ಲೋಕಸಭಾ ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯವಾಗಲು ಯಡಿಯೂರಪ್ಪ, ವಿಜಯೇಂದ್ರ ಕಾರಣ: ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ: ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಇದಕ್ಕೆ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಕಾರಣ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪ ಅವರು ನಮ್ಮವರು ನಮ್ಮ ನಾಯಕರು. ಅದರಲ್ಲಿ ಯಾವ ಅನುಮಾನ ಇಲ್ಲ. ಆದರೆ ಅವರು ಯಾಕೆ ನನಗೆ ಅನ್ಯಾಯ ಮಾಡಿದರು. ಕೊನೆಯ ಕ್ಷಣದವರೆಗೂ ನಿನಗೆ ಟಿಕೆಟ್ ಎಂದು ಹೇಳುತ್ತಿದ್ದರು. ಈ ರೀತಿ ಸುಳ್ಳು ಆಶ್ವಾಸನೆ ಯಾಕೆ ಕೊಟ್ಟರು" ಎಂದು ಪ್ರಶ್ನಿಸಿದರು.
ನನಗೆ ಮೋಸವಾಗಿದೆ. ನನ್ನ ಕುಟುಂಬ ಒಂದೇ ಅಲ್ಲ, ಪಕ್ಷ ಕಟ್ಟಿದ ಸಾವಿರಾರು ಕಾರ್ಯಕರ್ತರಿಗೆ ಯಡಿಯೂರಪ್ಪನವರ ನಡೆಯ ಬಗ್ಗೆ ಬೇಸರವಿದೆ. ಅವರ ಮಗ ಎಂ.ಪಿ ಇನ್ನೊಬ್ಬ ಎಂಎಲ್‌ಎ ಹಾಗೂ ರಾಜ್ಯಧ್ಯಕ್ಷನಾಗಿದ್ದಾನೆ. ಎಲ್ಲ ಸ್ಥಾನಮಾನವನ್ನು ಅವರ ಕುಟುಂಬಕ್ಕೆ ಇಟ್ಟುಕೊಂಡಿದ್ದಾರೆ. ಅವರ ಹಿಂಬಾಲಕರಿಗೆ ಬೆಂಬಲ-ಅಧಿಕಾರ ಕೊಟ್ಟಿದ್ದಾರೆ. ಪಕ್ಷದಲ್ಲಿ ಅನೇಕ ವರ್ಷ ದುಡಿದವರಿಗೆ ಏನು ಬೆಲೆ ಇಲ್ಲ. ಇದು ಬಹಳ ಜನಕ್ಕೆ ನೋವಿದೆ. ಅವರೆಲ್ಲರ ನೋವನ್ನು ಸರಿಪಡಿಸಬೇಕು ಎಂದರು.
ಪ್ರತಾಪ್ ಸಿಂಹ, ಬಸವನಗೌಡ ಯತ್ನಾಳ್, ನಳೀನ್ ಕುಮಾರ್ ಕಟೀಲ್, ಸಿ.ಟಿ ರವಿ ಕರೆ ಮಾಡಿ ಈ ರೀತಿ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇವರೆಲ್ಲರೂ ಹೊಟ್ಟೆಯಲ್ಲಿ ನೋವು ಇಟ್ಟುಕೊಂಡಿದ್ದಾರೆ. ಹೇಳಿಕೊಳ್ಳಲಾಗದವರು ತುಂಬಾ ಜನ ಇದ್ದಾರೆ. ಅವರೆಲ್ಲರ ಧ್ವನಿಯಾಗಿ ನಾನು ಮುಂದೆ ನಿಲ್ಲುತ್ತೇನೆ ಎಂದರು.
ಕಾಂತೇಶ್ ಹಾವೇರಿಯಲ್ಲಿ ಸ್ಪರ್ಧಿಸಿದರೆ 100 ಕ್ಕೆ 100 ಗೆಲ್ಲುತ್ತಾನೆ. ಬೊಮ್ಮಾಯಿ ಅವರೇ ಹೇಳಿದ್ದರು ಕಾಂತೇಶ್ ಗೆ ಟಿಕೆಟ್ ಕೊಡಿ, ನನಗೆ ಆರೋಗ್ಯ ಸರಿ ಇಲ್ಲ, ಬೇಡ ಅಂದಿದ್ದರು. ಆದರೆ ಟಿಕೆಟ್ ಸಿಗುತ್ತಿದ್ದಂತೆ ಉಲ್ಟಾ ಮಾತನಾಡಿದರೆ ಹೇಗೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಯಾರನ್ನು ಕೇಳದೆ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು ಎಂದರು.
ಮಾ.18 ರಂದು ಪ್ರಧಾನಿ ಮೋದಿ ಬರುತ್ತಿದ್ದಾರೆ. ಕಾರ್ಯಕ್ರಮಕ್ಕೆ ಹೋಗುತ್ತೆನೋ ಇಲ್ಲವೋ ಎನ್ನುವ ಬಗ್ಗೆ ತೀರ್ಮಾನ ಮಾಡುತ್ತೇನೆ. ಎಂಎಲ್ ಸಿ ಮಾಡುತ್ತೇನೆ ಎನ್ನುತ್ತಿದ್ದಾರೆ, ಆದರೆ ಅದನ್ನು ನಂಬುವ ಸ್ಥಿತಿಯಲ್ಲಿಲ್ಲ. ಈ ಹಿಂದೆ ಎಂಎಲ್ ಎ ಮಾಡುತ್ತೇನೆ, ಎಂಪಿ ಮಾಡುತ್ತೇನೆ ಎಂದಿದ್ದರು. ಈಗ ಎಂಎಲ್ ಸಿ ಎನ್ನುತ್ತಾರೆ ಯಾವುದನ್ನು ನಂಬಲ್ಲ ಎಂದು ಹೇಳಿದರು