ಬಿಪಿಎಲ್ ಕಾರ್ಡ್ ಅನರ್ಹತೆ: ಅರ್ಹರಿಗೆ ಅನ್ಯಾಯವಾಗದಿರಲಿ

Update: 2024-10-23 05:48 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯದಲ್ಲಿ 13,87,639 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಎಚ್. ಮುನಿಯಪ್ಪ ತಿಳಿಸಿದ್ದಾರೆ. ಈ ಪೈಕಿ ಆರು ತಿಂಗಳಿನಿಂದ ಪಡಿತರ ಪಡೆಯದ 2,75,667 ಚೀಟಿಗಳಿದ್ದರೆ, ಆದಾಯ ತೆರಿಗೆ ಪಾವತಿ ಮಾಡುವ 98,485 ಪಡಿತರ ಚೀಟಿಗಳು ಇದರಲ್ಲಿ ಸೇರಿಕೊಂಡಿವೆ. ಉಳಿದಂತೆ 10 ಲಕ್ಷಕ್ಕೂ ಅಧಿಕ ಪಡಿತರ ಚೀಟಿಗಳು ಆದಾಯ ಮಿತಿ ಹೆಚ್ಚಿರುವ ಕಾರಣಕ್ಕೆ ಅನರ್ಹಗೊಂಡಿವೆೆ. ಆದಾಯ ಮಿತಿ ಹೆಚ್ಚಿರುವ ಚೀಟಿಗಳಿಗೆ ಎಪಿಎಲ್ ಸ್ಥಾನಮಾನ ಸಿಕ್ಕಿದೆ. ಸೂಕ್ತ ದಾಖಲೆಗಳನ್ನು ನೀಡಲು ವಿಫಲವಾದರೆ ಈ ಅನರ್ಹ ಪಡಿತರ ಚೀಟಿಗಳು ಭವಿಷ್ಯದಲ್ಲಿ ರದ್ದುಗೊಳ್ಳಲಿವೆ ಅಥವಾ ಎಪಿಎಲ್ ಆಗಿ ಬದಲಾಗಲಿವೆ. ಪಡಿತರ ಚೀಟಿಗಳ ಪರಿಷ್ಕರಣೆಯ ವೇಳೆ 2,964 ಮಂದಿ ಸರಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿರುವುದು ಬೆಳಕಿಗೆ ಬಂದಿದ್ದು, ಇವುಗಳನ್ನು ರದ್ದುಗೊಳಿಸಲಾಗಿದೆ. ಆರು ತಿಂಗಳುಗಳಿಂದ ಪಡಿತರ ಪಡೆಯದಿರುವುದು, ಒಂದು ವರ್ಷದಿಂದ ಡಿಬಿಟಿ ಸ್ವೀಕೃತವಾಗದೆ ಇರುವುದು, ಆದಾಯ ತೆರಿಗೆ ಪಾವತಿ ಮಾಡುತ್ತಿರುವುದು, ಆಹಾರ ಭದ್ರತಾ ಕಾಯ್ದೆಯ ಮಾನದಂಡಗಳಿಗೆ ಅನುಗುಣವಾಗಿ ವಾರ್ಷಿಕ ವರಮಾನ ಹೆಚ್ಚಿರುವುದು ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ ಸುಮಾರು 20 ಲಕ್ಷಕ್ಕೂ ಹೆಚ್ಚು ಅನರ್ಹ ಕಾರ್ಡುಗಳು ಇರಬಹುದು ಎಂದು ಸರಕಾರ ಅಂದಾಜಿಸಿದೆ.

