ಖರ್ಗೆ ಕುರಿತು ಅವಹೇಳನಕಾರಿ ಹೇಳಿಕೆ: ಆರಗ ಜ್ಞಾನೇಂದ್ರ ವಿರುದ್ಧ ತೀರ್ಥಹಳ್ಳಿ ಠಾಣೆಯಲ್ಲಿ ದೂರು

Update: 2023-08-03 09:57 GMT

ಶಿವಮೊಗ್ಗ, ಆ.3: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮೈ ಬಣ್ಣಕ್ಕೆ ಸಂಬಂಧಿಸಿ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದಲಿತ ಮುಖಂಡರೊಬ್ಬರು ದೂರು ನೀಡಿದ್ದಾರೆ.

ದಲಿತ ಮುಖಂಡ ಪಡುವಳ್ಳಿ ಹರ್ಷೇಂದ್ರ ಕುಮಾರ್ ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ.

ರಾಷ್ಟ್ರೀಯ ಪಕ್ಷವೊಂದರ ನಾಯಕರ ಮೈಬಣ್ಣದ ಬಗ್ಗೆ ಕೀಳಾಗಿ ಮಾತನಾಡಿದ ಜ್ಞಾನೇಂದ್ರರ ಹೇಳಿಕೆಯಿಂದ ನನ್ನ ಮನಸ್ಸಿಗೆ ನೋವಾಗಿದೆ. ನನ್ನ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಪರಿಶಿಷ್ಠ ಜಾತಿ ದೌರ್ಜನ್ಯ ಕಾಯ್ದೆಯನ್ವಯ ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ ಮಾಡಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಕೂಡಲೇ ಶಾಸಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಏನಿದು ಪ್ರಕರಣ?

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಆಗಸ್ಟ್ 2ರಂದು ತೀರ್ಥಹಳ್ಳಿಯಲ್ಲಿ ಬಿಜೆಪಿ ಶಾಸಕ, ಮಾಜಿ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ ಮಾತನಾಡಿರುವ ಆರಗ ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ವಾಗ್ದಾಳಿ ನಡೆಸಿ, ಕಾಡಿನ ಬಗ್ಗೆ ಸರಿಯಾಗಿ ಅರಿವೇ ಇಲ್ಲದ ಬೀದರ್ ಜಿಲ್ಲೆಯವರು ಅರಣ್ಯ ಸಚಿವರಾಗಿದ್ದಾರೆ. ಇದು ನಮ್ಮ ರಾಜ್ಯದ ದುರಂತ ಎಂದಿದ್ದಾರೆ. ಬೀದರ್ ಜಿಲ್ಲೆಯ ಈಶ್ವರ್ ಖಂಡ್ರೆ ಅರಣ್ಯ ಸಚಿವರಾಗಿರುವುದಕ್ಕೆ ಈ ಹೇಳಿಕೆ ನೀಡಿದ ಮಾಜಿ ಗೃಹ ಸಚಿವರು ಅಷ್ಟಕ್ಕೇ ಸುಮ್ಮನಾಗಿಲ್ಲ. ಆ ಭಾಗದವರು ಸುಟ್ಟು ಕರಕಲಾದಂತೆ ಇರುತ್ತಾರೆ. ನಮ್ಮ ಖರ್ಗೆಯವರನ್ನು ನೋಡಿದರೆ ಗೊತ್ತಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಆರಗ ಜ್ಞಾನೇಂದ್ರ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News