ಶಿವಮೊಗ್ಗ: ಜಿಲ್ಲಾ ಪಂಚಾಯತ್ ಸಿಇಒ ರನ್ನು ಬಂಧಿಸುವಂತೆ ವಿಶೇಷ ನ್ಯಾಯಾಲಯ ಆದೇಶ

Update: 2024-01-06 17:58 GMT

ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಅಬ್ಬಲಗೆರೆಯಲ್ಲಿರುವ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಿಇಒ ರನ್ನು ಬಂಧಿಸುವಂತೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಫೆಬ್ರವರಿ 16 ರಂದು ಜಿಪಂ ಸಿಇಒ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿ ವರದಿಯನ್ನು ತಪ್ಪದೇ ಸಲ್ಲಿಸಬೇಕು. ಹಾಜರಾಗಲು 25,000 ರೂ. ಮುಚ್ಚಳಿಕೆ ಬರೆದುಕೊಟ್ಟರೆ ಅವರನ್ನು ಬಿಡುಗಡೆ ಮಾಡಬಹುದು ಹಾಗೂ ವಾರಂಟ್ ಹಿಂದಿರುಗಿಸಬಹುದು ಎಂದು ಆದೇಶದಲ್ಲಿ ನಿರ್ದೇಶಿಸಲಾಗಿದೆ.

ಏನಿದು ಪ್ರಕರಣ?

ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮದಲ್ಲಿರುವ ಮುದ್ದಣ್ಣನ ಕೆರೆಯಿಂದ 500 ಲೋಡು ಮಣ್ಣು ತೆಗೆಯಲು ಅನುಮತಿ ಪಡೆಯಲಾಗಿತ್ತು. ಆದರೆ ಕಾನೂನು ಬಾಹಿರವಾಗಿ 15,004 ಲೋಡ್ ಮಣ್ಣು ತೆಗೆದು ಅಕ್ರಮವಾಗಿ ಸಾಗಿಸಲಾಗಿದೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ 71.45 ಲಕ್ಷ ರೂ. ನಷ್ಟ ಉಂಟು ಮಾಡಲಾಗಿದೆ ಎಂದು ಕಾರ್ಯ ಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಲಾಖೆ ಶಿವಮೊಗ್ಗ ಇವರು ಸ್ಥಳ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು.

ಈ ಸಂಬಂಧ ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡಿತ್ತು. ದಿನಪತ್ರಿಕೆಯೊಂದರ ವರದಿ ಆಧರಿಸಿ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರು ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ 2011ರ ಕಲಂ 09ರ ಅಡಿ ವಿಶೇಷ ನ್ಯಾಯಾಲಯ ಸ್ವಯಂ ಪ್ರೇರಿತ ಪ್ರಕರಣ ಕೈಗೊಳ್ಳಬಹುದಾಗಿದೆ ಎಂದು 2023ರ ಆಗಸ್ಟ್‌ 19 ರಂದು ವಿಷಯ ಮಂಡಿಸಿದ್ದರು.

ನಂತರ ಅ. 09 ರಂದು ನ್ಯಾಯಾಲಯ ಆದೇಶ ಹೊರಡಿಸಿ, ನ. 24 ರಂದು ವಿವರವಾದ ವರದಿ ಸಲ್ಲಿಸುವಂತೆ ಜಿಪಂ ಸಿಇಒ ಅವರಿಗೆ ಸೂಚನೆ ನೀಡಿತ್ತು. ನ್ಯಾಯಾಲಯಕ್ಕೆ ಸಿಇಒ ಹಾಜರಾಗದ ಹಿನ್ನೆಲೆಯಲ್ಲಿ ಬಂಧನದ ಆದೇಶ ಹೊರಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News