ಚುನಾವಣಾ ಆಯೋಗದ ಆತ್ಮಾವಲೋಕನ ಎಂದು?

Update: 2024-10-18 04:57 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಚುನಾವಣಾ ಆಯೋಗದ ಆತ್ಮ ಕೊನೆಗೂ ಜಾಗೃತಗೊಂಡಿದೆ. ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣಾ ಫಲಿತಾಂಶ ಬಳಿಕದ ಬೆಳವಣಿಗೆಗಳಿಂದ ತೀವ್ರ ಮುಜುಗರಕ್ಕೀಡಾಗಿರುವ ಚುನಾವಣಾ ಆಯೋಗ ಮಾಧ್ಯಮಗಳಿಗೆ 'ಆತ್ಮಾವಲೋಕನ'ಕ್ಕೆ ಕರೆ ನೀಡಿದೆ. ಚುನಾವಣೋತ್ತರ ಸಮೀಕ್ಷೆಗಳಿಂದಾಗಿ ಚುನಾವಣಾ ವ್ಯವಸ್ಥೆ ವಿರೂಪಗೊಳ್ಳುತ್ತಿದೆ. ಚುನಾವಣೋತ್ತರ ಸಮೀಕ್ಷೆಗಳು ಮೂಡಿಸುವ ನಿರೀಕ್ಷೆ ಹಾಗೂ ವಾಸ್ತವತೆಯ ನಡುವಿನ ಅಂತರವು ಹತಾಶೆಗೆ ಕಾರಣವಾಗುತ್ತದೆ. ಈ ಬಗ್ಗೆ ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳುವ ಸಮಯವೀಗ ಬಂದಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕವನ್ನು ಘೋಷಿಸುವ ಸಂದರ್ಭದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗದ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ. ಚುನಾವಣೋತ್ತರ ಸಮೀಕ್ಷೆ ಈ ದೇಶದ ಗುಪ್ತ ಮತದಾನ ವ್ಯವಸ್ಥೆಯ ಬಹುದೊಡ್ಡ ಅಣಕವಾಗಿದೆ. ಈ ಹಿಂದೆ ಮಾಧ್ಯಮಗಳು ರಾಜಕೀಯ ಪಕ್ಷಗಳ ಪ್ರಾಯೋಜಕತ್ವದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸಿ, ಮತದಾರರ ಮೇಲೆ ತಮ್ಮ ಅಭಿಪ್ರಾಯಗಳನ್ನು ಹೇರುತ್ತಿತ್ತು. ಇಂತಹ ಪಕ್ಷಗಳೇ ಗೆಲ್ಲುತ್ತವೆ ಎನ್ನುವ ವಾತಾವರಣವನ್ನು ನಿರ್ಮಿಸಿ, ಮತದಾರರ ಒಲವನ್ನು ಒಂದು ನಿರ್ದಿಷ್ಟ ಪಕ್ಷದ ಕಡೆಗೆ ತಿರುಗಿಸುವ ಕೆಲಸವನ್ನು ಈ ಚುನಾವಣಾ ಪೂರ್ವ ಸಮೀಕ್ಷೆಗಳು ಮಾಡುತ್ತಿದ್ದವು.

