ವಿಮಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಹಿಂದಿನ ಭಯೋತ್ಪಾದನಾ ಮುಖ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಳೆದ ಒಂದು ತಿಂಗಳಿಂದ ದೇಶಾದ್ಯಂತ ವಿಮಾನ ಸಂಸ್ಥೆಗಳಿಗೆ 300ಕ್ಕೂ ಅಧಿಕ ಬಾಂಬ್ ಬೆದರಿಕೆಗಳು ಬಂದಿದ್ದು, ಇದೀಗ ಬೆದರಿಕೆಯ ಹಿಂದೆ ಭಯೋತ್ಪಾದನಾ ಶಕ್ತಿಗಳಿವೆಯೇ ಎಂದು ಅನುಮಾನಿಸುವ ಹಂತಕ್ಕೆ ಪೊಲೀಸರು ಬಂದು ನಿಂತಿದ್ದಾರೆ. ಕಳೆದ ರವಿವಾರ ಇಂಡಿಯನ್ ಏರ್ ಲೈನ್ಸ್‌ನ ಕನಿಷ್ಠ 50 ವಿಮಾನಗಳು ಬಾಂಬ್ ಬೆದರಿಕೆಯನ್ನು ಸ್ವೀಕರಿಸಿದ್ದವು. ಕಳೆದ ಅಕ್ಟೋಬರ್ 14ರಿಂದ ಈ ಬೆದರಿಕೆಗಳಲ್ಲಿ ತೀವ್ರ ಹೆಚ್ಚಳ ಕಂಡಿದ್ದು, ಈವರೆಗೆ ಸುಮಾರು 360 ಬಾಂಬ್ ಬೆದರಿಕೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ. ಈ ಬೆದರಿಕೆಗಳು ಮಾಡುತ್ತಿರುವ ಅನಾಹುತಗಳನ್ನು ಗಮನಿಸಿದರೆ ದುಷ್ಕರ್ಮಿಗಳು ‘ಹುಡುಗಾಟ’ವಾಡುತ್ತಿಲ್ಲ ಎನ್ನುವುದು ಸ್ಪಷ್ಟ. ಸರಕಾರ ಈ ಬಗ್ಗೆ ದುಷ್ಕರ್ಮಿಗಳಿಗೆ ಬಹಿರಂಗ ಎಚ್ಚರಿಕೆಯನ್ನು ನೀಡಿದ ಬಳಿಕವೂ ಬಾಂಬ್ ಬೆದರಿಕೆಗಳು ಮುಂದುವರಿದಿವೆ. ಪರಿಣಾಮವಾಗಿ, ವಿಮಾನ ಯಾನಾ ಸೇವೆಗಳಲ್ಲಿ ಅಸ್ತವ್ಯಸ್ತ ಉಂಟಾಗಿದ್ದು, ದೇಶಕ್ಕೆ 700 ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟವುಂಟಾಗಿದೆ. ಅಷ್ಟೇ ಅಲ್ಲ, ಪ್ರಯಾಣಿಕರು ಪ್ರಯಾಣವನ್ನು ಮುಂದುವರಿಸಬೇಕೋ ಬೇಡವೋ ಎನ್ನುವ ಆತಂಕದಲ್ಲಿದ್ದಾರೆ. ವಿದೇಶ ಪ್ರಯಾಣ ಹೊರಟ ಪ್ರಯಾಣಿಕರೂ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ವಿಮಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಬಂದರೆ, ಹುಸಿಯೆನ್ನುವುದು ಭಾಗಶಃ ಅರಿವಿದ್ದರೂ ಅದನ್ನು ಭದ್ರತೆಯ ದೃಷ್ಟಿಯಿಂದ ನಿರ್ಲಕ್ಷಿಸುವಂತಿಲ್ಲ. ಭಯೋತ್ಪಾದನಾ ನಿಗ್ರಹ ಶಿಷ್ಟಾಚಾರಗಳಿಗೆ ಅವುಗಳು ಚಾಲನೆ ನೀಡಲೇಬೇಕಾಗುತ್ತದೆ. ಬೆದರಿಕೆಗಳು ಶೇ. 