ಬಿಪಿಎಲ್ ಕಾರ್ಡ್ಗಳು ಈ ನಾಡಿನ ಕೋಟ್ಯಂತರ ಅತಿ ಬಡವರನ್ನು ಪೊರೆಯುತ್ತಾ ಬಂದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರಲ್ಲೂ ಅಂತ್ಯೋದಯದಂತಹ ಕಾರ್ಡ್ಗಳ ಮೂಲಕ ಜನರ ಆಹಾರದ ಹಕ್ಕನ್ನು ಈಡೇರಿಸುವ ಪ್ರಯತ್ನ ಮಾಡಿದೆ. ವಾರ್ಷಿಕ ಆದಾಯ 15,000 ರೂ.ಗಿಂತ ಕಡಿಮೆ ಇರುವ ಕುಟುಂಬಗಳು, ಕೊಳೆಗೇರಿಗಳ ನಿವಾಸಿಗಳು, ಬೀದಿ ವ್ಯಾಪಾರಿಗಳು, ಚಿಂದಿ ಆಯುವವರನ್ನು ಗುರುತಿಸಿ ಅಂತ್ಯೋದಯದ ಮೂಲಕ ಉಚಿತ ಅಕ್ಕಿಯನ್ನು ವಿತರಿಸುವ ಕೆಲಸವನ್ನು ಸರಕಾರ ಮಾಡುತ್ತಾ ಬಂದಿದೆ. ನೂತನ ಸರಕಾರ ಗ್ಯಾರಂಟಿಗಳನ್ನು ಜಾರಿಗೊಳಿಸಿದ ದಿನದಿಂದ ಈ ಬಿಪಿಎಲ್ ಕಾರ್ಡ್ಗಳು ಇನ್ನಷ್ಟು ಮಹತ್ವವನ್ನು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಸರಕಾರ ಈ ಗ್ಯಾರಂಟಿಗಳನ್ನು ಕೇವಲ ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರ ಅನ್ವಯಿಸಿದರೂ ಅಚ್ಚರಿಯೇನೂ ಇಲ್ಲ. ಏಕಾಏಕಿ ಸರಕಾರ ಬಿಪಿಎಲ್ ಕಾರ್ಡ್ಗಳ ಅರ್ಹತೆಯ ಬಗ್ಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿರುವುದು ನೋಡಿದರೆ, ಗ್ಯಾರಂಟಿ ಯೋಜನೆಗಳು ಸರಕಾರಕ್ಕೆ ತೀರಾ ಹೊರೆಯಾದರೆ, ಅದನ್ನು ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರ ಎಂದು ಘೋಷಿಸುವ ಸಾಧ್ಯತೆಗಳಿವೆ. ಸರಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ರೂಪಿಸಿದ ಯೋಜನೆಗಳು ಯಶಸ್ವಿಯಾಗಬೇಕಾದರೆ, ಬಿಪಿಎಲ್ ಕಾರ್ಡ್ಗಳು ಅನರ್ಹರ ಕೈಗೆ ಹೋಗದಂತೆಯೂ ಜಾಗರೂಕತೆಯನ್ನು ವಹಿಸಬೇಕು. ಈ ನಿಟ್ಟಿನಲ್ಲಿ ಸರಕಾರ ತೆಗೆದುಕೊಂಡ ಕ್ರಮ ಸ್ವಾಗತಾರ್ಹವಾಗಿದೆ.

ತನಿಖೆ ನಡೆಸಿದಾಗ 4,034 ಸರಕಾರಿ ನೌಕರರು ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಇವುಗಳಲ್ಲಿ 2,964 ಕಾರ್ಡ್ಗಳನ್ನು ರದ್ದು ಪಡಿಸಲಾಗಿದ್ದು, 1,070 ಕಾರ್ಡ್ಗಳು ಪರಿಶೀಲನೆಯಲ್ಲಿವೆ. ಇದರಂತೆಯೇ, ಶ್ರೀಮಂತವರ್ಗವೇ ಬಡವರ ಬಿಪಿಎಲ್ ಕಾರ್ಡ್ಗಳನ್ನು ಅನಧಿಕೃತವಾಗಿ ಹೊಂದಿರುವುದು ಕೆಲವೆಡೆಗೆ ಕಂಡು ಬಂದಿವೆ. ಬಡವರ ಹೆಸರಿನಲ್ಲಿ ಅನರ್ಹರು ಬಿಪಿಎಲ್ ಸೌಲಭ್ಯಗಳನ್ನು ತಮ್ಮದಾಗಿಸಿಕೊಳ್ಳುವುದು ಒಂದೆಡೆಯಾದರೆ, ನಕಲಿ ದಾಖಲೆಗಳನ್ನು ಬಳಸಿಕೊಂಡು ಕಾರ್ಡ್ಗಳನ್ನು ಹೊಂದಿದವರೂ ಇದ್ದಾರೆ. ಅನರ್ಹರಿಂದಾಗಿ ಅರ್ಹರು