ಒತ್ತುವರಿ ತೆರವಿಗೆ ಅರಣ್ಯ ಇಲಾಖೆಯಿಂದ ನೋಟಿಸ್: ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ರೈತರಲ್ಲಿ ಆತಂಕ
-ಶರತ್ ಪುರದಾಳ
ಶಿವಮೊಗ್ಗ: ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿದವರ ವಿರುದ್ಧ ಅರಣ್ಯ ಇಲಾಖೆ ಅಧಿಸೂಚನೆ ಹೊರಡಿಸಿ, ರೈತರಿಗೆ ನೋಟಿಸ್ ನೀಡುತ್ತಿದ್ದು, ಇದು ಒತ್ತುವರಿದಾರರ ನಿದ್ದೆಗೆಡಿಸಿದೆ.
ಅನುಪಿನಕಟ್ಟೆ ವನ್ಯಜೀವಿ ವಲಯ ವ್ಯಾಪ್ತಿಯ ಹನುಮಂತಾಪುರ ಸ.ನಂ.7ರಲ್ಲಿ ಸೆ.25ರಂದು ಒತ್ತುವರಿ ತೆರವಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದ್ದು, ಇಲಾಖೆಯ ಈ ನೋಟಿಸ್ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ದಶಕಗಳಿಂದ ಸಾಗುವಳಿ ಮಾಡುತ್ತಾ ಜೀವನ ಕಟ್ಟಿಕೊಂಡಿರುವ ರೈತರಿಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.
ಪುರದಾಳು ಗ್ರಾಪಂ ವ್ಯಾಪ್ತಿಯ ಹನುಮಂತಾಪುರ ಸಂ.ನಂ 7ರಲ್ಲಿ ರೈತ ಗಣಪತಿ ಬಿನ್ ಬಿಳಿಯನಾಯ್ಕ ಎನ್ನುವವರಿಗೆ ನೀವು ಒತ್ತುವರಿ ಮಾಡಿರುವ 3 ಎಕರೆ ಅರಣ್ಯ ಭೂಮಿಯನ್ನು ನೋಟಿಸ್ ತಲುಪಿದ 30 ದಿನಗಳಲ್ಲಿ ತೆರವು ಮಾಡಬೇಕೆಂದು ಶಿವಮೊಗ್ಗ ವನ್ಯಜೀವಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಿಂದ ನೋಟಿಸ್ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಒತ್ತುವರಿ ತೆರವು ಮಾಡದಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಂಡು ತೆರವು ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?:
ಮೂಲತಃ ಶರಾವತಿ ಮುಳಗಡೆ ಸಂತ್ರಸ್ತರಾದ ಗಣಪತಿ ಬಿನ್ ಬಿಳಿಯನಾಯ್ಕ ಅವರ ಕುಟುಂಬ ಕಳೆದ 50 ವರ್ಷಗಳಿಂದ ಹನುಮಂತಾಪುರ ಗ್ರಾಮದ ಸರ್ವೇ 7ರಲ್ಲಿ ಜೀವನೋಪಾಯಕ್ಕಾಗಿ ಸಾಗುವಳಿ ಮಾಡಿಕೊಂಡು ಬಂದಿತ್ತು. ಈ ಭೂಮಿ ಅನುಪಿನಕಟ್ಟೆ ಕಿರು ಅರಣ್ಯ ವ್ಯಾಪ್ತಿಯಲ್ಲಿದೆ ಎಂದು 1998ರ ಸೆ.2 ರಂದು ಮೊಕದ್ದಮೆ ದಾಖಲಿಸಲಾಗಿತ್ತು. ರೈತರ ಪರ ವಕೀಲರು ಸಾಗುವಳಿ ಭೂಮಿ ಅರಣ್ಯ ಪ್ರದೇಶವಲ್ಲ ಎಂದು ವಾದ ಮಾಡಿದ್ದರು. ಆದರೆ ಅರಣ್ಯ ಇಲಾಖೆ ಸಾಗುವಳಿ ಭೂಮಿ ಅರಣ್ಯ ಎಂದು ಪ್ರತಿಪಾದಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ನ್ಯಾಯಾಲಯ ಎ.17, 2003ರಲ್ಲಿ ಆದೇಶ ನೀಡಿ ಮೂರು ಎಕರೆ ಭೂಮಿಯನ್ನು ತೆರವು ಮಾಡಲು ಆದೇಶ ನೀಡಿತ್ತು. ಸುಮಾರು 20 ವರ್ಷಗಳ ಹಿಂದೆ ಆಗಿರುವ ಆದೇಶವನ್ನು ಮುಂದಿಟ್ಟುಕೊಂಡು ಅರಣ್ಯ ಇಲಾಖೆ ಈಗ ನೋಟಿಸ್ ನೀಡಿದೆ.
