ಸಾಗರ | ನಿಯಂತ್ರಣ ತಪ್ಪಿ ನದಿಯತ್ತ ಚಲಿಸಿದ ಬಸ್: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಸಾಗರ, ಆ.28: ಸಿಗಂದೂರಿನಿಂದ ಸಾಗರಕ್ಕೆ ಮರಳುತ್ತಿದ್ದ ಖಾಸಗಿ ಬಸ್ಸೊಂದು ಲಾಂಚ್ ನಿಂದ ಹೊರಬಂದು ದಡದತ್ತ ಚಲಿಸುತ್ತಿದ್ದ ಸಂದರ್ಭ ದಿಡೀರ್ ಎಂದು ಹಿನ್ನೀರಿನತ್ತ ಹಿಮ್ಮುಖವಾಗಿ ಚಲಿಸಿದ ಘಟನೆ ರವಿವಾರ ಸಂಜೆ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ರವಿವಾರ ಸಂಜೆ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಭಕ್ತಾದಿಗಳನ್ನು ತುಂಬಿಕೊಂಡು ಹೊರಟಿದ್ದ ಇಲ್ಲಿನ ಗಜಾನನ ಎಂಬ ಖಾಸಗಿ ಬಸ್ ಕಿಕ್ಕಿರಿದು ತುಂಬಿತ್ತು. ಬಸ್ ಲಾಂಚ್ನೊಳಗಿದ್ದಾಗಲೂ ಪ್ರಯಾಣಿಕರು ಅದರಿಂದ ಕೆಳಗಿಳಿದಿರಲಿಲ್ಲ. ಹೀಗೆ ಜನರನ್ನು ತುಂಬಿಕೊಂಡೇ ಲಾಂಚ್ನಿಂದ ಶರಾವತಿ ಹಿನ್ನೀರಿನ ಅಂಬಾರಗೋಡ್ಲು ದಡ ತಲುಪಿದ ಬಸ್ ಡಾಂಬಾರು ರಸ್ತೆಯತ್ತ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಬಸ್ಸಿನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ, ಅದರ ಇಂಜಿನ್ ಏಕಾಏಕಿ ಆಫ್ ಆಗಿದೆ. ಈ ವೇಳೆ ಏರುಮುಖದಲ್ಲಿದ್ದ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಮತ್ತೆ ಶರಾವತಿ ಹಿನ್ನೀರಿನತ್ತ ಹಿಮ್ಮುಖವಾಗಿ ಚಲಿಸಲಾರಂಭಿಸಿದೆ. ಇದು ಬಸ್ನೊಳಗಿದ್ದ ಪ್ರಯಾಣಿಕರನ್ನು ಆತಂಕಕ್ಕೀಡಾಗಿದರು. ಈ ವೇಳೆ ಸಮಯಪ್ರಜ್ಞೆ ಮೆರೆದ ಬಸ್ ಚಾಲಕ ಬಸ್ನ್ನು ದಡದಲ್ಲಿ ಅಡ್ಡಲಾಗಿ ತಿರುಗಿಸಿದ್ದಾರೆ. ಇದರಿಂದ ಬಸ್ ನಿಯಂತ್ರಣಕ್ಕೆ ಬಂತೆನ್ನಲಾಗಿದೆ. ನಂತರ ಬಸ್ ಇಂಜಿನ್ ಚಾಲನೆಗೊಂಡಿದ್ದು, ಸಾಗರಕ್ಕೆ ಯಾವುದೇ ಸಮಸ್ಯೆಯಿಲ್ಲದೆ ತೆರಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.