ಬಿಪಿಎಲ್ ವಂಚಿತರಾದ ಉದಾಹರಣೆಗಳಿವೆ. ತಲುಪಬೇಕಾದ ಅರ್ಹರಿಗೆ ಪಡಿತರ ತಲುಪದೆ ಅವರು ಅಪೌಷ್ಟಿಕತೆಯಿಂದ ನರಳುತ್ತಿದ್ದರೆ, ಇತ್ತ ಮಧ್ಯಮ ವರ್ಗದ ಜನರು ತಮಗೆ ಬಿಪಿಎಲ್ನಿಂದ ಸಿಕ್ಕಿದ ಪಡಿತರವನ್ನು ಮಾರಾಟ ಮಾಡಿ ಹಣ ಮಾಡುವುದಿದೆ. ಈ ಹಿನ್ನೆಲೆಯಲ್ಲಿ ಅನರ್ಹರನ್ನು ಗುರುತಿಸಿ ಅವರ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸದೇ ಇದ್ದರೆ, ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಕಷ್ಟವಾಗಬಹುದು. ಸರಕಾರದ ಪಡಿತರ ಅನರ್ಹರ ಜೋಳಿಗೆಯನ್ನು ಸೇರಿ, ಯೋಜನೆಗಳ ಉದ್ದೇಶವೇ ಅರ್ಥಕಳೆದುಕೊಳ್ಳಬಹುದು. ಆದರೆ ಕಳೆದ ನಾಲ್ಕು ದಶಕಗಳಿಂದ ಬಿಪಿಎಲ್ ಹೇಗೆ ಹಂತ ಹಂತವಾಗಿ ಬಡವರನ್ನು ಕಡೆಗಣಿಸುತ್ತಾ ಬಂದಿದೆ ಎನ್ನುವ ಅಂಶವನ್ನೂ ಈ ಸಂದರ್ಭದಲ್ಲಿ ಸರಕಾರ ಮರೆಯಬಾರದು. ಬಿಪಿಎಲ್ ಎನ್ನುವುದು ಬಡತನ ರೇಖೆಗಿಂತ ಕೆಳಗಿರುವವರಿಗಾಗಿ ರೂಪಿಸಿದ ಪಡಿತರ ಚೀಟಿ. ಅಂದರೆ ಬದುಕಲು ಬೇಕಾದ ಕನಿಷ್ಠ ಪಡಿತರವನ್ನು ಹೊಂದುವುದಕ್ಕೂ ಶಕ್ತಿಯಿಲ್ಲದವರನ್ನು ಇದು ಗುರುತಿಸುತ್ತದೆ. ಇದೇ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ಗಳಿಲ್ಲದ ಎಪಿಎಲ್ ಕಾರ್ಡ್ಗಳನ್ನು ಹೊಂದಿರುವ ಲಕ್ಷಾಂತರ ಬಡವರು ಈ ರಾಜ್ಯದಲ್ಲಿದ್ದಾರೆ ಎನ್ನುವುದನ್ನೂ ಗಮನಿಸಬೇಕಾಗಿದೆ. ಬಿಪಿಎಲ್ ಕಾರ್ಡ್ನಿಂದ ಬೇರೆ ಬೇರೆ ಕಾರಣಗಳನ್ನು ಮುಂದು ಮಾಡಿ ಲಕ್ಷಾಂತರ ಜನರನ್ನು ಸರಕಾರ ಅಳಿಸುತ್ತಾ ಬಂದಿದೆ. ಅಂದರೆ, ಅವರೆಲ್ಲರೂ ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ಇದರ ಅರ್ಥವಲ್ಲ. ಬದಲಿಗೆ ಬಿಪಿಎಲ್ಗೆ ಬೇಕಾದ ಆದಾಯದ ಮಾನದಂಡವನ್ನು ಸರಕಾರ ಬದಲಿಸುತ್ತಾ ಬಂತು. ಕೇಂದ್ರ ಸರಕಾರದ ಪ್ರಕಾರ ನಗರ ಪ್ರದೇಶದಲ್ಲಿ ದಿನಕ್ಕೆ 32 ರೂಪಾಯಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 28 ರೂಪಾಯಿ ಆದಾಯ ಹೊಂದಿದಾತ ಕಡು ಬಡವ. ಈತ ಬಿಪಿಎಲ್ ಕಾರ್ಡ್ಗಳನ್ನು ಹೊಂದಲು ಅರ್ಹ ಎನ್ನುತ್ತದೆ ತೆಂಡುಲ್ಕರ್ ವರದಿ. ಇದರ ವಿರುದ್ಧ ತೀವ್ರ ಟೀಕೆ ವ್ಯಕ್ತವಾದ ಬಳಿಕ ರಂಗರಾಜನ್ ವರದಿಯು, ನಗರ ಪ್ರದೇಶದ ವ್ಯಕ್ತಿ 47 ರೂಪಾಯಿ ಮತ್ತು ಗ್ರಾಮೀಣ ಪ್ರದೇಶದ ವ್ಯಕ್ತಿ 32 ರೂಪಾಯಿ ಹೊಂದಿದ್ದರೆ ಆತ ಕಡು ಬಡವ ಮತ್ತು ಬಿಪಿಎಲ್ ಕಾರ್ಡ್ ಹೊಂದಲು ಅರ್ಹ ಎಂದಿತು. ಇದರ ಆಧಾರದಲ್ಲಿ ಮಾಡಿದ ಸಮೀಕ್ಷೆಗಳು, ಭಾರತದಲ್ಲಿ ಬಡತನ ಇಳಿಮುಖವಾಗುತ್ತಿದೆ ಎಂದು ಹೇಳುತ್ತಾ ಬರುತ್ತಿವೆ. