ಕಾಂಗ್ರೆಸ್ ನತ್ತ ಮುಖಮಾಡಿದ ಜೆಡಿಎಸ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಶ್ರೀಕಾಂತ್
ಶಿವಮೊಗ್ಗ, ಸೆ.8: ಜಿಲ್ಲೆಯಲ್ಲಿ 20 ವರ್ಷಗಳಿಂದ ಜೆಡಿಎಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿದ್ದ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಶ್ರೀಕಾಂತ್ ಮುಂದಿನ ವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಖಚಿತಪಡಿಸಿವೆ.
2003ರಲ್ಲಿ ಶಿವಮೊಗ್ಗಕ್ಕೆ ಬಂದ ಅವರು ಎರಡು ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧಿಸಿ 20 ಸಾವಿರಕ್ಕೂ ಅಧಿಕ ಮತಗಳನ್ನು ಗಳಿಸಿದ್ದರು. ನಂತರ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದರು. ಎಲ್ಲ ಪಕ್ಷಗಳ ಮುಖಂಡರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಈವರೆಗೂ ಆಹ್ವಾನವಿದ್ದರೂ ಬೇರೆ ಪಕ್ಷಕ್ಕೆ ಹೋಗಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೇರುವ ಆಹ್ವಾನವಿದ್ದರೂ ನಿರಾಕರಿಸಿದ್ದರು. ಆದರೆ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಮಾತುಕತೆ ನಡೆಸಿದ ನಂತರ ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಪಕ್ಷವನ್ನು ಉತ್ತಮವಾಗಿ ಸಂಘಟಿಸುವ ಮೂಲಕ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಹಲವಾರು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಿದ್ದರು. ಅದರೊಂದಿಗೆ ಮಹಾನಗರ ಪಾಲಿಕೆಯಲ್ಲೂ ಜೆಡಿಎಸ್ ಹಲವು ಅಭ್ಯರ್ಥಿಗಳು ಗೆದ್ದಿದ್ದರು.
ಇತ್ತೀಚೆಗಷ್ಟೇ ಮಾಜಿ ಸಂಸದ ಆಯನೂರು ಮಂಜುನಾಥ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಇದೀಗ ಎಂ.ಶ್ರೀಕಾಂತ್ ಕೂಡಾ ಕಾಂಗ್ರೆಸ್ ನತ್ತ ಮುಖ ಮಾಡಿರುವುದು ಕುತೂಹಲ ಕೆರಳಿಸಿದೆ.