ಪ್ರಜ್ವಲ್‌ ರೇವಣ್ಣ ಪ್ರಕರಣವು ಕೇವಲ ಸೆಕ್ಸ್ ಹಗರಣವಲ್ಲ, ಸಾಮೂಹಿಕ ಅತ್ಯಾಚಾರ : ರಾಹುಲ್‌ ಗಾಂಧಿ

Update: 2024-05-02 10:36 GMT

ರಾಹುಲ್‌ ಗಾಂಧಿ / ಪ್ರಜ್ವಲ್‌ ರೇವಣ್ಣ (PTI)

ಶಿವಮೊಗ್ಗ : ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಬಿಜೆಪಿ ಮೈತ್ರಿಕೂಟದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಇದು ಮೋದಿಯ ಗ್ಯಾರಂಟಿ ಆಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.

ಗುರುವಾರ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌ನ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, "ಪ್ರಜ್ವಲ್ ರೇವಣ್ಣ ಸಾಕಷ್ಟು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದು ಕೇವಲ ಸೆಕ್ಸ್  ಹಗರಣವಲ್ಲ, ಸಾಮೂಹಿಕ ಅತ್ಯಾಚಾರ. ಇದನ್ನು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಅತ್ಯಾಚಾರಿಗಳ ಪರ ಮತ ಕೇಳಿದ್ದಾರೆ

ಪ್ರಜ್ವಲ್ ರೇವಣ್ಣ ಅತ್ಯಾಚಾರಿ ಎಂದು ಬಿಜೆಪಿ ನಾಯಕರಿಗೆ ಗೊತ್ತಿದ್ದರೂ ಟಿಕೆಟ್ ನೀಡಲು ಯಾಕೆ ಒಪ್ಪಿದರು ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಕರ್ನಾಟಕದ ಮಹಿಳೆಯರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಜಗತ್ತಿನಲ್ಲೇ ಇತಂಹ ಘಟನೆ ನಡೆದಿಲ್ಲ.ಇಡೀ ಜಗತ್ತಿನಲ್ಲೇ ಈ ವಿಚಾರ ಚರ್ಚೆಯಾಗುತ್ತಿದೆ. ಅಧಿಕಾರಕ್ಕಾಗಿ ಬಿಜೆಪಿಯವರು ಏನು ಬೇಕಾದರು ಮಾಡುತ್ತಾರೆ. ದೇಶದ ಪ್ರಧಾನಿಗಳು ಅತ್ಯಾಚಾರಿಗಳ ಪರ ಮತ ಕೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ದೇಶದ ಮಹಿಳೆಯರಲ್ಲಿ ಕ್ಷೇಮೆ ಕೇಳಬೇಕು ಎಂದು ಆಗ್ರಹಿಸಿದರು.

ಮೀಸಲಾತಿಯನ್ನು ತೆಗೆದುಹಾಕಲು ಹೊರಟಿದೆ

ಸಂವಿಧಾನ ಬದಲಾವಣೆ ಮಾಡಬೇಕು ಎಂದು ಬಿಜೆಪಿಯವರು ನಿರ್ಧರಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಸಂವಿಧಾನ ರಕ್ಷಣೆಗೆ ಮುಂದಾಗಿದೆ .ಬಿಜೆಪಿ ಸಂವಿಧಾನದಲ್ಲಿರುವ ಮೀಸಲಾತಿಯನ್ನು ತೆಗೆದುಹಾಕಲು ಹೊರಟಿದೆ. ನಾವು ಸಮಾನತೆ, ದಲಿತರು, ಒಬಿಸಿ, ಆದಿವಾಸಿಗಳ ಬಗ್ಗೆ ಮಾತನಾಡಿದರೆ ಕಾಂಗ್ರೆಸ್‌ನವರನ್ನು ನಕ್ಸಲರು ಎನ್ನುತ್ತಾರೆ. ಕೂಡಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ದೇಶದ ಜನರ ಮುಂದೆ ಕ್ಷೇಮೆ ಕೇಳಬೇಕು ಎಂದು ಒತ್ತಾಯಿಸಿದರು.

