ಕಾಂಗ್ರೆಸ್‌ಗೆ ಹೊಸ ದಿಕ್ಕು ನೀಡಬಹುದೇ ಪ್ರಿಯಾಂಕಾ ರಾಜಕೀಯ ಪ್ರವೇಶ

Update: 2024-10-25 06:25 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈಬಾರಿಯ ಲೋಕಸಭಾ ಉಪಚುನಾವಣೆಯು ಪ್ರಿಯಾಂಕಾ ಗಾಂಧಿಯ ಅಧಿಕೃತ ರಾಜಕೀಯ ಪ್ರವೇಶದ ಮೂಲಕ ಮಹತ್ವವನ್ನು ಪಡೆದುಕೊಂಡಿದೆ. ವಯನಾಡ್ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಅವರು ಬುಧವಾರ ನಾಮಪತ್ರ ಸಲ್ಲಿಸುತ್ತಿರುವುದು, ಭವಿಷ್ಯದಲ್ಲಿ ರಾಷ್ಟ್ರಮಟ್ಟದ ರಾಜಕೀಯ ಹೊಸ ತಿರುವು ಪಡೆಯಲಿರುವ ಸೂಚನೆಯೇ ಎನ್ನುವ ಚರ್ಚೆ ಈಗಾಗಲೇ ಆರಂಭಗೊಂಡಿದೆ. ಕಾಂಗ್ರೆಸ್ ಪಕ್ಷದೊಳಗಿರುವ ಕೆಲವು ನಾಯಕರು, ರಾಹುಲ್‌ಗಾಂಧಿಗಿಂತ ಪ್ರಿಯಾಂಕಾಗಾಂಧಿಯ ಮೇಲೆ ಒಳಗೊಳಗೆ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ. ಬಿಕ್ಕಟ್ಟಿನ ಸಂದರ್ಭದಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದಾರಾದರೂ, ನರೇಂದ್ರ ಮೋದಿಗೆ ರಾಹುಲ್ ಪರ್ಯಾಯವಾಗಬಲ್ಲರೆ? ಎನ್ನುವ ವಿಶ್ವಾಸದ ಕೊರತೆ ಕಾಂಗ್ರೆಸ್‌ನ ಒಳಗೆ ಇನ್ನೂ ಇದ್ದೇ ಇದೆ. ಬಿಜೆಪಿಯ ಐಟಿ ಸೆಲ್, ಮಾರಾಟಗೊಂಡಿರುವ ಮಾಧ್ಯಮಗಳು ಮತ್ತು ಸಂಘಪರಿವಾರದ ಕಾರ್ಯಕರ್ತರ ರಾಹುಲ್ ವಿರೋಧಿ ಅಪಪ್ರಚಾರವನ್ನು ಪರಿಣಾಮಕಾರಿಯಾಗಿ ಎದುರಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿಯೊಳಗೆ ಇಂದಿರಾಗಾಂಧಿಯನ್ನು ಹುಡುಕುತ್ತಿರುವ ಕಾಂಗ್ರೆಸ್ ನಾಯಕರಿಗೆ ವಯನಾಡ್ ಉಪಚುನಾವಣೆ ಹೊಸ ಹುರುಪನ್ನು ನೀಡಿದೆ.

ಪ್ರಿಯಾಂಕಾ ಗಾಂಧಿಗೆ ರಾಜಕೀಯ ಹೊಸತೇನೂ ಅಲ್ಲ. ತಂದೆಯ ಕಾಲದಲ್ಲೇ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಅನುಭವ ತನಗಿದೆ ಎಂದು ಅವರು ಈಗಾಗಲೇ ಹೇಳಿಕೊಂಡಿದ್ದಾರೆ. 2004ರಲ್ಲಿ ರಾಜಕೀಯ ಪ್ರವೇಶ ಮಾಡಿದ ಅವರು, ಅಮೇಠಿ, ರಾಯ್‌ಬರೇಲಿಗಳಲ್ಲಿ ತನ್ನ ತಾಯಿ ಮತ್ತು ಸೋದರ ರಾಹುಲ್‌ಗಾಂಧಿಯ ಪರವಾಗಿ ಪ್ರಚಾರ ನಡೆಸಿದ್ದಾರೆ. ಅಮೇಠಿಯಲ್ಲಿ ಪ್ರಿಯಾಂಕಾ ಸ್ಪರ್ಧಿಸಬೇಕು ಎನ್ನುವುದು ಅಲ್ಲಿನ ಕಾಂಗ್ರೆಸ್ ನಾಯಕರ ಬಹು ಹಿಂದಿನ ಬೇಡಿಕೆಯಾಗಿದೆ. ಪ್ರಿಯಾಂಕಾ ಅಮೇಠಿಯ ಮಗಳು ಎನ್ನುವುದು ಅಲ್ಲಿನ ಕಾಂಗ್ರೆಸ್ ನಾಯಕರ ನಿತ್ಯ ಘೋಷಣೆಯಾಗಿದೆ. 2019ರಲ್ಲಿ ಪ್ರಿಯಾಂಕಾ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದ ಬಳಿಕ ಕಾಂಗ್ರೆಸ್ ಪರವಾಗಿ ಬೀದಿಗಿಳಿದು ಕಾರ್ಯನಿರ್ವಹಿಸಿದ್ದಾರೆ. 2020ರಲ್ಲಿ ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ನಿಧನರಾದಾಗ, ಪ್ರಿಯಾಂಕಾ ಆ ಕೊರತೆಯನ್ನು ತುಂಬುವ ಪ್ರಯತ್ನವನ್ನು ನಡೆಸಿದರು. ರಾಜಸ್ಥಾನ, ಹಿಮಾಚಲ ಪ್ರದೇಶ, ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ನೊಳಗಿನ ಬಿಕ್ಕಟ್ಟುಗಳನ್ನು ಪರಿಹರಿಸಲು ಪ್ರಿಯಾಂಕಾ ಮಧ್ಯವರ್ತಿಯಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಎದುರಾದ ಸೋಲಿನಿಂದ ಅವರು ಕಂಗೆಡಲಿಲ್ಲ. ತನ್ನ ಸೋದರನ ನೇತೃತ್ವದ ರಾಷ್ಟ್ರಮಟ್ಟದ ಯಾತ್ರೆಗಳಲ್ಲೂ ಅವರು ಜೊತೆ ನಿಂತರು. ಲೋಕಸಭಾ ಸದಸ್ಯರಾಗಿ, ಸಂಸದನಾಗಿ ರಾಹುಲ್‌ಗಾಂಧಿಗೆ ಪ್ರಿಯಾಂಕಾಗಾಂಧಿಗಿಂತ ಹೆಚ್ಚು ಅನುಭವವಿದೆ ನಿಜ. ಆದರೆ, ಅಧಿಕಾರದಿಂದ ದೂರವಿದ್ದು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಜನಸಾಮಾನ್ಯರ ಜೊತೆ ಸಂಪರ್ಕ ಬೆಸೆಯುವ ವಿಷಯದಲ್ಲಿ ಪ್ರಿಯಾಂಕಾ ಯಾವತ್ತೂ ಹಿಂದೆ ಬಿದ್ದಿಲ್ಲ. ಈ ಎಲ್ಲ ಕಾರಣಗಳಿಂದ, ವಯನಾಡಿನ ಮೂಲಕ ಪ್ರಿಯಾಂಕಾ ರಾಜಕೀಯ ಪ್ರವೇಶ, ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಹೊಸದಿಕ್ಕನ್ನು ನೀಡಲಿದೆ ಎಂದು ಕಾಂಗ್ರೆಸ್‌ನೊಳಗಿರುವ ಕೆಲವು ನಾಯಕರು ಒಳಗೊಳಗೆ ಮಂಡಿಗೆ ತಿನ್ನುತ್ತಿದ್ದಾರೆ.