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಲು ಬೇರೆ ಬೇರೆ ಮಾನದಂಡಗಳು ಇದೆಯಾದರೂ, ಈ ಮಾನದಂಡಗಳು ಒಡ್ಡುವ ತಾಂತ್ರಿಕ ಸಮಸ್ಯೆಗಳ ಕಾರಣದಿಂದಲೇ ಸಹಸ್ರಾರು ಬಡವರು ಬಿಪಿಎಲ್ ಕಾರ್ಡ್ಗಳ ಹೊರಗಿದ್ದಾರೆ. ಸರಕಾರ ರೂಪಿಸುವ ಹಲವು ಯೋಜನೆಗಳು ಈ ಕಾರ್ಡ್ನ ದೆಸೆಯಿಂದಾಗಿ ಎಲ್ಲ ಬಡವರನ್ನು ತಲುಪುವುದಕ್ಕೆ ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಈ ನಾಡಿನಲ್ಲಿ ದೊಡ್ಡ ಸಂಖ್ಯೆಯ ಬಡವರನ್ನು ಸರಕಾರದ ಮಾನದಂಡಗಳೇ ಶ್ರೀಮಂತರೆಂದು ಹೇಳುತ್ತಿವೆ. ಆದರೆ ಮೂಲಭೂತ ಅಗತ್ಯಗಳನ್ನು ಈಡೇರಿಸಿಕೊಳ್ಳುವುದಕ್ಕೆ ಇವರು ದಿನನಿತ್ಯ ಹೆಣಗಾಡುತ್ತಿದ್ದಾರೆ. ಸರಕಾರ ಇದೀಗ ಅನರ್ಹರು ಎಂದು ಗುರುತಿಸಿದವರಲ್ಲಿ ಅಂತಹ ಲಕ್ಷಾಂತರ ಬಡವರೂ ಇರುವ ಸಾಧ್ಯತೆಗಳಿವೆ.

ಒಂದೆಡೆ ದೇಶದಲ್ಲಿ ಬಡವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ ವಿಶ್ವಸಂಸ್ಥೆಯ ಇತ್ತೀಚಿನ ವರದಿಯು ಭಾರತದಲ್ಲಿ 23.4 ಕೋಟಿ ಕಡುಬಡವರಿದ್ದಾರೆ ಎಂದು ಹೇಳಿದೆ. ವಿಶ್ವದಲ್ಲೇ ಅತಿ ಹೆಚ್ಚು ಕಡು ಬಡವರಿರುವ ದೇಶ ಭಾರತ ಎಂದು ಗುರುತಿಸಲ್ಪಟ್ಟಿದೆ. ಪಾಕಿಸ್ತಾನ, ಇಥಿಯೋಪಿಯಾ, ನೈಜೀರಿಯಾ, ಕಾಂಗೋದಂತಹ ದೇಶಗಳ ಜೊತೆಗೆ ಭಾರತ ಗುರುತಿಸಲ್ಪಡುತ್ತಿದೆ ಎನ್ನುವುದೇ ದೇಶಕ್ಕೆ ಬಹುದೊಡ್ಡ ಅವಮಾನವಾಗಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಹಸಿವಿನ ಸೂಚ್ಯಂಕ ಕಳವಳಕಾರಿಯಾಗಿದೆ ಎಂದು ವರದಿ ಹೇಳುತ್ತಿದೆ. ಅಪೌಷ್ಟಿಕತೆ ಮತ್ತು ಅದನ್ನು ಆಧಾರಿಸಿದ ಕಾಯಿಲೆಗಳು ದೇಶದಲ್ಲಿ ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ಗಳನ್ನು ರದ್ದು ಪಡಿಸುವುದು ಸರಿಯೇ ಆಗಿದೆ. ಆದರೆ ಮಾನದಂಡಗಳನ್ನೇ ಮುಂದಿಟ್ಟುಕೊಂಡು ನಿಜಕ್ಕೂ ಅರ್ಹರಾಗಿರುವ ಬಡವರ ಕೈಯಿಂದ ಬಿಪಿಎಲ್ ಕಾರ್ಡ್ಗಳನ್ನು ಕಿತ್ತುಕೊಳ್ಳಲು ಮುಂದಾಗುವುದು ಕ್ರೌರ್ಯವೇ ಸರಿ. ಆದುದರಿಂದ, ಬಿಪಿಎಲ್ ಕಾರ್ಡ್ಗಳಲ್ಲಿ ಅನರ್ಹರನ್ನು ಗುರುತಿಸುವ ಆತುರದಲ್ಲಿ ಅರ್ಹ ಬಡವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಸರಕಾರದ ಹೊಣೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News