ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪೌರ ಕಾರ್ಮಿಕರೇಕೆ ಅರ್ಹರಲ್ಲ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ನಾಡು ನುಡಿಗೆ ಸೇವೆ ಸಲ್ಲಿಸಿದ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದ 69 ಸಾಧಕರನ್ನು ಸರಕಾರ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಜೊತೆ ಜೊತೆಗೇ 100 ಸಾಧಕರನ್ನು ಗುರುತಿಸಿ ಅವರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿಯನ್ನೂ ನೀಡಿದೆ. ಅರ್ಜಿ ಹಾಕದ 20ಕ್ಕೂ ಹೆಚ್ಚು ಸಾಧಕರನ್ನು ಆಯ್ಕೆ ಸಮಿತಿಯೇ ಸ್ವಯಂ ಗುರುತಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಕೆಲವು ಆಕ್ಷೇಪಗಳ ನಡುವೆಯೂ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಅರ್ಹರಿಗೇ ಸಂದಿದೆ. ಹಾಗೆಂದು ಸಚಿವರು, ರಾಜಕಾರಣಿಗಳ ಹಸ್ತಕ್ಷೇಪ ಇರಲಿಲ್ಲ ಎಂದೇನೂ ಇಲ್ಲ. ಆಯ್ಕೆ ಸಮಿತಿ ಅಧಿಕೃತವಾಗಿ ಆಯ್ಕೆ ಮಾಡಿದ ಸಾಧಕರನ್ನು ಕೈ ಬಿಟ್ಟು, ಸಚಿವರು ತಮ್ಮ ಅಭ್ಯರ್ಥಿಗಳ ಹೆಸರನ್ನು ಈ ಬಾರಿಯೂ ಸೂಚಿಸಿದ್ದಾರೆ. ಆಯ್ಕೆ ಸಮಿತಿ ಎನ್ನುವುದು ಹಲ್ಲು, ಉಗುರುಗಳು ಇಲ್ಲದ ಹುಲಿ. ಆಯ್ಕೆ ಸಮಿತಿಯನ್ನು ಮುಂದಿಟ್ಟು ಸಚಿವರು, ರಾಜಕಾರಣಿಗಳು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಒಂದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಒಂದು ವೇಳೆ ಆಯ್ಕೆಯಲ್ಲಿ ತಪ್ಪುಗಳು ಕಂಡು ಬಂದರೆ ಅದಕ್ಕೆ ಆಯ್ಕೆ ಸಮಿತಿ ತಲೆಕೊಡಬೇಕಾಗುತ್ತದೆ. ವಿಪರ್ಯಾಸವೆಂದರೆ, ರಾಜಕಾರಣಿಗಳು ತಮ್ಮ ಆಪ್ತ ಸಹಾಯಕರ ಸೂಚನೆಯ ಮೇರೆಗೆ ಆಯ್ಕೆ ಮಾಡುತ್ತಾರೆಯೇ ಹೊರತು ಸಾಧಕರ ಬಗ್ಗೆ ಅವರಿಗೆ ಪ್ರಾಥಮಿಕ ಅರಿವೂ ಅವರಿಗಿರುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಬೇರೆ ಬೇರೆ ಒತ್ತಡಗಳಿಗೆ ಸಿಲುಕಿ ರಾಜಕಾರಣಿಗಳು ಈ ಪ್ರಶಸ್ತಿಗೆ ಸಾಧಕರನ್ನು ಗುರುತಿಸುತ್ತಾರೆ. ಆದರೂ ಈ ಬಾರಿಯ ಆಯ್ಕೆಯಲ್ಲಿ ದೊಡ್ಡ ಮಟ್ಟದ ತಪ್ಪುಗಳು ನಡೆದಿಲ್ಲ. ನಾಲ್ಕೈದು ಹೆಸರುಗಳು ಬಿಟ್ಟರೆ, ಉಳಿದಂತೆ ಎಲ್ಲರೂ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರೇ ಆಗಿದ್ದಾರೆ. ಕೊನೆಯ ಗಳಿಗೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ತಪ್ಪಿದವರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿಯನ್ನು ನೀಡಿ ಸಮಾಧಾನಿಸಲಾಗಿದೆ.
ಹಾಗೆ ನೋಡಿದರೆ, ಹತ್ತು ವರ್ಷಗಳ ಹಿಂದೆ ಈ ರಾಜ್ಯೋತ್ಸವ ಪ್ರಶಸ್ತಿಯ ಸ್ಥಿತಿ ಹೇಗಿತ್ತು ಎಂದರೆ, ಸಾಧಕರೆಲ್ಲ ‘ಎಲ್ಲಿ ಪ್ರಶಸ್ತಿ ಕೊಟ್ಟು ಸರಕಾರ ಅವಮಾನಿಸುತ್ತದೋ’ ಎಂದು ಅರ್ಹರು ತಲೆಮರೆಸಿಕೊಂಡು ಓಡಾಡುತ್ತಿದ್ದರು. ಯಾಕೆಂದರೆ, ಹಿರಿಯ ಸಾಧಕರು ಕೆಲವೊಮ್ಮೆ ರಾಜಕೀಯ ಪಕ್ಷದ ಪುಡಿ ಕಾರ್ಯಕರ್ತರ ಜೊತೆಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಹಂಚಿಕೊಳ್ಳುವ ಮುಜುಗರದ ಸನ್ನಿವೇಶ ಸೃಷ್ಟಿಯಾಗಿ ಬಿಡುತ್ತಿತ್ತು. ರಾಜ್ಯೋತ್ಸವ ಪ್ರಶಸ್ತಿಗಾಗಿ ರಾಜಕಾರಣಿಗಳ ಮೇಲೆ ಯಾವ ರೀತಿಯ ಒತ್ತಡಗಳು ಇರುತ್ತಿದ್ದವು ಎಂದರೆ, ಪ್ರಶಸ್ತಿಗಳ ಪಟ್ಟಿಗಳನ್ನು ಸರಕಾರ ಎರಡೆರಡು ಬಾರಿ ಘೋಷಣೆ ಮಾಡಬೇಕಾಗುತ್ತಿತ್ತು. ಪ್ರಶಸ್ತಿ ಪಡೆದವರ ಸಂಖ್ಯೆ 150ನ್ನು ದಾಟಿದ್ದೂ ಇದೆ. ರಾಜಕಾರಣಿಗಳ ತೀವ್ರ ಹಸ್ತಕ್ಷೇಪದಿಂದಾಗಿ ರಾಜ್ಯೋತ್ಸವ ಪ್ರಶಸ್ತಿ ತನ್ನ ಘನತೆ, ಗೌರವ ಎಲ್ಲವನ್ನ್ನೂ ಕಳೆದುಕೊಂಡು ಕಡ್ಲೆಕಾಯಿಗಿಂತ ಅಗ್ಗವಾಗಿ ರಸ್ತೆ ಬದಿಯಲ್ಲಿ ಮಾರಾಟಕ್ಕಿತ್ತು. ಇಂತಹ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಯ ಘನತೆಯನ್ನು ಮತ್ತೆ ಮೇಲೆತ್ತಿ ನಿಲ್ಲಿಸಿದ ಹೆಗ್ಗಳಿಕೆ ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಸೇರಬೇಕು. ಮೊತ್ತ ಮೊದಲಾಗಿ ಸಿದ್ದರಾಮಯ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು 60 ವರ್ಷ ಕಡ್ಡಾಯವಾಗಿರಬೇಕು ಎನ್ನುವ ನಿಯಮವನ್ನು ತಂದಿತು. ಇದರಿಂದಾಗಿ 60 ವರ್ಷ ತುಂಬದವರೂ ರಾಜಕಾರಣಿಗಳ ಶಿಫಾರಸು ಮೂಲಕ ಪ್ರಶಸ್ತಿಗಳನ್ನು ಪಡೆದುಕೊಳ್ಳುವುದು ನಿಂತಿತು. ಸಣ್ಣಪುಟ್ಟ ಸಾಧನೆಗಳನ್ನು ಮಾಡಿದ ಕಿರಿಯರಿಗೆ ಪ್ರಶಸ್ತಿಯನ್ನು ಕೊಟ್ಟು, ಅದೆಷ್ಟೋ ವರ್ಷ ಕಳೆದ ಬಳಿಕ ಅದೇ ಪ್ರಶಸ್ತಿಯನ್ನು ಹಿರಿಯ ಸಾಧಕರಿಗೆ ನೀಡಿದರೆ, ಅವರನ್ನು ಪರೋಕ್ಷವಾಗಿ ಅವಮಾನಿಸಿದಂತೆಯೇ ಅಲ್ಲವೆ?. ಅಷ್ಟೇ ಅಲ್ಲ, ಸಿದ್ದರಾಮಯ್ಯ ಸರಕಾರ ಪ್ರಶಸ್ತಿಯನ್ನು 60 ಮಂದಿಗೆ ಸೀಮಿತಗೊಳಿಸಿತು. ಇದು ಕೂಡ ಪ್ರಶಸ್ತಿಯ ಆಯ್ಕೆಯಲ್ಲಿ ಸೂಕ್ಷ್ಮತೆಯನ್ನು ಮೆರೆಯಲು ಸಹಾಯ ಮಾಡಿತು. ಎಲ್ಲಕ್ಕಿಂತ ಮುಖ್ಯವಾಗಿ 10,000 ರೂಪಾಯಿ ನೀಡಿ ಕೈತೊಳೆದುಕೊಳ್ಳುತ್ತಿದ್ದ ಸರಕಾರ ಪ್ರಶಸ್ತಿಯನ್ನು ಹಂತಹಂತವಾಗಿ ಐದು ಲಕ್ಷ ರೂಪಾಯಿಗೆ ಏರಿಸಿತು. ಜೊತೆಗೆ 20 ಗ್ರಾಂ ಚಿನ್ನದ ಪದಕವನ್ನೂ ಘೋಷಿಸಿತು. ಅಷ್ಟೇ ಅಲ್ಲ, ಪ್ರಾದೇಶಿಕ ನ್ಯಾಯಕ್ಕೂ ಆದ್ಯತೆಯನ್ನು ನೀಡಿತು. ಈ ಎಲ್ಲ ಕಾರಣಗಳಿಂದ ಇಂದು ರಾಜ್ಯೋತ್ಸವ ಪ್ರಶಸ್ತಿ ಕಳೆದುಕೊಂಡ ಘನತೆ, ಗೌರವವನ್ನು ಮತ್ತೆ ತನ್ನದಾಗಿಸಿಕೊಂಡಿದೆ. ಈ ಬಾರಿ ಒಂದೆರಡು ಅನರ್ಹರು ಪ್ರಶಸ್ತಿ ಪಡೆದವರ ಸಾಲಿನಲ್ಲಿ ಸೇರಿಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಪ್ರಶಸ್ತಿಯ ಬಗ್ಗೆ ಟೀಕೆ ಮಾಡಬೇಕಾಗಿಲ್ಲ. ಆದರೂ ಸರಕಾರದೊಳಗಿರುವ ಸಚಿವರ ಹಸ್ತಕ್ಷೇಪವಿಲ್ಲದೇ ಇದ್ದಿದ್ದರೆ ಇನ್ನಷ್ಟು ಅರ್ಹರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವ ಅವಕಾಶವಿತ್ತು ಎನ್ನುವುದರ ಬಗ್ಗೆ ಎರಡು ಮಾತಿಲ್ಲ.
ಈ ಬಾರಿಯ ಪ್ರಶಸ್ತಿಗೆ ಅಯೋಧ್ಯೆ ಮಂದಿರಕ್ಕೆ ಬಾಲ ರಾಮನನ್ನು ಕೆತ್ತಿದ ಶಿಲ್ಪಿ ಯೋಗಿರಾಜ್ ಅವರ ಆಯ್ಕೆಯ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ. ಅಯೋಧ್ಯೆಯ ಮಂದಿರಕ್ಕೆ ಬಾಲರಾಮನನ್ನು ಕೆತ್ತಿದ್ದಾರೆ ಎನ್ನುವ ಒಂದೇ ಒಂದು ಕಾರಣಕ್ಕೆ ಸದ್ಯಕ್ಕೆ ಮಾಧ್ಯಮಗಳಲ್ಲಿ ಶಿಲ್ಪಿ ಯೋಗಿರಾಜ್ ಸುದ್ದಿಯಲ್ಲಿದ್ದಾರೆ. ತಾವು ಕೆತ್ತಿದ ಬಾಲರಾಮ ವಿಗ್ರಹದ ಬಗ್ಗೆ ಮಾಧ್ಯಮಗಳಲ್ಲಿ ಹಲವು ವರ್ಣರಂಜಿತ ವದಂತಿಗಳನ್ನು ಇವರು ಈ ಹಿಂದೆ ಹರಿಯ ಬಿಟ್ಟಿದ್ದರು. ಯೋಗಿರಾಜ್ ಖ್ಯಾತ ಶಿಲ್ಪಿಯೇನೋ ಹೌದು. ಆದರೆ ಅವರು ಸದ್ಯ ಕಲೆಯೊಳಗಿನ ‘ರಾಜಕೀಯ’ಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ದಿನಗಳಿಂದ ಬೇರೆ ಬೇರೆ ರಾಜಕೀಯ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಸ್ವತಃ ಕಾಂಗ್ರೆಸ್ ವರಿಷ್ಠರೇ ಈ ಮಂದಿರದ ಉದ್ಘಾಟನೆಯಲ್ಲಿ ಪಾಲುಗೊಂಡಿರಲಿಲ್ಲ. ಕಲೆಯು ಪ್ರೀತಿ, ಪ್ರೇಮ, ಸೌಹಾರ್ದವನ್ನು ಜನಗಳ ನಡುವೆ ಹರಡಬೇಕು. ಬೇಲೂರು, ಹಳೆಬೀಡು ಸೇರಿದಂತೆ ಹಲವು ವಾಸ್ತುಶಿಲ್ಪಗಳಿಗಾಗಿ ಕರ್ನಾಟಕ ವಿಶ್ವಮಟ್ಟದಲ್ಲಿ ಗುರುತಿಸಲ್ಪಡುತ್ತಿವೆ. ಈ ನಿಟ್ಟಿನಲ್ಲಿ ಕರ್ನಾಟಕದ ಸೊಗಡು, ಹಿರಿಮೆಯನ್ನು ಹರಡುವ ನಿಟ್ಟಿನಲ್ಲಿ ದುಡಿದ ಹಿರಿಯ ವಾಸ್ತುಶಿಲ್ಪಿಗಳನ್ನು ಗುರುತಿಸುವುದು ಆಯ್ಕೆ ಸಮಿತಿಯ ಕರ್ತವ್ಯವಾಗಿತ್ತು. ಆದರೆ ಕರ್ನಾಟಕದ ವಾಸ್ತುಶಿಲ್ಪ ಪರಂಪರೆಗೆ ವಿಶೇಷ ಕೊಡುಗೆಯನ್ನೇನೂ ನೀಡದ, ಹಿರಿಯನೂ ಅಲ್ಲದ ಯೋಗಿರಾಜ್ ಅವರನ್ನು ಸಂಘಪರಿವಾರದ ರಾಜಕೀಯದ ಅಜೆಂಡಾಕ್ಕೆ ಪೂರಕವಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ದುರಂತವೇ ಸರಿ. ಮುಖ್ಯವಾಗಿ ಪ್ರಶಸ್ತಿ ಪಡೆಯಲು 60 ವರ್ಷ ಕಡ್ಡಾಯವಾಗಿರಬೇಕು. ತಾನೇ ಅಳವಡಿಸಿಕೊಂಡಿರುವ ವಯಸ್ಸಿನ ಅರ್ಹತೆಯನ್ನು ಮುರಿದು ಹಿರಿಯ ವಾಸ್ತು ಶಿಲ್ಪಿಗಳನ್ನು ತಿರಸ್ಕರಿಸಿ ಈ ಪ್ರಶಸ್ತಿಯನ್ನು ಯೋಗಿರಾಜ್‌ಗೆ ಕೊಟ್ಟಿರುವ ಉದ್ದೇಶವಾದರೂ ಏನು? ವಾಸ್ತು ಶಿಲ್ಪದಲ್ಲಿ ಅಪೂರ್ವ ಸಾಧನೆ ಮಾಡಿರುವ ಹಿರಿಯ ವಾಸ್ತುಶಿಲ್ಪಿಗಳು ಯಾಕೆ ಸರಕಾರದ ಕಣ್ಣಿಗೆ ಬೀಳಲಿಲ್ಲ? ನಿಯಮಗಳನ್ನು ಉಲ್ಲಂಘಿಸಿ ತಪ್ಪು ಆಯ್ಕೆಗಳನ್ನು ಮಾಡಿದರೆ, ಕೊಟ್ಟ ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳುವ ಅಧಿಕಾರ ಸರಕಾರಕ್ಕಿದೆ. ಆದುದರಿಂದ, ವಯಸ್ಸಿನ ನಿಯಮ ಉಲ್ಲಂಘಿಸಿ ಯೋಗಿರಾಜ್‌ಗೆ ನೀಡಿರುವ ರಾಜ್ಯೋತ್ಸ,ವ ಪ್ರಶಸ್ತಿಯನ್ನು ವಾಪಸ್ ಪಡೆದು, ಅದನ್ನು ಅರ್ಹ ಹಿರಿಯ ವಾಸ್ತುಶಿಲ್ಪಿಯೊಬ್ಬರಿಗೆ ನೀಡಬೇಕಾಗಿದೆ.