ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು

Update: 2024-06-28 15:51 GMT

ಶಿವಮೊಗ್ಗ: ಪ್ರತಿಷ್ಠಿತ ಶಿವಮೊಗ್ಗ ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಅಧ್ಯಕ್ಷರೂ,ಕೆಪಿಸಿಸಿ ಸಹಕಾರಿ ವಿಭಾಗದ ಸಂಚಾಲಕರಾದ ಆರ್.ಎಂ.ಮಂಜುನಾಥ ಗೌಡ ಸೇರಿದಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಡಿಸಿಸಿ ಬ್ಯಾಂಕಿನ 13 ನಿರ್ದೇಶಕ ಸ್ಥಾನಗಳಿಗೆ ಜೂ. 28 ರಂದು ಡಿಸಿಸಿ ಬ್ಯಾಂಕಿನಲ್ಲಿ ಚುನಾವಣಾ ನಡೆಸಲಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಸಹಕಾರಿ ಭಾರತಿ(ಬಿಜೆಪಿ) ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ.

ಹೊಸನಗರ ಸಹಕಾರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಎಂ ಪರಮೇಶ್ವರಪ್ಪ ಅವಿರೋಧ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಶಿವಮೊಗ್ಗ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ ದುಗ್ಗಪ್ಪಗೌಡ(13) , ಶಿವನಂಜಪ್ಪ.ಜೆ(12) ನಡುವಿನ ಜಿದ್ದಾಜಿದ್ದಿಯಲ್ಲಿ ಕೆ.ಪಿ ದುಗ್ಗಪ್ಪಗೌಡ 1 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಭದ್ರಾವತಿ ತಾಲ್ಲೂಕು ಕ್ಷೇತ್ರದಿಂದ ಹೆಚ್.ಎಲ್. ಷಡಾಕ್ಷರಿ(7) ಸಿ.ಹನುಮಂತಪ್ಪ(9) ನಡುವೆ ನಡೆದ ಹಣಾಹಣಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸಿ.ಹನುಮಂತಪ್ಪ ಎರಡು ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ತೀರ್ಥಹಳ್ಳಿ ತಾ. ಕ್ಷೇತ್ರದಿಂದ ಬಸವಾನಿ ವಿಜಯದೇವ್(14), ಕೆ.ಎಸ್.ಶಿವಕುಮಾರ್( 09) ನಡುವಿನ ಜಿದ್ದಾಜಿದ್ದಿಯಲ್ಲಿ ಬಸವಾನಿ ವಿಜಯದೇವ್ 5 ಮತಗಳ ಅಂತರದಿಂದ ಗೆದ್ದಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಸಾಗರ ತಾಲ್ಲೂಕು ಕ್ಷೇತ್ರದಿಂದ ಗೋಪಾಲಕೃಷ್ಣ ಬೇಳೂರು(15), ರತ್ನಾಕರ ಹೊನಗೋಡು(14) ನಡುವೆ ತೀವ್ರ ಪೈಪೋಟಿ ನಡೆದಿದ್ದು ,1 ಮತಗಳ ಅಂತರದಿಂದ ಶಾಸಕ ಗೋಪಾಲ ಕೃಷ್ಣ ಬೇಳೂರು ಪ್ರಯಾಸದ ಗೆಲುವು ಸಾಧಿಸಿದ್ದಾರೆ.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಶಿಕಾರಿಪುರ ತಾಲ್ಲೂಕು ಕ್ಷೇತ್ರದಿಂದ ಅಗಡಿ ಅಶೋಕ(11), ಎಸ್.ಪಿ ಚಂದ್ರಶೇಖರಗೌಡ(26) ನಡುವಿನ ಸ್ಪರ್ಧೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿ (ಬಿಜೆಪಿ ಬೆಂಬಲಿತ) ಚಂದ್ರಶೇಖರ ಗೌಡ 15 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಸೊರಬ ತಾಲ್ಲೂಕು ಕ್ಷೇತ್ರದಿಂದ ಕೆ.ಪಿ. ರುದ್ರಗೌಡ(14), ಶಿವಮೂರ್ತಿಗೌಡ(10) ಸ್ಪರ್ಧೆಯಲ್ಲಿ ಕೆ.ಪಿ ರುದ್ರಗೌಡ ನಾಲ್ಕು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಗೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಶಿವಮೊಗ್ಗ ಉಪ ವಿಭಾಗದಿಂದ ಆರ್.ಎಂ. ಮಂಜುನಾಥಗೌಡ(15) ವಿರೂಪಾಕ್ಷಪ್ಪ ಜಿ.ಈ(3) ನಡುವಿನ ಸ್ಪರ್ಧೆಯಲ್ಲಿ 12 ಮತಗಳ ಅಂತರದಿಂದ ಗೆಲುವು ಸಾಧಿಸಿದರೆ, ಚಲಾವಣೆಗೊಂಡ 19 ಮತಗಳಲ್ಲಿ ಒಂದು ಮತ ತಿರಸ್ಕೃತಗೊಂಡಿದೆ.

ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಘೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು ಸಾಗರ ಉಪ ವಿಭಾಗದಿಂದ ಬಿ.ಡಿ ಭೂಕಾಂತ್(21), ಜಿ.ಎಸ್.ಸುಧೀರ್(23) ನಡುವಿನ ನೇರ ಸ್ಪರ್ಧೆಯಲ್ಲಿ ಜಿ.ಎಸ್ ಸುಧೀರ್ 2 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಎಸ್.ಪಿ.ದಿನೇಶ(16),ಎಸ್.ಕೆ ಮರಿಯಪ್ಪ( 39)ನಡುವೆ ನಡೆದ ಸ್ಪರ್ಧೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಸ್.ಕೆ ಮರಿಯಪ್ಪ 23 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪಟ್ಟಣ ಸಹಕಾರ ಬ್ಯಾಂಕುಗಳ ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳು ಸಾಗರ ಉಪವಿಭಾಗದಿಂದ ಬಸವರಾಜ್ ಡಿ.ಎಲ್(32), ರವೀಂದ್ರ ಹೆಚ್.ಎಸ್(21) ನಡುವಣ ಜಿದ್ದಾಜಿದ್ದಿಯಲ್ಲಿ ಬಸವರಾಜ್ ಡಿ.ಎಲ್ 11 ಮತಗಳ ಅಂತರದಿಂದ ಗೆಲುವು ಸಾಧಿಸಿದರೆ,ಚಲಾವಣೆಗೊಂಡ 56 ಮತಗಳಲ್ಲಿ 3 ಮತಗಳು ತಿರಸ್ಕೃತಗೊಂಡಿವೆ.

ಬ್ಯಾಂಕಿನ ಕಾರ್ಯ ವ್ಯಾಪ್ತಿಯಲ್ಲಿ ಬರುವ ಇನ್ನಿತರ ಸಹಕಾರ ಸಂಘಗಳು ಶಿವಮೊಗ್ಗ ಉಪವಿಭಾಗದಿಂದ ಆನಂದ ಡಿ(16), ಕೆ.ಎಲ್.ಜಗದೀಶ್ವರ್(45), ಹೆಚ್.ಬಿ ದಿನೇಶ್14), ಮಹಾಲಿಂಗಯ್ಯ ಶಾಸ್ತ್ರಿ ಎಸ್.ಎನ್(47) ಜೆ.ಪಿ ಯೋಗೇಶ್(14) ನಡುವಿನ ಸ್ಪರ್ಧೆಯಲ್ಲಿ ಮಹಾಲಿಂಗಯ್ಯ ಶಾಸ್ತ್ರಿ ಎಸ್.ಎನ್(47) ಗೆಲುವು ಸಾಧಿಸಿದ್ದಾರೆ.

