ಶಿವಮೊಗ್ಗ: ‘ನಮ್ಮ ನಡಿಗೆ ಶಾಂತಿಯ ಕಡೆಗೆ ಸಮಿತಿ’ ವತಿಯಿಂದ ಶಾಂತಿಯ ಮೆರವಣಿಗೆ

Update: 2024-09-13 06:33 GMT

ಶಿವಮೊಗ್ಗ: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ‘ನಮ್ಮ ನಡಿಗೆ ಶಾಂತಿಯ ಕಡೆಗೆ ಸಮಿತಿ’ ವತಿಯಿಂದ ಗುರುವಾರ ‘ಸೌಹಾರ್ದವೇ ಹಬ್ಬ’ ಶೀರ್ಷಿಕೆ ಅಡಿಯಲ್ಲಿ ಮೆಗ್ಗಾನ್ ಆಸ್ಪತ್ರೆ ಆವರಣದಿಂದ ಸೈನ್ಸ್ ಮೈದಾನದವರೆಗೆ ಶಾಂತಿಯ ಮೆರವಣಿಗೆ ನಡೆಯಿತು.

ಶಾಂತಿ ನಡಿಗೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಸಿಮ್ಸ್‌ ಆವರಣದಲ್ಲಿ ಚಾಲನೆ ನೀಡಿದರು. ಅಶೋಕ ವೃತ್ತ, ಬಿ.ಎಚ್‌.ರಸ್ತೆ, ಅಮೀರ್‌ ಅಹಮ್ಮದ್‌ ವೃತ್ತ, ಶಿವಪ್ಪ ನಾಯಕ ವೃತ್ತ, ಕರ್ನಾಟಕ ಸಂಘದ ಮಾರ್ಗವಾಗಿ ಸಾಗಿದ ನಡಿಗೆಯು ಸೈನ್ಸ್‌ ಮೈದಾನ ತಲುಪಿತು.

ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವ ಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಅವರು,ಜಗಳವೇ ‘ಬ್ರ್ಯಾಂಡ್‌ ಶಿವಮೊಗ್ಗ’ ಎಂಬಂತಾಗಿದೆ. ಅದನ್ನು ಬದಲಿಸುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಎಲ್ಲರೂ ಪರಸ್ಪರ ಎದುರಾದಾಗ ನಗು ಬೀರಿ. ಹಗೆ ಬೇಡ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಾಧ್ಯವಾಗುತ್ತದೆ. ನಾಡು ಸರ್ವಜನಾಂಗದ ಶಾಂತಿಯ ತೋಟವಾಗಿ ಪರಿಣಮಿಸುತ್ತದೆ. ರಾಜಕಾರಣಿಗಳು ಹೇಳುವ ಧಾರ್ಮಿಕ ವಿಚಾರಗಳ ಬಗ್ಗೆ ಯಾರೂ ತೀರ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಇದರಿಂದ ಧಾರ್ಮಿಕ ಸಾಮರಸ್ಯಗಳು ಹಾಳಾಗುತ್ತವೆ. ಧರ್ಮದ ಬಗ್ಗೆ ಮಾತಾಡುವುದಕ್ಕೆಂದೇ ಧಾರ್ಮಿಕ ಗುರುಗಳಿದ್ದಾರೆ ಎಂದರು.

ಮೌಲಾನಾ ಶಾಹುಲ್‌ ಹಮೀದ್‌ ಮಾತನಾಡಿ,ಇಡೀ ರಾಜ್ಯದಲ್ಲಿ ಶಿವಮೊಗ್ಗ ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಬೇಕು. ಆಯಾ ಧರ್ಮದವರಿಗೆ ಧಾರ್ಮಿಕ ಆಚರಣೆಗಳನ್ನು ಯಾವುದೇ ಭಯವಿಲ್ಲದೇ ಆಚರಿಸಲು ಅವಕಾಶ ಮಾಡಿಕೊಡುವುದು ಸೌಹಾರ್ದತೆಯಾಗಿದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಆರಂಭವಾಗಿದೆ. ಬರುವ ದಿನಗಳಲ್ಲಿ ಹೆಚ್ಚೆಚ್ಚು ಕೈಗಾರಿಕೆಗಳು ಬರಬೇಕು. ಉದ್ಯೋಗ ಸೃಷ್ಟಿಯಾಗಬೇಕು. ಈ ಬ್ರ್ಯಾಂಡ್‌ ಶಿವಮೊಗ್ಗಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

