ಶೀಘ್ರದಲ್ಲೇ ಮಿತ್ರಪಕ್ಷಗಳ ಜತೆ ಸ್ಥಾನ ಹೊಂದಾಣಿಕೆ ಮಾತುಕತೆ: ಕಾಂಗ್ರೆಸ್

Update: 2024-01-05 02:36 GMT

ಹೊಸದಿಲ್ಲಿ: ಬಹುನಿರೀಕ್ಷಿತ ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲಯನ್ಸ್ (ಇಂಡಿಯಾ) ಮೈತ್ರಿಕೂಟದ ಪಾಲುದಾರ ಪಕ್ಷಗಳ ಜತೆ ಸ್ಥಾನ ಹೊಂದಾಣಿಕೆ ಮಾತುಕತೆಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷ ಪ್ರಕಟಿಸಿದೆ. ಮಿತ್ರಪಕ್ಷಗಳು ಸಿದ್ಧವಿರುವ ಎಲ್ಲ ಕಡೆಗಳಲ್ಲಿ ಪ್ರಥಮ ಆದ್ಯತೆಯಾಗಿ ಈ ವಿಷಯವನ್ನು ಪರಿಗಣಿಸಿ ಮಾತುಕತೆ ನಡೆಸಲಾಗುವುದು ಎಂದು ಪಕ್ಷ ಹೇಳಿದೆ.

ಆಯಾ ಪ್ರಾಂತ್ಯದಲ್ಲಿ ಮಿತ್ರಪಕ್ಷಗಳ ಸ್ಥಿತಿಯನ್ನು ಆಧರಿಸಿ ರಾಜ್ಯವಾರು ಸ್ಥಾನ ಹೊಂದಾಣಿಕೆ ಮಾತುಕತೆ ನಡೆಸಲಾಗುತ್ತದೆ ಎಂದು ಐದು ಮಂದಿಯ ಇಂಡಿಯಾ ಮೈತ್ರಿಕೂಟದ ತಂಡದ ನೇತೃತ್ವ ವಹಿಸಿರುವ ಮುಕುಲ್ ವಾಸ್ನಿಕ್ ಹೇಳಿದ್ದಾರೆ.

"ನಾವು ತಕ್ಷಣವೇ ಸೀಟು ಹಂಚಿಕೆ ಮಾತುಕತೆಯನ್ನು ನಡೆಸಬೇಕು ಎಂಬ ಅರಿವು ನಮಗಿದೆ. ಈ ವಿಚಾರದಲ್ಲಿ ಯಾವುದೇ ವಿಳಂಬ ಆಗುವುದಿಲ್ಲ. ಇತರ ಪಕ್ಷಗಳು ಸಿದ್ಧವಾದ ತಕ್ಷಣ, ಅವರ ಅನುಕೂಲದ ಸಮಯದಲ್ಲಿ ಅವರೊಂದಿಗೆ ಮಾತುಕತೆ ನಡೆಸಲಿದ್ದೇವೆ. ಆಯಾ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳ ಸ್ಥಿತಿ ಬೇರೆ ಬೇರೆ ಸ್ವರೂಪದ್ದಾಗಿರುವುದರಿಂದ ಆಯಾ ರಾಜ್ಯವಾರು ಮಾತುಕತೆಗಳು ನಡೆಯಬೇಕಾಗುತ್ತವೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪಂಜಾಬ್ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಳ್ಳುವುದು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ಸ್ಥಾನ ಹೊಂದಾಣಿಕೆ ಮಾತುಕತೆಯನ್ನು ಆರಂಭಿಸಬೇಕಾದ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಈ ಎರಡು ರಾಜ್ಯಗಳಲ್ಲಿ ಕ್ರಮವಾಗಿ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಜತೆ ಮಾತುಕತೆ ನಡೆಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News