99ರಷ್ಟು ಹುಸಿಯಾಗಿದ್ದರೂ, ಶೇ. 1ರಷ್ಟು ಅಪಾಯವನ್ನು ಕೂಡ ವಿಮಾನ ಸಂಸ್ಥೆಗಳು ನಿರ್ಲಕ್ಷಿಸುವಂತಿಲ್ಲ. ಯಾಕೆಂದರೆ ಆ ಶೇ. 1ರಷ್ಟು ಅಪಾಯ ನಿಜವಾಗಿ ಬಿಟ್ಟರೆ, ತೆರಬೇಕಾದ ಬೆಲೆ ಬಹುದೊಡ್ಡದಾಗಿರುತ್ತದೆ. ಆದುದರಿಂದ ಬೆದರಿಕೆ ಕರೆಯ ಬೆನ್ನಿಗೇ ಬಾಂಬ್ ಬೆದರಿಕೆ ಪರಿಶೀಲನ ಸಮಿತಿ (ಬಿಎಟಿಸಿ)ಯ ಸಭೆಯನ್ನು ಕರೆಯಬೇಕಾಗುತ್ತದೆ. ಸಭೆ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಹೊರಡಬೇಕಾದ ಸಮಯಕ್ಕೆ ವಿಮಾನಗಳು ಹೊರಡುವುದು ಅಸಾಧ್ಯವಾಗುತ್ತದೆ. ಮಾತ್ರವಲ್ಲ, ಅನೇಕ ಸಂದರ್ಭದಲ್ಲಿ ವಿಮಾನವನ್ನು ಅರ್ಧದಲ್ಲೇ ಇಳಿಸಬೇಕಾದ ಸಂದರ್ಭಗಳೂ ಎದುರಾಗುತ್ತವೆ. ಇದು ಒಟ್ಟು ವಿಮಾನ ಯಾನಾ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮಗಳನ್ನು ಬೀರುತ್ತವೆ. ವಿಪರ್ಯಾಸವೆಂದರೆ, ಕಳೆದ ಎರಡು ವಾರಗಳಲ್ಲಿ 350ಕ್ಕೂ ಅಧಿಕ ಬೆದರಿಕೆಗಳು ಬಂದು, ವಿಮಾನ ಸೇವೆಯೇ ಅಸ್ತವ್ಯಸ್ತಗೊಂಡಿದ್ದರೂ, ಇನ್ನೂ ಈ ಬೆದರಿಕೆಯೊಡ್ಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮವನ್ನು ಘೋಷಿಸಲು ಸರಕಾರ ಹಿಂಜರಿಯುತ್ತಿದೆ. ಇತ್ತೀಚೆಗೆ ಕೇಂದ್ರ ಸಚಿವರೊಬ್ಬರು ಹೇಳಿಕೆಯನ್ನು ನೀಡುತ್ತಾ, ಹುಸಿಬಾಂಬ್ ಬೆದರಿಕೆಗಳನ್ನು ಒಡ್ಡುವ ಆರೋಪಿಗಳಿಗೆ ವಿಮಾನದಲ್ಲಿ ಪ್ರಯಾಣಿಸುವುದನ್ನು ಶಾಶ್ವತವಾಗಿ ನಿಷೇಧಿಸುವುದಾಗಿ ಘೋಷಿಸಿದ್ದಾರೆ. ಈ ದೇಶದ ವಿಮಾನಗಳನ್ನು ಸ್ಫೋಟಿಸುವ ಬೆದರಿಕೆಯನ್ನು ಒಡ್ಡಿದ ‘ಭಯೋತ್ಪಾದನಾ ಶಕ್ತಿ’ಗಳಿಗೆ ಸರಕಾರ ನೀಡಲು ಹೊರಟಿರುವ ಕಠಿಣ ಶಿಕ್ಷೆಯಿದು. ವಿಮಾನವನ್ನು ಸ್ಫೋಟಿಸ ಬಯಸುವವರು ಟಿಕೆಟ್ ತೆಗೆದು ಅಧಿಕೃತ ಹೆಸರಿನೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಾರೆಯೆ? ಇಷ್ಟಕ್ಕೂ ವಿಮಾನ ಸ್ಫೋಟ ಮಾಡಬೇಕು ಎನ್ನುವ ದುರುದ್ದೇಶವಿರುವವರು ಅಥವಾ ದೇಶದ ವಿಮಾನ ಸೇವೆಯನ್ನೇ ಅಸ್ತವ್ಯಸ್ತಗೊಳಿಸಬೇಕು ಎಂದು ಬಯಸುವವರು ವಿಮಾನ ಪ್ರಯಾಣ ನಿಷೇಧ ಶಿಕ್ಷೆಗೆ ಹೆದರಿ ಹಿಂದೆ ಸರಿಯುತ್ತಾರೆ ಎಂದು ಭಾವಿಸುವಷ್ಟು ಪ್ರಕರಣ ಲಘುವಾಗಿದೆಯೆ?
ಈಗಾಗಲೇ ವಿದೇಶದಲ್ಲಿರುವ ಖಾಲಿಸ್ತಾನ್ ಪರ ಶಕ್ತಿಗಳು ಭಾರತದಲ್ಲಿ ವಿಮಾನ ಸ್ಫೋಟದ ಬೆದರಿಕೆಯನ್ನು ಬಹಿರಂಗವಾಗಿಯೇ ನೀಡಿವೆೆ. ಇಂತಹ ಸಂದರ್ಭದಲ್ಲಿ ಈ ಬಾಂಬ್ ಬೆದರಿಕೆಯನ್ನು ‘ಹುಸಿ’ ಎಂದು ಸರಕಾರ ಸ್ವಯಂ ನಿರ್ಧರಿಸುವುದು ಅಪಾಯವನ್ನು ಸ್ವಯಂ ಆಹ್ವಾನಿಸಿಕೊಂಡಂತೆ. ಬಹುಶಃ ಈ ಬೆದರಿಕೆಯೊಡ್ಡಿದ ಆರೋಪಿಗಳ ಹೆಸರು ಮುಸ್ಲಿಮ್ ಸಮುದಾಯಕ್ಕೆ ಸೇರಿದ್ದಿದ್ದರೆ, ಸರಕಾರ ಮತ್ತು ಮಾಧ್ಯಮಗಳು ಪ್ರಕರಣಗಳನ್ನು ಇಷ್ಟೇ ಹಗುರವಾಗಿ ತೆಗೆದುಕೊಳ್ಳುತ್ತಿದ್ದವೆ? ಒಂದು ವೇಳೆ ಬೆದರಿಕೆ ಒಡ್ಡಿದ ಆರೋಪದಲ್ಲಿ ಮುಸ್ಲಿಮ್ ಹೆಸರುಗಳಿದ್ದಿದ್ದರೆ, ಇಡೀ ಪ್ರಕರಣದ ಹಿಂದೆ ಭಾರೀ ಭಯೋತ್ಪಾದನಾ ಸಂಚುಗಳಿರುವುದನ್ನು ಮಾಧ್ಯಮಗಳೇ ಮುಂದೆ ನಿಂತು ಬಯಲು ಮಾಡುತ್ತಿದ್ದವು. ಪೊಲೀಸರು ವಿಚಾರಣೆ ನಡೆಸುವ ಮೊದಲೇ ಮಾಧ್ಯಮಗಳು ಭಯೋತ್ಪಾದನೆಯ ಆರೋಪ ಹೊರಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಬಿಡುತ್ತಿದ್ದವು. ಮಾಧ್ಯಮಗಳ ದುರದೃಷ್ಟಕ್ಕೆ, ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಓರ್ವನ ಹೆಸರು ಶುಭಂ ಉಪಾಧ್ಯಾಯ ಎಂದಾಗಿದ್ದರೆ, ಇನ್ನೋರ್ವನ ಹೆಸರು ಜಗದೀಶ್ ಉಯಿಕೆ. ಸಾಮಾಜಿಕ ಮಾಧ್ಯಮ ಖಾತೆಯೊಂದರಿಂದ ದಿಲ್ಲಿಯ ಇಂದಿರಾಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳೆದವಾರ ಎರಡು ಬಾಂಬ್ ಬೆದರಿಕೆಯನ್ನು ಒಡ್ಡಿರುವ ಉಪಾಧ್ಯಾಯ ನಿರುದ್ಯೋಗಿಯಾಗಿದ್ದು 12ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾನೆ ಎಂದು ಪೊಲೀಸರು ವಿಚಾರಣೆ ಮಾಡುವಾಗ ತಿಳಿದು ಬಂದಿದೆ. ಪಿಯುಸಿ ಮಾಡಿದ ಯುವಕನೊಬ್ಬ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಮಾಜಿಕ ಮಾಧ್ಯಮದ ನಕಲಿ ಖಾತೆಯ ಮೂಲಕ ಕರೆ ಮಾಡುತ್ತಾನೆ ಎನ್ನುವುದು ನಂಬುವುದಕ್ಕೆ ಸಾಧ್ಯವೆ? ಇದರಲ್ಲಿ ಈತನ ಹಿಂದೆ ಇನ್ನೂ ಹಲವರು ಶಾಮೀಲಾಗಿರುವ ಬಗ್ಗೆ ತನಿಖೆ ನಡೆಯಬೇಡವೆ?
ಎಲ್ಲಕ್ಕಿಂತ ಮುಖ್ಯವಾಗಿ ಆರೋಪಿಯಾಗಿ ಇದೀಗ ಗುರುತಿಸಲ್ಪಟ್ಟಿರುವ ಇನ್ನೋರ್ವ ವ್ಯಕ್ತಿ ಜಗದೀಶ್ ಉಯಿಕೆ. ಈತನ ಹಿನ್ನೆಲೆಯು ಕುತೂಹಲಕಾರಿಯಾಗಿದೆ. ಈ ಹಿಂದೆ ಈತ ಭಯೋತ್ಪಾದನೆಯ ಕುರಿತಂತೆ ಕೃತಿಯೊಂದನ್ನು ಬರೆದಿದ್ದನಂತೆ. ಇದೀಗ ಈತನೇ ಶಂಕಿತ ಭಯೋತ್ಪಾದಕನಾಗಿ ಗುರುತಿಸಲ್ಪಟ್ಟಿದ್ದಾನೆ. ಈತ ವಿಮಾನ ಯಾನ ಸಂಸ್ಥೆಗಳಿಗಷ್ಟೇ ಬೆದರಿಕೆಗಳನ್ನು ಕಳುಹಿಸಿರುವುದರಲ್ಲ. ಪ್ರಧಾನಿ ಕಚೇರಿ, ರೈಲ್ವೆ ಇಲಾಖೆೆ, ಮಹಾರಾಷ್ಟ್ರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೂ ಬೆದರಿಕೆಯನ್ನು ಒಡ್ಡಿದ್ದ. 2021ರಲ್ಲಿ ಈತನನ್ನು ಪೊಲೀಸರು ಒಂದು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದರು. ಆರೋಪಿ ತಲೆ ಮರೆಸಿಕೊಂಡಿದ್ದು ಪೊಲೀಸರು ಆತನ ಹುಡುಕಾಟದಲ್ಲಿದ್ದಾರೆ. ಮೂಲತಃ ನಾಗಪುರದ ಈತ ಸಂಘಪರಿವಾರ ಸಂಘಟನೆಗಳ ಜೊತೆಗೂ ಸಂಪರ್ಕದಲ್ಲಿದ್ದ ಎಂದು ಶಂಕಿಸಲಾಗಿದೆ. ಇಷ್ಟಾದರೂ ಸರಕಾರ, ಪೊಲೀಸರು ಈ ಬಾಂಬ್ ಬೆದರಿಕೆಗಳನ್ನು ಒಂದು ಭಯೋತ್ಪಾದನಾ ಕೃತ್ಯದ ಭಾಗವೆಂದು ಗುರುತಿಸಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಓರ್ವ ದುಷ್ಕರ್ಮಿ ಬಜಪೆ ವಿಮಾನ ನಿಲ್ದಾಣಕ್ಕೆ ಬಾಂಬ್ ಇಡಲು ಯತ್ನಿಸಿದ್ದು ಇನ್ನೂ ಹಸಿಯಾಗಿಯೇ ಇದೆ. ಆರೋಪಿಯ ಹೆಸರು ಬಯಲಾಗುವ ಮೊದಲು ‘ಇದೊಂದು ಭಯಾನಕ ಸ್ಫೋಟದ ಸಂಚು’ ಎಂದು ಮಾಧ್ಯಮಗಳು ಮುಖಪುಟದಲ್ಲಿ ವರದಿ ಮಾಡಿದ್ದವು ಆದರೆ ಆರೋಪಿಯ ಹೆಸರು ಆದಿತ್ಯರಾವ್ ಎನ್ನುವುದು ಬಯಲಾಗುತ್ತಿದ್ದಂತೆಯೇ ಪ್ರಕರಣವನ್ನು ಟುಸ್ ಮಾಡಿದವು.ಸದ್ಯ ವರದಿಯಾಗುತ್ತಿರುವ ವಿಮಾನಗಳಿಗೆ ಬಾಂಬ್ ಬೆದರಿಕೆಯು ಮುಂದೊಂದು ದಿನ ಭಾರೀ ಬಾಂಬ್ ಸ್ಫೋಟ ನಡೆಸುವ ಸಂಚಿನ ಭಾಗವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಯಾಕೆಂದರೆ, ಇಂತಹ ಸಾಲು ಸಾಲು ಬೆದರಿಕೆಗಳನ್ನು ನಿರ್ಲಕ್ಷಿಸುತ್ತಾ ಹೋದಂತೆಯೇ ಒಂದು ದಿನ ನಿಜವಾದ ಬಾಂಬ್ ಬೆದರಿಕೆಯನ್ನು ಲಘುವಾಗಿ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದುದರಿಂದ, ಈ ಬಾಂಬ್ ಬೆದರಿಕೆಯನ್ನು ಒಡ್ಡಿದವರು ಯಾರೇ ಆಗಿರಲಿ, ಅವರ ಮೇಲೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ವಿಮಾನಗಳಿಗೆ ಒಡ್ಡಿರುವ ಬಾಂಬ್ ಬೆದರಿಕೆ ಹುಸಿಯಾಗಲಿ, ನಿಜವಾಗಲಿ, ಅದನ್ನು ‘ಭಯೋತ್ಪಾದನಾ ಕೃತ್ಯ’ವಾಗಿ ಪರಿಗಣಿಸಲು ವಿಮಾನಭದ್ರತೆಗೆ ಅನುಗುಣವಾಗಿ ಸೂಕ್ತ ಕಾನೂನು ತಿದ್ದುಪಡಿಯನ್ನು ಸರಕಾರ ತರಬೇಕು. ಇಲ್ಲವಾದರೆ, ಈ ‘ತೋಳ ಬಂತು ತೋಳ’ ಗದ್ದಲ ಒಂದು ದಿನ ನಿಜವಾಗಿ ನೂರಾರು ಜನರ ಪ್ರಾಣಗಳನ್ನು ಬಲಿತೆಗೆದುಕೊಳ್ಳುವ ಸಾಧ್ಯತೆಗಳಿವೆ.