ಚುನಾವಣಾ ಪೂರ್ವ ಸಮೀಕ್ಷೆ ಬಹುದೊಡ್ಡ ಚುನಾವಣಾ ಅಕ್ರಮ ಎನ್ನುವುದು ನಿಧಾನಕ್ಕಾದರೂ ಚುನಾವಣಾ ಆಯೋಗಕ್ಕೆ ಮನವರಿಕೆಯಾಯಿತು. ಕೊನೆಗೂ ಚುನಾವಣಾ ಪೂರ್ವ ಸಮೀಕ್ಷೆಗಳಿಗೆ ನಿಷೇಧವನ್ನು ಹೇರಲಾಯಿತು. ಆದರೆ, ಚುನಾವಣೋತ್ತರ ಸಮೀಕ್ಷೆಗಳ ಹೆಸರಲ್ಲಿ ಮಾಧ್ಯಮಗಳು ನಡೆಸುತ್ತಿರುವ ಅಕ್ರಮಗಳಿಗೆ ಇನ್ನೂ ತಡೆಯನ್ನು ವಿಧಿಸಲಾಗಿಲ್ಲ. ಚುನಾವಣೋತ್ತರ ಸಮೀಕ್ಷೆಗಳು ಜನರ ಅಗತ್ಯ ಖಂಡಿತ ಅಲ್ಲ. ಚುನಾವಣೆ ಮುಗಿದ ಒಂದೆರಡು ದಿನಗಳಲ್ಲೇ ಫಲಿತಾಂಶ ಘೋಷಣೆಯಾಗಲಿರುವಾಗ, ಮಾಧ್ಯಮಗಳು ಒಂದು ದಿನ ಮುಂಚೆ ಘೋಷಣೆ ಮಾಡುವ 'ಅಣಕು ಫಲಿತಾಂಶ'ಕ್ಕೆ ಏನು ಬೆಲೆಯಿದೆ? ಆದರೆ ಈ ಅಣಕು ಫಲಿತಾಂಶವನ್ನು ಆಧರಿಸಿ ದೇಶಾದ್ಯಂತ ಕೋಟ್ಯಂತರ ರೂಪಾಯಿ ಬೆಟ್ಟಿಂಗ್‌ಗಳು ನಡೆಯುತ್ತವೆ ಎನ್ನುವ ಆರೋಪಗಳಿವೆ. ಚುನಾವಣೋತ್ತರ ಫಲಿತಾಂಶದ ಸತ್ಯಾಸತ್ಯತೆಯನ್ನು ಪಣಕ್ಕಿಟ್ಟು, ಸಾವಿರಾರು ಜನರು ಲಕ್ಷಾಂತರ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಚುನಾವಣೋತ್ತರ ಫಲಿತಾಂಶಗಳು ಪೂರಕವಾಗಿದ್ದರೆ, ರಾಜಕೀಯ ಪಕ್ಷಗಳಿಗೂ ಹಲವು ಅನುಕೂಲಗಳಿವೆ. ಆದುದರಿಂದ ತಮಗೆ ಪೂರಕವಾಗಿ ಅಣಕು ಫಲಿತಾಂಶಗಳನ್ನು ಬಿಡುಗಡೆ ಮಾಡಲು ಕೋಟ್ಯಂತರ ರೂಪಾಯಿ ಕೈ ಬದಲಾಗುತ್ತದೆ ಎನ್ನುವ ದೂರುಗಳೂ ಇವೆ. ಚುನಾವಣೋತ್ತರ ಫಲಿತಾಂಶದಲ್ಲಿ ಗೆದ್ದು ನಿಜವಾದ ಫಲಿತಾಂಶದಲ್ಲಿ ಸೋತರೆ, ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಪಕ್ಷಗಳಿಗೆ ಅವಕಾಶ ಸಿಗುತ್ತದೆ.

ಚುನಾವಣೋತ್ತರ ಫಲಿತಾಂಶ ನಮ್ಮ ಕಡೆಗಿದ್ದರೂ ಎದುರಾಳಿಗಳು ಗೆದ್ದಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಆಕ್ರಮಗಳು ನಡೆದಿವೆ ಎಂದು ಆರೋಪಿಸಲು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗುತ್ತದೆ. ಚುನಾವಣೋತ್ತರ ಸಮೀಕ್ಷೆಯನ್ನು ಮುಂದಿಟ್ಟುಕೊಂಡು 'ಗೆದ್ದು ಸೋತ' ಪಕ್ಷಗಳು ಜನಗಳ ಅನುಕಂಪವನ್ನು ತನ್ನದಾಗಿಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಇತ್ತೀಚಿನ ದಿನಗಳಲ್ಲಿ ಇವಿಎಂ ಬಗ್ಗೆ ವಿರೋಧ ಪಕ್ಷಗಳು ತೀವ್ರ ಅನುಮಾನವನ್ನು ವ್ಯಕ್ತಪಡಿಸುತ್ತಿವೆ. ಇವಿಎಂನ್ನು ತಿರುಚಿ ತಮಗೆ ಬೇಕಾದ ಫಲಿತಾಂಶವನ್ನು ಕೇಂದ್ರ ಸರಕಾರ ಪಡೆದುಕೊಳ್ಳುತ್ತಿದೆ ಎನ್ನುವ ಆರೋಪ ಗಂಭೀರ ಸ್ವರೂಪವನ್ನು ಪಡೆದಿದೆ. ಇವಿಎಂ ಅಕ್ರಮಗಳ ಮೂಲಕ ಹೊರಬೀಳುವ ಫಲಿತಾಂಶಗಳಿಗೆ ಜನರನ್ನು ಮಾನಸಿಕವಾಗಿ ಸಿದ್ದಗೊಳಿಸುವ ಕೆಲಸವನ್ನು ಚುನಾವಣೋತ್ತರ ಸಮೀಕ್ಷೆಗಳು ಮಾಡುತ್ತವೆ ಎನ್ನುವ ಇನ್ನೊಂದು ಆರೋಪವಿದೆ. ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಗಳು ಎದ್ದು ಕಾಣುತ್ತಿದ್ದರೂ, ಚುನಾವಣೋತ್ತರ ಫಲಿತಾಂಶ ಆ ಅಲೆಗೆ ವಿರುದ್ಧವಾದ ಸಮೀಕ್ಷೆಯನ್ನು ಮುಂದಿಡುತ್ತದೆ. ಇದಾದ ಬಳಿಕ ಅದನ್ನು ಅನುಮೋದಿಸುವಂತೆ ನಿಜವಾದ ಫಲಿತಾಂಶಗಳು ಹೊರಬೀಳುತ್ತವೆ. ಅನಿರೀಕ್ಷಿತ ಚುನಾವಣಾ ಫಲಿತಾಂಶಗಳ ಬಗ್ಗೆ ಜನರು ಪ್ರಶ್ನೆ ಎತ್ತದಂತೆ ಪರೋಕ್ಷವಾಗಿ ಈ ಸಮೀಕ್ಷೆಗಳು ತಡೆಯುತ್ತವೆ ಎನ್ನುವುದು ವಿಶ್ಲೇಷಕರ ಅನಿಸಿಕೆ.

ಹರ್ಯಾಣದಲ್ಲಿ ಕಾಂಗ್ರೆಸ್ ಪಕ್ಷ ಇವಿಎಂ ತಿರುಚುವಿಕೆಯ ಬಗ್ಗೆ ಗಂಭೀರ ಆರೋಪವನ್ನು ಮಾಡಿದೆ.ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಮಾತ್ರವಲ್ಲ, ಹರ್ಯಾಣದ 20 ಸ್ಥಾನಗಳಲ್ಲಿ ಅಕ್ರಮ ನಡೆದಿದ್ದು, ಇವಿಎಂನ್ನು ಸೀಲ್ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷ ಆಯೋಗವನ್ನು ಒತ್ತಾಯಿಸಿದೆ. ಕಾಂಗ್ರೆಸ್‌ನ ಹಲವು ಗಣ್ಯರು 'ಹರ್ಯಾಣದ ಚುನಾವಣಾ ಫಲಿತಾಂಶವನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಮಾಧ್ಯಮಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ವಿರೋಧ ಪಕ್ಷಗಳ ಎಲ್ಲ ಆರೋಪಗಳನ್ನು ಚುನಾವಣಾ ಆಯೋಗ ಸಾರಾಸಗಟಾಗಿ ನಿರಾಕರಿಸಿದೆ. ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿದ್ದ ಕಾರಣದಿಂದಲೇ, ಅದು ಈ ಆರೋಪವನ್ನು ಮಾಡುತ್ತಿದೆ ಎನ್ನುವುದು ಚುನಾವಣಾ ಆಯೋಗದ ವಾದವಾಗಿದೆ. ಈ ಹಿಂದೆಯೂ ಚುನಾವಣೋತ್ತರ ಸಮೀಕ್ಷೆಗಳು ಹಲವು ಬಾರಿ ತಿರುವು ಮುರುವಾಗಿವೆ. ಬಿಜೆಪಿಗೂ ಹಲವು ಬಾರಿ ಈ ಸಮೀಕ್ಷೆ ನಿರಾಶೆ ತಂದಿರುವುದರಿಂದ, ಚುನಾವಣೋತ್ತರ ಸಮೀಕ್ಷೆಯನ್ನು ನಂಬಿಕೊಂಡು ಕಾಂಗ್ರೆಸ್ ಆರೋಪ ಮಾಡಿರುವುದಾಗಿದ್ದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಆದರೆ, ಅದರಾಚೆಗೆ ಅಕ್ರಮ ನಡೆದಿರುವ ಬಗ್ಗೆ ಕಾಂಗ್ರೆಸ್ ಪಕ್ಷದ ಬಳಿ ದಾಖಲೆಗಳಿದ್ದರೆ ಚುನಾವಣಾ ಆಯೋಗ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.