ಸರಕಾರದ ಸುತ್ತೋಲೆಗೆ ಬೆಲೆ ಇಲ್ಲವೇ?:
ಬಡವರಿಗೆ ಭೂಮಿ ಕೊಟ್ಟಿದ್ದೇ ನಮ್ಮ ಪಕ್ಷದ ಸರಕಾರಗಳು ಎಂದು ಹೇಳುವ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದರೂ ರಾಜ್ಯದ ರೈತರಲ್ಲಿ ಒಂದು ರೀತಿಯ ಗೊಂದಲ ಮನೆ ಮಾಡಿದೆ. ಕೇರಳದ ವಯನಾಡು ಮತ್ತು ಶಿರೂರಿನಲ್ಲಿ ಆಗಿರುವ ಭೂ ಕುಸಿತಗಳನ್ನು ನೆಪವಾಗಿಟ್ಟುಕೊಂಡು ರಾಜ್ಯದಲ್ಲಿ ಒತ್ತುವರಿ ತೆರವಿಗೆ ಚಾಲನೆ ನೀಡಲಾಗಿದೆ. ವಾಣಿಜ್ಯ ಉದ್ದೇಶಕ್ಕೆ ಮಾಡಿರುವ ಅರಣ್ಯ ಒತ್ತುವರಿ ತೆರವು ಆಗಲೇಬೇಕು. ಆದರೆ ಜೀವನೋಪಾಯಕ್ಕೆ ಮಾಡಿಕೊಂಡಿರುವ ಸಣ್ಣ ಹಿಡುವಳಿದಾರರ ಮೇಲೆ ಗದಾಪ್ರಹಾರ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ತೀರ್ಪು ಬರುವ ತನಕ ತೆರವು ಮಾಡಬಾರದು. ಅದರಲ್ಲೂ ಮೂರು ಎಕರೆ ಒಳಗಿನ ಒತ್ತುವರಿ ತೆರವು ಮಾಡಬಾರದು ಎಂಬ ರಾಜ್ಯ ಸರಕಾರದ ಸುತ್ತೋಲೆ ಇದೆ. ಆದರೆ ಅದು ಅನುಷ್ಠಾನವಾಗುವುದು ಅರಣ್ಯ ಇಲಾಖೆಗೆ ಬೇಕಾಗಿಲ್ಲ. ಒಟ್ಟಿನಲ್ಲಿ ಅರಣ್ಯ ಇಲಾಖೆ ಒತ್ತುವರಿ ತೆರವಿನ ಹೆಸರಿನಲ್ಲಿ ಸಣ್ಣ ಹಿಡುವಳಿದಾರರಿಗೆ ನೋಟಿಸ್ ನೀಡುತ್ತಿದೆಯೇ ಹೊರತು ದೊಡ್ಡ ರಾಜಕಾರಣಿಗಳು, ಪ್ರಭಾವಿಗಳ ಒತ್ತುವರಿ ಭೂಮಿ ತೆರವು ಮಾಡಿದ ನಿದರ್ಶನಗಳು ಕಡಿಮೆ ಎಂಬುದು ರೈತರ ಆರೋಪವಾಗಿದೆ.
ಒತ್ತುವರಿ ತೆರವಿಗೆ ಆಕ್ರೋಶ: ಅರಣ್ಯ ಅಧಿಕಾರಿಗಳು ಸಾಗುವಳಿ ಮಾಡುತ್ತಿರುವ ಜಮೀನನ್ನು ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಜಿಲ್ಲಾದ್ಯಂತ ರೈತರು,ರೈತ ಸಂಘಟನೆಗಳು ಬೀದಿಗಿಳಿದು ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಸರಕಾರಿ ಜಮೀನಿನಲ್ಲಿ ಕಳೆದ 50-60 ವರ್ಷಗಳಿಂದ ರೈತರು ಉಳುಮೆ ಮಾಡುತ್ತ ಬಂದಿದ್ದು, ಫಾರಂ ನಂ. 50 ಮತ್ತು 53ರ ಅಡಿಯಲ್ಲಿ ಸಾಗುವಳಿ ಪತ್ರ ಮಂಜೂರಾತಿ ಪಡೆದು ಖಾತೆ ಮತ್ತು ಪಹಣಿಯನ್ನು ಪಡೆದಿರುವ ರೈತರಿಗೂ ಅರಣ್ಯಾಧಿಕಾರಿಗಳು ಜಾಗ ನಮ್ಮದು, ಜಮೀನನ್ನು ತೆರವುಗೊಳಿಸಬೇಕು ಎಂದು ನೋಟಿಸ್ ಜಾರಿ ಮಾಡುತ್ತಿರುವುದಕ್ಕೆ ಅರಣ್ಯ ಇಲಾಖೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅರಣ್ಯ ಇಲಾಖೆಯವರು ಬ್ರಿಟಿಷ್ ಮಾದರಿಯ ಆಡಳಿತದ ಮನಸ್ಥಿತಿ ಹೊಂದಿದ್ದಾರೆಂದು ರೈತ ಸಂಘಟನೆಗಳು ಆಕ್ರೋಶ ಹೊರಹಾಕುತ್ತಿವೆ.
