‘ಆರೆಸ್ಸೆಸ್’ವಾದಿಗಳಿಗೆ ಚುರುಕು ಮುಟ್ಟಿಸಿದ ರಾಹುಲ್ ಗಾಂಧಿ ಮಾತುಗಳು
ಎಲ್ಲವನ್ನೂ ರಾಷ್ಟ್ರವಾದ, ಹಿಂದುತ್ವದ ಜೊತೆ ಜೋಡಿಸುತ್ತಾ ತನ್ನ ರಾಜಕೀಯ ಮಾಡಿಕೊಂಡು ಬಂದ ಮೋದಿ ನೇತೃತ್ವದ ಬಿಜೆಪಿಯ ವಿರುದ್ಧವಾಗಿ ಯಾವೊಬ್ಬ ನಾಯಕನೂ ಮಾತನಾಡುವ ಪ್ರಯತ್ನವನ್ನು ಈ ಹಿಂದೆ ಮಾಡಿದ್ದಿಲ್ಲ. ಕಾಂಗ್ರೆಸ್ನವರಂತೂ ಅದನ್ನು ಮುಟ್ಟುವುದೇ ಬೇಡ ಎಂಬಂತೆ ಅಂತರ ಕಾಯ್ದುಕೊಂಡಿದ್ದರು. ಆದರೆ ರಾಹುಲ್ ಅದನ್ನೇ ಕೆಣಕುವುದರೊಂದಿಗೆ, ಬಹಳ ಮಹತ್ವದ ಸಾಧ್ಯತೆಯೊಂದನ್ನು ತೆರೆದಿದ್ದಾರೆ. ತಾವು ಅಂದುಕೊಂಡಂತೆಯೇ ನಡೆಯಬೇಕು ಎಂದುಕೊಂಡವರು ಒಮ್ಮೆ ಮುಟ್ಟಿ ನೋಡಿಕೊಳ್ಳುವ ಹಾಗೆ ರಾಹುಲ್ ಈಗ ಚುರುಕು ಮುಟ್ಟಿಸಿದ್ದಾರೆ.
ಸೋಮವಾರದ ರಾಹುಲ್ ಗಾಂಧಿ ಭಾಷಣ ಈಗ ಬಹಳ ಚರ್ಚೆಯಲ್ಲಿದೆ.
ಕಳೆದ 10 ವರ್ಷಗಳಲ್ಲಿ ಬಿಜೆಪಿ ಆಡಿದ್ದೇ ಆಟವಾಗಿತ್ತು. ವಿಪಕ್ಷಗಳ ದನಿ ಕೂಡ ಕೇಳಿಸದ ಸ್ಥಿತಿಯಲ್ಲಿ, ತೆಗೆದುಕೊಳ್ಳಲಾದ ತೀರ್ಮಾನಗಳಲ್ಲಿ ವಿಪಕ್ಷಗಳ ಅಭಿಪ್ರಾಯಕ್ಕೆ ಯಾವ ಬೆಲೆಯೂ ಇಲ್ಲದಂತಾಗಿ ಹೋಗಿತ್ತು. ಸೋಮವಾರ ಸಂಸತ್ತಿನಲ್ಲಿ ರಾಹುಲ್ ಮಾಡಿದ ಭಾಷಣ ಹಿಂದಿನ ಹತ್ತೂ ವರ್ಷಗಳ ವಿಪಕ್ಷಗಳ ದನಿಯನ್ನೂ ಕೂಡಿಸಿಕೊಂಡ ಹಾಗೆ ಮೊಳಗಿದೆ. ಮೋದಿ ಸರಕಾರದ ಎದೆ ನಡುಗುವ ಹಾಗೆ ಮಾಡಿದೆ.
ಎಲ್ಲವನ್ನೂ ರಾಷ್ಟ್ರವಾದ, ಹಿಂದುತ್ವದ ಜೊತೆ ಜೋಡಿಸುತ್ತಾ ತನ್ನ ರಾಜಕೀಯ ಮಾಡಿಕೊಂಡು ಬಂದಿದೆ ಮೋದಿ ನೇತೃತ್ವದ ಬಿಜೆಪಿ. ಅದರ ವಿರುದ್ಧವಾಗಿ ಯಾವೊಬ್ಬ ನಾಯಕನೂ ಮಾತನಾಡುವ ಪ್ರಯತ್ನವನ್ನು ಈ ಹಿಂದೆ ಮಾಡಿದ್ದಿಲ್ಲ. ಕಾಂಗ್ರೆಸ್ನವರಂತೂ ಅದನ್ನು ಮುಟ್ಟುವುದೇ ಬೇಡ ಎಂಬಂತೆ ಅಂತರ ಕಾಯ್ದುಕೊಂಡಿದ್ದರು. ಆದರೆ ರಾಹುಲ್ ಅದನ್ನೇ ಕೆಣಕುವುದರೊಂದಿಗೆ, ಬಹಳ ಮಹತ್ವದ ಸಾಧ್ಯತೆಯೊಂದನ್ನು ತೆರೆದಿದ್ದಾರೆ.