ರಾಹುಲ್‌ಗಾಂಧಿಯನ್ನು ಉತ್ತರದ ಅಮೇಠಿ ತಿರಸ್ಕರಿಸಿದಾಗ ಅವರನ್ನು ಸ್ವೀಕರಿಸಿದ್ದು ಕೇರಳದ ವಯನಾಡ್. ಉತ್ತರ ಭಾರತವನ್ನು ನಿಧಾನಕ್ಕೆ ಸಂಘಪರಿವಾರ ತನ್ನ ಬಾಹುಗಳಲ್ಲಿ ತೆಗೆದುಕೊಳ್ಳುತ್ತಿದ್ದಂತೆಯೇ, ರಾಹುಲ್‌ಗಾಂಧಿಗೆ ಆಶ್ರಯ ಪಡೆಯಲು ಕೇರಳಕ್ಕಿಂತ ಒಳ್ಳೆಯ ಜಾಗ ಇನ್ನೊಂದು ಇರಲಿಲ್ಲ. ಯಾಕೆಂದರೆ, ಕೇರಳ ಹಲವು ಕಾರಣಗಳಿಗಾಗಿ ಮಾದರಿ ರಾಜ್ಯವಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಂಘಪರಿವಾರ ರಾಜಕೀಯವಾಗಿ ಅಸ್ತಿತ್ವವನ್ನು ಪಡೆಯಲು ಕೇರಳದಲ್ಲಿ ಇನ್ನ್ನೂ ತಿಣುಕಾಡುತ್ತಿದೆ. ಇಂದಿರಾಗಾಂಧಿಗೆ ಕರ್ನಾಟಕದ ಚಿಕ್ಕಮಗಳೂರು ಮರುಜನ್ಮ ನೀಡಿದಂತೆಯೇ ರಾಹುಲ್‌ಗಾಂಧಿಗೆ ವಯನಾಡ್ ಮರುಜನ್ಮವನ್ನು ನೀಡಿತ್ತು. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ಗಾಂಧಿ ರಾಯ್‌ಬರೇಲಿಯಲ್ಲಿ ಗೆದ್ದಿರುವುದರಿಂದ, ಏಕಾಏಕಿ ವಯನಾಡನ್ನು ತ್ಯಜಿಸಲು ನಿರ್ಧರಿಸಿದರು. ಇದು ಕೇರಳದ ಕಾಂಗ್ರೆಸ್‌ನಾಯಕರನ್ನು ತೀರಾ ಮುಜುಗರಕ್ಕೆ ತಳ್ಳಿತ್ತು. ಭೀಕರ ಪ್ರಕೃತಿ ವಿಕೋಪದಿಂದ ವಯನಾಡ್ ತತ್ತರಿಸಿ ಕೂತಿರುವ ಹೊತ್ತಿಗೆ ರಾಹುಲ್‌ಗಾಂಧಿ ವಯನಾಡ್ ಕ್ಷೇತ್ರದ ಜನರನ್ನು ತನ್ನ ರಾಜಕೀಯಕ್ಕೆ ಬಳಸಿಕೊಂಡು ಕೈ ಬಿಟ್ಟರು ಎನ್ನುವ ಅಸಮಾಧಾನವೊಂದು ನಿಧಾನಕ್ಕೆ ಬೆಳೆಯುತ್ತಿತ್ತು. ಆದರೆ ರಾಹುಲ್ ತ್ಯಜಿಸಿದ ಕ್ಷೇತ್ರವನ್ನು ಪ್ರಿಯಾಂಕಾಗಾಂಧಿ ಸ್ವೀಕರಿಸುವ ಮೂಲಕ ಅಲ್ಲಿನ ಕಾಂಗ್ರೆಸ್‌ನ ನಾಯಕರು ಬಹುದೊಡ್ಡ ಮುಜುಗರದಿಂದ ಪಾರಾಗಿದ್ದಾರೆ. ರಾಯ್‌ಬರೇಲಿಯನ್ನು ಕೇಂದ್ರವಾಗಿಟ್ಟುಕೊಂಡು ರಾಹುಲ್ ಗಾಂಧಿ ಉತ್ತರಭಾರತದಲ್ಲಿ ಕಾಂಗ್ರೆಸನ್ನು ಮುನ್ನಡೆಸಿದರೆ, ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ರಾಜಕೀಯವಾಗಿ ಬೇರಿಳಿಸಿಕೊಂಡು ದಕ್ಷಿಣ ಭಾರತವನ್ನು ಹಿಡಿತಕ್ಕೆ ತಂದುಕೊಳ್ಳುವ ಯೋಜನೆಯೊಂದು ಈ ಮೂಲಕ ರೂಪ ಪಡೆದಂತಾಗಿದೆ.

