ಪ್ರಜಾಸತ್ತೆಯ ಮುಖವಾಡದ ಸರ್ವಾಧಿಕಾರಕ್ಕೆ ಪಾಠ

Update: 2024-08-07 06:32 GMT

ವಿಡಿಯೋ ವಾರ್ತಾಭಾರತಿ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಿ : ಲಿಂಕ್ ಕಮೆಂಟ್ ಬಾಕ್ಸ್ ನಲ್ಲಿ ಇದೆ

Full View

ಬಾಂಗ್ಲಾದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಮತ್ತು ಭೀಕರ ಹಿಂಸಾಚಾರ, ಎರಡು ವರ್ಷಗಳ ಹಿಂದಿನ ನೆರೆಯ ಶ್ರೀಲಂಕಾವನ್ನು ನೆನಪಿಸುತ್ತಿದೆ. ಈ ಎರಡೂ ದೇಶಗಳ ಅರಾಜಕತೆಗಳಲ್ಲಿ ಹಲವು ಸಾಮ್ಯತೆಗಳಿವೆ. ಅದರಲ್ಲಿ ಮುಖ್ಯವಾದದ್ದು, ಆಳುವವರ ಭ್ರಷ್ಟಾಚಾರ, ಸರ್ವಾಧಿಕಾರಿ ಮನಸ್ಥಿತಿ. ಭ್ರಷ್ಟಾಚಾರದ ಪರಿಣಾಮವಾಗಿ ಶ್ರೀಲಂಕಾ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿತ್ತು. ಜನರು ಬೀದಿಗಿಳಿಯುವುದು ಅನಿವಾರ್ಯವಾಯಿತ್ತು. ಬಾಂಗ್ಲಾದ ಆರ್ಥಿಕ ಸ್ಥಿತಿ ಶ್ರೀಲಂಕಾಕ್ಕೆ ಹೋಲಿಸಿದರೆ ಬಹಳಷ್ಟು ಉತ್ತಮವಾಗಿದೆ. ಆದರೆ ಪ್ರಜಾಸತ್ತೆಯ ಮುಖವಾಡದಲ್ಲಿ ಸರಕಾರಿ ಸಂಸ್ಥೆಗಳನ್ನು ದುರುಪಯೋಗಗೊಳಿಸಿ ನಿರಂತರವಾಗಿ ದೇಶವೊಂದನ್ನು ಆಳಲು ಹೊರಟರೆ ಅದರ ಅಂತಿಮ ಪರಿಣಾಮ ಏನಾಗಬಹುದು ಎನ್ನುವುದಕ್ಕೆ ಪ್ರಧಾನಿ ಹಸೀನಾ ಅವರ ಪತನ ಉದಾಹರಣೆಯಾಗಿದೆ. ವಿರೋಧ ಪಕ್ಷವನ್ನು ಸಂಪೂರ್ಣ ಹತ್ತಿಕ್ಕಿ, ಜನಸಾಮಾನ್ಯರ ಪ್ರತಿಭಟನೆಯನ್ನು ಸೇನೆಯ ಬಲದಿಂದ ನಿಯಂತ್ರಿಸಬಹುದು ಎಂದು ಭಾವಿಸುವ ಯಾವುದೇ ಸರ್ವಾಧಿಕಾರಿಯು ಹಸೀನಾ ಅವರ ಸ್ಥಿತಿಯನ್ನು ಒಂದಲ್ಲ ಒಂದು ದಿನ ಎದುರಿಸಲೇ ಬೇಕಾಗುತ್ತದೆ.