 ಅದಾನಿ,ಅಂಬಾನಿಗೆ ದೇಶದ ಸಂಪತ್ತು ಹಂಚಿದ್ದಾರೆ

ಬಿಜೆಪಿ ಸರ್ಕಾರ ಬಡವರು, ಮಹಿಳಾ ವಿರೋಧಿ ಸರ್ಕಾರ. ಪ್ರಧಾನಿಯವರು ದೇಶದ ಸಂಪತ್ತನ್ನು ತಗೆದುಕೊಂಡು ಹೋಗಿ 22 ಜನರ ಜೇಬಿಗೆ ಹಾಕಿದ್ದಾರೆ. ಅದಾನಿ,ಅಂಬಾನಿಗೆ ದೇಶದ ಸಂಪತ್ತು ಹಂಚಿದ್ದಾರೆ. ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ ಎಂದ ಅವರು, ನಾವು ಲಕ್ಷಾಂತರ ಜನರಿಗೆ ಲಕ್ಷಾಧೀಪತಿ ಮಾಡಲು ಹೊರಟಿದ್ದೇವೆ. ನಾವು ಕರ್ನಾಟಕದಲ್ಲಿ ಐದು ಗ್ಯಾರಂಟಿಯನ್ನು ನೀಡಿದ್ದೇವೆ. ಈಗ ದೇಶಾದ್ಯಂತ ನಾವು ಮಹಾಲಕ್ಷ್ಮಿ ಯೋಜನೆ ತರಲು ಹೊರಟ್ಟಿದ್ದೇವೆ . ಪ್ರತಿ ಬಡ ಕುಟುಂಬದ ಲಿಸ್ಟ್ ತಯಾರಾಗುತ್ತಿದೆ ಎಂದರು.

 ಬಡವರನ್ನು ಬಡವರನ್ನಾಗಿ ಮಾಡಿದ್ದಾರೆ

ನರೇಂದ್ರ ಮೋದಿಯವರು ಬಡವರನ್ನು ಬಡವರನ್ನಾಗಿ ಮಾಡಿದ್ದಾರೆ. ಪ್ರತಿ ಕುಟುಂಬದಿಂದ ಓರ್ವ ಮಹಿಳೆಯ ಹೆಸರು ಆಯ್ಕೆ ಮಾಡಿ ಅವರಿಗೆ ಒಂದು ಲಕ್ಷ ಹಾಕುತ್ತೇವೆ. ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಹಣ ಹಾಕುತ್ತೇವೆ. ನಮ್ಮ ಗ್ಯಾರಂಟಿಯಿಂದ ಮೋದಿ ಅವರಿಗೆ ಭಯ ಶುರುವಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಿತ್ತೇವೆ. ನರೇಗಾ ಕೂಲಿ 400 ರೂ ಮಾಡುತ್ತೇವೆ. ನರೇಂದ್ರ ಮೋದಿಯವರು ಉದ್ಯಮಿಗಳ ಸಾಲ ಮನ್ನಾ ಮಾಡಿತ್ತಾರೆ. ನಾವು ದೇಶದ ಬಡ ರೈತರ ಸಾಲ ಮನ್ನಾ ಮಾಡುತ್ತೇವೆ. ವಿಶ್ವವಿದ್ಯಾಲಯಗಳು ಖಾಸಗೀಕರಣ ಮಾಡಿ ಭೂಮಿ ಕಬಳಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಮಾತನಾಡಿ, "ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮಸ್ಯೆಗಳ ಬಗ್ಗೆ ಮಾತನಾಡುವಂತೆ ಒತ್ತಾಯ ಮಾಡಿದರೇ ಮಹಿಳೆಯರ ಮಾಂಗಲ್ಯ ಸೂತ್ರದ ಬಗ್ಗೆ ಮಾತನಾಡುತ್ತಾರೆ. ಆದರೆ ಇಷ್ಟು ವರ್ಷದಿಂದ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಹೆಣ್ಣು ಮಕ್ಕಳ ಮಾಂಗಲ್ಯ ಸೂತ್ರ ಕಸಿದುಕೊಂಡಿಲ್ಲ.ಜಾತಿ ಗಣತಿ ಬಗ್ಗೆ ಪ್ರಧಾನಿಯವರು ಹಗುರವಾಗಿ ಮಾತನಾಡುತ್ತಿದ್ದಾರೆ" ಎಂದು ಹೇಳಿದರು.

ದೇಶದಲ್ಲಿ ಮೊದಲು ಸಂವಿಧಾನ ಉಳಿಯಬೇಕು. ದೇಶದ ರಕ್ಷಣೆ ಆಗಬೇಕು. ಮೋದಿ ಸುಳ್ಳು ಹೇಳುವುದು ಅವರ ಗ್ಯಾರಂಟಿ ಎಂದು ಟಿಕೀಸಿದ ಅವರು, ಮೋದಿ ಹಠಾವೊ ದೇಶ್ ಬಚಾವ್ ಎಂದು ಘೋಷಣೆ ಕೂಗಿದರು. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್‌ಗೆ ಅತಿ ಹೆಚ್ಚಿನ ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದು ಮತಯಾಚನೆ ಮಾಡಿದರು.

ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ,ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ನಟ ಶಿವರಾಜ್ ಕುಮಾರ್, ದುನಿಯಾ ವಿಜಯ್, ಚುನಾವಣಾ ಉಸ್ತುವಾರಿ ಅನಿಲ್ ತಡಕಲ್ ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News