ಚುನಾವಣೋತ್ತರ ಸಮೀಕ್ಷೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಆತ್ಮಾವಲೋಕನ ಮಾಡಲು ಕರೆ ನೀಡಿರುವ ಚುನಾವಣಾ ಆಯೋಗವೂ ತನ್ನನ್ನು ಮೊದಲು ಆತ್ಮಾವಲೋಕನಕ್ಕೆ ಒಡ್ಡಿಕೊಳ್ಳಬೇಕು. ಚುನಾವಣೋತ್ತರ ಸಮೀಕ್ಷೆಗಳು ಏನೇ ಹೇಳಲಿ, ಆದರೆ, ಚುನಾವಣೆಯಲ್ಲಿ ಚುನಾವಣಾ ಆಯೋಗವು ಕೇಂದ್ರ ಸರಕಾರದ ಜೊತೆಗೆ ಶಾಮೀಲಾಗಿ ಕೆಲಸ ಮಾಡುತ್ತಿರುವ ಬಗ್ಗೆ ಭಾರೀ ಆರೋಪಗಳಿವೆ. ಮಹಾರಾಷ್ಟ್ರವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಚುನಾವಣೆಯ ಮೂಲಕ ಆಯ್ಕೆಯಾಗಿದ್ದ ಸರಕಾರವನ್ನು ಅಭದ್ರಗೊಳಿಸಿ, ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರ ಹಿಡಿದಾಗ ಚುನಾವಣಾ ಆಯೋಗ ಜಾಣಕುರುಡುತನವನ್ನು ಪ್ರದರ್ಶಿಸಿತ್ತು. ಇವಿಎಂನ್ನು ಸಂಪೂರ್ಣ ಬದಲಿಸುವುದು ಬೇಡ, ಆದರೆ ಕನಿಷ್ಠ ಸುಧಾರಣೆಗಳನ್ನಾದರೂ ಮಾಡಬೇಕು ಎಂದು ವಿರೋಧ ಪಕ್ಷಗಳು ಹಟ ಹಿಡಿದಾಗಲೂ ಚುನಾವಣಾ ಆಯೋಗ ಅದಕ್ಕೆ ಸ್ಪಂದಿಸಿರಲಿಲ್ಲ. ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಪೂರಕ ಕ್ರಮ ತೆಗೆದುಕೊಳ್ಳಬೇಕಾಗಿದ್ದ ಚುನಾವಣಾ ಆಯೋಗವೇ, ಚುನಾವಣೆಯಲ್ಲಿ ಅಕ್ರಮಗಳ ಆರೋಪ ಕೇಳಿ ಬಂದಾಗ ಅದನ್ನು ತೇಲಿ ಬಿಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಯಾವ ರೀತಿಯಲ್ಲೂ ಶೋಭೆಯಲ್ಲ. ಭಾರತದ ಪಾಲಿಗೆ ಚುನಾವಣಾ ಆಯೋಗದ ಈ ಅನುಮಾನಾಸ್ಪದ ನಡೆ ಅತ್ಯಂತ ಅಪಾಯಕಾರಿಯಾಗಿದೆ. ಆದುದರಿಂದ ಮೊತ್ತ ಮೊದಲು ಚುನಾವಣಾ ಆಯೋಗವೇ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಇತರ ಸಂಸ್ಥೆಗಳಿಗೆ ಮಾದರಿಯಾಗಬೇಕಾಗಿದೆ. ಆ ಬಳಿಕ ಅದು ಚುನಾವಣೋತ್ತರ ಸಮೀಕ್ಷೆಗಾಗಿ ಮಾಧ್ಯಮಗಳಿಗೆ ಉಪದೇಶಗಳನ್ನು ಮಾಡಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News