2009ರಿಂದ ಹಸೀನಾ ಶೇಕ್ ನಿರಂತರವಾಗಿ ನಾಲ್ಕನೇ ಬಾರಿಗೆ ಬಾಂಗ್ಲಾವನ್ನು ಆಳುತ್ತಾ ಬಂದಿದ್ದಾರೆ. ಈ ಅವಧಿಯಲ್ಲಿ ಪೊಲೀಸ್ ಬಲವನ್ನು ಬಳಸಿಕೊಂಡು ಹಸೀನಾ ಅವರು ಪ್ರತಿಪಕ್ಷದ ಕಾರ್ಯಕರ್ತರನ್ನು ಹಂತ ಹಂತವಾಗಿ ದಮನಿಸುತ್ತಾ ಬರುತ್ತಿರುವುದರ ಬಗ್ಗೆ ಮಾನವ ಹಕ್ಕು ಹೋರಾಟಗಾರರು ಕಳವಳ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಒಂದು ಪ್ರಬಲ ವಿರೋಧ ಪಕ್ಷವಿದ್ದಿದ್ದರೆ ಹಸೀನಾ ಅಧಿಕಾರದಿಂದ ಈ ಸ್ಥಿತಿಯಲ್ಲಿ ಕೆಳಗಿಳಿಯಬೇಕಾಗಿರಲಿಲ್ಲ. ರಾತ್ರೋ ರಾತ್ರಿ ತನ್ನ ದೇಶ ಬಿಟ್ಟು ಪಲಾಯನ ಮಾಡಬೇಕಾದಂತಹ ಸ್ಥಿತಿಯೂ ನಿರ್ಮಾಣವಾಗುತ್ತಿರಲಿಲ್ಲ. ಬಾಂಗ್ಲಾದಲ್ಲಿ ಅರಾಜಕತೆಯೂ ಸೃಷ್ಟಿಯಾಗುತ್ತಿರಲಿಲ್ಲ. ನೂರಾರು ಯುವಕರು ಪೊಲೀಸರ ಗುಂಡಿಗೆ ಬಲಿಯಾಗಬೇಕಾಗಿರಲಿಲ್ಲ. ಸಂಸತ್‌ನಲ್ಲಿ ವಿರೋಧ ಪಕ್ಷವಿಲ್ಲದೇ ಇದ್ದಾಗ, ಬೀದಿಯೇ ವಿರೋಧ ಪಕ್ಷವಾಗಿ ಬದಲಾಗುತ್ತದೆ ಎನ್ನುವುದಕ್ಕೆ ಬಾಂಗ್ಲಾ ಸಾಕ್ಷಿಯಾಗಿದೆ.

ದೇಶದಲ್ಲಿ ಅಸಮಾನತೆಗಳು ಹೆಚ್ಚಿದಂತೆಯೇ ಆಡಳಿತದ ವಿರುದ್ಧ ಅಸಹನೆಗಳೂ ಹೆಚ್ಚುತ್ತವೆ. ವಿಶೇಷವೆಂದರೆ, ಬಾಂಗ್ಲಾದಲ್ಲಿ ಈ ಅಸಮಾನತೆಗೆ ಮೀಸಲಾತಿಯೇ ಕಾರಣವಾಗಿದ್ದು. 1971ರಲ್ಲಿ ನಡೆದ ವಿಮೋಚನಾ ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕ ಕುಟುಂಬಗಳಿಗೆ ಬಾಂಗ್ಲಾ ದೇಶದ ಸರಕಾರಿ ಹುದ್ದೆಗಳಲ್ಲಿ ಶೇ. 30 ರಷ್ಟು ಮೀಸಲಾತಿಯನ್ನು ನಿಗದಿ ಪಡಿಸಲಾಗಿತ್ತು. ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿದ ಹೆಸರಿನಲ್ಲಿ ಕುಟುಂಬದ ಸದಸ್ಯರು ಸರಕಾರಿ ಹುದ್ದೆಗಳ ದೊಡ್ಡ ಪಾಲನ್ನು ಈ ಮೂಲಕ ಪಡೆಯುವಂತಾಗುತ್ತಿತ್ತು. ಬಾಂಗ್ಲಾದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದ ಮಧ್ಯಮ ವರ್ಗದೊಳಗೆ ಇದು ಸಹಜವಾಗಿಯೇ ಅಸಹನೆಯನ್ನು