ಸುಧಾರಣೆಯಾಗಬೇಕಾದದ್ದು ಪ್ರತಿಮೆಯಲ್ಲ, ನ್ಯಾಯ ವ್ಯವಸ್ಥೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅಂಬೇಡ್ಕರ್ ವಿಚಾರ ಧಾರೆಗಳನ್ನು ದಫನ ಮಾಡಿ ಅದರ ಮೇಲೆ ಬೃಹತ್ ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಿ ಅಂಬೇಡ್ಕರ್ ಪ್ರೀತಿಯನ್ನು ಮೆರೆಯುವ ರಾಜಕೀಯ ನಾಯಕರ ಸಂಖ್ಯೆ ಇಂದು ಹೆಚ್ಚುತ್ತಿದೆ. ಗಾಂಧಿಯ ವಿಚಾರಧಾರೆಗಳನ್ನು ಕೊಂದು ಹಾಕಿ, ಬೀದಿ ಬೀದಿಯಲ್ಲಿ ಆತನ ಪ್ರತಿಮೆಗಳನ್ನು ನಿಲ್ಲಿಸಿದ್ದೇವೆ. ಆರೆಸ್ಸೆಸ್‌ನ್ನು ಮೊದಲ ಬಾರಿಗೆ ದೇಶದಲ್ಲಿ ನಿಷೇಧಿಸಿದ ವಲ್ಲಭಬಾಯ್ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ನಿರ್ಮಿಸಿ ಅದನ್ನೇ ತನ್ನ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಿರುವ ಆರೆಸ್ಸೆಸ್ ಬೆಂಬಲಿತ ಸರಕಾರ ದೇಶವನ್ನು ಆಳುತ್ತಿರುವ ದಿನಗಳು ಇವು. ಇಂತಹ ಹೊತ್ತಿನಲ್ಲೇ, ಈ ದೇಶದ ನ್ಯಾಯ ವ್ಯವಸ್ಥೆಯ ಪ್ರತಿಮೆಯನ್ನು ಬದಲಿಸಿ, ಆ ಮೂಲಕ ನ್ಯಾಯ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಪ್ರಯತ್ನವೊಂದು ನಡೆಯುತ್ತಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯದೇವತೆಗೆ ಇದೇ ಮೊದಲ ಬಾರಿ ಸೀರೆ ಉಡಿಸಿ, ತಲೆಗೆ ಕಿರೀಟವನ್ನು ತೊಡಿಸಲಾಗಿದೆ. ಮೇಲ್ನೋಟಕ್ಕೆ ಪ್ರತಿಮೆಗೆ ದೇವತೆಯ ರೂಪವನ್ನು ಅಧಿಕೃತವಾಗಿ ನೀಡಲಾಗಿದೆ. ಅವಳ ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ಬಿಚ್ಚಲಾಗಿದೆ. ಕೈಯಲ್ಲಿ ಅಧಿಕಾರದ ಸಂಕೇತವಾಗಿದ್ದ ಖಡ್ಗವನ್ನು ಕಿತ್ತು ಗ್ರಂಥವೊಂದನ್ನು ನೀಡಲಾಗಿದೆ. ಅದು ಸಂವಿಧಾನ ಗ್ರಂಥವೋ ಅಥವಾ ಮನುಸ್ಮತಿ ಗ್ರಂಥವೋ ಕಾಲವೇ ಹೇಳಬೇಕು. ಯಾಕೆಂದರೆ, ಅಂತಿಮವಾಗಿ ಯಾವುದೇ ಪ್ರತಿಮೆಯನ್ನು ಮಾನದಂಡವಾಗಿಟ್ಟುಕೊಂಡು ನ್ಯಾಯವ್ಯವಸ್ಥೆ ತೀರ್ಪನ್ನು ನೀಡುವುದಿಲ್ಲ. ಬದಲಿಗೆ ನ್ಯಾಯಾಲಯಗಳು ನೀಡುವ ತೀರ್ಪಿನಲ್ಲಿರುವ ನ್ಯಾಯದ ಪ್ರಮಾಣವನ್ನು ಮಾನದಂಡವಾಗಿಟ್ಟಕೊಂಡು ಪ್ರತಿಮೆಯನ್ನು ವ್ಯಾಖ್ಯಾನಿಸಲಾಗುತ್ತದೆ. ಆದುದರಿಂದಲೇ, ಪ್ರತಿಮೆಯಲ್ಲಿ ಆಗಿರುವ ಸುಧಾರಣೆಗಳು ಸಂವಿಧಾನಾಧರಿತ ನ್ಯಾಯ ವ್ಯವಸ್ಥೆಗೆ ಪೂರಕವಾಗಿದೆಯೋ ಅಥವಾ ಮಾರಕವಾಗಿದೆಯೋ ಎನ್ನುವುದು ಅಂತಿಮವಾಗಿ ತೀರ್ಪು ನೀಡುವ ನ್ಯಾಯಾಧೀಶರ ಕೈಯಲ್ಲೇ ಇದೆ.