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಯಾಕೆ ಪಾಲಿಲ್ಲ ಎನ್ನುವ ಚರ್ಚೆ ಇದೀಗ ವಿವಾದದ ರೂಪವನ್ನು ಪಡೆದಿದೆ. ಆಯ್ಕೆ ಸಮಿತಿಯಲ್ಲಿದ್ದ ಹಿರಿಯರಿಬ್ಬರು ಈ ಚರ್ಚೆಗೆ ನಾಂದಿ ಹಾಡಿದ್ದಾರೆ. ಮಲಹೊರುವ ಕಾರ್ಮಿಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕು ಎಂದು ಆಯ್ಕೆ ಸಮಿತಿಯಲ್ಲಿರುವ ಹಿರಿಯೊಬ್ಬರು ಒತ್ತಾಯಿಸಿದಾಗ ಇನ್ನೋರ್ವ ಹಿರಿಯರು ಅದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿ ‘ಅವರ ಯೋಗ್ಯತೆ’ಯನ್ನು ಪ್ರಶ್ನಿಸಿದ್ದಾರೆ. ಮಾತ್ರವಲ್ಲ, 60 ವರ್ಷ ವಯಸ್ಸು ಕಡ್ಡಾಯವಾಗಿರಬೇಕು ಎನ್ನುವ ಮಾನದಂಡವನ್ನು ಕೂಡ ಮುಂದಿಟ್ಟಿದ್ದಾರೆ. ಇಲ್ಲಿರುವ ಮುಖ್ಯ ಪ್ರಶ್ನೆ ಏನು ಎಂದರೆ, ವಾಸ್ತುಶಿಲ್ಪಿ ಯೋಗಿರಾಜ್ ಅವರ ಆಯ್ಕೆಗೆ ಅವರ ವಯಸ್ಸು ಅಡ್ಡಿಯಾಗದೇ ಇದ್ದಾಗ, ಪೌರ ಕಾರ್ಮಿಕರ ಆಯ್ಕೆಯ ಸಂದರ್ಭದಲ್ಲಿ ಮಾತ್ರ ಯಾಕೆ ವಯಸ್ಸಿನ ಮಾನದಂಡವನ್ನು ಕಠಿಣವಾಗಿ ಪಾಲಿಸಲಾಯಿತು?
ಮಲಹೊರುವ ಕಾರ್ಮಿಕರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಪ್ರಸ್ತಾವ ಕೆಲವೊಮ್ಮೆ ಕೆಲವು ತಪ್ಪು ಸಂದೇಶಗಳನ್ನೂ ನೀಡಬಹುದು. ಯಾಕೆಂದರೆ ರಾಜ್ಯದಲ್ಲಿ ಮಲಹೊರುವ ಪದ್ಧತಿಯೇ ಅಪರಾಧ ಆಗಿರುವುದರಿಂದ ಮಲಹೊರುವ ಕಾರ್ಮಿಕರಿಗೆ ಪ್ರಶಸ್ತಿಯನ್ನು ನೀಡುವುದು ಪರೋಕ್ಷವಾಗಿ ಆ ವ್ಯವಸ್ಥೆಯನ್ನು ಪೋಷಿಸಿದಂತೆ ಆಗುವುದಿಲ್ಲವೆ ಎನ್ನುವ ಪ್ರಶ್ನೆ ಏಳುತ್ತದೆ. ಇಂದು ಮಲಹೊರುವ ಪದ್ಧತಿ ನಮ್ಮ ಸಮಾಜದಲ್ಲಿ ಗುಟ್ಟಾಗಿ ಆಚರಣೆಯಲ್ಲಿದೆ. ಯಾರಾದರೂ ಮಲದ ಗುಂಡಿಗೆ ಬಿದ್ದು ಸತ್ತಾಗಷ್ಟೇ ಇದು ಬೆಳಕಿಗೆ ಬರುತ್ತದೆ. ಹಾಗೆಯೇ ಇಂದಿನ ದಿನಗಳಲ್ಲಿ ಮಲಹೊರುವ ಪದ್ಧತಿ ರೂಪಾಂತರಗೊಂಡಿದೆ. ಸಾರ್ವಜನಿಕ ಕಕ್ಕಸುಗಳನ್ನು ಶುಚಿಗೊಳಿಸುವ, ರಸ್ತೆಗುಡಿಸುವ, ಕೊಳಚೆಗುಂಡಿಗಳಿಗೆ ಇಳಿಯುವ ಕಾರ್ಮಿಕರೆಲ್ಲರೂ ಪರೋಕ್ಷವಾಗಿ ಮಲಹೊರುವ ಪದ್ಧತಿಯ ಭಾಗವೇ ಆಗಿದ್ದಾರೆ. ಪೌರ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಈ ಸಮಾಜವನ್ನು ಶುಚಿಯಾಗಿಡಲು ತಮ್ಮ ದೊಡ್ಡ ಶ್ರಮದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಒಂದು ರೀತಿಯಲ್ಲಿ, ತಾನುರಿದು ನಾಡಿಗೆ ಬೆಳಕಾಗಿದ್ದಾರೆ. ಸಮಾಜವನ್ನು ರೋಗರುಜಿನಗಳಿಂದ ರಕ್ಷಿಸುವ ಕಾಯಕದಲ್ಲಿ ತಾವೇ ರೋಗರುಜಿನಗಳಿಗೆ ಬಲಿಯಾಗುತ್ತಿದ್ದಾರೆ. ಬಹುತೇಕ ಪೌರಕಾರ್ಮಿಕರು 40ನೇ ವರ್ಷದಲ್ಲಿ ಅಸ್ತಮಾ, ಕ್ಷಯದಂತಹ ಕಾಯಿಲೆಗಳಿಗೆ ಈಡಾಗುತ್ತಾರೆ ಎನ್ನುವ ಅಂಶವನ್ನು ಸಮೀಕ್ಷೆಗಳು ಹೇಳುತ್ತವೆ. ಇವರು 60 ವರ್ಷ ಬದುಕುವುದೇ ಕಷ್ಟ. ‘ಇವರು ಕುಡಿದು ಆರೋಗ್ಯ ಕೆಡಿಸಿಕೊಳ್ಳುತ್ತಾರೆ’ ಎನ್ನುವ ಆರೋಪ ಪೂರ್ವಾಗ್ರಹ ಪೀಡಿತವಾದುದು. ಅವರು ಯಾಕೆ ಕುಡಿಯುತ್ತಾರೆ ಎನ್ನುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಸಾರ್ವಜನಿಕ ಶೌಚಾಲಯಗಳಲ್ಲಿ, ಒಳಚರಂಡಿಗಳಲ್ಲಿ ಇಳಿದು ಕೆಲಸ ಮಾಡಬೇಕಾದ ಸಂದರ್ಭದಲ್ಲಿ ಆ ದುರ್ವಾಸನೆಯನ್ನು, ಅಸಹ್ಯವನ್ನು, ಅವಮಾನವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರು ಪಡೆದುಕೊಳ್ಳಬೇಕಾದರೆ, ಮದ್ಯ ಕುಡಿಯಲೇ ಬೇಕು. ಅವರು ಆರೋಗ್ಯ ಕಳೆದುಕೊಳ್ಳುತ್ತಿರುವುದೇ ಸಮಾಜವನ್ನು ಆರೋಗ್ಯವಾಗಿರಿಸಲು. ಒಂದು ವೇಳೆ ಒಬ್ಬ ಹಿರಿಯ ಪೌರ ಕಾರ್ಮಿಕನನ್ನು ಗುರುತಿಸಿ ಅವನಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದರೆ ಅದು ಅವನ ಕುಟುಂಬ, ಅವರ ಮುಂದಿನ ತಲೆಮಾರಿನ ಬದುಕನ್ನೇ ಬದಲಿಸಬಹುದು. ಸಮಾಜವೂ ಅವರನ್ನು ಗೌರವದಿಂದ, ಘನತೆಯಿಂದ ನೋಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬಹುದು. ಆದುದರಿಂದ ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಕಡ್ಡಾಯವಾಗಿ ಇರುವವರಲ್ಲೇ ಇಬ್ಬರು ಹಿರಿಯ ಪೌರಕಾರ್ಮಿಕರನ್ನು ಗುರುತಿಸಬೇಕು. ನಾಡನ್ನು ರೋಗರುಜಿನಗಳಿಂದ ರಕ್ಷಿಸಿ, ಶುಚಿತ್ವವಾಗಿಡುತ್ತಾ ಬಂದ ಆ ಜೀವಗಳಿಗೆ ಆ ಮೂಲಕ ನಾಡು ತನ್ನ ಕೃತಜ್ಞತೆಯನ್ನು ಸಲ್ಲಿಸಬೇಕು.