ಬಡತನದ ಮಾನದಂಡ ಬದಲಾಗಲಿ

Update: 2024-07-06 05:30 GMT

stock.adobe.com

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶದಲ್ಲಿ ಬಡವರ ಸಂಖ್ಯೆ ಶೇ. 21ರಿಂದ 8.5ಕ್ಕೆ ಇಳಿಕೆಯಾಗಿದೆ ಎಂದು ನಂದನ್ ನಿಲೇಕಣಿಯ ನೇತೃತ್ವದ ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿಯ ಮಾನವ ಅಭಿವೃದ್ಧಿ ಸಮೀಕ್ಷೆಯ ಅಂಕಿಅಂಶಗಳು ಹೇಳಿದೆ. ಗ್ರಾಮೀಣ ಪ್ರದೇಶದಲ್ಲಿದ್ದ ಶೇ. 24.8 ಬಡವರ ಸಂಖ್ಯೆ ಈಗ ಶೇ. 8.6ಕ್ಕಿಳಿದಿದೆ. ನಗರ ಪ್ರದೇಶಗಳಲ್ಲಿ ಶೇ. 21ರಷ್ಟಿದ್ದ ಬಡತನ ಈಗ 8.5ಕ್ಕೆ ಇಳಿಕೆಯಾಗಿದೆ ಎಂದು ಈ ವರದಿ ಹೇಳುತ್ತಿದೆ. ದೇಶಾದ್ಯಂತ ಒದಗಿಸುತ್ತಿರುವ ಸಬ್ಸಿಡಿಯ ಆಹಾರ, ಆರ್ಥಿಕ ನೆರವುಗಳು ಈ ಬಡತನ ಇಳಿಕೆಗೆ ಕಾರಣ ಎಂದೂ ವರದಿ ಗುರುತಿಸಿದೆ. ಸರಕಾರಗಳು ಸಾಮಾಜಿಕ ಭದ್ರತೆಗೆ ಒತ್ತು ನೀಡದೇ ಹೋದರೆ, ಮತ್ತೆ ಬಡತನ ಹೆಚ್ಚುವ ಸಾಧ್ಯತೆಗಳಿವೆ ಎಂದೂ ವರದಿಯಲ್ಲಿ ಎಚ್ಚರಿಸಲಾಗಿದೆ. ಈ ವರದಿಯನ್ನು ಈಗಾಗಲೇ ಮಾಧ್ಯಮಗಳು ಮುಖಪುಟದಲ್ಲಿ ಪ್ರಕಟಿಸಿ ಸಂಭ್ರಮಿಸಿವೆ. ಆದರೆ ದೇಶದ ಸಾಮಾನ್ಯ ಜನತೆ, ಈ ವರದಿಯ ಬಗ್ಗೆ ಗೊಂದಲಕ್ಕೀಡಾಗಿದ್ದಾರೆ. ಬಡತನ ಇಳಿಕೆಯಾಗಿದೆ ಎಂದು ವರದಿ ಘೋಷಿಸುತ್ತಿದ್ದರೂ, ಈ ದೇಶದಲ್ಲಿ ಹಸಿವು ಯಾಕೆ ಹೆಚ್ಚಿದೆ ಮತ್ತು ನಿರುದ್ಯೋಗಗಳು ಯಾಕೆ ಹೆಚ್ಚುತ್ತಿವೆ ಎನ್ನುವುದು ಅವರ ಪಾಲಿಗೆ ಇನ್ನೂ ಬಿಡಿಸಲಾಗದ ಕಗ್ಗಂಟಾಗಿಯೇ ಉಳಿದಿದೆ.