ನ್ಯಾಯ ದೇವತೆಯ ಪ್ರತಿಮೆ ಭಾರತದ ನ್ಯಾಯ ವ್ಯವಸ್ಥೆಯ ಒಂದು ಸಂಕೇತ ಮಾತ್ರ. ಗ್ರೀಸ್‌ನ ನ್ಯಾಯ ದೇವತೆ ಈ ಪ್ರತಿಮೆಯ ಕಲ್ಪನೆಗೆ ಸ್ಫೂರ್ತಿಯಾಗಿದೆ. ಬ್ರಿಟಿಷರ ಕಾಲದಲ್ಲಿ ಈ ಪ್ರತಿಮೆಯನ್ನು ಮೊದಲ ಬಾರಿಗೆ ಕಲ್ಕತ್ತಾ ಹೈಕೋರ್ಟ್ ನಲ್ಲಿ ಸ್ಥಾಪಿಸಲಾಯಿತು. ನ್ಯಾಯದ ಮುಂದೆ ಎಲ್ಲರೂ ಸಮಾನರು ಎನ್ನುವುದನ್ನು ಪ್ರತಿಪಾದಿಸುವುದಕ್ಕಾಗಿ ಪ್ರತಿಮೆಯ ಕಣ್ಣಿಗೆ ಬಟ್ಟೆಯನ್ನು ಕಟ್ಟಲಾಗಿತ್ತು. ನ್ಯಾಯ ನೀಡುವ ಸಂದರ್ಭದಲ್ಲಿ ಬಡವರು-ಶ್ರೀಮಂತರು, ಮೇಲ್‌ಜಾತಿ, ಕೆಳಜಾತಿ ಇತ್ಯಾದಿಗಳನ್ನು ನೋಡದೆ ನ್ಯಾಯಾಧೀಶರು ತೀರ್ಪನ್ನು ನೀಡಬೇಕು. ಜನರ ಮುಖ ನೋಡಿ ತೀರ್ಪನ್ನು ನೀಡಬಾರದು ಎನ್ನುವ ಮಹತ್ತರ ಉದ್ದೇಶ ಇದರ ಹಿಂದಿತ್ತು. ಆದರೆ ಯಾವಾಗ ನ್ಯಾಯವ್ಯವಸ್ಥೆ ತೀರ್ಪು ನೀಡುವ ಸಂದರ್ಭದಲ್ಲಿ ಪಕ್ಷಪಾತಿ ಧೋರಣೆಯನ್ನು ಅನುಸರಿಸತೊಡಗಿತೋ, ಆಗ, ಪ್ರತಿಮೆಯ ಕಣ್ಣಿಗೆ ಕಟ್ಟಿದ ಪಟ್ಟಿ ಬೇರೆಯೇ ಅರ್ಥವನ್ನು ನೀಡತೊಡಗಿತು.
‘ನ್ಯಾಯ ವ್ಯವಸ್ಥೆ ಕುರುಡಾಗಿದೆ’ ಎನ್ನುವುದನ್ನು ಪ್ರತಿಮೆ ಸಂಕೇತಿಸತೊಡಗಿತು. ಕೈಯಲ್ಲಿದ್ದ ಖಡ್ಗ ಅಧಿಕಾರದ ಸಂಕೇತ ಮಾತ್ರವಲ್ಲ, ಸಂತ್ರಸ್ತರಿಗೆ ತಕ್ಷಣವೇ ನ್ಯಾಯ ನೀಡುವ ನ್ಯಾಯ ವ್ಯವಸ್ಥೆಯ ಹಿರಿಮೆಯನ್ನು ಎತ್ತಿ ಹಿಡಿಯುತ್ತದೆ. ಆದರೆ ಭಾರತದಲ್ಲಿ ಇಂದು ನ್ಯಾಯಾಲಯದಲ್ಲಿ ನ್ಯಾಯ ತೆವಲುತ್ತಿದೆ. ಬದಲಾದ ನ್ಯಾಯ ದೇವತೆಯ ಮೂರ್ತಿಯ ಕೈಗೆ ‘ಒಂದು ಗಡಿಯಾರವನ್ನೂ ಕಟ್ಟಬೇಕಾಗಿತ್ತು’ ಎಂದು ಈ ಕಾರಣಕ್ಕಾಗಿ ಜನರು ವ್ಯಂಗ್ಯವಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಸಂತ್ರಸ್ತರಿಗೆ ನ್ಯಾಯ ನೀಡಲು ಆಗಲಾದರೂ ನ್ಯಾಯ ವ್ಯವಸ್ಥೆಗೆ ಸಾಧ್ಯವಾಗಲಿ ಎನ್ನುವುದು ಅವರ ಒಳಗಿನ ತುಡಿತವಾಗಿದೆ.