ಶಿವಮೊಗ್ಗ ಗ್ರಾಮಾಂತರದಲ್ಲಿ ನೋಟಿಸ್
ಶಿವಮೊಗ್ಗ ಗ್ರಾಮಾಂತರದ ಆನವೇರಿ ಸುತ್ತ ಮುತ್ತಲಿನ ಗುಡುಮಗಟ್ಟೆ, ಮಲ್ಲಿಗೇನಹಳ್ಳಿ, ತಡಸ, ಇಟ್ಟಿಗೆಹಳ್ಳಿ, ಅರಸನಘಟ್ಟ ಭಾಗದ 836 ರೈತರಿಗೆ ಈಗಾಗಲೇ ಕಂದಾಯ ಇಲಾಖೆ ನೋಟಿಸ್ ಜಾರಿಗೊಳಿಸಿದೆ. ಅರಣ್ಯ ಇಲಾಖೆ ಹಂಚಿನ ಸಿದ್ದಾಪುರ, ದಾನವಾಡಿ, ಬೊಮ್ಮನಕಟ್ಟೆ, ತಡಸ, ಇಟಿಗೆಹಳ್ಳಿ, ಆನವೇರಿ ಭಾಗದಲ್ಲಿ 125 ಜನರಿಗೆ ನೋಟಿಸ್ ಜಾರಿ ಮಾಡಿದೆ.
ಆನವೇರಿ ಭಾಗದ ತಡಸ, ಗುಡುಮಗಟ್ಟೆ ಗ್ರಾಮಗಳಲ್ಲಿ ನೂರಾರು ಎಕರೆ ಒತ್ತುವರಿ ತೆರವುಗೊಳಿಸಿ ಟ್ರಂಚ್ ಹೊಡೆಯಲಾಗಿದೆ. ಇದನ್ನು ತಡೆಯಲು ರೈತರು ಮಾಡಿದ ಪ್ರಯತ್ನಗಳು ವಿಫಲವಾಗಿವೆ.
ವಿಚಾರಣೆಗೆ ಎಸಿ ನೋಟಿಸ್
ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿರುವ ಸರ್ವೇ ನಂಬರ್‌ಗಳಲ್ಲಿ ಮಂಜೂರಾತಿಯಾಗಿರುವ ರೈತರಿಗೆ ಉಪವಿಭಾಗಾಧಿಕಾರಿಗಳು ನೋಟಿಸ್ ಜಾರಿ ಮಾಡಿ ದಾಖಲೆಗಳೊಂದಿಗೆ ಕೋರ್ಟ್ ಕಲಾಪಕ್ಕೆ ಆಗಮಿಸುವಂತೆ ಸೂಚಿಸುತ್ತಿದ್ದಾರೆ.