ಈ ಹಿಂದೆ ನೀತಿ ಆಯೋಗದ ಅಧಿಕಾರಿಗಳು ಪ್ರಕಟಿಸಿದ ಅಂಕಿಅಂಶಗಳ ಮುಂದುವರಿದ ಭಾಗ ಇದಾಗಿದೆ. 2022-23ರಲ್ಲಿ ಭಾರತದಲ್ಲಿ ಬಡತನ 11.3ಕ್ಕೆ ಇಳಿದಿದೆ. ಈ ಮೂಲಕ ಭಾರತದಲ್ಲಿ ಬಡತನ ನಿವಾರಣೆಯಲ್ಲಿ ಅಭೂತಪೂರ್ವ ಸಾಧನೆಯಾಗಿದೆ ಎಂದು ಆಯೋಗ ಹೇಳಿಕೊಂಡಿತ್ತು. ಆಯೋಗ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದ ಬೆನ್ನಿಗೇ, ಪ್ರಧಾನಿ ಮೋದಿಯವರು ಟ್ವೀಟ್ ಮಾಡುವ ಮೂಲಕ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದ್ದರು. ‘ಎಲ್ಲರನ್ನು ಒಳಗೊಳ್ಳುವ ಬೆಳವಣಿಗೆಗಳನ್ನು ಸಾಧಿಸುವಲ್ಲಿ, ಆರ್ಥಿಕತೆಯಲ್ಲಿ ಸಮಗ್ರ ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾಗಿರುವುದನ್ನು ಇದು ಹೇಳುತ್ತದೆ’ ಎಂದು ಅವರು ಹೇಳಿಕೆ ಬಿಡುಗಡೆ ಮಾಡಿದ್ದರು. ಹತ್ತಿರವಾಗುತ್ತಿರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೀತಿ ಆಯೋಗವು ಕಳೆದ ಜನವರಿಯಲ್ಲಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿತ್ತು. ಮಾತ್ರವಲ್ಲ, ಹತ್ತು ವರ್ಷಗಳ ಮೋದಿಯವರ ಆಡಳಿತವು ಬಡವರಿಗೆ ಪೂರಕವಾಗಿದೆ ಎನ್ನುವ ಶಿಫಾರಸನ್ನು ಮಾಡಿತ್ತು. 2020-21ರ ಕೊರೋನ, ಲಾಕ್‌ಡೌನ್‌ಗಳು ಈ ದೇಶದ ಬಡತನವನ್ನು ಹೆಚ್ಚಿಸಿದೆ ಮಾತ್ರವಲ್ಲ, ಸಾವಿರಾರು ಉದ್ಯಮಗಳನ್ನು ನಾಶ ಮಾಡಿದೆ ಎನ್ನುವ ವಾಸ್ತವವನ್ನು ಪದೇ ಪದೇ ವಿಶ್ವಸಂಸ್ಥೆ ತೆರೆದಿಟ್ಟರೂ ಭಾರತ ಅದನ್ನು ಅಲ್ಲಗಳೆಯುವ ಭಾಗವಾಗಿ ನೀತಿ ಆಯೋಗ ಮಾತ್ರವಲ್ಲ, ಖಾಸಗಿ ಸಂಸ್ಥೆಗಳ ವರದಿಗಳ ನೆರವನ್ನು ಪಡೆಯುತ್ತಾ ಬರುತ್ತಿದೆ. ಬಡತನ ನಿವಾರಣೆಯಲ್ಲಿ, ಕೊರೋನ, ಲಾಕ್‌ಡೌನ್ ಯಾವುದೇ ರೀತಿಯಲ್ಲಿ ಅಡ್ಡಿಯಾಗಿಲ್ಲ ಎನ್ನುವುದನ್ನು ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿಯ ವರದಿ ಹೇಳುತ್ತದೆ.