ಬಿತ್ತಿತ್ತು. ಆರ್ಥಿಕವಾಗಿ ಹಿಂದುಳಿದ, ಪ್ರತಿಭಾವಂತ ವಿದ್ಯಾರ್ಥಿಗಳು ಸರಕಾರಿ ಹುದ್ದೆಗಳಿಂದ ಅವಕಾಶ ವಂಚಿತರಾಗಲು ಇದು ಕಾರಣವಾಗಿತ್ತ್ತು. ದೇಶದ ವಿದ್ಯಾರ್ಥಿಗಳು ಬೀದಿಗಿಳಿಯುವಂತೆ ಮಾಡಿರುವುದು ಈ ಮೀಸಲಾತಿಯೇ. ವಿದ್ಯಾರ್ಥಿಗಳ ಪ್ರತಿಭಟನೆ ದೇಶಾದ್ಯಂತ ಕಾವು ಪಡೆಯುತ್ತಿದ್ದಂತೆಯೇ ಸುಪ್ರೀಂಕೋರ್ಟ್ ಈ ಮೀಸಲಾತಿಯನ್ನು ಶೇ. 30ರಿಂದ ಶೇ. 5ಕ್ಕೆ ಇಳಿಸಿತು. ಆದರೆ ಅದಾಗಲೇ ಪ್ರತಿಭಟನೆಯ ಬೆಂಕಿ ದೇಶದ ಉದ್ದಗಲಕ್ಕೂ ವ್ಯಾಪಿಸಿ, ಹಸೀನಾ ಅವರ ಸರ್ವಾಧಿಕಾರಿ ಆಡಳಿತವನ್ನು ಗುರಿ ಮಾಡಿತ್ತು. ಸೇನೆಯ ಗುಂಡಿಗೆ ನೂರಾರು ವಿದ್ಯಾರ್ಥಿಗಳು ಬಲಿಯಾದದ್ದು, ಪ್ರತಿಭಟನೆಗೆ ಇನ್ನಷ್ಟು ಕಾವು ಕೊಟ್ಟಿತು. ಹೋರಾಟ ತೀವ್ರವಾಗುತ್ತಿದ್ದಂತೆಯೇ ಸೇನೆ, ತನ್ನದೇ ಜನರ ಮೇಲೆ ಗುಂಡಿಕ್ಕಲು ಹಿಂಜರಿಯಿತು. ಬಾಂಗ್ಲಾದ ಜನತೆ ಹಸೀನಾ ಅವರನ್ನು ಅಧಿಕಾರದಿಂದೇನೋ ಕೆಳಗಿಳಿಸಿದರು. ಆದರೆ ಅವರ ಜೊತೆಗೇ ಪ್ರಜಾಸತ್ತೆಯೂ ಅತಂತ್ರ ಸ್ಥಿತಿಯಲ್ಲಿದೆ. ಪತನಗೊಂಡ ಪ್ರಜಾಸತ್ತೆಯನ್ನು ಪುನರ್ ಸ್ಥಾಪಿಸದೇ ಹೋದರೆ, ಬಾಂಗ್ಲಾದ ಜನರು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ. ಹಸೀನಾ ಪತನದ ಹಿಂದೆ ಬಾಂಗ್ಲಾದ ಸೇನೆಯ ಕೈವಾಡವೂ ಇದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಹೀಗಿರುವಾಗ, ಪ್ರಜಾಸತ್ತೆಯನ್ನು ಪುನರ್ ಸ್ಥಾಪಿಸಲು ಸೇನೆ ಎಷ್ಟರಮಟ್ಟಿಗೆ ಸಹಕರಿಸುತ್ತದೆ ಎನ್ನುವುದರ ಆಧಾರದಲ್ಲಿ ಬಾಂಗ್ಲಾದ ಭವಿಷ್ಯ ನಿಂತಿದೆ. ಈ ನಿಟ್ಟಿನಲ್ಲಿ ಪ್ರಜಾಸತ್ತೆ ಮರುಸ್ಥಾಪನೆಯಾಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ವಿದ್ಯಾರ್ಥಿ ಸಂಘಟನೆಗಳು ಎಚ್ಚರಿಸಿರುವುದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ

ಬಾಂಗ್ಲಾದ ರಾಜಕೀಯ ಬೆಳವಣಿಗೆಗೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಜಗತ್ತು ಕುತೂಹಲದಿಂದ ನೋಡುತ್ತಿದೆ. ಬಾಂಗ್ಲಾದ ವಿಮೋಚನೆಯಲ್ಲಿ ಭಾರತ ಮಹತ್ತರ ಪಾತ್ರವನ್ನು ವಹಿಸಿತ್ತು. ಪಾಕಿಸ್ತಾನದಿಂದ ಬಾಂಗ್ಲಾವನ್ನು ವಿಮೋಚನೆಗೊಳಿಸುವುದರಲ್ಲಿ ಭಾರತದ ಹಿತಾಸಕ್ತಿಯೂ ಇತ್ತು. ಅಂದಿನ ಭಾರತದ ಪ್ರಧಾನಿ ಇಂದಿರಾಗಾಂಧಿ ತೆಗೆದುಕೊಂಡ ದಿಟ್ಟ ನಿರ್ಧಾರದ ಪರಿಣಾಮವಾಗಿ ಬಾಂಗ್ಲಾ ವಿಮೋಚನೆಗೊಂಡಿತು. ವಿಪರ್ಯಾಸವೆಂದರೆ, ವಿಮೋಚನಾ ಹೋರಾಟದಲ್ಲಿ ಪರಿಣಾಮಕಾರಿ ಪಾತ್ರವಹಿಸಿದ್ದ ಮುಜೀಬುರ್ ರೆಹ್ಮಾನ್ ಮತ್ತು ಅವರ ಪುತ್ರಿಯೇ ಇಂದು ಬಾಂಗ್ಲಾದ ಜನರ ಪಾಲಿಗೆ ಖಳನಾಯಕರಾಗಿ ಪರಿವರ್ತನೆಗೊಂಡಿದ್ದಾರೆ. ಶೇಕ್ ಹಸೀನಾ ಅವರಿಗೆ ಆಶ್ರಯ ನೀಡಲು ಲಂಡನ್, ಅಮೆರಿಕ ಈಗಾಗಲೇ ನಿರಾಕರಿಸಿದ್ದು, ಭಾರತ ನೆರವಿನ ಹಸ್ತವನ್ನು ಚಾಚಿದೆ. ಈ ನಿರ್ಧಾರ, ಭವಿಷ್ಯದಲ್ಲಿ ಬಾಂಗ್ಲಾ ಮತ್ತು ಭಾರತದ ನಡುವಿನ ಸಂಬಂಧವನ್ನು ಶಾಶ್ವತವಾಗಿ ಕೆಡಿಸುವ ಸಾಧ್ಯತೆಗಳೂ ಇವೆ. ಆದುದರಿಂದ ಭಾರತ ಎಚ್ಚರದಿಂದ ಹೆಜ್ಜೆಯನ್ನು ಇಡಬೇಕಾಗಿದೆ. ನೆರೆ ರಾಷ್ಟ್ರಗಳ ಆಂತರಿಕ ವಿಷಯಗಳ ಮೇಲೆ ಹಸ್ತಕ್ಷೇಪ ನಡೆಸುವ ಆರೋಪ ಈಗಾಗಲೇ ಭಾರತದ ಮೇಲಿದೆ. ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಜೊತೆಗಿನ ಸಂಬಂಧ ಈ ಕಾರಣಕ್ಕಾಗಿಯೇ ಕೆಟ್ಟಿದೆ. ಶೇಕ್ ಹಸೀನಾ ಮೇಲಿನ ಬಾಂಗ್ಲಾದ ಯುವಕರ ಅಸಮಾಧಾನಕ್ಕೆ ಇನ್ನೊಂದು ಮುಖ್ಯ ಕಾರಣ, ಆಕೆಯ ಭಾರತ ಪರವಾಗಿರುವ ನಿಲುವುಗಳು. ಮೋದಿ ಅಧಿಕಾರಕ್ಕೆ ಬಂದ ದಿನದಿಂದ ಬಾಂಗ್ಲಾದ ಜನರಲ್ಲಿ ಭಾರತದ ಕುರಿತಂತೆ ಅಸಮಾಧಾನ ಹೆಚ್ಚಿದೆ. ಈ ಅಸಮಾಧಾನವನ್ನು ಚೀನಾ ತನಗೆ ಪೂರಕವಾಗಿ ಬಳಸಿಕೊಳ್ಳಲು ಕಾದು ಕುಳಿತಿದೆ. ಇದೀಗ ಇಡೀ ಬಾಂಗ್ಲಾ ಹೊಸ ರಾಜಕೀಯ ತಿರುವಿನಲ್ಲಿ ನಿಂತಿರುವಾಗ, ಭಾರತವೂ ಅದರ ಜೊತೆ ಜೊತೆಗೆ ಹೆಜ್ಜೆಯಿಡುವುದು ಅನಿವಾರ್ಯವಾಗುತ್ತದೆ.