ವಯನಾಡಿನಲ್ಲಿ ಗೆಲ್ಲುವುದು ಪ್ರಿಯಾಂಕಾ ಗಾಂಧಿಗೆ ಕಷ್ಟಕರವೇನೂ ಇಲ್ಲ. ರಾಹುಲ್‌ಗಾಂಧಿಗಿಂತಲೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ಸಾಧ್ಯತೆಗಳು ಇವೆ. ಆದರೆ, ಸಂಸತ್‌ಗೆ ಪ್ರವೇಶಿಸಲು ಇದನ್ನೊಂದು ಏಣಿಯಾಗಿ ಬಳಸಿಕೊಂಡು ಅಣ್ಣನಂತೆಯೇ ತಂಗಿಯೂ ವಯನಾಡನ್ನು ಭವಿಷ್ಯದಲ್ಲಿ ತೊರೆದು ಬಿಡಬಹುದು ಎನ್ನುವ ಅನುಮಾನ ಈಗಲೂ ಸ್ಥಳೀಯರಲ್ಲಿದೆ. ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ರಾಯ್‌ಬರೇಲಿಯಲ್ಲಿ ಗೆದ್ದ ಬೆನ್ನಿಗೇ ವಯನಾಡು ರಾಹುಲ್‌ಗಾಂಧಿಗೆ ಬೇಡವಾಯಿತು. ಮುಂದಿನ ದಿನಗಳಲ್ಲಿ, ಇದೇ ದಾರಿಯನ್ನು ಪ್ರಿಯಾಂಕಾಗಾಂಧಿಯೂ ಹಿಡಿದರೆ? ಎನ್ನುವ ಜನರ ಪ್ರಶ್ನೆಗೆ ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸ್ಪಷ್ಟ ಉತ್ತರವನ್ನು ನೀಡಬೇಕಾಗುತ್ತದೆ. ಉತ್ತರ ಭಾರತ- ದಕ್ಷಿಣ ಭಾರತದ ನಡುವಿನ ಬಿಕ್ಕಟ್ಟು ತೀವ್ರವಾಗುತ್ತಿರುವ ಈ ದಿನಗಳಲ್ಲಿ, ಉತ್ತರ-ದಕ್ಷಿಣವನ್ನು ಬೆಸೆಯಲು ಪ್ರಿಯಾಂಕಾಗಾಂಧಿ ಈ ಸಂದರ್ಭವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ. ಕಾಂಗ್ರೆಸನ್ನು ಹೊಸದಾಗಿ ಕಟ್ಟುವುದಕ್ಕೆ ಮತ್ತು ದಕ್ಷಿಣ ಭಾರತೀಯರಲ್ಲಿ ಕಾಂಗ್ರೆಸ್‌ನ ಕುರಿತಂತೆ ಇರುವ ಪರಕೀಯತೆಯನ್ನು ಅಳಿಸುವುದಕ್ಕೆ ಪ್ರಿಯಾಂಕಾ ಅವರಿಗೆ ಸಾಧ್ಯವಾಗಬೇಕಾಗಿದೆ.

ಪ್ರಿಯಾಂಕಾ ಗಾಂಧಿಯ ಸ್ಪರ್ಧೆ, ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳಿಗೂ ಸವಾಲಾಗಿದೆ. ಕೇರಳದ ಎಡ ಪಕ್ಷಗಳು ರಾಹುಲ್ ಗಾಂಧಿಯ ಬಗ್ಗೆ ದಾಳಿ ನಡೆಸುವ ಯಾವುದೇ ಅವಕಾಶಗಳನ್ನು ಬಿಟ್ಟುಕೊಟ್ಟಿರಲಿಲ್ಲ. ಎಡಪಂಥೀಯರು ಕೇರಳದಲ್ಲಿ ಕಟ್ಟಿ ಬೆಳೆಸಿದ ಜಾತ್ಯತೀತ ವಾತಾವರಣದ ಹುಲುಸಾದ ಬೆಳೆಯನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮೇಯಲು ಹೊರಟಿದೆ ಎನ್ನುವ ಅಸಮಾಧಾನ ಅವರಲ್ಲಿದೆ. ಈ ಆತಂಕ ತಮಿಳು ನಾಡು, ಆಂಧ್ರದ ಜಾತ್ಯತೀತ ಪ್ರಾದೇಶಿಕ ಪಕ್ಷಗಳನ್ನು ಕೂಡ ಕಾಡಿದರೆ ಅಚ್ಚರಿಯಿಲ್ಲ. ದಕ್ಷಿಣ ಭಾರತದಲ್ಲಿ ಪ್ರಿಯಾಂಕಾ ತನ್ನ ರಾಜಕೀಯ ಬೇರನ್ನು ಆಳಕ್ಕೆ ಇಳಿಸಿದ್ದೇ ಆದರೆ, ಅದರ ಮೊದಲ ಸಂತ್ರಸ್ತರು ಈ ಪ್ರಾದೇಶಿಕ ಪಕ್ಷಗಳೆೇ ಆಗಿವೆ. ಆದುದರಿಂದ ಪ್ರಿಯಾಂಕಾಗಾಂಧಿಯ ಈ ರಾಜಕೀಯ ಪ್ರವೇಶವನ್ನು ‘ಇಂಡಿಯಾ’ದೊಳಗಿರುವ ಈ ಪ್ರಾದೇಶಿಕ ಪಕ್ಷಗಳು ಹೇಗೆ ಸ್ವೀಕರಿಸುತ್ತವೆ ಎನ್ನುವುದು ಕೂಡ ಕುತೂಹಲಕಾರಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News