ಸಿರಿಗನ್ನಡ ಗೆಲ್ಲಲಿ, ಬಾಳಲಿ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ಬಾರಿಯ ನವೆಂಬರ್ 1ರ ರಾಜ್ಯೋತ್ಸವ ದಿನವನ್ನು ನಾಡು ಸಂಭ್ರಮದಿಂದ ಆಚರಿಸಿದೆ. ಸುವರ್ಣ ಕರ್ನಾಟಕ ಆಚರಣೆಯ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡುವುದರ ಜೊತೆಗೆ, 100ರಷ್ಟು ವಿಶೇಷ ಸಾಧಕರನ್ನು ಗುರುತಿಸಿ ಸರಕಾರ ಸನ್ಮಾನಿಸಿದೆ. ಇದೇ ಸಂದರ್ಭದಲ್ಲಿ ರಾಜಕಾರಣಿಗಳು ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಉಳಿಸುವ ನಿಟ್ಟಿನಲ್ಲಿ ಭರವಸೆಯ ಮಹಾಪೂರವನ್ನೇ ಹರಿಸಿದ್ದಾರೆ. ದೈನಂದಿನ ಬಳಕೆಯಲ್ಲಿ ಕನ್ನಡವನ್ನು ಅಳವಡಿಸುವ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿವೆೆ. ಸರಕಾರಿ ಕಚೇರಿಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎನ್ನುವ ಮಾತುಗಳೂ ಬಲ ಪಡೆದಿವೆೆ. ಹಳದಿ -ಕೆಂಪು ಬಾವುಟಗಳು ನಾಡಿನುದ್ದಕ್ಕೂ ಅರಳಿವೆ. ಆದರೆ ಈ ಒಂದು ದಿನದ ಕನ್ನಡ ಪ್ರೇಮ ರಾಜ್ಯದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಎಷ್ಟರಮಟ್ಟಿಗೆ ಸಹಾಯ ಮಾಡೀತು? ಎನ್ನುವುದರ ಬಗ್ಗೆ ಆತ್ಮಾವಲೋಕನವನ್ನು ಮಾಡಬೇಕಾಗಿದೆ. ಕನ್ನಡ ಅನುಷ್ಠಾನವೆನ್ನುವುದು ರಾಜಕೀಯ ಇಚ್ಛಾಶಕ್ತಿಯಾಗಿ ಬದಲಾಗದೇ ಇದ್ದರೆ, ನಾವು ಅದೆಷ್ಟೇ ಕನ್ನಡ ಕನ್ನಡವೆಂದು ಬೀದಿಯಲ್ಲಿ ನಿಂತು ಬೊಬ್ಬಿಟ್ಟರೂ ಕನ್ನಡ ಉಳಿಯುವುದು ಕಷ್ಟ.
ಕರ್ನಾಟಕ ರಾಜ್ಯ ಬಹುಭಾಷಿಗರ ನಾಡು. ಮನೆ ಭಾಷೆಯನ್ನೇ ನಾವು ‘ಮಾತೃಭಾಷೆ’ಯೆಂದು ವ್ಯಾಖ್ಯಾನಿಸುವುದಾದರೆ, ಕನ್ನಡಿಗರಲ್ಲಿ ಶೇ. 