ್ಚಿಮಘಟ್ಟದ ಬಗ್ಗೆ ನಮ್ಮ ನಿರ್ಲಿಪ್ತತೆ ಸಹಿಸಲು ಸಾಧ್ಯವಿಲ್ಲ. ಅನೇಕ ಹೋರಾಟದ ನಡುವೆಯೂ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕಳಿಸುತ್ತೇವೆ ಎನ್ನುವ ಚರ್ಚೆ ಪ್ರಾರಂಭವಾಗಿರುವುದು ದುರದೃಷ್ಟಕರ. ಅಭಿವೃದ್ದಿ ಎನ್ನುವ ಕೆಟ್ಟ ಕನಸು, ಹುಚ್ಚಿಗೆ ನಾವು ಬಲಿಪಶುವಾಗಿದ್ದೇವೆ. ಕನ್ನಡದ ವಿದ್ವತ್ ಸಂಪಾದನೆ ಜೊತೆಗೆ ಆಯಾ ಕಾಲದ ಸಾಂಸ್ಕೃತಿಕ, ಪರಿಸರ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುತ್ತಾ ನಾವು ಮುನ್ನಡೆಯಬೇಕಾಗಿದೆ ಎಂದರು.

ಪರಸ್ಪರ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಡಾ. ಜಿ.ಎಸ್.ಭಟ್ಟ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದ ಅಭಿವೃದ್ದಿಗೆ ಹಲವರು ನೀಡಿದ ಕೊಡುಗೆ ಸ್ಮರಣೀಯವಾದದ್ದು. ನಮ್ಮ ಆಡುಭಾಷೆ ಅತ್ಯಂತ ಸೊಗಸು. ಕನ್ನಡದಲ್ಲಿ ಉಪ ಭಾಷೆ ಬೇರೆ ಬೇರೆ ಆಯಾಮಗಳಲ್ಲಿ ಬರುತ್ತದೆ. ಇವನ್ನೆಲ್ಲಾ ಬಳಸಿಕೊಂಡು ಕನ್ನಡವನ್ನು ಅಭಿವೃದ್ದಿಪಡಿಸಿಕೊಂಡು ಬರುತ್ತಿದ್ದೇವೆ. ಭಾವೈಕ್ಯತೆ, ಸಾಮಾಜಿಕ ಕಳಕಳಿ ಹಾಗೂ ಕನ್ನಡ ಸಾಹಿತ್ಯ ರಚನೆ ಸಂಶೋಧನೆಗಳಲ್ಲಿ ತೊಡಗಿಸಿಕೊಂಡವರನ್ನು ಪರಸ್ಪರ ಸಾಹಿತ್ಯ ವೇದಿಕೆ ಕಳೆದ ನಾಲ್ಕು ವರ್ಷಗಳಿಂದ ಗುರುತಿಸಿ ಪ್ರಶಸ್ತಿ ನೀಡುತ್ತಾ ಬರುತ್ತಿದೆ. ಈ ಸಾಲಿನಲ್ಲಿ ಎಫ್. ಕಿಟಲ್ ಪ್ರಶಸ್ತಿಯನ್ನು ಪ್ರೊ. ರಾಜೇಂದ್ರ ಚೆನ್ನಿ, ಅಕ್ಕಮಹಾದೇವಿ ಪ್ರಶಸ್ತಿಯನ್ನು ಡಾ.ಸಬಿತಾ ಬನ್ನಾಡಿ, ಸಂತ ಶಿಶುನಾಳ ಶರೀಫ ಪ್ರಶಸ್ತಿಯನ್ನು ರಾಯಚೂರಿನ ಕವಿ ಆರಿಫ್ ರಾಜಾ ಅವರಿಗೆ ನೀಡುವ ಮೂಲಕ ಪರಸ್ಪರ ಸಾಹಿತ್ಯ ವೇದಿಕೆ ಅರ್ಹರನ್ನು ಗುರುತಿಸಿ ಅವರನ್ನು ಗೌರವಿಸುವ ಸಂಪ್ರದಾಯವನ್ನು ಮುನ್ನಡೆಸಿಕೊಂಡು ಬಂದಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕವಿ ಅಂಕಣಗಾರ್ತಿ ಡಾ. ಸಬಿತಾ ಬನ್ನಾಡಿ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕನ್ನಡ ಭಾಷಾ ಪತ್ರಿಕೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಪರಸ್ಪರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಡಾ. ಸರ್ಫ್ರಾಜ್ ಚಂದ್ರಗುತ್ತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಾಹಿತಿ ಡಾ. ನಾ.ಡಿಸೋಜ, ವೇದಿಕೆಯ ದತ್ತಾತ್ರೇಯ ಬೊಂಗಾಳೆ, ಗಣಪತಿ ಎಸ್.ಎಂ., ಎಂ.ಸಿ.ವೀರಪ್ಪ ಇನ್ನಿತರರು ಹಾಜರಿದ್ದರು.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News