ತಾವು ಅಂದುಕೊಂಡಂತೆಯೇ ನಡೆಯಬೇಕು ಎಂದುಕೊಂಡವರು ಒಮ್ಮೆ ಮುಟ್ಟಿ ನೋಡಿಕೊಳ್ಳುವ ಹಾಗೆ ರಾಹುಲ್ ಈಗ ಚುರುಕು ಮುಟ್ಟಿಸಿದ್ದಾರೆ.
ಮೋದಿ, ಬಿಜೆಪಿ, ಆರೆಸ್ಸೆಸ್ ಅಂದರೆ ಇಡೀ ಹಿಂದೂ ಸಮುದಾ ಯವಲ್ಲ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಬಿಜೆಪಿ ಈವರೆಗೂ ಕಟ್ಟಿಕೊಂಡಿದ್ದ ಭದ್ರಕೋಟೆಗೇ ಘಾತ ಕೊಟ್ಟಂತಾಗಿದೆ.
ಕೇಂದ್ರ ಸರಕಾರದಲ್ಲಿರುವ, ಹಿಂದೂಗಳೆಂದು ಕರೆದುಕೊಳ್ಳು ವವರು ಹಿಂದೂ ಧರ್ಮದ ಮೂಲಭೂತ ಅಂಶ ಅಹಿಂಸೆಗೆ ವಿರುದ್ಧವಾಗಿ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿ, ಬಿಜೆಪಿ, ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದಕ್ಕೆ ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ‘‘ಇಡೀ ಹಿಂದೂ ಸಮಾಜವೇ ಹಿಂಸೆಗೆ ಕಾರಣ ಎನ್ನುವುದು ಗಂಭೀರ ವಿಚಾರ’’ ಎಂದು ಹೇಳಿದರೆ, ರಾಹುಲ್ ಗಾಂಧಿ ತಕ್ಷಣವೇ ಪ್ರತಿಕ್ರಿಯೆ ನೀಡಿ, ‘‘ಮೋದಿ, ಬಿಜೆಪಿ, ಆರೆಸ್ಸೆಸ್ ಅಂದರೆ ಇಡೀ ಹಿಂದೂ ಸಮುದಾಯವಲ್ಲ’’ ಎಂದು ತಿರುಗೇಟು ನೀಡಿದರು.
‘ಹಿಂದೂ’ ಎಂಬ ಶಬ್ದ ಬಂದ ಕೂಡಲೇ ಗುತ್ತಿಗೆ ತೆಗೆದುಕೊಂಡಿರುವ ರೀತಿಯಲ್ಲಿ ಎದ್ದುಬಿಡುವ ಬಿಜೆಪಿಗೆ ರಾಹುಲ್ ಉತ್ತರ ಸರಿಯಾದ ಹೊಡೆತವನ್ನೇ ಕೊಟ್ಟಂತಿದೆ.
ಹೇಗೆ ರಾಹುಲ್ ಭಾಷಣ ಹಲವಾರು ಮಹತ್ವದ ವಿಚಾರಗಳನ್ನು ಎತ್ತಿತು ಮತ್ತು ಆ ಇಡೀ ಸಂದರ್ಭ ಹೇಗಿತ್ತು ಎಂಬುದನ್ನು ಗಮನಿಸೋಣ.
1.ಜೈ ಸಂವಿಧಾನ್ ಘೋಷಣೆ
ರಾಹುಲ್ ಗಾಂಧಿ ಮಾತನಾಡಲು ಎದ್ದು ನಿಂತಾಗ ಬಿಜೆಪಿ ಸದಸ್ಯರು ‘‘ಜೈ ಶ್ರೀರಾಮ್’’ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ‘‘ಜೈ ಸಂವಿಧಾನ್’’ ಎಂದು ತಿರುಗೇಟು ನೀಡಿದರು.
ಕಳೆದ ಕೆಲವು ವರ್ಷಗಳಿಂದ ಸಂವಿಧಾನಕ್ಕೆ ಬಿಜೆಪಿಯಿಂದ ಆಪಾಯ ಎದುರಾಗಿದೆ ಎಂಬುದು ಕಟು ವಾಸ್ತವ. ಸಂವಿಧಾನವನ್ನು ರಕ್ಷಿಸುವ ನಿಟ್ಟಿನಲ್ಲಿ ವಿಪಕ್ಷ ಮೈತ್ರಿಕೂಟ ಮುಖ್ಯ ಹೆಜ್ಜೆಯಿಟ್ಟಿದ್ದು, ಅಧಿವೇಶನದ ಮೊದಲ ದಿನದಿಂದಲೇ ಅದನ್ನು ಮಾಡಿಕೊಂಡು ಬರಲಾಗಿದೆ. ‘ಜೈ ಸಂವಿಧಾನ್’ ಘೋಷಣೆ ಅದರ ಒಂದು ಭಾಗವಾಗಿ ಬಹಳ ಮುಖ್ಯ ಸಂಗತಿ.
ಜಾತ್ಯತೀತ ದೇಶದ ಸಂಸತ್ತಿನೊಳಗೆ ಬಿಜೆಪಿ ಸಂವೇದನಾರಹಿತವಾಗಿ ‘ಜೈಶ್ರೀರಾಮ್’ ಘೋಷಣೆ ಮಾಡಿದರೆ, ಅದಕ್ಕೆ ಉತ್ತರವಾಗಿ ರಾಹುಲ್ ‘ಜೈ ಸಂವಿಧಾನ್’ ಘೋಷಣೆ ಮೂಲಕ ಸದನದೊಳಗೆ ದೊಡ್ಡ ಅಭಿಯಾನವೊಂದರ ಸೂತ್ರ ಹಿಡಿದಂತಾಗಿದೆ.
2. ಧೈರ್ಯ ಮತ್ತು ಅಹಿಂಸೆ
ರಾಹುಲ್ ಮಾತನಾಡುತ್ತ ಶಿವನ ಚಿತ್ರವನ್ನು ಲೋಕಸಭೆಯಲ್ಲಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
‘‘ಇಸ್ಲಾಮ್, ಗುರುನಾನಕ್, ಬುದ್ಧ, ಮಹಾವೀರ ಸೇರಿದಂತೆ ಭಾರತದಲ್ಲಿ ಯಾವುದೇ ಮಹಾಪುರುಷರ ಉದಾಹರಣೆ ನೋಡಿದರೂ ಅವರೆಲ್ಲರೂ ಅಹಿಂಸೆಯನ್ನು ಬೋಧಿಸಿದರು. ಹಿಂಸೆಯನ್ನು ವಿರೋಧಿಸಿದರು. ಆದರೆ ಹಿಂದೂಗಳೆಂದು ಕರೆದುಕೊಳ್ಳುವ ಕೆಲವರು ಹಿಂದೂ ಧರ್ಮದ ಮೂಲಭೂತ ಅಂಶ ಅಹಿಂಸೆಗೆ ವಿರುದ್ಧವಾಗಿ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ. ದ್ವೇಷ ಹರಡುತ್ತಿದ್ದಾರೆ, ಬರೀ ಸುಳ್ಳನ್ನೇ ಹೇಳುತ್ತಿದ್ದಾರೆ’’ ಎಂದು ರಾಹುಲ್ ಹೇಳಿದರು. ಹಿಂದುತ್ವ ಎಂದರೆ ಭಯ, ದ್ವೇಷ ಹಾಗೂ ಸುಳ್ಳುಗಳನ್ನು ಹರಡುವುದಲ್ಲ ಎಂದರು.
ಎಲ್ಲಾ ಧರ್ಮಗಳು ಧೈರ್ಯದ ಬಗ್ಗೆ ಮಾತಾಡುತ್ತವೆ. ಧೈರ್ಯದ ಮಹತ್ವವನ್ನು ಸಾರುತ್ತವೆ ಎಂದು ರಾಹುಲ್ ಹೇಳಿದರು. ಧೈರ್ಯ ಮತ್ತು ಅಹಿಂಸೆಯನ್ನು ಶಿವ ನಮಗೆ ತೋರಿಸಿರುವುದಾಗಿ ಶಿವನ ಚಿತ್ರ ತೋರಿಸುತ್ತ ಹೇಳಿದರು.
