ಅಪೌಷ್ಟಿಕ ಭಾರತದ ಮುಂದಿರುವ ಸವಾಲು

Update: 2024-11-07 05:47 GMT

ಸಾಂದರ್ಭಿಕ ಚಿತ್ರ PC: istockphoto.com

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚಿನ ದಿನಗಳಲ್ಲಿ ಸಾಲು ಸಾಲಾಗಿ ಹೊರ ಬೀಳುತ್ತಿರುವ ಸಾಮಾಜಿಕ ವಲಯಗಳಿಗೆ ಸಂಬಂಧಿಸಿದ ವರದಿಗಳು ಭಾರತದ ಅಭಿವೃದ್ಧಿಯ ಸ್ಥಿತಿಗತಿಯನ್ನು ಜಗತ್ತಿನ ಮುಂದೆ ತೆರೆದಿಡುತ್ತಿವೆೆ. ಪ್ರಧಾನಿ ಮೋದಿ ಮತ್ತು ಅವರಿಂದ ನಿಯಂತ್ರಿಸಲ್ಪಡುತ್ತಿರುವ ಮಾಧ್ಯಮಗಳು ಕಟ್ಟಿಕೊಟ್ಟ ಭಾರತದ ಬಣ್ಣ ಕರಗುತ್ತಿರುವ ಲಕ್ಷಣಗಳು ಈ ವರದಿಗಳಿಂದ ಬೆಳಕಿಗೆ ಬರುತ್ತಿವೆ. ಕಡು ಬಡತನ ಮತ್ತು ಹಸಿವಿನ ಸೂಚ್ಯಂಕದಲ್ಲಿ ಭಾರತದ ಕಳವಳಕಾರಿ ಸ್ಥಾನವನ್ನು ಸೂಚಿಸಿದ ಬೆನ್ನಿಗೇ ಭಾರತದಲ್ಲಿ ಹೆಚ್ಚುತ್ತಿರುವ ಕ್ಷಯ ರೋಗಗಳ ಬಗ್ಗೆಯೂ ವಿಶ್ವಸಂಸ್ಥೆ ಬೊಟ್ಟು ಮಾಡಿ ತೋರಿಸಿದೆ. ವಿಶ್ವದಲ್ಲೇ ಅತಿ ಹೆಚ್ಚು ಕ್ಷಯರೋಗಗಳು ಭಾರತದಲ್ಲಿ ಪತ್ತೆಯಾಗಿವೆ ಎನ್ನುವ ಅಂಶವನ್ನು ವರದಿ ಹೇಳುತ್ತಿದೆ. ಕ್ಷಯ ರೋಗವು ಹಸಿವು ಮತ್ತು ಅಪೌಷ್ಟಿಕತೆಯೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ಆದುದರಿಂದ, ಹೆಚ್ಚುತ್ತಿರುವ ಕ್ಷಯ ರೋಗದ ಮೂಲ ಕಾರಣಗಳನ್ನು ಹುಡುಕಿ ಅದಕ್ಕೆ ಪರಿಹಾರವನ್ನು ಹುಡುಕುವುದು ಅತ್ಯಗತ್ಯವಾಗಿದೆ.

2024ರ ಜಾಗತಿಕ ಹಸಿವು ಸೂಚ್ಯಂಕ (ಜಿಎಚ್‌ಐ)ವು ಭಾರತದ ಅಪೌಷ್ಟಿಕತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಅಪೌಷ್ಟಿಕತೆಯ ಪ್ರಮಾಣ ಮತ್ತು ಆಹಾರ ಅಭದ್ರತೆಯ ಅಗಾಧತೆಯನ್ನು ತೆರೆದಿಟ್ಟಿರುವ ವರದಿಯು ಕೆಲವು ಆಘಾತಕಾರಿ ಅಂಕಿಅಂಶಗಳನ್ನು ಮುಂದಿಟ್ಟಿದೆ. ಮುಖ್ಯವಾಗಿ ಭಾರತದಲ್ಲಿ ಸುಮಾರು 20 ಕೋಟಿ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ 14 ಶೇಕಡದಷ್ಟಾಗಿದೆ. ಅದೂ ಅಲ್ಲದೆ, ಇದು ಬ್ರೆಝಿಲ್‌ನ ಒಟ್ಟು ಜನಸಂಖ್ಯೆಗೆ ಬಹುತೇಕ ಸಮವಾಗಿದೆ.

ಜಿಎಚ್‌ಐ 2024ರ ವರದಿಯ ಪ್ರಕಾರ, ಹಸಿವು ಸೂಚ್ಯಂಕದಲ್ಲಿ ಭಾರತವು 127 ದೇಶಗಳ ಪಟ್ಟಿಯಲ್ಲಿ 105ರಲ್ಲಿದೆ. ಪಟ್ಟಿಯಲ್ಲಿ ಭಾರತದ ಸ್ಥಾನವು ‘ಗಂಭೀರ’ ವಿಭಾಗದಲ್ಲಿ ಬರುತ್ತದೆ. ಇದು ಭಾರತದ ಆಹಾರ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಅದರಲ್ಲೂ ಮುಖ್ಯವಾಗಿ, ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಈ ಆಘಾತಕಾರಿ ವಿಷಯ ಹೊರಬಿದ್ದಿದೆ. ಭಾರತವು 27.3 ಜಿಎಚ್‌ಐ ಅಂಕದೊಂದಿಗೆ ಪಟ್ಟಿಯಲ್ಲಿ 105ನೇ ಸ್ಥಾನವನ್ನು ಪಡೆದುಕೊಂಡಿದ್ದು, ಜಾಗತಿಕ ಮಾನದಂಡಗಳಿಗೆ ಹೋಲಿಸಿದರೆ ಭಾರತದ ಪರಿಸ್ಥಿತಿಯು ಕಳವಳಕಾರಿಯಾಗಿದೆ. ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ನೀತಿ ಆಯೋಗ ಹೊರಡಿಸಿರುವ ಅಂಕಿಅಂಶಗಳನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಭಾರತ ಈ ವರದಿಯನ್ನು ನಿರಾಕರಿಸಿದೆಯಾದರೂ, ವಾಸ್ತವವನ್ನು ಮುಚ್ಚಿಟ್ಟಷ್ಟೂ ಅದು ಇನ್ನಷ್ಟು ಬಿಗಡಾಯಿಸುತ್ತದೆ ಎನ್ನುವ ವಾಸ್ತವವನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕಾಗಿದೆ.

ಮಕ್ಕಳ ಬೆಳವಣಿಗೆ ಸ್ಥಗಿತ, ಎತ್ತರಕ್ಕೆ ತಕ್ಕ ತೂಕದ ಕೊರತೆ, ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾವಿನ ದರ ಮತ್ತು ಪೌಷ್ಟಿಕ ಆಹಾರದ ಕೊರತೆ- ಈ ಮಾನದಂಡಗಳನ್ನು ಆಧರಿಸಿ ಜಿಎಚ್‌ಐ ವರದಿಯನ್ನು ಸಿದ್ಧಪಡಿಸಲಾಗುತ್ತದೆ. ಭಾರತದಲ್ಲಿ ಬೆಳವಣಿಗೆ ಸ್ಥಗಿತ (35.5 ಶೇಕಡ) ಮತ್ತು ಎತ್ತರಕ್ಕೆ ತಕ್ಕ ತೂಕದ ಕೊರತೆ (19.7 ಶೇಕಡ)ಯು ಅಗಾಧ ಪ್ರಮಾಣದಲ್ಲಿ ಚಾಲ್ತಿಯಲ್ಲಿದೆ.ಈ ಸಮಸ್ಯೆಗಳಿಗೆ ಪ್ರಮುಖ ಕಾರಣಗಳೆಂದರೆ ಪೌಷ್ಟಿಕಾಂಶಗಳ ಕೊರತೆ ಮತ್ತು ಆರೋಗ್ಯ ಸೇವೆಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದಿರುವುದು. ಅದೂ ಅಲ್ಲದೆ, ಭಾರತದಲ್ಲಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಮರಣ ದರ 1,000ದಲ್ಲಿ 26 ಆಗಿದೆ. ಇದು ದೇಶದ ಆರೋಗ್ಯ ರಕ್ಷಣೆ ವ್ಯವಸ್ಥೆಯ ದೌರ್ಬಲ್ಯವನ್ನು ತೋರಿಸುತ್ತದೆ.

ಭಾರತದಲ್ಲಿ ಅಗಾಧ ಪ್ರಮಾಣದ ಅಪೌಷ್ಟಿಕತೆಗೆ ಸರಕಾರದ ವೈಫಲ್ಯಗಳೇ ಕಾರಣ ಎಂದು ಜಾಗತಿಕ ಹಸಿವು ಸೂಚ್ಯಂಕ ಹೇಳುತ್ತದೆ. ಭಾರತವು ತನ್ನ ಜನಸಂಖ್ಯೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ, ತನ್ನ ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಮತ್ತು ಪೌಷ್ಟಿಕತೆಯನ್ನು ಒದಗಿಸಲು ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸುವ ಅಗತ್ಯವಿದೆ. ಆದರೆ, ಆಡಳಿತ ವೈಫಲ್ಯಗಳು, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಮತ್ತು ಕುಗ್ರಾಮಗಳಲ್ಲಿ ವ್ಯಾಪಕವಾಗಿರುವ ಅಪೌಷ್ಟಿಕತೆಯನ್ನು ನಿಭಾಯಿಸುವಲ್ಲಿನ ವೈಫಲ್ಯವು ಈ ಗುರಿಯನ್ನು ತಲುಪುವಲ್ಲಿ ಅಡ್ಡಿಯಾಗಿದೆ. ಈ ಕಾರಣಗಳಿಂದ ಭಾರತದ ಜನಸಂಖ್ಯೆ ಸಂಪನ್ಮೂಲವಾಗದೆ ಸಮಸ್ಯೆಯ ರೂಪ ತಾಳುತ್ತಿದೆ.