‘ಗರೀಬಿ ಹಠಾವೋ’ ಘೋಷಣೆ ಇಂದು ನಿನ್ನೆಯದಲ್ಲ. ಇಂದಿರಾಗಾಂಧಿಯ ಕಾಲದಿಂದಲೂ ಇದೊಂದು ‘ರಾಷ್ಟ್ರೀಯ ಘೋಷಣೆ’. ನೂತನವಾಗಿ ಅಧಿಕಾರ ಹಿಡಿಯುವ ಸಂದರ್ಭದಲ್ಲಿ ಎಲ್ಲ ಪ್ರಧಾನಿಗಳೂ ಬಡತನವನ್ನು ಬುಡಮಟ್ಟ ಕೀಳುವ ಭರವಸೆಯನ್ನು ನೀಡುತ್ತಾ ಬರುತ್ತಿದ್ದಾರೆ. ಬಡತನ ಜೀವಂತವಿದ್ದರೆ ಮಾತ್ರ ತಮ್ಮ ರಾಜಕೀಯ ಬದುಕೂ ಜೀವಂತವಿರಲು ಸಾಧ್ಯ ಎನ್ನುವುದನ್ನು ರಾಜಕಾರಣಿಗಳು ಕಂಡುಕೊಂಡ ಬಳಿಕ, ಬಡತನವನ್ನು ನಿವಾರಿಸುವ ಅಡ್ಡದಾರಿಯೊಂದನ್ನು ಕಂಡುಕೊಂಡರು. ಬಡತನವನ್ನು ನಿವಾರಿಸುವುದಕ್ಕಿಂತ ಬಡತನಕ್ಕಿರುವ ಮಾನದಂಡಗಳನ್ನು ಬದಲಿಸುವುದು ಹೆಚ್ಚು ಸುಲಭ. ಇಂದು ದೇಶದಲ್ಲಿ ಯಾರನ್ನು ಬಡವರೆಂದು ಕರೆಯಬೇಕು ಎನ್ನುವುದರ ಬಗ್ಗೆಯೇ ಗೊಂದಲಗಳಿವೆ. ಬಡತನ ಎಂದರೇನು? ಹಸಿವು ಎಂದರೇನು? ಈ ಬಗ್ಗೆಯೇ ಸ್ಪಷ್ಟ ಕಲ್ಪನೆಯಿಲ್ಲದ ರಾಜಕಾರಣಿಗಳು ಬಡತನವನ್ನು ನಿವಾರಿಸುವುದಾದರೂ ಹೇಗೆ ಸಾಧ್ಯ? ಭಾರತದಲ್ಲಿ ಹೆಚ್ಚುತ್ತಿರುವ ಬಡತನದ ಬಗ್ಗೆ, ಹಸಿವಿನ ಬಗ್ಗೆ ವಿಶ್ವಸಂಸ್ಥೆ ಬೆರಳು ಮಾಡಿದಾಗಲೆಲ್ಲ, ಅವರ ಮಾನದಂಡಗಳೇ ಸರಿಯಿಲ್ಲ ಎಂದು ಅವುಗಳನ್ನು ಅಲ್ಲಗಳೆಯುತ್ತಾ ಬಂದಿದೆ ಸರಕಾರ. ಬಡತನದ ಬಗ್ಗೆ ತನ್ನದೇ ಮಾನದಂಡಗಳನ್ನು ಸಿದ್ಧಗೊಳಿಸಿ, ಅದರಂತೆ ‘ಭಾರತದಲ್ಲಿ ಬಡತನ ನಿವಾರಣೆ’ಯಾಗಿದೆ ಎಂದು ಸರಕಾರ ಸಂತೃಪ್ತಿ ಪಟ್ಟುಕೊಳ್ಳುತ್ತ್ತಿದೆ.

ಭಾರತದಲ್ಲಿ ಬಡತನದ ಸಮಸ್ಯೆಯನ್ನು ನಿವಾರಿಸಲು ರಮೇಶ್ ತೆಂಡುಲ್ಕರ್ ಸಮಿತಿಯನ್ನು 2004ರಲ್ಲಿ ನೇಮಿಸಲಾಯಿತು. ಸುಮಾರು ಒಂದು ವರ್ಷದ ಸಮೀಕ್ಷೆಯ ಬಳಿಕ ಈ ಸಮಿತಿ ಬಡತನದ ಮಾನದಂಡವನ್ನೇ ಬದಲಿಸಿತು. ಪರಿಣಾಮವಾಗಿ, ನಗರ ಪ್ರದೇಶಗಳಲ್ಲಿ ದಿನಕ್ಕೆ 32 ರೂಪಾಯಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದಿನಕ್ಕೆ 28 ರೂಪಾಯಿಗಳಿಗಿಂತ ಕಡಿಮೆ ಆದಾಯ ಹೊಂದಿರುವವರನ್ನು ಕಡು ಬಡವರು ಎಂದು ಘೋಷಿಸಲಾಯಿತು. ಇದರ ಆಧಾರದಲ್ಲೇ 2012ರಲ್ಲಿ ಯೋಜನಾ ಆಯೋಗದ ಮುಖ್ಯಸ್ಥ ಮೊಂಟೆಕ್ ಅಹ್ಲುವಾಲಿಯಾ ಅವರು 2004-05ರಲ್ಲಿ ಶೇ. 37ರಷ್ಟಿದ್ದ ಭಾರತದ ಬಡತನದ ಪ್ರಮಾಣವು 2011-12ರ ಹೊತ್ತಿಗೆ ಶೇ. 22ಕ್ಕೆ ಇಳಿದಿದೆ ಎಂದು ಪ್ರಕಟಿಸಿದ್ದರು. ಇಲ್ಲಿ, ಇಳಿಕೆಯಾಗಿರುವುದು ಬಡತನವಲ್ಲ. ಈ ದೇಶದಲ್ಲಿ ಬಡತನ ಹಲವು ಸಂದರ್ಭಗಳಲ್ಲಿ ಬೇರೆ ಬೇರೆ ರೂಪಗಳನ್ನು, ವ್ಯಾಖ್ಯಾನಗಳನ್ನು ಪಡೆಯುತ್ತವೆ. ಇಲ್ಲಿ ಳಜಾತಿಯವರ ಬಡತನಕ್ಕೂ, ಮೇಲ್‌ಜಾತಿಯವರ ಬಡತನಕ್ಕೂ ಮಾನದಂಡದಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇತ್ತೀಚೆಗೆ ಮೇಲ್‌ಜಾತಿಯ ಜನರಿಗೆ ಶೇ. 10ರಷ್ಟು ಮೀಸಲಾತಿಯನ್ನು ಘೋಷಿಸಿದಾಗ, ಸರಕಾರ ಮಾಸಿಕ 60,000 ರೂಪಾಯಿಗಳಿಗೂ ಅಧಿಕ ವರಮಾನವುಳ್ಳವರನ್ನು ಬಡವರ ಪಟ್ಟಿಗೆ ಸೇರಿಸಿರುವುದನ್ನು ಸ್ಮರಿಸಬೇಕು. ಒಂದೆಡೆ ದಿನಕ್ಕೆ 32 ರೂಪಾಯಿ ಅಂದರೆ, ತಿಂಗಳಿಗೆ 960 ರೂಪಾಯಿಗಿಂತ ಹೆಚ್ಚು ದುಡಿಯುವವರು ಸರಕಾರದ ದೃಷ್ಟಿಯಲ್ಲಿ ಕಡು ಬಡವರಲ್ಲ. ಮತ್ತೊಂದು ಸಂದರ್ಭದಲ್ಲಿ ಮಾಸಿಕ 60,000 ಕ್ಕೂ ಅಧಿಕ ವರಮಾನವುಳ್ಳ ಕುಟುಂಬ ಬಡವರ್ಗಕ್ಕೆ ಸೇರ್ಪಡೆಯಾಗುತ್ತದೆ. 2012ರಲ್ಲಿ ಯುಪಿಎ ಸರಕಾರ ಬಡವರ ಸಂಖ್ಯೆ ಇಳಿಕೆಯಾಗಿದೆ ಎಂದು ಹೇಳಿದಾಗ ಅದರ ವಿರುದ್ಧ ವಿರೋಧ ಪಕ್ಷಗಳು ತೀವ್ರ ಟೀಕೆಗಳನ್ನು ಮಾಡಿದ್ದವು. ತೆಂಡುಲ್ಕರ್ ಸಮಿತಿಯ ಮಾನದಂಡವನ್ನು ತಿರಸ್ಕರಿಸಬೇಕು ಎನ್ನುವ ವ್ಯಾಪಕ ಒತ್ತಡಗಳು ಕೇಳಿ ಬಂದವು. ಆ ಒತ್ತಡಕ್ಕೆ ಮಣಿದು ಆರ್‌ಬಿಐ ಮಾಜಿ ಗವರ್ನರ್ ರಂಗರಾಜನ್ ಅವರ ನೇತೃತ್ವದಲ್ಲಿ ಹೊಸ ಸಮಿತಿಯನ್ನು ನೇಮಿಸಲಾಯಿತು. ಬಿಪಿಎಲ್‌ಗೆ ಹೊಸ ಮಾನದಂಡವನ್ನು ನಿರ್ಣಯಿಸಿತು. ರಂಗರಾಜನ್ ಸಮಿತಿಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 32 ರೂಪಾಯಿ ಖರ್ಚು ಮಾಡುವವರು ಹಾಗೂ ಪಟ್ಟಣ, ನಗರಗಳಲ್ಲಿ 47 ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡುವವರು ಬಡವರಲ್ಲ. ಆದರೆ ಸಮಿತಿಯ ಈ ನಿರ್ಣಯವೂ ಸಾಕಷ್ಟು ಟೀಕೆಗಳಿಗೆ ಕಾರಣವಾದವು. ಇತ್ತೀಚೆಗೆ ಎಸ್‌ಬಿಐ ರಿಸರ್ಚ್ ಅಂದಾಜಿಸಿದ ಬಡತನ, ನಿಲೇಕಣಿ ಸಂಸ್ಥೆಯ ಅಂದಾಜಿಗಿಂತ ಭಿನ್ನವಾಗಿದೆ. ನಿಲೇಕಣಿ ಸಂಸ್ಥೆ ತಯಾರಿಸಿರುವ ವರದಿ ಅದೇ ತೆಂಡುಲ್ಕರ್ ಮಾನದಂಡಗಳನ್ನು ಆಧರಿಸಿದೆ.

ವಿಶ್ವ ಬ್ಯಾಂಕ್ ಬಡತನವನ್ನು ಅಳೆಯಲು ದಿನಕ್ಕೆ ಪ್ರತಿ ವ್ಯಕ್ತಿಯ ದಿನದ ಆದಾಯ 180 ರೂಪಾಯಿ ಎಂದು ನಿಗದಿಪಡಿಸಿದೆ. ಹಾಗೆಯೇ ವಿಶ್ವವು ಹಸಿವಿನ ಪ್ರಮಾಣವನ್ನು ಅಂದಾಜಿಸಲು ಮಹಿಳೆ ಮತ್ತು ಮಕ್ಕಳ ತೂಕದ ಪ್ರಮಾಣಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಅಪೌಷ್ಟಿಕತೆ ಆರೋಗ್ಯದ ಮೇಲೆ ಬೀರುವ ಪರಿಣಾಮಗಳನ್ನು ಹಸಿವಿನ ಸೂಚ್ಯಂಕದಲ್ಲಿ ಬಳಸಿಕೊಳ್ಳುತ್ತವೆ. ಇಷ್ಟಕ್ಕೂ ನಿಲೇಕಣಿ ಸಂಸ್ಥೆಯು, ಆಹಾರ ಸಬ್ಸಿಡಿಯಂತಹ ಸರಕಾರಿ ಸವಲತ್ತುಗಳು ಕಡು ಬಡತನವನ್ನು ಇಳಿಕೆ ಮಾಡಿದೆ ಎಂದು ಹೇಳುತ್ತದೆ. ಅಷ್ಟೇ ಅಲ್ಲ, ಸರಕಾರ ಸಾಮಾಜಿಕ ಭದ್ರತೆಗೆ ಒತ್ತು ನೀಡದೆ ಹೋದರೆ ಮತ್ತೆ ಬಡತನ ಹೆಚ್ಚುವ ಸಂಭವವಿದೆ ಎನ್ನುವ ಎಚ್ಚರಿಕೆಯನ್ನೂ ನೀಡಿದೆ. ಈ ದೇಶದಲ್ಲಿ ಬಡತನವಿದೆ ಎನ್ನುವ ಕಾರಣಕ್ಕಾಗಿಯೇ ಸರಕಾರ ಉಚಿತ ಅಕ್ಕಿಯನ್ನು ಹಂಚುತ್ತಿದೆ. ಬಡತನ ಇಳಿಕೆಯಾಗಿದೆಯಾದರೂ, ಸರಕಾರ ಯಾಕೆ ಉಚಿತ ಧಾನ್ಯಗಳನ್ನು ಹಂಚುತ್ತಿದೆ ಎನ್ನುವ ಪ್ರಶ್ನೆ ಜೊತೆಗೇ ಏಳುತ್ತದೆ. ಇದೇ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ನೀಡುತ್ತಿರುವ ಉಚಿತಗಳನ್ನು ಪ್ರಧಾನಿ ಮೋದಿ ಮತ್ತು ಅವರ ಸಂಗಡಿಗರು ಟೀಕಿಸುತ್ತಿದ್ದಾರೆ. ಸಾಮಾಜಿಕ ಭದ್ರತೆಗೆ ನೀಡಬೇಕಾದ ಆದ್ಯತೆಗಳ ಬಗ್ಗೆ ಪ್ರಾಥಮಿಕ ಅರಿವೂ ಪ್ರಧಾನಿ ಮೋದಿಯವರಿಗೆ ಇದ್ದಂತಿಲ್ಲ ಎನ್ನುವುದನ್ನು ಇದು ಹೇಳುತ್ತದೆ. ಬಡತನವೆಂದರೆ ಏನು ಎನ್ನುವುದರ ಬಗ್ಗೆಯೇ ಗೊಂದಲವಿರುವ ಪ್ರಧಾನಿಯಿಂದ ಬಡತನ ನಿವಾರಣೆ ಸಾಧ್ಯವಾದೀತಾದರೂ ಹೇಗೆ?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News