ಇಂಗ್ಲೆಂಡ್ ಕ್ರಿಕೆಟಿಗ ಜಾಫ್ರಿ ಬಾಯ್ಕಾಟ್ ಗೆ 2ನೇ ಬಾರಿ ಕ್ಯಾನ್ಸರ್

Update: 2024-07-03 16:20 GMT

ಜಾಫ್ರಿ ಬಾಯ್ಕಾಟ್ |  pc : ndtv 

ಲಂಡನ್ : ತಾನು ಎರಡನೇ ಬಾರಿಗೆ ಗಂಟಲಿನ ಕ್ಯಾನ್ಸರ್ ಗೆ ಒಳಗಾಗಿರುವುದಾಗಿ ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಜಾಫ್ರಿ ಬಾಯ್ಕಾಟ್ ಮಂಗಳವಾರ ಘೋಷಿಸಿದ್ದಾರೆ.

83 ವರ್ಷದ ಬಾಯ್ಕಾಟ್ ಈ ಹಿಂದೆ 2002ರಲ್ಲಿ ಗಂಟಲಿನ ಕ್ಯಾನ್ಸರ್ಗೆ ಒಳಗಾಗಿದ್ದು, ಕೀಮೋತೆರಪಿ ಮತ್ತು ರೇಡಿಯೊತೆರಪಿ ಚಿಕಿತ್ಸೆ ಪಡೆದಿದ್ದರು. ಕಳೆದ ವಾರ ಅವರು ತಪಾಸಣೆಗೆ ಒಳಗಾಗಿದ್ದಾಗ, ಕ್ಯಾನ್ಸರ್ ಮರಳಿದೆ ಎಂಬುದಾಗಿ ಅವರಿಗೆ ತಿಳಿಸಲಾಗಿದೆ.

ಮಾಜಿ ಆರಂಭಿಕ ಆಟಗಾರ ಇನ್ನು ಎರಡು ವಾರಗಳಲ್ಲಿ ಕ್ಯಾನ್ಸರ್ ಗಡ್ಡೆ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

‘‘ಕಳೆದ ಕೆಲವು ವಾರಗಳಲ್ಲಿ ನಾನು ಎಮ್ಆರ್ಐ ಸ್ಕ್ಯಾನ್, ಸಿಟಿ ಸ್ಕ್ಯಾನ್, ಪಿಇಟಿ ಸ್ಕ್ಯಾನ್ ಮತ್ತು ಎರಡು ಬಯಾಪ್ಸಿಗಳನ್ನು ಮಾಡಿಸಿಕೊಂಡಿದ್ದೇನೆ. ನನ್ನಲ್ಲಿ ಕ್ಯಾನ್ಸರ್ ಇರುವುದು ಈಗ ದೃಢಪಟ್ಟಿದೆ. ಕ್ಯಾನ್ಸರ್ ಗಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯ ಅಗತ್ಯವಿದೆ’’ ಎಂದು ಬ್ರಿಟನ್ನ ‘ಡೇಲಿ ಟೆಲಿಗ್ರಾಫ್’ ಪತ್ರಿಕೆಗೆ ನೀಡಿರುವ ಹೇಳಿಕೆಯೊಂದರಲ್ಲಿ ಬಾಯ್ಕಾಟ್ ಹೇಳಿದ್ದಾರೆ. ಅವರು ಈಗಲೂ ಈ ಪತ್ರಿಕೆಗೆ ಅಂಕಣ ಬರೆಯುತ್ತಿದ್ದಾರೆ.

100 ಪ್ರಥಮ ದರ್ಜೆ ಶತಕಗಳನ್ನು ಬಾರಿಸಿರುವ ಕೆಲವೇ ಕೆಲವು ಕ್ರಿಕೆಟಿಗರಲ್ಲಿ ಬಾಯ್ಕಾಟ್ ಒಬ್ಬರಾಗಿದ್ದಾರೆ. ಅವರು ಇಂಗ್ಲೆಂಡ್ ಪರವಾಗಿ 108 ಟೆಸ್ಟ್ ಗಳಲ್ಲಿ ಆಡಿ ಸುಮಾರು 48ರ ಸರಾಸರಿಯಲ್ಲಿ 8,000ಕ್ಕೂ ಅಧಿಕ ರನ್ ಗಳನ್ನು ಗಳಿಸಿದ್ದಾರೆ.

ಅವರು 1978ರಲ್ಲಿ, ಗಾಯಾಳು ಮೈಕ್ ಬ್ರಿಯರ್ಲಿಯ ಸ್ಥಾನದಲ್ಲಿ ನಾಲ್ಕು ಟೆಸ್ಟ್ ಗಳಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News