ಯುರೋ ಕಪ್ | ಕ್ವಾರ್ಟರ್ ಫೈನಲ್ ಗೆ ಪ್ರವೇಶ ಪಡೆದ ಟರ್ಕಿ

Update: 2024-07-03 16:15 GMT

ಲೀಪ್ಝಿಗ್ (ಜರ್ಮನಿ) : ಯುರೋ 2024 ಫುಟ್ಬಾಲ್ ಪಂದ್ಯಾವಳಿಯಲ್ಲಿ ಟರ್ಕಿ ಕ್ವಾರ್ಟರ್ ಫೈನಲ್ ತಲುಪಿದೆ. ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಮೆರಿಹ್ ಡೆಮಿರಲ್ ಅವರ ಅವಳಿ ಗೋಲುಗಳ ನೆರವಿನಿಂದ ಟರ್ಕಿಯು ಆಸ್ಟ್ರಿಯವನ್ನು 2-1 ಗೋಲುಗಳಿಂದ ಸೋಲಿಸಿದೆ.

ಕ್ವಾರ್ಟರ್ಫೈನಲ್ ನಲ್ಲಿ ಟರ್ಕಿಯು ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.

ಪಂದ್ಯ ಆರಂಭಗೊಂಡು ಕೇವಲ 57 ಸೆಕೆಂಡ್ಗಳು ಆಗಿದ್ದಾಗ ಡೆಮಿರಲ್ ತನ್ನ ಮೊದಲ ಗೋಲನ್ನು ಬಾರಿಸಿದರು. ಇದು ಯುರೋಪಿಯನ್ ಚಾಂಪಿಯನ್ಶಿಪ್ ನೌಕೌಟ್ ಪಂದ್ಯಗಳ ಇತಿಹಾಸದಲ್ಲೇ ಅತ್ಯಂತ ವೇಗದ ಗೋಲಾಗಿದೆ. ಬಳಿಕ ಪಂದ್ಯದ ದ್ವಿತೀಯಾರ್ಧದಲ್ಲಿ, 59ನೇ ನಿಮಿಷದಲ್ಲಿ ಅವರು ಹೆಡರ್ ಮೂಲಕ ಇನ್ನೊಂದು ಗೋಲು ಬಾರಿಸಿದರು.

ಆಸ್ಟ್ರಿಯ ತನ್ನ ಏಕೈಕ ಗೋಲನ್ನು ದ್ವಿತೀಯಾರ್ಧದಲ್ಲಿ ಬಾರಿಸಿತು. ಮೈಕಲ್ ಗ್ರೆಗೊರಿಶ್ ಆ ಗೋಲನ್ನು ಬಾರಿಸಿದರು. ಆದರೆ, ಟರ್ಕಿಯ ಓಟವನ್ನು ತಡೆಯಲು ಅದಕ್ಕೆ ಸಾಧ್ಯವಾಗಲಿಲ್ಲ.

ಆಸ್ಟ್ರಿಯವು 1954ರ ಬಳಿಕ, ಪ್ರಮುಖ ಪಂದ್ಯಾವಳಿಗಳಲ್ಲಿ ನಾಕೌಟ್ ಪಂದ್ಯವೊಂದರಲ್ಲಿ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ.

ಮೊದಲಾರ್ಧದಲ್ಲಿ ಆಸ್ಟ್ರಿಯ ಯಾವುದೇ ಗೋಲು ಬಾರಿಸದಂತೆ ನೋಡಿಕೊಳ್ಳುವಲ್ಲಿ ಟರ್ಕಿಯ ರಕ್ಷಣಾ ಆಟಗಾರರು ಯಶಸ್ವಿಯಾದರು. ವಿರಾಮದ ಬಳಿಕ, ಆಸ್ಟ್ರಿಯ ಹೆಚ್ಚಿನ ಉತ್ಸಾಹದಿಂದ ಆಡಿತು. ಗೋಲು ಬಾರಿಸಿ ಅಂಕಪಟ್ಟಿಯನ್ನು ಸಮಗೊಳಿಸುವ ಒಂದು ಅತ್ಯುತ್ತಮ ಅವಕಾಶವನ್ನು ಅದು ಕಳೆದುಕೊಂಡಿತು.

ಬದಲಿಗೆ, ಟರ್ಕಿಯೇ 59ನೇ ನಿಮಿಷದಲ್ಲಿ ಇನ್ನೊಂದು ಗೋಲು ಬಾರಿಸಿತು.

ಅಂತಿಮವಾಗಿ, 66ನೇ ನಿಮಿಷದಲ್ಲಿ ಗೋಲೊಂದನ್ನು ಬಾರಿಸುವಲ್ಲಿ ಆಸ್ಟ್ರಿಯ ಯಶಸ್ವಿಯಾಯಿತು. ಬದಲಿ ಆಟಗಾರ ಗ್ರೆಗೊರಿಶ್ ಆ ಗೋಲನ್ನು ಬಾರಿಸಿದರು.

ಆದರೆ, 2-1ರ ಮುನ್ನಡೆಯನ್ನು ಹೊಂದಿರುವ ಟರ್ಕಿ ಗೆಲುವಿನ ನಗೆಯನ್ನು ಬೀರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News