 ಡಾ. ಕ್ಲಿಫರ್ಡ್‌ ರೋಶನ್‌ ಪಿಂಟೊ ಮಾತನಾಡಿ, ಕೋಮುಗಲಭೆಯಿಂದ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಎಲ್ಲರೂ ಭಾತೃತ್ವ ಭಾವನೆಯಿಂದ ಇರಬೇಕು. ಎಲ್ಲರೂ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಡೆ ಮಠದ ಮಹಾಂತ ಸ್ವಾಮೀಜಿ, ಮೂಲೆಗದ್ದೆ ಮಠದ ಅಭಿನವ ಸ್ವಾಮೀಜಿ, ಸೌಹಾರ್ದ ಹಬ್ಬದ ಪ್ರಮುಖರಾದ ಎಚ್‌.ಆರ್‌.ಬಸವರಾಜಪ್ಪ, ಕೆ.ಪಿ.ಶ್ರೀಪಾಲ್‌, ಎಂ.ಗುರುಮೂರ್ತಿ, ಫಾದರ್‌ ಪಿಯುಶ್‌ ಡಿಸೋಜ ಸೇರಿದಂತೆ ಹಲವರು ಭಾಗವಹಿಸಿದ್ದರು.

ಯಾರ ಹೊಟ್ಟೆಯ ಮೇಲೆ ಹೊಡೆದು ಯಾವ ಧರ್ಮ ಉಳಿಯಬೇಕಿದೆ? ಧರ್ಮ ಉಳಿಯಬೇಕಿರುವುದು ಅವುಗಳಲ್ಲಿಉತ್ತಮ ಅಂಶಗಳನ್ನು ಮೈಗೂಡಿಸಿಕೊಂಡು ಬದುಕುವುದರಲ್ಲಿ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇನ್ನೊಬ್ಬರ ಹೊಟ್ಟೆಯ ಮೇಲೆ ಹೊಡೆಯುವುದು ದೊಡ್ಡ ಅರ್ಧಮ. ಅಂತಹದಕ್ಕೆ ಶಿವಮೊಗ್ಗ ವೇದಿಕೆ ಆಗಬಾರದು.

-ಡಾ.ಬಸವ ಮರುಳಸಿದ್ದ ಸ್ವಾಮೀಜಿ. ಬಸವಕೇಂದ್ರ

 

ವೈಮನಸ್ಸುಗಳನ್ನು ಬುಡಮಟ್ಟದಲ್ಲೇ ಚಿವುಟಿ ಹಾಕಬೇಕು. ವಿಶಿಷ್ಟತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮದಾಗಿದ್ದು, ಎಲ್ಲರೂ ಸಹಬಾಳ್ವೆಯಿಂದ ಬಾಳೋಣ.

- ಶ್ರೀ ಸಾಯಿನಾಥ ಸ್ವಾಮೀಜಿ,ಆದಿಚುಂಚನಗಿರಿ ಶಾಖಾ ಮಠ

 

ಸೌಹಾರ್ದತೆಯಿಂದ ಶಿವಮೊಗ್ಗದ ಹೆಸರು ಪ್ರಖ್ಯಾತಿಗೆ ಬರಬೇಕೇ ವಿನಾ ಕೋಮುಗಲಭೆಗಳಿಂದ ಅಲ್ಲ.

ಮೌಲಾನ ಅಕೀಲ್‌ ಅಹ್ಮದ್,ಜಾಮೀಯಾ ಮಸೀದಿ




Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News