ನಿಮ್ಮ ಆ ಕರೆಗೆ ಧನ್ಯವಾದ ರೋಹಿತ್ : ವಿದಾಯದ ಭಾಷಣದಲ್ಲಿ ರಾಹುಲ್ ದ್ರಾವಿಡ್

Update: 2024-07-02 16:47 GMT

ರಾಹುಲ್ ದ್ರಾವಿಡ್ | PC : BCCI 

ಹೊಸದಿಲ್ಲಿ : ಚಾಂಪಿಯನ್ ತಂಡವಾಗಿ ಹೊರಹೊಮ್ಮುವ ತಂಡದ ತೆರೆಮರೆಯ ಕಥೆಗಳು ಯಾವಾಗಲೂ ಹೃದಯಸ್ಪರ್ಶಿಯಾಗಿರುತ್ತವೆ. ಜೂನ್ 29ರಂದು ಬಾರ್ಬಡೋಸ್ ನಲ್ಲಿ ರೋಹಿತ್ ಬಳಗವು ಟಿ20 ವಿಶ್ವಕಪ್ ಜಯಿಸಿದ ನಂತರ ಭಾರತೀಯ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್ ನಲ್ಲಿ ತನ್ನ ವಿದಾಯದ ಭಾಷಣದಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡದ ನಿರ್ಗಮನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಹೃದಯಸ್ಪರ್ಶಿ ಸಂಗತಿಯೊಂದನ್ನು ಬಿಚ್ಚಿಟ್ಟರು.

ಕಳೆದ ವರ್ಷ ನವೆಂಬರ್ ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಟೀಮ್ ಇಂಡಿಯಾ ಆಘಾತಕಾರಿ ಸೋತ ನಂತರ ದ್ರಾವಿಡ್ ಕೋಚ್ ಹುದ್ದೆ ತ್ಯಜಿಸಲು ಬಯಸಿದ್ದರು. ಆದರೆ ನಾಯಕ ರೋಹಿತ್ ರಿಂದ ದೂರವಾಣಿ ಕರೆಯೊಂದು ಅವರ ಮನಸ್ಸನ್ನು ಬದಲಿಸಿತು. ಟಿ20 ವಿಶ್ವಕಪ್ ಅಂತ್ಯದ ತನಕವೂ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ನಿರ್ಧರಿಸಿದರು.

ಈ ನಿರ್ಧಾರದಿಂದಾಗಿ ವಿಶ್ವಕಪ್ ಗೆಲ್ಲಬೇಕೆಂಬ ದ್ರಾವಿಡ್ ಕನಸು ಕೊನೆಗೂ ಈಡೇರಿತು. ವೆಸ್ಟ್ಇಂಡೀಸ್ ನಲ್ಲಿ ನಡೆದಿದ್ದ 2007ರ ಏಕದಿನ ವಿಶ್ವಕಪ್ ನಲ್ಲಿ ತನ್ನ ನಾಯಕತ್ವದಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವಲ್ಲಿ ದ್ರಾವಿಡ್ ವಿಫಲರಾಗಿದ್ದರು.

ವಿಶ್ವಕಪ್ ಗೆಲ್ಲಲು ಸಾಧ್ಯವಾಗಿದ್ದಕ್ಕೆ ಮಹಾಗೋಡೆ ಖ್ಯಾತಿಯ ದ್ರಾವಿಡ್ ಅವರು ತನ್ನ ವಿದಾಯದ ಭಾಷಣದಲ್ಲಿ ರೋಹಿತ್ ಗೆ ಧನ್ಯವಾದ ಹೇಳಿದರು. 17 ವರ್ಷಗಳ ನಂತರ ಟಿ20 ವಿಶ್ವಕಪ್ ಗೆದ್ದ ತನ್ನ ಶಿಷ್ಯಂದಿರ ಭಾರೀ ಪ್ರಯತ್ನವನ್ನು ದ್ರಾವಿಡ್ ಶ್ಲಾಘಿಸಿದರು.

ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 7 ರನ್ ಅಂತರದಿಂದ ರೋಚಕವಾಗಿ ಮಣಿಸಿತ್ತು. ಗೆಲ್ಲಲು 177 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾವು 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಸೋಲೊಪ್ಪಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News