ಎರಡನೇ ಟಿ-20: ಆಸೀಸ್ ವಿರುದ್ಧ ಇಂಗ್ಲೆಂಡ್ ಗೆ ರೋಚಕ ಜಯ

Update: 2024-09-14 02:35 GMT

PC: x.com/academy_dinda

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಶುಕ್ರವಾರ ಅತಿಥೇಯ ತಂಡ ಮೂರು ವಿಕೆಟ್ ಗಳ ರೋಚಕ ಜಯ ಸಾಧಿಸಿ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಇದರಿಂದಾಗಿ ಭಾನುವಾರ ಮ್ಯಾಂಚೆಸ್ಟರ್ ನಲ್ಲಿ ನಡೆಯುವ ಅಂತಿಮ ಪಂದ್ಯ ಕುತೂಹಲ ಕೆರಳಿಸಿದೆ.

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ 194 ರನ್ ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಲಿಯಾಮ್ ಲಿವಿಂಗ್ ಸ್ಟನ್ ಅವರ ಅಮೋಘ ಬ್ಯಾಟಿಂಗ್ (47 ಎಸೆತಗಳಲ್ಲಿ 87) ನೆರವಿನಿಂದ ಗೆಲುವಿನ ದಡ ಸೇರಿತು. ಇದು 50 ಪಂದ್ಯಗಳಲ್ಲಿ ಲಿವಿಂಗ್ ಸ್ಟನ್ ಅವರ ಎರಡನೇ ಅರ್ಧಶತಕವಾಗಿದೆ.

ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಬಳಿಕ ಜಾಕೋಬ್ ಬೆಥೆಲ್ (24 ಎಸೆತಗಳಲ್ಲಿ 44) ಅವರೊಂದಿಗೆ ನಿರ್ಣಾಯಕ 90 ರನ್ ಗಳ ಜತೆಯಾಟ ನೀಡಿದ ಲಿವಿಂಗ್ ಸ್ಟನ್ ಗೆಲುವಿನ ರೂವಾರಿ ಎನಿಸಿದರು.

ಇಂಗ್ಲೆಂಡ್ ನಾಯಕ ಫಿಲ್ ಸಾಲ್ಟ್ ಆಕ್ರಮಣಕಾರಿ ಆಟದೊಂದಿಗೆ ಇನಿಂಗ್ಸ್ ಆರಂಭಿಸಿ, ಮೂರನೇ ಓವರ್ ನಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿದರು. ಆದರೆ ಆಸ್ಟ್ರೇಲಿಯಾದ ಸಿಯಾನ್ ಅಬೋಟ್ ಅವರು ವಿಲ್ ಜಾಕ್ಸ್ ಮತ್ತು ಜೋರ್ಡನ್ ಕಾಕ್ಸ್ ಅವರ ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಗೆ ಆಘಾತ ನೀಡಿದರು. 23 ಎಸೆತಗಳಲ್ಲಿ 39 ರನ್ ಸಿಡಿಸಿದ ಸಾಲ್ಟ್ ಅವರನ್ನು ಅಬೋಟ್ ಅದ್ಭುತ ಕ್ಯಾಚ್ ನೊಂದಿಗೆ ಪೆವಿಲಿಯನ್ ಗೆ ಕಳುಹಿಸಿ ಇಂಗ್ಲೆಂಡ್ 9ನೇ ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತು.

ಆದರೆ ಲಿವಿಂಗ್ಸ್ಟನ್ ಆರು ಬೌಂಡರಿ ಹಾಗೂ ಐದು ಸಿಕ್ಸರ್ ಗಳ ಅದ್ಭುತ ಇನಿಂಗ್ಸ್ ಪ್ರದರ್ಶಿಸಿದರು. ಆರು ಎಸೆತಗಳು ಇರುವಂತೆಯೇ ಗೆಲುವಿನ ಗುರಿ ತಲುಪಿಸಿದರು. ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ ಮ್ಯಾಟ್ ಶಾರ್ಟ್, ಲಿವಿಂಗ್ ಸ್ಟನ್ ಅವರನ್ನು ಔಟ್ ಮಾಡಿದರೂ ಇಂಗ್ಲೆಂಡ್ ನಿರಾಯಾಸ ಗೆಲುವು ಪಡೆಯಿತು. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 28 ರನ್ ಗಳಿಂದ ಸೋಲು ಅನುಭವಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News