ಶಿವಮೊಗ್ಗ ವಿಭಾಗದಲ್ಲಿ ಅದರಲ್ಲೂ ಭದ್ರಾವತಿ ತಾಲೂಕಿನಲ್ಲಿ ನೂರಾರು ಮಂದಿಗೆ ಏಕಕಾಲಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ. ಸಾಗರ ಉಪವಿಭಾಗದಲ್ಲಿ ಬೆರಳೆಣಿಕೆಯಷ್ಟು ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಭೂ ಮಾಲಕತ್ವ ಪ್ರತಿಪಾದಿಸಲು ಮುಂದಾದ ಅರಣ್ಯ ಇಲಾಖೆ
ಕೇರಳದ ವಯನಾಡ್ ಮತ್ತು ರಾಜ್ಯದ ಶಿರೂರು ಗುಡ್ಡ ಕುಸಿತದ ನಂತರ ರಾಜ್ಯ ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆಯವರು, 2015ರ ನಂತರದ ಅರಣ್ಯ ಒತ್ತುವರಿ ತೆರವು ಮಾಡುವಂತೆ ಆದೇಶಿಸಿದ್ದರು. ಆದರೆ ಈಗ 50-60 ವರ್ಷಗಳ ಹಿಂದೆ ಮಂಜೂರಾದ ಭೂಮಿಗೂ ಕಂಟಕ ಎದುರಾಗಿದೆ. ಅರಣ್ಯ ಇಲಾಖೆ ಹಲವು ಕಡೆಗಳಲ್ಲಿ ಭೂಮಾಲಕತ್ವ ಪ್ರತಿಪಾದಿಸಲು ಮುಂದಾಗಿದೆ. ಹೀಗಾಗಿ ರೈತರು ಕಾನೂನು ಸಮರ ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ನೋಟಿಫೈ ಆಗಿರುವ ಅರಣ್ಯ ಭೂಮಿ ಆರ್‌ಟಿಸಿಯಲ್ಲಿ ಇಂಡೀಕರಣವಾಗಿಲ್ಲ. ಹೀಗಾಗಿ ಹೊಸ ಸಮಸ್ಯೆ ಹುಟ್ಟಿಕೊಂಡಿದೆ ಎನ್ನಲಾಗಿದೆ.
ಫಾರಂ ನಂ 50, 53, 57 ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಸಾವಿರಾರು ಸಾಗುವಳಿದಾರರಿಗೆ ಜಿಲ್ಲೆಯಲ್ಲಿ ಭೂಮಿ ಮಂಜೂರು ಮಾಡಲಾಗಿದೆ. ಈಗ ಅರಣ್ಯ ಇಲಾಖೆ ಈ ಭೂಮಿಯನ್ನು ನಮಗೆ ಮರಳಿಸಿ ಎಂದು ಉಪವಿಭಾಗಾಧಿಕಾರಿ ಕೋರ್ಟ್ ಮೊರೆ ಹೋಗಿದೆ. ಈ ಮೂಲಕ ಅರಣ್ಯ ಇಲಾಖೆ ಭೂ ಮಾಲಕತ್ವ ಪ್ರತಿಪಾದಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ರಾಜರು-ಬ್ರಿಟಿಷರ ಕಾಲದ ನೋಟಿಫಿಕೇಷನ್ ಇಟ್ಟುಕೊಂಡು ಅರಣ್ಯ ಇಲಾಖೆಯವರು ರೈತರಿಗೆ ನೋಟಿಸ್ ನೀಡುತ್ತಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ತರು- ತುಂಗಾ-ಭದ್ರಾ ಮುಳುಗಡೆ ಸಂತ್ರಸ್ತರಿಗೆ ಕಳೆದ 50-60 ವರ್ಷಗಳ ಹಿಂದೆ ನೀಡಿದ ಹಕ್ಕುಪತ್ರಗಳನ್ನು ವಜಾ ಮಾಡಿ ಅರಣ್ಯ ಇಲಾಖೆ ತಮ್ಮ ಹಕ್ಕು ಪ್ರತಿಪಾದಿಸುತ್ತಿದೆ. ಅರಣ್ಯ ಇಲಾಖೆ ಮೂಲಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 7 ಸಾವಿರ ರೈತರಿಗೆ 64(ಂ) ಅಡಿ ಒತ್ತುವರಿ ಭೂಮಿ ತೆರವಿಗೆ ನೋಟಿಸ್ ಜಾರಿ ಮಾಡುತ್ತಿದ್ದಾರೆ. ಸಾಗರ ತಾಲೂಕಿನ ಬಾರಂಗಿ ಹೋಬಳಿಯ ಕಟ್ಟಿನಕಾರು ಭಾಗದ 14 ಜನ ರೈತರಿಗೆ ನೋಟಿಸ್ ನೀಡಿದ್ದಾರೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ವಕ್ಷೇತ್ರದ ತಾಳಗುಪ್ಪದಲ್ಲಿ 70 ಜನ ರೈತರಿಗೆ ಒತ್ತುವರಿ ತೆರವು ನೋಟಿಸ್ ಕೊಟ್ಟಿದ್ದಾರೆ. ಸರಕಾರ ಕೊಟ್ಟ ಮಾತು ಮರೆತಿದೆ.
- ತೀ.ನಾ. ಶ್ರೀನಿವಾಸ್, ಸಂಚಾಲಕರು ಮಲೆನಾಡು ರೈತ ಹೋರಾಟ ಸಮಿತಿ