ಟ್ವಿಟರ್‌ಗೆ ಎದುರಾಳಿಯಾಗಿ ಥ್ರೆಡ್ಸ್ ಆರಂಭಿಸಿದ ಮೆಟಾ
ಹೊಸದಿಲ್ಲಿ: ಟ್ವಿಟರ್‌ಗೆ ಸೆಡ್ಡು ಹೊಡೆದ ಫೇಸ್ಬುಕ್ ಮಾತೃ ಸಂಸ್ಥೆ ಮೆಟಾ ಇಂದು ಆರಂಭಿಸಿರುವ ಹೊಸ ಥ್ರೆಡ್ಸ್ ಆ್ಯಪ್, ಮೊದಲ ದಿನದ ಏಳು ಗಂಟೆಗಳೊಳಗೆ 1 ಕೋಟಿ ಸೈನ್ ಅಪ್ ಪಡೆದು ದಾಪುಗಾಲಿಟ್ಟಿದೆ.
“ಆರಂಭಗೊಂಡ ಮೊದಲ ಎರಡು ಗಂಟೆಗಳಲ್ಲಿ ಥ್ರೆಡ್ಸ್ ಸೈನ್ ಅಪ್‌ಗಳು 20 ಲಕ್ಷ ದಾಟಿದ್ದವು,” ಎಂದು ಮೆಟಾ ಸಿಇಒ ಮಾರ್ಕ್ ಝುಕರ್‌ಬರ್ಗ್ ಹೇಳಿದ್ದಾರೆ. ಮುಂದೆ ಮಾಹಿತಿ ನೀಡಿದ ಅವರು ಆರಂಭಗೊಂಡ ಮೊದಲ ನಾಲ್ಕು ಗಂಟೆಗಳಲ್ಲಿ 50 ಲಕ್ಷ ಸೈನ್ ಅಪ್ ದಾಟಿದೆ ಎಂದಿದ್ದಾರೆ.
ಥ್ರೆಡ್ಸ್ ಆ್ಯಪ್‌ನಿಂದಾಗಿ ಟ್ವಿಟರ್ ಕಳೆಗುಂದಲಿದೆಯೇ ಎಂಬ ವಿಚಾರದ ಕುರಿತಂತೆ ತಜ್ಞರು ಮಿಶ್ರ ಅಭಿಪ್ರಾಯ ಹೊಂದಿದ್ದಾರೆ. ಥ್ರೆಡ್ಸ್ ಆ್ಯಪ್ ಇನ್‌ಸ್ಟಾಗ್ರಾಂಗೆ ಲಿಂಕ್ ಆಗಿರುವುದರಿಂದ ಹಾಗೂ ಇನ್‌ಸ್ಟಾಗ್ರಾಂಗೆ ಈಗಾಗಲೇ ಸ್ಥಾಪಿತ ಬಳಕೆದಾರರಿರುವುದರಿಂದ ಟ್ವಿಟರ್‌ಗೆ ಹೋಲಿಸಿದಾಗ ಅದು ಉತ್ತಮ ಪರಿಸ್ಥಿತಿಯಲ್ಲಿರಲಿದೆ ಎಂಬುದು ಹಲವರ ಅಭಿಪ್ರಾಯವಾದರೆ, ಟ್ವಿಟರ್ ಹೆಚ್ಚಾಗಿ ಸುದ್ದಿ ಆಧಾರಿತ ದೃಷ್ಟಿಕೋನ ಹೊಂದಿರುವುದರಿಂದ ಅದನ್ನು ಅಷ್ಟು ಸುಲಭವಾಗಿ ಸ್ಥಾನಾಂತರಿಸಲು ಥ್ರೆಡ್ಸ್‌ಗೆ ಸಾಧ್ಯವಾಗದು ಎನ್ನುತ್ತಿದ್ದಾರೆ.
ಟ್ವಿಟರ್ ಬಳಕೆದಾರರ ಸಂಖ್ಯೆಯನ್ನು ದಾಟಲು ಮೆಟಾಗೆ ಇನ್‌ಸ್ಟಾಗ್ರಾಂನ ನಾಲ್ಕನೇ ಒಂದರಷ್ಟು ಬಳಕೆದಾರರಿದ್ದರೆ ಸಾಕಾಗುತ್ತದೆ.
ಥ್ರೆಡ್ಸ್‌ನಲ್ಲಿ ಬಳಕೆದಾರರು ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಂಗೆ ಶೇರ್ ಮಾಡಬಹುದು ಹಾಗೂ ಅಲ್ಲಿಂದ ಥ್ರೆಡ್ಸ್‌ಗೆ ಶೇರ್ ಮಾಡಬಹುದು. ಲಿಂಕ್, ಫೋಟೋ ಹಾಗೂ ಗರಿಷ್ಠ 5 ನಿಮಿಷ ಅವಧಿಯ ವೀಡಿಯೋಗಳನ್ನೂ ಶೇರ್ ಮಾಡಬಹುದು.