ಹರ್ಷ ಕೊಲೆ ಪ್ರಕರಣ | ಕೇಂದ್ರ ಗೃಹ ಸಚಿವಾಲಯದ ನಿರ್ಧಾರವನ್ನು ಎತ್ತಿಹಿಡಿದ ಹೈಕೋರ್ಟ್

Update: 2024-10-01 15:19 GMT

ಶಿವಮೊಗ್ಗ: ಬಜರಂಗಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸುವ ಕೇಂದ್ರ ಗೃಹ ಸಚಿವಾಲಯದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.

ಫೆಬ್ರವರಿ 20, 2022ರಂದು ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ನಡೆದಿತ್ತು. ಈ ಸಂಬಂಧ ಕೊಲೆ ಪ್ರಕರಣದ ಆರೋಪಿಯೊಬ್ಬ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಎನ್‌ಐಎಗೆ ಪ್ರಕರಣವನ್ನು ವರ್ಗಾಯಿಸಿದ್ದ ನಿರ್ಧಾರವನ್ನು ಪ್ರಶ್ನಿಸಿದ್ದ. ಈ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.

ಪ್ರಕರಣದಲ್ಲಿ ಅರ್ಜಿದಾರರು, ಪ್ರಕರಣವನ್ನು ಎನ್‌ಐಎಗೆ ವಹಿಸಲು ಅನುಮತಿ ಪಡೆದಿಲ್ಲ ಎಂದು ವಾದಿಸಿದ್ದರು. ಈ ಸಂಬಂಧ ಅರ್ಜಿದಾರರ ಪರ ವಕೀಲರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ನಂತರ ಪ್ರಕರಣ ಎನ್‌ಐಎಗೆ ವಹಿಸಿದಾಗ ಯುಎಪಿಎ ಕಲಂಗಳನ್ನು ಸೇರಿಸಲಾಗಿದೆ. ಆದರೆ, ಅದಕ್ಕೆ ಈ ಸಂಬಂಧ ಕೋರ್ಟ್ ಅನುಮತಿ ಪಡೆದಿರಲಿಲ್ಲ. ಮೇಲಾಗಿ ಯುಎಪಿಎ ರೀತಿಯ ಗಂಭೀರ ಕಾಯ್ದೆ ಹೇರಲು ಯಾವುದೇ ಆಧಾರವಿರಲಿಲ್ಲ ಎಂದು ವಾದಿಸಿದ್ದರು.

ಇನ್ನೂ ಈ ಕುರಿತಾಗಿ ಕೇಂದ್ರ ಸರಕಾರದ ಪರವಾಗಿ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ವಾದ ಮಂಡಿಸಿದ್ದರು. ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಕೊಲೆ ಮಾಡಲಾಗಿದೆ. ಮೃತನು ಸಂಘಪರಿವಾರದ ಸಕ್ರಿಯ ಕಾರ್ಯಕರ್ತನಾಗಿದ್ದನು. ಎಲ್ಲ ಸಾಕ್ಷಿಗಳ ಆಧರಿಸಿಯೇ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಲಾಗಿದೆ. ಅದರಲ್ಲಿ ಯಾವುದೇ ಲೋಪವಿಲ್ಲ ಎಂದು ವಾದಿಸಿದ್ದರು.

ಎರಡು ಕಡೆಯ ವಾದವನ್ನು ಆಲಿಸಿದ ಹೈಕೋರ್ಟ್ ಪ್ರಕರಣದ ಎಲ್ಲ ಅಂಶಗಳನ್ನು ಪರಿಶೀಲಿಸಿದ ನಂತರವಷ್ಟೇ ತನಿಖೆಯ ಹೊಣೆಯನ್ನು ಎನ್‌ಐಎಗೆ ವಹಿಸಲಾಗಿದೆ. ಏನೂ ಆಧಾರವಿಲ್ಲದೆ ತನಿಖೆ ವರ್ಗಾವಣೆ ಮಾಡಲಾಗಿದೆ ಎಂಬ ವಾದವನ್ನು ಒಪ್ಪಲಾಗದು ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News