50ಕ್ಕೂ ಅಧಿಕ ಮಂದಿ ಕನ್ನಡೇತರ ಮಾತೃಭಾಷಿಕರಿದ್ದಾರೆ. ತುಳು, ಕೊಂಕಣಿ, ಮರಾಠಿ, ಉರ್ದು, ಬ್ಯಾರಿ, ಕೊಡವ, ಅರೆಭಾಷೆ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳನ್ನು ಇಲ್ಲಿ ಮನೆ ಭಾಷೆಯಾಗಿ ಆಡುತ್ತಾರೆ. ಇವರೆಲ್ಲ ಕನ್ನಡವನ್ನು ತಮ್ಮದಾಗಿಸಿಕೊಳ್ಳುವುದು ಶಾಲೆಗಳಲ್ಲಿ. ಮೈಸೂರು ಕರ್ನಾಟಕ ಭಾಗದಲ್ಲಿ ಕನ್ನಡವನ್ನು ಮಾತೃಭಾಷೆಯನ್ನಾಗಿಸಿಕೊಂಡವರ ಸಂಖ್ಯೆ ಬಹುದೊಡ್ಡದಿದೆ. ದಕ್ಷಿಣ ಕನ್ನಡದಲ್ಲಿ ತುಳು, ಕೊಂಕಣಿ, ಬ್ಯಾರಿ, ಉತ್ತರ ಕರ್ನಾಟಕದಲ್ಲಿ ಉರ್ದು, ಮರಾಠಿ, ತೆಲುಗು ಮಾತೃಭಾಷಿಗರನ್ನು ಕಾಣಬಹುದು. ಮಾತೃಭಾಷೆ-ರಾಜ್ಯಭಾಷೆ ಇವರೆಡರ ನಡುವೆ ಇವರು ಸಮನ್ವಯವನ್ನು ಸಾಧಿಸಿಕೊಳ್ಳುವುದು ಅತ್ಯಗತ್ಯ. ಯಾಕೆಂದರೆ ಒಬ್ಬಳು ಹೆತ್ತ ತಾಯಿಯಾದರೆ, ಇನ್ನೊಬ್ಬಳು ಮಡಿಲಲ್ಲಿಟ್ಟು ಸಾಕಿ, ಬೆಳೆಸಿದ ತಾಯಿ. ಮತ್ತು ಈ ನಾಡಿನ ಕೋಟ್ಯಂತರ ಜನರು ಈ ಇಬ್ಬರೂ ತಾಯಂದಿರ ಹಾಲುಂಡು ಬೆಳೆದು ಕನ್ನಡದ ನೆಲಜಲಕ್ಕೆ ಋಣಿಯಾಗಿ ಬದುಕುತ್ತಾ ಬರುತ್ತಿದ್ದಾರೆ. ಕನ್ನಡವನ್ನು ಕಟ್ಟುವಲ್ಲಿ ಕನ್ನಡ ಮಾತೃಭಾಷಿಕರು ಮಾತ್ರವಲ್ಲದೆ, ರಾಜ್ಯ ಭಾಷೆಯಾಗಿ ಸ್ವೀಕರಿಸಿದವರ ಕೊಡುಗೆಯೂ ಮಹತ್ತರ ವಾದುದು. ಆದರೆ ಯಾವಾಗ ಶಿಕ್ಷಣ ಕ್ಷೇತ್ರದಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾಬಲ್ಯವನ್ನು ಸಾಧಿಸಿತೋ, ಅಲ್ಲಿಂದ ಕನ್ನಡೇತರ ಮಾತೃಭಾಷಿಗರ ಪಾಲಿಗೆ ಕನ್ನಡ ಭಾಷೆ ದೂರವಾಗುತ್ತಾ ಬರುತ್ತಿದೆ. ಒಂದನೇ ತರಗತಿಯಿಂದ ಅ, ಆ ತಿದ್ದುತ್ತಾ ಕನ್ನಡ ಕಲಿತವರ ಮಕ್ಕಳು ಇಂದು, ಎಬಿಸಿಡಿ ಮೂಲಕ ಶಿಕ್ಷಣಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರಿಗೆ ಕನ್ನಡ ಒಂದು ಪಠ್ಯವಾಗಿ ಮಾತ್ರ ಅಲ್ಲಿ ಪರಿಚಯ. ಹೀಗೆ ಬೆಳೆದ ಮಕ್ಕಳಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಎಷ್ಟರಮಟ್ಟಿಗೆ ಉಳಿಯಬಹುದು