ಬ್ಯಾಂಕಿನ ಕಾರ್ಯ ವ್ಯಾಪ್ತಿಯಲ್ಲಿ ಬರುವ ಇನ್ನಿತರ ಸಹಕಾರ ಸಂಘಗಳು ಸಾಗರ ಉಪವಿಭಾಗದಿಂದ ಟಿ. ಶಿವಶಂಕರಪ್ಪ(75), ಹರೀಶ್ ಎನ್.ಡಿ(61) ನಡುವೆ ನಡೆದ ಸ್ಪರ್ಧೆಯಲ್ಲಿ ಟಿ.ಶಿವಶಂಕರಪ್ಪ 14 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಚುನಾವಣೆಯಲ್ಲಿ ನಡೆದ ಒಟ್ಟು 621 ಮತಗಳು ಚಲಾವಣೆಗೊಂಡಿದ್ದು,ಇದರಲ್ಲಿ 5 ಮತಗಳು ತಿರಸ್ಕೃಗೊಂಡಿವೆ ಎಂದು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರಿಟರ್ನಿಂಗ್ ಅಧಿಕಾರಿ ಹಾಗೂ ಶಿವಮೊಗ್ಗ ಉಪವಿಭಾಗಾಧಿಕಾರಿಗಳಾದ ಸತ್ಯನಾರಾಯಣ ಬಿ.ಹೆಚ್ ತಿಳಿಸಿದ್ದಾರೆ.

ಸಚಿವ ಮಧು ಬಂಗಾರಪ್ಪ ಸಂಧಾನಕ್ಕೆ ಸಿಕ್ಕ ಗೆಲುವು

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿನ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಪಾತ್ರ ಹೆಚ್ಚಿದೆ.

ನಾಲೈದು ಕ್ಷೇತ್ರಗಳಲ್ಲಿ ಕಾಂಗ್ರೆಸಿಗರೇ ಪರಸ್ಪರ ಎದುರಾಳಿಗಳಾಗಿದ್ದು, ಆ ಪಕ್ಷದ ಮುಖಂಡರಿಂದ ಇರಿಸುಮುರಿಸಾಗಿತ್ತು. ಅದೇ ಸ್ಥಿತಿ ಮುಂದುವರಿದರೆ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥ ಗೌಡ ಅವರಿಗೆ ಹಿನ್ನಡೆಯಾಗುವ ಅಪಾಯವೂ ಇತ್ತು. ಹೀಗಾಗಿ ಅಡೆತಡೆಗಳ ನಿವಾರಣೆಗಾಗಿ ಕಾಂಗ್ರೆಸ್ ಮುಖಂಡರು ಇನ್ನಿಲ್ಲದ ಪ್ರಯತ್ನ ಮಾಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಜೂ.21ರಂದು ಶಿವಮೊಗ್ಗಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಹೆಚ್ಚಿನ ಸಮಯ ಡಿಸಿಸಿ ಬ್ಯಾಂಕ್‌ ಚುನಾವಣೆಗೆ ಸಂಬಂಧಿಸಿದ ಚರ್ಚೆಗೆ ವ್ಯಯಿಸಿದ್ದರು. ಕಾಂಗ್ರೆಸ್‌ನ ಕೆಲ ಮುಖಂಡರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ್ವರ್ ಕೂಡ ಕೆಲ ಸ್ವಪಕ್ಷೀಯರ ಮನವೊಲಿಸಿ ಕಣದಿಂದ ಹಿಂದಕ್ಕೆ ಸರಿಯಲು ಒತ್ತಡ ಹಾಕಿದ್ದರು.

ಅಂತಿಮವಾಗಿ ಕಾಂಗ್ರೆಸ್‌ನ ನಾಲ್ವರು ಮುಖಂಡರಾದ ಎಂ.ಶ್ರೀಕಾಂತ್, ಆರ್.ವಿಜಯಕುಮಾರ್, ಎಚ್.ಜಿ.ಮಲ್ಲಯ್ಯ, ಆ‌ರ್.ಸಿ.ನಾಯ್ಕ ನಾಮಪತ್ರ ಹಿಂಪಡೆದು ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಸಹಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News