ನಾಳೆ ದ್ವಿತೀಯ ಏಕದಿನ: ಭಾರತಕ್ಕೆ ಸರಣಿ ಗೆಲುವಿನ ತವಕ

Update: 2023-12-18 16:04 GMT

Photo: PTI 

ಕೀಬೆಗಾ: ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನ ಪಂದ್ಯವನ್ನು ಆಡಲು ಸಜ್ಜಾಗುತ್ತಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ಗೆಲ್ಲುವ ತವಕದಲ್ಲಿದೆ. ಭಾರತದ ಬ್ಯಾಟಿಂಗ್ ಸರದಿಯಲ್ಲಿ ಖಾಲಿ ಇರುವ ಒಂದು ಸ್ಥಾನಕ್ಕಾಗಿ ರಜತ್ ಪಾಟಿದಾರ್ ಹಾಗೂ ರಿಂಕು ಸಿಂಗ್ ನಡುವೆ ತೀವ್ರ ಪೈಪೋಟಿ ಕಾಣಿಸಿಕೊಂಡಿದೆ.

ಯುವ ವೇಗಿಗಳಾದ ಅರ್ಷದೀಪ್ ಸಿಂಗ್ ಹಾಗೂ ಅವೇಶ್ ಖಾನ್ ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಗೆದ್ದಿರುವ ಟೀಮ್ ಇಂಡಿಯಾವು ಕೆ.ಎಲ್. ರಾಹುಲ್ ನಾಯಕತ್ವದಲ್ಲಿ ತನ್ನ ಪ್ರಾಬಲ್ಯವನ್ನು ಕಾಯ್ದುಕೊಳ್ಳುವ ಗುರಿ ಇಟ್ಟುಕೊಂಡಿದೆ.

ಶ್ರೇಯಸ್ ಅಯ್ಯರ್ ಭಾರತದ ಟೆಸ್ಟ್ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಅವರ ನಿರ್ಗಮನದಿಂದ ತೆರವಾದ ಒಂದು ಸ್ಥಾನಕ್ಕಾಗಿ ಎಡಗೈ ಬ್ಯಾಟರ್ ರಿಂಕು ಸಿಂಗ್ ಹಾಗೂ ಬಲಗೈ ಬ್ಯಾಟರ್ ರಜತ್ ಪಾಟಿದಾರ್ ನಡುವೆ ಪೈಪೋಟಿ ಏರ್ಪಟ್ಟಿದೆ.

ರಿಂಕು ಆರನೇ ಕ್ರಮಾಂಕದಲ್ಲಿ ಫಿನಿಶರ್ ಆಗಿ ಹೊರಹೊಮ್ಮಿದ್ದಾರೆ. ನಾಲ್ಕನೇ ಕ್ರಮಾಂಕದ ಸ್ಪೆಷಲಿಸ್ಟ್ ಬ್ಯಾಟರ್ ಆಗಿರುವ ಪಾಟಿದಾರ್ ಅವರು ಅಯ್ಯರ್‌ರಿಂದ ತೆರವಾದ ಸ್ಥಾನ ತುಂಬುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಇಂದೋರ್ ಆಟಗಾರ ಪಾಟಿದಾರ್ 2022ರಲ್ಲಿ ಭಾರತೀಯ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಈ ವರ್ಷಾರಂಭದಲ್ಲಿ ಸರ್ಜರಿಗೆ ಒಳಗಾದ ಕಾರಣ ಕಳೆದ ಒಂದು ವರ್ಷದಿಂದ ಹೆಚ್ಚು ಪಂದ್ಯಗಳಲ್ಲಿ ಆಡಿಲ್ಲ.

ರಿಂಕು ಸಿಂಗ್‌ರನ್ನು ಆಡುವ 11ರ ಬಳಗಕ್ಕೆ ಪರಿಗಣಿಸುವ ಮೊದಲು ಟೀಮ್ ಮ್ಯಾನೇಜ್‌ಮೆಂಟ್ ಸಂಜು ಸ್ಯಾಮನ್ಸ್‌ರನ್ನು ಆರನೇ ಕ್ರಮಾಂಕದಲ್ಲಿ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡಿಸುವ ಕುರಿತು ಯೋಚಿಸುವ ಸಾಧ್ಯತೆಯಿದೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ(50ಕ್ಕೂ ಅಧಿಕ ಸರಾಸರಿ) ರಿಂಕು ಸಿಂಗ್ ಟೀಮ್ ಮ್ಯಾನೇಜ್‌ಮೆಂಟ್‌ನ ನಿರ್ಧಾರದ ಮೇಲೆ ಪ್ರಭಾವ ಬೀರುವ ವಿಶ್ವಾಸದಲ್ಲಿದ್ದಾರೆ.

ಜೋಹಾನ್ಸ್‌ಬರ್ಗ್‌ನಲ್ಲಿ ರವಿವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಯುವ ಎಡಗೈ ಆರಂಭಿಕ ಬ್ಯಾಟರ್ ಬಿ.ಸಾಯಿ ಸುದರ್ಶನ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಚೊಚ್ಚಲ ಪಂದ್ಯದಲ್ಲಿ ಮಿಂಚಿದ್ದಾರೆ. ಈ ಮೂಲಕ ಭಾರತದ ಬ್ಯಾಟಿಂಗ್‌ಗೆ ಶಕ್ತಿ ತುಂಬಿದ್ದಾರೆ.

ಕ್ವಿಂಟನ್ ಡಿಕಾಕ್ ನಿವೃತ್ತಿಯ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಸರಣಿಯು ಅತ್ಯಂತ ಮುಖ್ಯವಾಗಿದೆ. ಮೊದಲ ಪಂದ್ಯದಲ್ಲಿ ಅರ್ಷದೀಪ್ ನೇತೃತ್ವದ ಭಾರತದ ಯುವ ಬೌಲರ್‌ಗಳು ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳ ಬೆವರಿಳಿಸಿದ್ದರು.

ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ದಕ್ಷಿಣ ಆಫ್ರಿಕಾ ತಂಡ ಹಗಲು-ರಾತ್ರಿ ನಡೆಯುವ ಎರಡನೇ ಪಂದ್ಯದಲ್ಲಿ ತನ್ನ ಪ್ರದರ್ಶನವನ್ನು ಉತ್ತಮಪಡಿಸಿಕೊಂಡು ತಿರುಗೇಟು ನೀಡುವ ವಿಶ್ವಾಸದಲ್ಲಿದೆ. ದಕ್ಷಿಣ ಆಫ್ರಿಕಾ ಆಡುವ 11ರ ಬಳಗದಲ್ಲಿ ಒಂದೆರಡು ಬದಲಾವಣೆ ಮಾಡುವ ಸಾಧ್ಯತೆಯಿದೆ.

ಅರ್ಷದೀಪ್ ಹಾಗೂ ಅವೇಶ್ ಖಾನ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಕಾರಣ ಭಾರತದ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಟೀಮ್ ಮ್ಯಾನೇಜ್‌ಮೆಂಟ್ ಪ್ರಯೋಗದ ನಡೆಸಲು ಮುಂದಾದರೆ ಮೊದಲ ಪಂದ್ಯದಲ್ಲಿ 7 ಓವರ್‌ಗಳಲ್ಲಿ 46 ರನ್ ನೀಡಿ ವಿಕೆಟ್ ಪಡೆಯಲು ವಿಫಲರಾಗಿದ್ದ ಪಶ್ಚಿಮಬಂಗಾಳದ ವೇಗಿ ಮುಕೇಶ್ ಕುಮಾರ್ ಸ್ಥಾನಕ್ಕೆ ಅವರದೇ ರಾಜ್ಯದ ಆಕಾಶ್ ದೀಪ್ ಸೇರಿಕೊಳ್ಳುವ ಸಾಧ್ಯತೆಯಿದೆ.

ಸ್ಪಿನ್ ವಿಭಾಗದಲ್ಲಿರುವ ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಕೊಡುಗೆ ನೀಡಲು ಕಾತರದಿಂದಾಗಿದ್ದಾರೆ. ಈ ಇಬ್ಬರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಏಕದಿನ ಸರಣಿಗೆ ಮಾತ್ರ ಆಯ್ಕೆಯಾಗಿರುವ ಇನ್ನೋರ್ವ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವಕಾಶಕ್ಕಾಗಿ ಇನ್ನಷ್ಟು ಕಾಯಬೇಕಾಗಿದೆ.

ಕೆ .ಎಲ್. ರಾಹುಲ್ ಬಳಗವು ದಕ್ಷಿಣ ಆಫ್ರಿಕಾ ವಿರುದ್ಧ ಮತ್ತೊಂದು ಗೆಲುವು ದಾಖಲಿಸಿ ಸರಣಿ ವಶಪಡಿಸಿಕೊಳ್ಳುವ ಗುರಿ ಇರಿಸಿಕೊಂಡಿರುವ ಕಾರಣ ದ್ವಿತೀಯ ಏಕದಿನ ಪಂದ್ಯವು ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆಯಿದೆ.

ಪಂದ್ಯ ಆರಂಭದ ಸಮಯ: ಸಂಜೆ 4:30

(ಭಾರತದ ಕಾಲಮಾನ)

ತಂಡಗಳು

ಭಾರತ: ಕೆ.ಎಲ್.ರಾಹುಲ್(ನಾಯಕ), ಋತುರಾಜ್ ಗಾಯಕ್ವಾಡ್, ಬಿ.ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಕೇಶ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ರಿಂಕು ಸಿಂಗ್, ಆಕಾಶ್ ದೀಪ್, ಯಜುವೇಂದ್ರ ಚಹಾಲ್, ವಾಶಿಂಗ್ಟನ್ ಸುಂದರ್.

ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಮ್(ನಾಯಕ), ಒಟ್ನೀಲ್ ಬಾರ್ಟ್‌ಮನ್, ನಾಂಡ್ರೆ ಬರ್ಗೆರ್, ಟೋನಿ ಡಿ ರೊರ್ಝಿ, ರೀಝಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ ಮಹಾರಾಜ್, ಡೇವಿಡ್ ಮಿಲ್ಲರ್, ಮಿಹ್ಲಾಲಿ ಮಪೊಂಗ್‌ವಾನಾ, ವಿಯಾನ್ ಮುಲ್ದರ್, ಆಂಡಿಲ್ ಫೆಹ್ಲುಕ್ವಾಯೊ, ರಾಸ್ಸಿ ವಾನ್‌ಡರ್ ಡುಸ್ಸೆನ್, ತಬ್ರೈಝ್ ಶಮ್ಸಿ, ಲಿಝಾಡ್ ವಿಲಿಯಮ್ಸ್ ಹಾಗೂ ಕೈಲ್ ವೆರ್ರೆನ್ನೆ.

ಹೆಡ್-ಟು-ಹೆಡ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ಪರಸ್ಪರ 92 ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿವೆ. ಈ ಪೈಕಿ ಭಾರತವು 39 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ದಕ್ಷಿಣ ಆಫ್ರಿಕಾ 50 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.

ಆಡಿರುವ ಒಟ್ಟು ಪಂದ್ಯಗಳು: 92

ಭಾರತಕ್ಕೆ ಗೆಲುವು: 39

ದಕ್ಷಿಣ ಆಫ್ರಿಕಾಕ್ಕೆ ಜಯ: 50

ಫಲಿತಾಂಶರಹಿತ: 3

ಪಿಚ್ ಹಾಗೂ ವಾತಾವರಣ

ಹವಾಮಾನ ಪಂದ್ಯಕ್ಕೆ ಸೂಕ್ತವಾಗಿದ್ದು, ದಕ್ಷಿಣ ಆಫ್ರಿಕಾದ ಪ್ರಮುಖ ಸ್ಟೇಡಿಯಮ್‌ಗಳ ಪೈಕಿ ಇಲ್ಲಿನ ಪಿಚ್ ಸಾಮಾನ್ಯವಾಗಿ ಮಂದಗತಿಯಲ್ಲಿ ವರ್ತಿಸುತ್ತದೆ. ದೊಡ್ಡ ಮೊತ್ತವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ಸ್ಟೇಡಿಯಮ್‌ನಲ್ಲಿ ನಾಲ್ಕು ವರ್ಷಗಳಿಂದ ಏಕದಿನ ಪಂದ್ಯವನ್ನು ಆಯೋಜಿಸಿಲ್ಲ. ಈ ಪಿಚ್‌ನಲ್ಲಿ ಜಯ ಸಾಧಿಸಿ ಸರಣಿ ಗೆಲ್ಲಲು ಭಾರತ ಸಜ್ಜಾಗಿದೆ.

ಅಂಕಿ-ಅಂಶ

► ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯದಲ್ಲಿ 116 ರನ್ ಗಳಿಸಿ ಆಲೌಟಾಗಿತ್ತು. ಕಳೆದ ಮೂರು ಏಕದಿನ ಪಂದ್ಯಗಳಲ್ಲಿ ಮೊದಲ ಬಾರಿ ಭಾರತ ವಿರುದ್ಧ 100ಕ್ಕೂ ಅಧಿಕ ರನ್ ಗಳಿಸಿತು.

► ಅರ್ಷದೀಪ್ ಸಿಂಗ್ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದಿರುವ ಭಾರತದ ಏಕೈಕ ವೇಗದ ಬೌಲರ್ ಎನಿಸಿಕೊಂಡಿದ್ದರು.

► ಭಾರತದ ಬೌಲರ್‌ಗಳು 2023ರಲ್ಲಿ 8 ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿದ್ದಾರೆ. ಇದು ಕ್ಯಾಲೆಂಡರ್ ವರ್ಷದಲ್ಲಿ ತಂಡವೊಂದರ ಶ್ರೇಷ್ಠ ಸಾಧನೆಯಾಗಿದೆ.

► ಎಪ್ರಿಲ್ 2021ರ ನಂತರ ಸ್ವದೇಶದಲ್ಲಿ ನಾಲ್ಕನೇ ಏಕದಿನ ಸರಣಿ ಸೋಲಿನಿಂದ ಪಾರಾಗಲು ದಕ್ಷಿಣ ಆಫ್ರಿಕಾ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

ದಕ್ಷಿಣ ಆಫ್ರಿಕಾ ತಂಡ ಇಬ್ಬರು ಸ್ಪಿನ್ನರ್‌ಗಳಾದ ಕೇಶವ ಮಹಾರಾಜ್ ಹಾಗೂ ತಬ್ರೈಝ್ ಶಮ್ಸಿ ಅವರನ್ನು ಆಡುವ 11ರ ಬಳಗದಲ್ಲಿ ಆಡಿಸುವ ಸಾಧ್ಯತೆಯಿದೆ. ಜೋಹಾನ್ಸ್‌ಬಗ್‌ನಲ್ಲಿ ಜಯ ಸಾಧಿಸಿರುವ ಭಾರತವು ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡುವ ನಿರೀಕ್ಷೆ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News