ಇದೇ ಸಂದರ್ಭದಲ್ಲಿ ನೆರೆಯ ಬಾಂಗ್ಲಾದಲ್ಲಿ ಸಂಭವಿಸಿರುವ ರಾಜಕೀಯ ಬೆಳವಣಿಗೆಗಳಿಂದ ನಮ್ಮ ನಾಯಕರು ಕಲಿಯಲು ಹಲವು ಪಾಠಗಳಿವೆ. ಸಮಾಜದಲ್ಲಿ ಅಸಮಾನತೆಗಳ ಪೋಷಣೆ ಅಂತಿಮವಾಗಿ ಬಂಡಾಯಕ್ಕೆ ಕಾರಣವಾಗುತ್ತದೆ. ಶೋಷಿತರಿಗೆ, ದುರ್ಬಲರಿಗೆ ಸಿಗಬೇಕಾದ ಮೀಸಲಾತಿ, ಈಗಾಗಲೇ ಸಕಲ ಸವಲತ್ತುಗಳನ್ನು ಅನುಭವಿಸುವ ಕುಟುಂಬಗಳೇ ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲಿ ಕಬಳಿಸುತ್ತಿರುವುದು ಬಾಂಗ್ಲಾ ಜನರ ಅಸಮಾಧಾನಕ್ಕೆ ಮುಖ್ಯ ಕಾರಣ. ಈ ನಿಟ್ಟಿನಲ್ಲಿ ಭಾರತದಲ್ಲಿ ಮೀಸಲಾತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಂದರೆ, ಶೋಷಿತ ಸಮುದಾಯದ ಅರ್ಹ ಫಲಾನುಭವಿಗಳಿಗೆ ದೊರಕುವಂತೆ ಜಾರಿಗೊಳಿಸುವ ಪ್ರಯತ್ನ ನಡೆಯಬೇಕು. ಹಾಗೆಯೇ ಸೇನೆಯಲ್ಲಿ ಅನಗತ್ಯ ಹಸ್ತಕ್ಷೇಪವೂ ಕೆಲವೊಮ್ಮೆ ಸಮಸ್ಯೆಗಳಿಗೆ ಕಾರಣವಾಗಬಹುದು. ಭಾರತದಲ್ಲಿ ನೂತನವಾಗಿ ಜಾರಿಗೊಂಡಿರುವ ಅಗ್ನಿಪಥ ಯೋಜನೆಯ ವಿರುದ್ಧ ಈಗಾಗಲೇ ಉತ್ತರ ಭಾರತ ವ್ಯಾಪಕ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉಗ್ರವಾದಿಗಳೆಂದು ಕರೆದು ದಮನಿಸಲು ನಡೆಸುವ ಪ್ರಯತ್ನವೂ ಅಂತಿಮವಾಗಿ ಪ್ರಜಾಸತ್ತೆಗೆ ತಿರುಗುಬಾಣವಾಗಬಹುದು. ಬಾಂಗ್ಲಾದಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಶೇಕ್ ಹಸೀನಾ ಅವರು, ‘ರಸ್ತೆಯಲ್ಲಿ ಬೀಡು ಬಿಟ್ಟಿರುವ ಉಗ್ರವಾದಿಗಳು’ ಎಂದು ಜರೆದಿದ್ದರು. ಸೇನೆಯ ಮೂಲಕ ಅವರನ್ನು ಬಗ್ಗು ಬಡಿಯಬಹುದು ಎಂದೂ ಭಾವಿಸಿದ್ದರು. ಬಾಂಗ್ಲಾದ ಕನ್ನಡಿಯಲ್ಲಿ ಭಾರತ ತನ್ನ ಮುಖವನ್ನು ನೋಡಿಕೊಳ್ಳಬೇಕು. ಬಾಂಗ್ಲಾದ ಬೆಳವಣಿಗೆಗಳು ಭಾರತದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಎಚ್ಚರವಾಗಿರಬೇಕು. 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News