ಎನ್ನುವ ಆತಂಕ ಪೋಷಕರಲ್ಲಿದೆ. ಆದರೆ ಇಂಗ್ಲಿಷ್ ಇಲ್ಲದೆ ಆಧುನಿಕ ಬದುಕನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿರುವುದರಿಂದ, ಕನ್ನಡವನ್ನು ಭವಿಷ್ಯದಲ್ಲಿ ಉಳಿಸಲು ಸರಕಾರಿ ಶಾಲೆಗಳನ್ನು ಪರಿಣಾಮಕಾರಿಯಾಗಿ ಬಳಸುವುದು ಸರಕಾರದ ಬಳಿ ಇರುವ ಏಕೈಕ ಅಸ್ತ್ರವಾಗಿದೆ. ಕನ್ನಡ-ಇಂಗ್ಲಿಷ್ ನಡುವಿನ ಸಮನ್ವಯದಲ್ಲಿ ಮಾತ್ರ ಇದು ಸಾಧ್ಯ.
ರಾಜ್ಯದಲ್ಲಿ ಕನ್ನಡ ಮಾಧ್ಯಮದ ಕಾರಣಕ್ಕಾಗಿಯೇ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿ ಅವುಗಳು ಮುಚ್ಚುತ್ತಿವೆ ಎನ್ನುವ ಆರೋಪಗಳಿವೆ. ಆದರೆ ಇದು ಪೂರ್ಣ ಸತ್ಯವಲ್ಲ. ಒಂದೆಡೆ ಇಂಗ್ಲಿಷ್ ಬಗೆಗಿನ ಮೇಲರಿಮೆ, ಮಗದೊಂದೆಡೆ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಗಳಿರುವುದು ಕೂಡ ಶಾಲೆಗಳು ಮುಚ್ಚಲು ಕಾರಣವಾಗಿವೆೆ. ಶಿಕ್ಷಕರ ಕೊರತೆ, ಕಟ್ಟಡಗಳ ಕೊರತೆ, ಶೌಚಾಲಯ, ಗ್ರಂಥಾಲಯ ಮೊದಲಾದ ಮೂಲಭೂತ ಸೌಕರ್ಯಗಳ ಕೊರತೆಗಳು ಸರಕಾರಿ ಶಾಲೆಗಳಲ್ಲಿ ಎದ್ದು ಕಾಣುವಂತಿವೆ. ರಾಜ್ಯದ 6,400 ಸರಕಾರಿ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಇಂತಹ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಎಂತಹ ಗುಣಮಟ್ಟದ ಶಿಕ್ಷಣ ದೊರಕಬಹುದು ಎಂದು ಪೋಷಕರು ಆತಂಕಪಡುವುದು ಸಹಜವೇ ಆಗಿದೆ. ಇದೇ ಸಂದರ್ಭದಲ್ಲಿ, ಬದುಕಲು ಇಂಗ್ಲಿಷ್ ಅತ್ಯಗತ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಮಾಧ್ಯಮಗಳಲ್ಲಿ ಕಲಿತ ಮಕ್ಕಳ ಶಿಕ್ಷಣ ಅತ್ಯಂತ ಕಳಪೆಯಾಗಿದೆ. ವೈದ್ಯಕೀಯ, ಇಂಜಿನಿಯರಿಂಗ್‌ನಂತಹ ಉನ್ನತ ಶಿಕ್ಷಣ ಕಲಿಕೆಯ ಸಂದರ್ಭದಲ್ಲಿ ಇದು ವಿದ್ಯಾರ್ಥಿಗಳ ಪಾಲಿಗೆ ತೊಡಕಾಗುತ್ತಿದೆ. ಈ ಎಲ್ಲ ಸ್ಥಿತಿಯ ಲಾಭಗಳನ್ನು ಖಾಸಗಿ ಶಾಲೆಗಳು ತನ್ನದಾಗಿಸಿಕೊಳ್ಳುತ್ತಿವೆ. ಕನ್ನಡ ಮಾಧ್ಯಮದ ಕಾರಣಕ್ಕಾಗಿ ಸರಕಾರಿ ಶಾಲೆಗಳು ಮುಚ್ಚಬಾರದು. ಯಾಕೆಂದರೆ ಸರಕಾರಿ ಶಾಲೆಗಳನ್ನು ನಿರ್ಮಿಸಿರುವುದು ಶೋಷಿತ ಸಮುದಾಯದ ಶಿಕ್ಷಣದ ಹಕ್ಕನ್ನು ಪೂರೈಸಲು. ಈ ಸಂದರ್ಭದಲ್ಲಿ ಇಂಗ್ಲಿಷ್ ಮತ್ತು ಕನ್ನಡವನ್ನು ಜೊತೆಜೊತೆಯಾಗಿ ಸರಕಾರಿ ಶಾಲೆಗಳಲ್ಲಿ ಕಲಿಸುವುದು ಮಾತ್ರವಲ್ಲ, ಆಧುನಿಕ ದಿನಗಳಿಗೆ ತಕ್ಕಂತೆ ಸರಕಾರಿ ಶಾಲೆಗಳಲ್ಲಿ ಮಾರ್ಪಾಡುಗಳನ್ನು ತಂದು ಇಂಗ್ಲಿಷ್ ಮಾಧ್ಯಮಗಳಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ತನ್ನೆಡೆಗೆ ಸೆಳೆಯುವ ಶಕ್ತಿಯನ್ನು ಸರಕಾರಿ ಶಾಲೆಗಳು ತಮ್ಮದಾಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಕರಿಗೆ, ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಬೇಕು. ಇದು ರಾಜ್ಯದಲ್ಲಿ ಕನ್ನಡವನ್ನು ಉಳಿಸಲು ಸರಕಾರ ಇಡಬಹುದಾದ ಮೊದಲ ಹೆಜ್ಜೆ.
ಎರಡನೆಯದು, ಸರಕಾರಿ ಕಚೇರಿಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವುದು. ಎಲ್ಲ ಕಚೇರಿಗಳಲ್ಲಿ ಸಂವಹನ ಭಾಷೆಯಾಗಿ ಕನ್ನಡವಿರಬೇಕು. ನ್ಯಾಯಾಲಯಗಳಲ್ಲಿ ಕಲಾಪಗಳು ಕನ್ನಡದಲ್ಲೇ ಇರಬೇಕು. ಕಕ್ಷಿದಾರರ ಪರವಾಗಿ ವಕೀಲರು ಕನ್ನಡದಲ್ಲೇ ವಾದ ಮಂಡಿಸಲು ನ್ಯಾಯಾಧೀಶರು ಸೂಚನೆ ನೀಡಬೇಕು. ಕನ್ನಡ ಭಾಷೆಯನ್ನು ಆಡುವವರು ಎಲ್ಲಿ ಬೇಕಾದರೂ ಸುಲಲಿತವಾಗಿ ತಮ್ಮ ದೈನಂದಿನ ವ್ಯವಹಾರಗಳನ್ನು ಮುಗಿಸಲು ಸಾಧ್ಯ ಎನ್ನುವ ಆತ್ಮವಿಶ್ವಾಸ ಜನರಲ್ಲಿ ಬೆಳೆಯಬೇಕು. ಬ್ಯಾಂಕ್‌ಗಳಲ್ಲಿ, ರೈಲ್ವೆ ಇಲಾಖೆಗಳಲ್ಲಿ ಉತ್ತರ ಭಾರತದ ಹಿಂದಿ ಭಾಷಿಗರನ್ನು ತುಂಬಿ, ಅವರನ್ನು ಕನ್ನಡಿಗರ ಮೇಲೆ ಹೇರುವ ಪ್ರಯತ್ನ ನಡೆಯುತ್ತಿದೆ. ಕರ್ನಾಟಕದಲ್ಲಿ ಯಾರೇ ಕೆಲಸ ಮಾಡಬೇಕಾದರೂ ಅವರು ಕರ್ನಾಟಕಕ್ಕೆ ಕಾಲಿಟ್ಟ ನಾಲ್ಕು ತಿಂಗಳ ಒಳಗೆ ಕನ್ನಡ ಕಡ್ಡಾಯವಾಗಿ ಮಾತನಾಡಲು ಕಲಿಯಬೇಕು ಎನ್ನುವ ಆದೇಶವನ್ನು ಸರಕಾರ ಹೊರಡಿಸಬೇಕು. ದೈನಂದಿನ ಬದುಕಿನಲ್ಲಿ ಕನ್ನಡ ಚಲಾವಣೆಯಲ್ಲಿ ಇರುವಂತೆ ಮಾಡಲು ಇಷ್ಟು ಕ್ರಮ ತೆಗೆದುಕೊಂಡರೆ, ಕನ್ನಡ ಉಳಿಸುವಲ್ಲಿ ಸರಕಾರ ಎರಡನೆಯ ಗಟ್ಟಿ ಹೆಜ್ಜೆಯೊಂದನ್ನು ಊರಿದಂತಾಗುತ್ತದೆ. ಮೂರನೆಯ ಹೆಜ್ಜೆಯಾಗಿ, ಕನ್ನಡ ಭಾಷಿಗರಿಗೆ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನೀಡುವುದು. ಕನ್ನಡ ನೆಲ ಜಲವನ್ನು ಬಳಸುವ, ಕನ್ನಡಿಗರ ತೆರಿಗೆಯ ಹಣದಲ್ಲಿ ಸಬ್ಸಿಡಿಯ ಸವಲತ್ತುಗಳನ್ನು ಅನುಭವಿಸುವ ಈ ಉದ್ಯಮ ಸಂಸ್ಥೆಗಳು ಕನ್ನಡ ಭಾಷಿಗರಿಗಾಗಿ ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಸರಕಾರ ದಿಟ್ಟ ನಿರ್ಧಾರವನ್ನು ತೆಗೆದುಕೊಂಡರೆ, ಮೂರನೆಯ ಹೆಜ್ಜೆಯನ್ನು ಮುಂದಿಟ್ಟಂತಾಗುತ್ತದೆ.
ಉಳಿದಂತೆ ಕನ್ನಡಿಗರ ಮುಂದಿರುವ ಅತಿ ದೊಡ್ಡ ಸವಾಲು, ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಾ, ಕನ್ನಡಿಗರ ಮೇಲೆ ಹಂತಹಂತವಾಗಿ ಹಿಂದಿ ಭಾಷೆಯನ್ನು, ಉತ್ತರ ಭಾರತೀಯರನ್ನು ಹೇರುವ ಕೇಂದ್ರ ಸರಕಾರದ ಪ್ರಯತ್ನ. ಈ ಸವಾಲನ್ನು ತಮಿಳು ನಾಡು, ಕೇರಳ ರಾಜ್ಯಗಳು ಎದುರಿಸಿದಷ್ಟು ಪರಿಣಾಮಕಾರಿಯಾಗಿ ಎದುರಿಸಲು ಕರ್ನಾಟಕಕ್ಕೆ ಇದುವರೆಗೆ ಸಾಧ್ಯವಾಗಿಲ್ಲ. ಕರ್ನಾಟಕವನ್ನು ರಾಷ್ಟ್ರೀಯ ಪಕ್ಷಗಳೇ ನಿಯಂತ್ರಿಸುವುದು ಮತ್ತು ಜೆಡಿಎಸ್ ಎನ್ನುವ ಗೋಸುಂಬೆ ಸ್ವಹಿತಾಸಕ್ತಿಗಾಗಿ ಕೇಂದ್ರಕ್ಕೆ ತನ್ನನ್ನು ಮಾರಿಕೊಂಡಿರುವುದು ಇದಕ್ಕೆ ಕಾರಣವಾಗಿರಬಹುದು. ಅಷ್ಟೇ ಅಲ್ಲ, ಕೇಂದ್ರಕ್ಕೆ ಅತಿ ಹೆಚ್ಚು ಸಂಸದರನ್ನು ಕರ್ನಾಟಕದ ಜನತೆ ಬಿಜೆಪಿಯಿಂದ ನೀಡಿದ್ದರೂ, ಈ ಸಂಸದರು ಕೇಂದ್ರ ವರಿಷ್ಠರ ಜೀತ ಮಾಡುತ್ತಾ ಕನ್ನಡದ ಹಿತಾಸಕ್ತಿಯನ್ನು ಬಲಿಕೊಡುತ್ತಿದ್ದಾರೆ. ಈ ಸಂಸದರ ಮೂಲಕವೇ ಹಿಂದಿಯನ್ನು ಕನ್ನಡದ ಮೇಲೆ ಹೇರುವ ಪ್ರಯತ್ನ ನಡೆಯುತ್ತಿದೆ. ಇನ್ನೊಂದೆಡೆ, ಪುನರ್‌ವಿಂಗಡನೆಯ ಮೂಲಕ, ಕೇಂದ್ರಕ್ಕೆ ದಕ್ಷಿಣಭಾರತೀಯ ಸಂಸದರ ಪಾಲುದಾರಿಕೆಯನ್ನು ಕಡಿಮೆಗೊಳಿಸುವ ಪ್ರಯತ್ನ ನಡೆಯುತ್ತಿದೆ. ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಕ್ಕೆ ಕರ್ನಾಟಕ ಗುರುತಿಸಲ್ಪಡುತ್ತಿದ್ದರೂ, ರಾಜ್ಯಕ್ಕೆ ಸಲ್ಲಬೇಕಾದ ನ್ಯಾಯಯುತ ತೆರಿಗೆ ಹಣವನ್ನು ನೀಡಲು ಕೇಂದ್ರ ಸರಕಾರ ಹಿಂಜರಿಯುತ್ತಿದೆ. ಕರ್ನಾಟಕ ಈಗಾಗಲೇ ಕನ್ನಡ ಮತ್ತು ಇಂಗ್ಲಿಷ್ ಮೂಲಕ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಗುರುತಿಸಲ್ಪಡುತ್ತಿದೆ. ಅಭಿವೃದ್ಧಿ, ಶಿಕ್ಷಣ, ಐಟಿಬಿಟಿ ಎಲ್ಲದರಲ್ಲೂ ರಾಜ್ಯ ಬಹಳಷ್ಟು ಸಾಧನೆಗಳನ್ನು ಮಾಡಿದೆ. ಹಿಂದಿ ಮಾತನಾಡುವ ಉತ್ತರ ಭಾರತೀಯರಿಗಿಂತ ಕರ್ನಾಟಕ ಎಷ್ಟೋ ಎತ್ತರದಲ್ಲಿದೆ. ಇದೀಗ ಕನ್ನಡಿಗರು ಕಟ್ಟಿ ನಿಲ್ಲಿಸಿರುವ ಅಭಿವೃದ್ಧಿಯ ಮೇಲೆ ಉತ್ತರ ಭಾರತೀಯರು ಹಕ್ಕು ಸಾಧಿಸಲು ಮುಂದಾಗುತ್ತಿದ್ದಾರೆ. ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳು ಕನ್ನಡದ ಹಿತಾಸಕ್ತಿಯ ಪ್ರಶ್ನೆ ಬಂದಾಗ ಒಂದಾಗಿ ನಿಂತು ಮಾತನಾಡಿದರೆ ಸಾಕು, ಕನ್ನಡ ಉಳಿಸುವಲ್ಲಿ ನಾಲ್ಕನೆಯ ಹೆಜ್ಜೆಯನ್ನೂ ಪೂರ್ತಿ ಮಾಡಿದಂತಾಗುತ್ತದೆ. ಕರ್ನಾಟಕದ ಬೇಡಿಕೆಗಳಿಗೆ ಸಂಸತ್‌ನಲ್ಲಿ ಧ್ವನಿಯಾಗುವ ಮೂಲಕ ಕರ್ನಾಟಕದ ಸಂಸದರು ಕನ್ನಡ ತಾಯಿಯ ಎದೆ ಹಾಲಿನ ಋಣವನ್ನು ಸಂದಾಯ ಮಾಡಬೇಕು. ಈ ಮೂಲಕ ಕನ್ನಡ ನಾಡು ನುಡಿಯನ್ನು ಉಳಿಸಬೇಕು, ಬೆಳೆಸಬೇಕು.