ಸಂಸದ ಬಿ.ವೈ ರಾಘವೇಂದ್ರ ನಿವಾಸಕ್ಕೆ ಮುತ್ತಿಗೆಗೆ ಯತ್ನ: 50ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ

Update: 2024-02-07 07:49 GMT

ಶಿವಮೊಗ್ಗ: ಕೇಂದ್ರ ಬಿಜೆಪಿ ಸರಕಾರದಿಂದ ಕರ್ನಾಟಕ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಆಗುತ್ತಿರುವ ಮಲತಾಯಿ ಧೋರಣೆ ಖಂಡಿಸಿ ಇಂದು ಯುವ ಕಾಂಗ್ರೆಸ್ ವತಿಯಿಂದ ಸಂಸದ ಬಿ.ವೈ ರಾಘವೇಂದ್ರ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ 50ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಇಂದು ದಿಲ್ಲಿಯ ಜಂತರ್ ಮಂತರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,‌ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ʼನಮ್ಮ ತೆರಿಗೆ ನಮ್ಮ ಹಕ್ಕು ದಿಲ್ಲಿ ಚಲೋʼ  ಬೆಂಬಲಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶಿವಮೊಗ್ಗ ನಗರದ ವಿನೋಬ ನಗರದಲ್ಲಿರುವ ಸಂಸದ ಬಿ.ವೈ ರಾಘವೇಂದ್ರ ಅವರ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದರು.

ಕೇಂದ್ರ ಬಿಜೆಪಿ ಸರಕಾರವು 2017 - 18 ರಿಂದ ಇಲ್ಲಿಯವರೆಗೆ ಕರ್ನಾಟಕ ರಾಜ್ಯಕ್ಕೆ ಜಿಎಸ್‌ಟಿಯ ಪರಿಹಾರದ ನಿಧಿಯಾದ 1,87,000 ಕೋಟಿಗೊಳಷ್ಟು ಹಣವನ್ನು ನೀಡದೆ ಅನ್ಯಾಯ ಮಾಡಿದೆ. ಈ ವರ್ಷ ಇಡೀ ದೇಶದಲ್ಲಿ ಅತಿ ಹೆಚ್ಚು ಜಿಎಸ್‌ಟಿ ಅನ್ನು ಕಟ್ಟುವ ರಾಜ್ಯ ಎಂದರೆ ಅದು ಕರ್ನಾಟಕ.  ರಾಜ್ಯದಿಂದ ಗೆದ್ದು ಹೋದ ಬಿಜೆಪಿಯ 25 ಸಂಸದರು ಸಂಸತ್ ನಲ್ಲಿ ತುಟಿ ಬಿಚ್ಚದೆ ರಾಜ್ಯಕ್ಕೆ ಬರಬೇಕಾದ ಪರಿಹಾರ ಹಾಗೂ ರೈತರ ಬರ ಪರಿಹಾರ, ಸೇರಿದಂತೆ ರಾಜ್ಯಕ್ಕೆ ಬರಬೇಕಾದ ಹಲವಾರು ಯೋಜನೆಗಳ ಪಾಲನ್ನು ಕೇಳದೆ ಅಸಮರ್ಥರಾಗಿದ್ದಾರೆ. ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೊಡಿಸಬೇಕೆಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.

ಪ್ರತಿಭಟನೆ ವೇಳೆ ಪೊಲೀಸರಿಗೂ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆ ಪ್ರಜಾಪ್ರಭುತ್ವದ ಹಕ್ಕು ಎಂದು ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶವನ್ನು ವ್ಯಕ್ತಪಡಿಸಿದರು. ನಂತರ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.

ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್, ಯುವ ಕಾಂಗ್ರೆಸ್ ಅಧ್ಯಕ್ಷ ಎಚ್ ಪಿ ಗಿರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ , ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್, ಎಸ್ ಕುಮಾರೇಶ್ ,ಪ್ರಮುಖರಾದ ಎಚ್ ಪಾಲಾಕ್ಷಿ, ಎಂ . ರಾಹುಲ್,ಸಂದೀಪ್ ಸುಂದರ್ ರಾಜ್ , ,ಎಂ. ರಾಕೇಶ್, ಸುಹಾಸ್ ಗೌಡ, ಎನ್.ಎಸ್ ಆನಂದ್, ನದೀಮ್ ಮದರಿ ಪಾಳ್ಯ ಮುಕ್ಬಲ್ ಸೋಮಿನಕೊಪ್ಪ, ಚಂದ್ರಶೇಖರ್, ,ಪ್ರಶಾಂತ್ ರಾಯ್ , ಗೋಪಿ, ರಾಯಿಲ್, ಪ್ರಶಾಂತ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News