ನ್ಯಾಯ ದೇವತೆಯ ಪ್ರತಿಮೆಯನ್ನು ಬದಲಾಯಿಸುವ ಮೂಲಕ, ಅದನ್ನೇ ನ್ಯಾಯ ವ್ಯವಸ್ಥೆಯ ಸುಧಾರಣೆ ಎಂದು ಕರೆಯಲು ಮುಖ್ಯ ನ್ಯಾಯಮೂರ್ತಿಗಳು ಹೊರಟಿದ್ದಾರೆಯೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ನ್ಯಾಯ ದೇವತೆ ಮೊದಲು ವಸಾಹತು ಶಾಹಿ ವ್ಯವಸ್ಥೆಯನ್ನು ಸಂಕೇತಿಸುತ್ತಿದ್ದಳು. ಈಗ ಆಕೆ ಅಪ್ಪಟ ಭಾರತೀಯಳಾಗಿದ್ದಾಳೆ ಎಂದು ಕೆಲವರು ಸಂಭ್ರಮವನ್ನೂ ಪಡುತ್ತಿದ್ದಾರೆ. ಆದರೆ ಭಾರತದಲ್ಲಿ ನ್ಯಾಯ ವ್ಯವಸ್ಥೆಯಲ್ಲಿ ಬಡವರು, ತಳಸ್ತರದ ಜನರಿಗೂ ನ್ಯಾಯ ಸಿಕ್ಕಿರುವುದು ಭಾರತದ ಸಂವಿಧಾನದ ಮೂಲಕವೇ ಹೊರತು, ಯಾವುದೇ ದೇವ ದೇವತೆಯರ ಮೂಲಕ ಅಲ್ಲ. ಭಾರತದ ನ್ಯಾಯವ್ಯವಸ್ಥೆ ಒಂದು ಕಾಲದಲ್ಲಿ ವರ್ಣ ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಹೊಂದಿತ್ತು. ಸಂವಿಧಾನ ಜಾರಿಗೆ ಬರುವ ಮೊದಲು, ಬ್ರಿಟಿಷರು, ಮೊಗಲರು ಈ ದೇಶಕ್ಕೆ ಕಾಲಿಡುವ ಮೊದಲು ನಮ್ಮ ಸಮಾಜವನ್ನು ಮನುಸ್ಮತಿ ಆಧಾರಿತ ನ್ಯಾಯ ವ್ಯವಸ್ಥೆ ಆಳುತ್ತಿತ್ತು. ಶೂದ್ರರು ಮತ್ತು ದಲಿತರಿಗೆ ಶಿಕ್ಷಣ ನಿರಾಕರಿಸಲ್ಪಟ್ಟಿತ್ತು. ದೇವಸ್ಥಾನದಿಂದಲೂ ಅವರನ್ನು ದೂರ ಇಡಲಾಗಿತ್ತು. ವೇದಗಳನ್ನು ಕೇಳಿದ ಶೂದ್ರರ ಕಿವಿಗೆ ಕಾದ ಸೀಸವನ್ನು ಸುರಿಯುವ ನ್ಯಾಯ ವ್ಯವಸ್ಥೆ ಜಾರಿಯಲ್ಲಿತ್ತು. ಕೆರೆಯ ನೀರನ್ನು ಮುಟ್ಟುವ ಅವಕಾಶ ದಲಿತರಿಗಿರಲಿಲ್ಲ. ಆದುದರಿಂದಲೇ, ನ್ಯಾಯ ದೇವತೆಯ ಪ್ರತಿಮೆಯನ್ನು ಭಾರತೀಕರಣ ಅಥವಾ ಪುರಾಣೀಕರಣಗೊಳಿಸುವಾಗ ನಾವು ಈ ಕುರಿತ ಎಚ್ಚರಿಕೆಯನ್ನು ಹೊಂದಿರಬೇಕಾಗುತ್ತದೆ. ನ್ಯಾಯ ದೇವತೆಯ ಕಣ್ಣಿಗೆ ಕಟ್ಟಿದ ಪಟ್ಟಿಯನ್ನು ಬಿಚ್ಚಿರುವುದು ‘ನ್ಯಾಯ ನೀಡುವ ಸಂದರ್ಭದಲ್ಲಿ ಜಾತಿ, ಧರ್ಮ, ವರ್ಗದ’ದ ಆಧಾರದಲ್ಲಿ ನ್ಯಾಯ ನೀಡಲು ದೇವತೆಗೆ ಅನುಕೂಲ ಮಾಡಿಕೊಡುವುದಕ್ಕೆ’ ಇರಬಹುದೇ ಎನ್ನುವ ಜನತೆಯ ಸಂಶಯವನ್ನು ನಿವಾರಿಸುವ ಬಹುದೊಡ್ಡ ಹೊಣೆಗಾರಿಕೆ ನ್ಯಾಯ ವ್ಯವಸ್ಥೆಯ ಅತ್ಯುನ್ನತ ಸ್ಥಾನದಲ್ಲಿ ಕುಳಿತಿರುವ ನ್ಯಾಯಾಧೀಶರ ಮೇಲಿದೆ.
