ಕುದುರೆಮುಖ ಕಬ್ಬಿಣ ಅದಿರು ಕಂಪನಿಯ ಕಾರ್ಯಾಚರಣೆಗೆ ರಾಜ್ಯ ಸರಕಾರದಿಂದ ಅಡ್ಡಿ : ಎಚ್‌ಡಿಕೆ ಆರೋಪ

Update: 2024-09-05 13:37 GMT
ಎಚ್‌.ಡಿ.ಕುಮಾರಸ್ವಾಮಿ(PC:PTI)

ಶಿವಮೊಗ್ಗ: "ನನ್ನ ಮೇಲಿನ ವೈಯಕ್ತಿಕ ದ್ವೇಷಕ್ಕೆ ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ (ಕೆಐಒಸಿಎಲ್) ಕಾರ್ಯಾಚರಣೆಗೆ ಸಣ್ಣ ಸಣ್ಣ ವಿಚಾರ ಮುಂದಿಟ್ಟುಕೊಂಡು ರಾಜ್ಯ ಸರಕಾರ ಅಡ್ಡಿಪಡಿಸುತ್ತಿದೆ. ಇದರಿಂದ ಆ ಸಂಸ್ಥೆ ನಿತ್ಯ 27 ಕೋಟಿ ರೂ. ನಷ್ಟ ಅನುಭವಿಸುತ್ತಿದೆ" ಎಂದು ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಕೇಂದ್ರ ಸಚಿವನಾಗಿ ಅಧಿಕಾರ ಸ್ವೀಕರಿಸಿದ ನಂತರ ನಾನು ಮೊದಲು ಸಹಿ ಹಾಕಿದ ಕಡತ ಕೆಐಒಸಿಎಲ್‌ನ ಗಣಿಗಾರಿಕೆಗೆ ಸಂಬಂಧಿಸಿದ್ದು, ಅದು ರಾಜ್ಯ ಸರಕಾರಕ್ಕೆ ಸಹಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ನನ್ನ ವಿರುದ್ಧ ಅಪಪ್ರಚಾರ ಆರಂಭಿಸಿದರು" ಎಂದು ಹೇಳಿದರು.

ʼಅಷ್ಟಕ್ಕೂ ಕೆಐಒಸಿಎಲ್‌ಗೆ ಸಂಡೂರಿನಲ್ಲಿ ಗಣಿ ಮಂಜೂರು ಮಾಡಿ ಅದನ್ನು ನೋಂದಣಿ ಮಾಡಿಕೊಟ್ಟದ್ದು, 2016ರಲ್ಲಿ ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ. ಗಣಿಗಾರಿಕೆ ಸ್ಥಳದಲ್ಲಿ ಗಿಡ ಬೆಳೆಸಲು ಅರಣ್ಯ ಇಲಾಖೆಗೆ 190 ಕೋಟಿ ರೂ. ಕೆಐಒಸಿಎಲ್ ಪಾವತಿಸಿದೆ. ಆದರೆ ರಾಜ್ಯದ ಅರಣ್ಯ ಸಚಿವರಿಗೆ ಅದರ ತಲೆಬುಡ ಗೊತ್ತಿಲ್ಲ. ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ನನ್ನ ಮೇಲೆ ದ್ವೇಷ ಇದ್ದರೆ ಬೇರೆ ಕಡೆ ತೀರಿಸಿಕೊಳ್ಳಿ. ಕೆಐಒಸಿಎಲ್ ಕಾರ್ಯಾಚರಣೆಗೆ ಅಡ್ಡಿಪಡಿಸಿ ಕಾರ್ಮಿಕರನ್ನು ಏಕೆ ಬೀದಿಗೆ ತರುತ್ತೀರಿʼ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News