3. ಶಿವನ ಕೊರಳು ಸುತ್ತಿರುವ ಹಾವು
ಶಿವನ ಚಿತ್ರವನ್ನು ಅವರು ಪಕ್ಷದೊಂದಿಗೆ ಸಮೀಕರಿಸಿ ವಿವರಿಸಿದರು.
ಭಯಪಡಬಾರದು ಮತ್ತು ಭಯವನ್ನು ಎದುರಿಸಬೇಕು ಎಂಬ ಸಂದೇಶ ಶಿವನ ಚಿತ್ರದಲ್ಲಿದೆ. ಶಿವನ ಕೊರಳನ್ನು ಸುತ್ತಿಕೊಂಡಿರುವ ಹಾವು ಇದನ್ನು ನಮಗೆ ತೋರಿಸುತ್ತದೆ ಮತ್ತು ಶಿವನ ಅಭಯ ಮುದ್ರೆ ಎಲ್ಲವನ್ನೂ ಸಹಿಸಿ ಶಾಂತವಾಗಿರುವುದನ್ನು ಕಲಿಸುತ್ತದೆ ಎಂದು ಹೇಳಿದ ರಾಹುಲ್, ಸರಕಾರದ ಹಲವು ಬಗೆಯ ದಾಳಿಗಳ ನಂತರವೂ ವಿಪಕ್ಷ ಹೋರಾಡಿರುವುದು ಇದೇ ಮನೋಭಾವದಿಂದ ಎಂದರು.
ಇದು ಬಿಜೆಪಿಯ ವಿರುದ್ಧ ಅವರದೇ ಅಸ್ತ್ರ ಬಳಸಿ ಪ್ರತಿದಾಳಿ ಮಾಡಿದ ಹಾಗಿತ್ತು.
4. 55 ಗಂಟೆಗಳ ಈ.ಡಿ. ತನಿಖೆ
ಇದೇ ವೇಳೆ ರಾಹುಲ್ ಅವರು, ಸಂವಿಧಾನದ ಮೇಲಿನ ಬಿಜೆಪಿಯ ವ್ಯವಸ್ಥಿತ ದಾಳಿಯ ಬಗ್ಗೆ ಪ್ರಸ್ತಾಪಿಸಿದರು. ಸ್ವತಃ ತಮಗಾಗಿರುವ ಅನುಭವವನ್ನೂ ರಾಹುಲ್ ಹೇಳಿದರು.
‘‘ಪ್ರಧಾನಿ ನರೇಂದ್ರ ಮೋದಿ ಆದೇಶದಂತೆ ನನ್ನ ಮೇಲೆ ದಾಳಿ ನಡೆಸಲಾಯಿತು. ನನ್ನ ವಿರುದ್ಧ 20ಕ್ಕೂ ಅಧಿಕ ಪ್ರಕರಣಗಳಿವೆ. ನನ್ನ ಸಂಸತ್ ಸದಸ್ಯತ್ವ ಕಸಿಯಲಾಯಿತು. ನನ್ನ ಮನೆಯನ್ನೂ ಕಿತ್ತುಕೊಳ್ಳಲಾಯಿತು. ಈ.ಡಿ. 55 ಗಂಟೆಗಳ ಕಾಲ ನನ್ನನ್ನು ವಿಚಾರಣೆ ನಡೆಸಿತು’’ ಎಂಬುದನ್ನು ರಾಹುಲ್ ನೆನಪು ಮಾಡಿದರು.
5. ಅಗ್ನಿವೀರ್ ವಿಚಾರ
ರಾಹುಲ್ ಮಾತುಗಳಲ್ಲಿ ಅಗ್ನಿವೀರ್ ವಿಚಾರ ಬಹಳ ಪ್ರಮುಖವಾಗಿ ಬಂತು. ಅಗ್ನಿವೀರ್ ಯೋಜನೆ ಹೇಗೆ ಸಶಸ್ತ್ರ ಪಡೆಯಲ್ಲೇ ಭೇದವನ್ನೆಣಿಸುತ್ತದೆ ಎಂಬುದನ್ನು ರಾಹುಲ್ ವಿವರಿಸಿದರು.