2024ರಲ್ಲಿ, ಭಾರತವು ಸುಮಾರು 4 ಲಕ್ಷ ಕೋಟಿ ಡಾಲರ್ ಜಿಡಿಪಿ (ಒಟ್ಟು ದೇಶಿ ಉತ್ಪನ್ನ)ಯೊಂದಿಗೆ ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತು. ಆದರೆ, ತಲಾವಾರು ಆದಾಯ ಮಾತ್ರ 2,585 ಡಾಲರ್ (ಸುಮಾರು 2.17 ಲಕ್ಷ ರೂಪಾಯಿ)ನಲ್ಲೇ ಉಳಿದಿದೆ. ಈ ಅಸಮಾನತೆಯು ಬಡವ-ಶ್ರೀಮಂತರ ಅಸಮಾನತೆಯನ್ನು ಹೆಚ್ಚಿಸಿದೆ. ಹೆಚ್ಚುತ್ತಿರುವ ಆಹಾರ ಬೆಲೆಗಳು ಬಡವರು ಮತ್ತು ಅಪೌಷ್ಟಿಕತೆಗೆ ಒಳಗಾಗಿರುವ ಜನರ ಮೇಲೆ ಗಾಢ ನಕಾರಾತ್ಮಕ ಪರಿಣಾಮವನ್ನು ಬೀರಿವೆ. ಹವಾಮಾನ ಬದಲಾವಣೆಯು ಭಾರತದ ಆಹಾರ ಭದ್ರತೆಯ ಮೇಲೆ ಅಗಾಧ ಪರಿಣಾಮವನ್ನು ಬೀರಿದೆ. 2023-24ರಲ್ಲಿ, ಭಾರತದ ಆಹಾರ ಉತ್ಪಾದನೆಯು 33.2 ಕೋಟಿ ಟನ್ ತಲುಪಿದೆ. ಆದರೆ, ವ್ಯತಿರಿಕ್ತ ಹವಾಮಾನ ಪರಿಸ್ಥಿತಿಗಳು ದ್ವಿದಳ ಧಾನ್ಯಗಳು ಮತ್ತು ತರಕಾರಿ ಉತ್ಪಾದನೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿವೆ ಎಂದು ಸಮೀಕ್ಷೆ ಹೇಳುತ್ತದೆ. ಭಾರತದ ಆಹಾರ ಭದ್ರತೆಯ ಮೇಲೆ ಹವಾಮಾನ ಬದಲಾವಣೆಯ ದೀರ್ಘಾವಧಿ ಪರಿಣಾಮಗಳು ಆಘಾತಕಾರಿಯಾಗಿವೆ. ಹೆಚ್ಚುತ್ತಿರುವ ಉಷ್ಣತೆ, ಅಸ್ತವ್ಯಸ್ತ ಮಳೆ ಮತ್ತು ಅನಿರೀಕ್ಷಿತ ಹವಾಮಾನ ಲಕ್ಷಣಗಳು ಕೃಷಿ ಉತ್ಪಾದಕತೆಯನ್ನು ಕಡಿತಗೊಳಿಸಿವೆ. ಎಲ್ಲಕ್ಕಿಂತ ಹೆಚ್ಚಾಗಿ, ದೇಶದ ಜಲ ಸಂಪನ್ಮೂಲಗಳ ಮೇಲೆ ಹವಾಮಾನ ವೈಪರೀತ್ಯವು ಗಂಭೀರ ಪರಿಣಾಮಗಳನ್ನು ಬೀರಿದ್ದು, ನೀರಿನ ಕೊರತೆಗೆ ಕಾರಣವಾಗಿದೆ. ನೀರಿನ ಕೊರತೆಯು ಕೃಷಿಯ ಮೇಲೆ ಇನ್ನಷ್ಟು ಒತ್ತಡವನ್ನು ಹೇರಿದೆ ಹಾಗೂ ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿರುವವರು ಅನಿಶ್ಚಿತ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ಭಾರತದ ಆರೋಗ್ಯ ರಕ್ಷಣೆ ವ್ಯವಸ್ಥೆಯೂ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಪೌಷ್ಟಿಕತೆ, ಶಿಶು ಮರಣ ಮತ್ತು ಬೆಳವಣಿಗೆ ಸ್ಥಗಿತದ ವಿರುದ್ಧ ಹೋರಾಡಲು, ಪರಿಣಾಮಕಾರಿ ಮತ್ತು ಸಮಗ್ರ ಆರೋಗ್ಯ ವ್ಯವಸ್ಥೆ ಅಗತ್ಯವಾಗಿದೆ. ಆದರೆ, ಭಾರತದ ಹೆಚ್ಚಿನ ಗ್ರಾಮೀಣ ಪ್ರದೇಶಗಳು ಮತ್ತು ಕುಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ರಕ್ಷಣೆ ಸೌಲಭ್ಯಗಳೇ ಇಲ್ಲ. ಆರೋಗ್ಯ ಮೂಲ ಸೌಕರ್ಯಗಳು ಮತ್ತು ವೈದ್ಯರ ಕೊರತೆಯಿಂದಾಗಿ ಈ ಪ್ರದೇಶಗಳಲ್ಲಿ ವಾಸಿಸುತ್ತಿರುವ ಹೆಚ್ಚಿನ ಜನರಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಆರೈಕೆ ಸಿಗುತ್ತಿಲ್ಲ.ಕ್ಷಯದಂತಹ ರೋಗಗಳಿಗೆ ಅಗತ್ಯವಿರುವ ಔಷಧಿಗಳ ಬೆಲೆ ಒಂದೆಡೆ ಹೆಚ್ಚಿಸಲಾಗಿದ್ದರೆ, ಸಾರ್ವಜನಿಕ ವಲಯಕ್ಕೆ ತುರ್ತು ಔಷಧಿಗಳನ್ನು ಪೂರೈಸುವಲ್ಲೂ ಸರಕಾರ ಎಡವುತ್ತಿದೆ. ಪರಿಣಾಮವಾಗಿ, ಕ್ರಮಬದ್ಧವಾಗಿ ಔಷಧಿ ಸೇವಿಸಿದರೆ ಮಾತ್ರ ಗುಣವಾಗುವ ಕ್ಷಯವು ಗುಣಪಡಿಸಲಾಗದ ರೋಗವಾಗಿ ಬದಲಾಗುತ್ತಿದೆ. ಒಂದೆಡೆ ಅಪೌಷ್ಟಿಕತೆ ರೋಗ ಉತ್ಪಾದನೆಗಳಿಗೆ ಕಾರಣವಾದರೆ, ಇದನ್ನು ಎದುರಿಸುವ ಔಷಧಿಗಳು ಕೂಡ ಜನರ ಕೈಗೆಟುಕದ ಸ್ಥಿತಿಯಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಭಾರತದಲ್ಲಿ ಹಸಿವು ಎನ್ನುವುದೇ ರೋಗ ಸೃಷ್ಟಿಯ ಮೂಲವಾಗಿ ಪರಿವರ್ತನೆಯಾಗಿದೆ. ಅಪೌಷ್ಟಿಕತೆಯನ್ನು ಹೋಗಲಾಡಿಸಲು ಭಾರತವು ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಆದರೆ, ಈ ವ್ಯವಸ್ಥೆಯು ಹೆಚ್ಚಿನ ಪ್ರಕರಣಗಳಲ್ಲಿ ಭ್ರಷ್ಟಾಚಾರ, ಅವ್ಯವಸ್ಥೆಗಳು ಮತ್ತು ಅಸಮರ್ಪಕ ಪೂರೈಕೆಗಳಿಂದ ಬಾಧಿತವಾಗಿದೆ. ಹಾಗಾಗಿ, ಯಾರಿಗೆ ಈ ಆಹಾರ ಧಾನ್ಯಗಳ ಅಗತ್ಯ ಹೆಚ್ಚಿದೆಯೋ ಅವರಿಗೆ ತಲುಪುವುದೇ ಇಲ್ಲ. ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿರುವ ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನರೇ ಈ ಪಿಡುಗಿಗೆ ಬಲಿಯಾಗುತ್ತಿದ್ದಾರೆ. ಅಪೌಷ್ಟಿಕತೆಯನ್ನು ನಿವಾರಿಸಲು ಬೆಲೆಯೇರಿಕೆಯ ಮೇಲೆ ಕಡಿವಾಣ ಸೇರಿದಂತೆ ಭಾರತವು ಕೆಲವು ಪ್ರಮುಖ ಕ್ರಮಗಳನ್ನು ಜಾರಿಗೊಳಿಸಬೇಕಾದ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News