ಶಿವಮೊಗ್ಗ | ಇಂದಿನಿಂದ ಭದ್ರಾ ಜಲಾಶಯದ ನಾಲೆಗಳಿಗೆ ನೀರು ಹರಿಸಲು ನಿರ್ಧಾರ : ಸಚಿವ ಮಧು ಬಂಗಾರಪ್ಪ

Update: 2024-07-29 15:19 GMT

ಶಿವಮೊಗ್ಗ: ಭದ್ರಾ ಜಲಾಶಯದಿಂದ ನಾಲೆಗಳಿಗೆ ಇಂದಿನಿಂದಲೇ(ಜು.29) ನೀರು ಹರಿಸಲು ಸೋಮವಾರ ನಡೆದ ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಶಿವಮೊಗ್ಗ ನಗರದ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಮಧುಬಂಗಾರಪ್ಪ ಅವರು, ʼಕಳೆದ ಬಾರಿ ಬರಗಾಲದಿಂದ ತತ್ತರಿಸಿ ಹೋಗಿದ್ದೆವು. ಈ ಬಾರಿ ಜಿಲ್ಲೆಯ ಎಲ್ಲಾ ಆಣೆಕಟ್ಟುಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಕೆಲವೊಂದು ಪ್ರದೇಶಗಳಿಗೆ ಈ ಬಾರಿಯೂ ನೀರು ತಲುಪಿಲ್ಲ ಎಂದು ರೈತರು ಆರೋಪಿಸಿದ ಹಿನ್ನಲೆಯಲ್ಲಿ ಇಂದಿನಿಂದಲೇ ನಿರಂತರವಾಗಿ ನೀರು ಬಿಡಲು ತೀರ್ಮಾನಿಸಲಾಗಿದೆ. ರೈತರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇವೆ. ಅನೇಕ ಕಡೆ ಭತ್ತವನ್ನು ನಿಲ್ಲಿಸಿ ಅಡಿಕೆ ಬೆಳೆ ಹಾಕಿದ್ದಾರೆ. ಬೇಸಿಗೆಯಲ್ಲಿ ಅಡಿಕೆಗೆ ಹೆಚ್ಚು ನೀರು ಬೇಕಾಗುತ್ತದೆ. ಅದನ್ನು ದೃಷ್ಟಿಯಲ್ಲಿರಿಸಿ ನೀರಾವರಿ ಇಂಜಿನಿಯರ್‌ಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆʼ ಎಂದರು.

ತುಂಗೆಯಿಂದ ಭದ್ರೆಗೆ ನೀರು ಹರಿಸುವ ಯೋಜನೆ ಕೂಡ ಮುಂದಿನ ಭಾಗದಲ್ಲಿ ಕೈಗೆತ್ತಿಕೊಳ್ಳುತ್ತೇವೆ. ಇದಕ್ಕೆ ಕೋಟ್ಯಾಂತರ ರೂ. ಬೇಕಾಗಿದೆ. ಅದಕ್ಕಾಗಿ ನೀರಾವರಿ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೇವೆ. ಅವರು 15 ದಿನದೊಳಗೆ ಶಿವಮೊಗ್ಗಕ್ಕೆ ಆಗಮಿಸಿ ಒಂದು ದಿನ ಪೂರ್ತಿ ನಮ್ಮದೊಂದಿಗಿದ್ದು, ಇಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಡಾ.ಅಂಶುಮಾನ್, ಶಾಸಕರಾದ ಶಾರದ ಪೂರ್‍ಯನಾಯ್ಕ್, ಹರೀಶ್, ಬಲ್ಕಿಶ್‌ಬಾನು, ಶಾಂತನಗೌಡ, ಬಸವರಾಜ್, ಮಾಜಿ ಶಾಸಕ ಆರ್.ಪ್ರಸನ್ನಕುಮಾರ್, ರೈತ ನಾಯಕರಾದ ಎಚ್.ಆರ್. ಬಸವರಾಜಪ್ಪ, ಕೆ.ಟಿ. ಗಂಗಾಧರ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಹಾಗೂ ಕಾಡಾದ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News