‘‘ಅಗ್ನಿವೀರ ಕೊಲ್ಲಲ್ಪಟ್ಟರೆ ಆತನನ್ನು ಹುತಾತ್ಮ ಎಂದು ಈ ಸರಕಾರ ಕರೆಯುವುದಿಲ್ಲ. ಆತನ ಕುಟುಂಬಕ್ಕೆ ಪೆನ್ಷನ್ ಆಗಲೀ, ಪರಿಹಾರವಾಗಲೀ ಸಿಗುವುದಿಲ್ಲ. ಇದು ಸೇನೆಯಲ್ಲೇ ತಾರತಮ್ಯ ಮಾಡುತ್ತದೆ. ಅಗ್ನಿವೀರ ಈ ಸರಕಾರಕ್ಕೆ ಯೂಸ್ ಆ್ಯಂಡ್ ತ್ರೋ ಲೇಬರರ್ ನಂತಾಗಿ ಬಿಟ್ಟಿದ್ದಾನೆ’’ ಎಂದರು.
ಒಬ್ಬ ಹುತಾತ್ಮನಿಗೆ ಎಲ್ಲವೂ ಸಿಗುತ್ತದೆ. ಮತ್ತೊಬ್ಬನಿಗೆ ಏನೂ ಸಿಗುವುದಿಲ್ಲ. ದೇಶಭಕ್ತಿ ಎನ್ನುತ್ತಾರೆ. ಹಾಗಾದರೆ ಇದೆಂಥ ದೇಶಭಕ್ತಿ ಎಂದು ರಾಹುಲ್ ಪ್ರಶ್ನಿಸಿದರು.
6.ಮಣಿಪುರ ವಿಚಾರ
ಮಣಿಪುರ ಸಂಘರ್ಷದ ಉದ್ದಕ್ಕೂ ಮೋದಿ ಅಲ್ಲಿಗೆ ಭೇಟಿ ನೀಡದೆ ಇದ್ದ ವಿಚಾರವನ್ನು ರಾಹುಲ್ ಪ್ರಸ್ತಾಪಿಸಿದರು.
ಮಣಿಪುರದಲ್ಲಿ ಏನೂ ನಡೆದೇ ಇಲ್ಲ ಎನ್ನುವಂತೆ ಸರಕಾರ ನಡೆದುಕೊಳ್ಳುತ್ತಿದೆ. ಮಣಿಪುರವನ್ನು ಸರಕಾರ ನಾಗರಿಕ ಯುದ್ಧಕ್ಕೆ ನೂಕಿದೆ. ಬಿಜೆಪಿಯಿಂದಾಗಿಯೆ, ಅದರ ರಾಜಕೀಯದಿಂದಾಗಿಯೇ, ಸರಕಾರದ ನೀತಿಗಳಿಂದಾಗಿಯೇ ಮಣಿಪುರ ಹೊತ್ತಿ ಉರಿದಿದೆ ಎಂದು ರಾಹುಲ್ ಹೇಳಿದರು. ಮಣಿಪುರಕ್ಕೆ ಭೇಟಿ ನೀಡಿ ಸಾಂತ್ವನ ಹೇಳುವಂತೆ ಮಾಡಿಕೊಂಡ ಮನವಿಗೂ ಪ್ರಧಾನಿ ಸ್ಪಂದಿಸಲಿಲ್ಲ ಎಂದು ಹೇಳಿದ ರಾಹುಲ್ ಈಶಾನ್ಯ ರಾಜ್ಯಗಳ ಮಹಿಳೆಯರು ಅನುಭವಿಸುತ್ತಿರುವ ಸಂಕಟಗಳಿಗೂ ಸರಕಾರ ಸ್ಪಂದಿಸುವುದಿಲ್ಲ ಎಂದರು.
ರಾಹುಲ್ ಗಾಂಧಿ ಇವತ್ತು ಎತ್ತಿದಂತಹ ಇನ್ನೊಂದು ಮುಖ್ಯ ವಿಷಯ ದೇಶದ ಮುಸಲ್ಮಾನರಲ್ಲಿ ಬೆಳೆಯುತ್ತಿರುವಂತಹ ಭಯ.
ಈ ಬಾರಿಯ ಚುನಾವಣೆಯ ಫಲಿತಾಂಶದ ನಂತರ ಮುಸಲ್ಮಾನರ ಮೇಲೆ ಅಲ್ಲಲ್ಲಿ ದಾಳಿಯಾದಾಗ ವಿಪಕ್ಷ ಮೌನವಾಗಿತ್ತು ಎಂಬ ವ್ಯಾಪಕ ಆಕ್ಷೇಪ ಕೇಳಿ ಬಂದಿತ್ತು. ರಾಹುಲ್ ಗಾಂಧಿಯ ನಿನ್ನೆಯ ಭಾಷಣ ಕೇಳಿದರೆ ಈ ಆಕ್ಷೇಪ ರಾಹುಲ್ ಗಾಂಧಿಗೆ ಹೋಗಿ ತಲುಪಿದಂತಿದೆ.ಅವರದ್ದೇ ರೀತಿಯಲ್ಲಿ ರಾಹುಲ್ ಗಾಂಧಿ ಈ ವಿಷಯವನ್ನು ನಿನ್ನೆ ಸಂಸತ್ತಿನಲ್ಲಿ ಎತ್ತಿದ್ದಾರೆ.
ಒಂದು ಕಡೆ ಹಿಂದೂಗಳನ್ನು ಹೆದರಿಸುವ ಪ್ರಯತ್ನ ನಡೆಯುತ್ತಿದ್ದರೆ ಇನ್ನೊಂದು ಕಡೆ ಮುಸಲ್ಮಾನರ ವಿರುದ್ಧ, ಅಲ್ಪಸಂಖ್ಯಾತರ ವಿರುದ್ಧ ಅವರನ್ನು ಹೆದರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ ರಾಹುಲ್ ಕ್ರೈಸ್ತ, ಸಿಖ್ಖರ ಕುರಿತಾಗಿಯೂ ಮಾತಾಡಿದ್ದಾರೆ.
ಹೀಗೆ, ನೋಟ್ ಬ್ಯಾನ್ನಿಂದ ಹಿಡಿದು ನೀಟ್ ಹಗರಣದವರೆಗಿನ ಒಂದೊಂದು ವಿಚಾರವನ್ನೂ ಎತ್ತಿದ ರಾಹುಲ್ ಗಾಂಧಿ, ಬಿಜೆಪಿಯನ್ನೂ ಮೋದಿಯನ್ನೂ ತಬ್ಬಿಬ್ಬುಗೊಳಿಸಿದರು. ರಾಹುಲ್ ಮಾತುಗಳು ನೇರವಾಗಿ ಪ್ರಧಾನಿ ಮೋದಿಯನ್ನೇ ಗುರಿಯಾಗಿಟ್ಟುಕೊಂಡಿದ್ದವು.
ಬಿಜೆಪಿ ವಿರುದ್ಧ, ಮೋದಿ ವಿರುದ್ಧ ಸರಕಾರದ ವಿರುದ್ಧ ರಾಹುಲ್ ಕಳೆದ ಹಲವು ವರ್ಷಗಳಿಂದ ಮಾತಾಡುತ್ತಲೇ ಬಂದಿದ್ದಾರೆ. ಬಹಳ ದಿಟ್ಟವಾಗಿಯೇ, ನೇರವಾಗಿಯೇ ಎದುರಿಸಿದ್ದಾರೆ. ಆದರೆ ಈ ಸಲದ ರಾಹುಲ್ ಮಾತುಗಳಿಗೆ ಜನಾದೇಶದ ಬಲವೂ ಇತ್ತು ಎಂಬುದು ಗಮನಾರ್ಹ.
ನೋಟು ನಿಷೇಧ, ಜಿಎಸ್ಟಿ, ರೈತರ ಸಮಸ್ಯೆ, ಅಧಿಕಾರ ಹಾಗೂ ಸಂಪತ್ತಿನ ಕೇಂದ್ರೀಕರಣ, ಬಡವರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ವಿಪಕ್ಷಗಳ ನಾಯಕರು ಜೈಲಿನಲ್ಲಿರುವುದು, ಜನರನ್ನು ಬೆದರಿಸಲಾಗುತ್ತಿರುವುದು ಇವೆಲ್ಲ ವಿಚಾರಗಳೂ ರಾಹುಲ್ ಮಾತಿನಲ್ಲಿ ಬಂತು.
ರಾಹುಲ್ ಮಾತುಗಳು, ಅವರು ಎತ್ತುವ ಸವಾಲುಗಳು ಮುಂದಿನ ದಿನಗಳಲ್ಲಿ ಬಿಜೆಪಿಯ ನಿದ್ದೆಗೆಡಿಸಲಿವೆ ಎಂಬ ಸೂಚನೆಯಂತೂ ರಾಹುಲ್ ಮಾತುಗಳಲ್ಲಿ ಕಂಡಿತು.