ನ್ಯಾಯವ್ಯವಸ್ಥೆಯ ಒಳಗೆ ಆಮೂಲಾಗ್ರ ಸುಧಾರಣೆಯಾಗುವುದು ಇಂದಿನ ಅಗತ್ಯವಾಗಿದೆ. ಮುಖ್ಯವಾಗಿ, ಸಹಸ್ರಾರು ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಕೊಳೆಯುತ್ತಿವೆೆ. ನ್ಯಾಯಾಧೀಶರ ಕೊರತೆ ಇದಕ್ಕೆ ಮುಖ್ಯ ಕಾರಣ. ಇದನ್ನು ತುಂಬುವಲ್ಲಿ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಅನಗತ್ಯವಾಗಿ ‘ತಾರಿಕ್ ಪೇ ತಾರಿಕ್’ ಎಂದು ನ್ಯಾಯದಾನವನ್ನು ಮುಂದೆ ಹಾಕುತ್ತಾ ಹೋಗುವುದರಿಂದ ನ್ಯಾಯದ ಕುರಿತಂತೆ ಜನರಿಗೆ ನಂಬಿಕೆಯೇ ಹೊರಟು ಹೋಗುತ್ತಿದೆ. ಈ ನಿಟ್ಟಿನಲ್ಲಿಯೂ ಬದಲಾವಣೆಗಳು ನಡೆಯಬೇಕು. ನ್ಯಾಯ ದೇವತೆಯ ತಲೆಗೆ ಕಿರೀಟ ಇಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಆದರೆ, ನ್ಯಾಯಾಲಯದಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆಯಲ್ಲಿ ಹೆಚ್ಚಳವಾದಾಗ ಮಹಿಳೆಯರ ತಲೆಗೆ ನಿಜವಾದ ಕಿರೀಟವನ್ನು ತೊಡಿಸಿದಂತಾಗುತ್ತದೆ. ನ್ಯಾಯ ವ್ಯವಸ್ಥೆಯಲ್ಲಿ ಮಹಿಳಾ ಸಮುದಾಯಕ್ಕೆ ನ್ಯಾಯ ಸಿಕ್ಕಂತಾಗುತ್ತದೆ. ಹಾಗೆಯೇ ದಲಿತರು, ಹಿಂದುಳಿದ ವರ್ಗ ಸಮುದಾಯಕ್ಕೆ ಸೇರಿದ ನ್ಯಾಯಾಧೀಶರ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು. ಇದೇ ಸಂದರ್ಭದಲ್ಲಿ ಸಂವಿಧಾನದ ಜಾಗದಲ್ಲಿ ಮನುಸ್ಮತಿಯ ವಿಚಾರಧಾರೆಗಳನ್ನು ತುರುಕುವ ಕೃತ್ಯ ನ್ಯಾಯಾಧೀಶರಿಂದಲೇ ನಡೆಯುತ್ತಿದೆ. ತೀರ್ಪಿನ ಸಂದರ್ಭದಲ್ಲಿ ಮನುಸ್ಮತಿಯನ್ನು ಉಲ್ಲೇಖಿಸುವುದು, ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವುದು, ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ್ದ ರಾಜಕಾರಣಿಗಳಂತೆ ಹೇಳಿಕೆ ನೀಡುವ ಕೆಲಸವನ್ನು ಕೆಲವು ನ್ಯಾಯಾಧೀಶರು ಮಾಡುತ್ತಿದ್ದಾರೆ. ಈ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರೇ ಆತಂಕ, ಕಳವಳವನ್ನು ವ್ಯಕ್ತಪಡಿಸಿದ್ದರು. ಆದುದರಿಂದ ಕೆಲವು ನ್ಯಾಯಾಧೀಶರ ಕಣ್ಣಿಗೆ ಕಟ್ಟಿರುವ ಮನುಸ್ಮತಿಯ ಪಟ್ಟಿಯನ್ನು ಬಿಚ್ಚಿ, ಅವರ ಮೆದುಳಲ್ಲಿರುವ ಮನುಸ್ಮತಿಯ ಧೂಳು ಝಾಡಿಸಿ, ಕೈಗೆ ಸಂವಿಧಾನ ಪುಸ್ತಕವನ್ನು ಕೊಡುವ ಕೆಲಸ ಇಂದು ತುರ್ತಾಗಿ ಆಗಬೇಕಾಗಿದೆ.