ನ.10 ರಂದು 2ನೇ ಟಿ-20: ಭಾರತ-ದಕ್ಷಿಣ ಆಫ್ರಿಕಾ ಹಣಾಹಣಿ
ಪೋರ್ಟ್ ಎಲಿಝಬೆತ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ರವಿವಾರ ಟಿ-20 ಸರಣಿಯ ಎರಡನೇ ಪಂದ್ಯವನ್ನು ಆಡಲಿದ್ದು, ಸೂರ್ಯಕುಮಾರ್ ಬಳಗವು ತನ್ನ ಮೊದಲ ಪಂದ್ಯದ ಪ್ರದರ್ಶನವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದೆ.
ಮೊದಲ ಟಿ-20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಶತಕದ(107 ರನ್, 50 ಎಸೆತ)ಬಲದಿಂದ ಭಾರತ ತಂಡವು 61 ರನ್ ಅಂತರದಿಂದ ಜಯ ಸಾಧಿಸಿ 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಗ್ರ ಕ್ರಮಾಂಕದಲ್ಲಿ ಸ್ಯಾಮ್ಸನ್ ಹೊರತುಪಡಿಸಿ ಇತರ ಪ್ರಮುಖ ಬ್ಯಾಟರ್‌ಗಳು ರನ್ ಕೊರತೆ ಎದುರಿಸಿದ್ದಾರೆ.
ಫಾರ್ಮ್‌ನಲ್ಲಿರುವ ವಿಕೆಟ್‌ಕೀಪರ್-ಬ್ಯಾಟರ್ ಸ್ಯಾಮ್ಸನ್ ಮೇಲೆ ಹೆಚ್ಚು ಹೊರೆ ಬೀಳದ ಹಾಗೆ ಭಾರತ ತಂಡವು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾಗಿದೆ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ತನ್ನ ಕಳಪೆ ಪ್ರದರ್ಶನ ಮುಂದುವರಿಸಿ ಅವಕಾಶಗಳನ್ನು ಕೈಚೆಲ್ಲುತ್ತಿರುವುದು ಟೀಮ್ ಮ್ಯಾನೇಜ್‌ಮೆಂಟ್‌ನ ಚಿಂತೆಗೆ ಕಾರಣವಾಗಿದೆ.
ಈ ವರ್ಷಾರಂಭದಲ್ಲಿ ಝಿಂಬಾಬ್ವೆ ವಿರುದ್ಧ ಹರಾರೆಯಲ್ಲಿ 47 ಎಸೆತಗಳಲ್ಲಿ ಶತಕ ಗಳಿಸಿದ ನಂತರ ಅಭಿಷೇಕ್ ಅವರು ರನ್‌ಗಾಗಿ ಪರದಾಟ ನಡೆಸುತ್ತಿದ್ದು 0,10,14,16, 15,4 ಹಾಗೂ 7 ರನ್ ಗಳಿಸಿದ್ದಾರೆ.
ಎಡಗೈ ಬ್ಯಾಟರ್ ಅಗ್ರ ಸರದಿಯಲ್ಲಿ ಸತತವಾಗಿ ವೈಫಲ್ಯವಾಗುತ್ತಿರುವ ಕಾರಣ ಭಾರತವು ಪರ್ಯಾಯ ಆಯ್ಕೆಯತ್ತ ಮರು ಚಿಂತಿಸುವ ಒತ್ತಡದಲ್ಲಿದೆ. ಆದರೆ ತಕ್ಷಣಕ್ಕೆ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ.
ತಿಲಕ್ ವರ್ಮಾ ಮೊದಲ ಪಂದ್ಯದಲ್ಲಿ 18 ಎಸೆತಗಳಲ್ಲಿ 33 ರನ್ ಗಳಿಸಿ ಭರವಸೆ ಮೂಡಿಸಿದ್ದಾರೆ. ಆದರೆ ಅವರು ದೊಡ್ಡ ಮೊತ್ತ ಗಳಿಸುವ ಅಗತ್ಯವಿದೆ.
ನಾಯಕ ಸೂರ್ಯಕುಮಾರ್ ಯಾದವ್ ಉತ್ತಮ ಆರಂಭ ಪಡೆದಿದ್ದರೂ ಅಲ್ಪ ಮೊತ್ತಕ್ಕೆ ಔಟಾಗಿದ್ದಾರೆ. ಮೊದಲ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಮೇಲ್ನೋಟಕ್ಕೆ ಬಲಿಷ್ಠವಾಗಿ ಕಂಡು ಬರುತ್ತಿರುವ ಭಾರತದ ಮಧ್ಯಮ ಸರದಿಯು ಜೊತೆಯಾಟ ರೂಪಿಸಲು ವಿಫಲವಾಗುತ್ತಿದೆ. ಅದು ಮೊದಲ ಪಂದ್ಯದಲ್ಲಿ ಕೇವಲ 36 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. 2 ವಿಕೆಟ್‌ಗೆ 166 ರನ್ ಗಳಿಸಿದ್ದ ಭಾರತವು 20 ಓವರ್‌ಗಳಲ್ಲಿ 202 ರನ್ ಗಳಿಸುವಾಗ 8 ವಿಕೆಟ್ ಕಳೆದುಕೊಂಡಿತು.
ಬೌಲಿಂಗ್ ವಿಭಾಗದಲ್ಲಿ ಭಾರತವು ಉತ್ತಮ ಪ್ರದರ್ಶನ ನೀಡಿ ದಕ್ಷಿಣ ಆಫ್ರಿಕಾ ತಂಡವನ್ನು 17.5 ಓವರ್‌ಗಳಲ್ಲಿ ಕೇವಲ 141 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಸ್ಪಿನ್ನರ್ ವರುಣ್ ಚಕ್ರವರ್ತಿ ಮೂರು ವಿಕೆಟ್ ಉರುಳಿಸಿ ಬಾಂಗ್ಲಾದೇಶ ಸರಣಿಯ ಅಮೋಘ ಪ್ರದರ್ಶನವನ್ನ್ನು ದ.ಆಫ್ರಿಕಾ ನೆಲದಲ್ಲೂ ಮುಂದುವರಿಸಿದ್ದಾರೆ. ರವಿ ಬಿಷ್ಣೋಯಿ(3-28)ಕೂಡ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.
ಈ ಇಬ್ಬರು ಸ್ಪಿನ್ನರ್‌ಗಳು ದಕ್ಷಿಣ ಆಫ್ರಿಕಾದ ಬಲಿಷ್ಠ ಬ್ಯಾಟಿಂಗ್ ಸರದಿಗೆ ಸವಾಲಾಗಿ ಪರಿಣಮಿಸಿದ್ದರು.
ಭಾರತದ ಅವಳಿ ವೇಗಿಗಳಾದ ಅರ್ಷದೀಪ್ ಸಿಂಗ್ ಹಾಗೂ ಅವೇಶ್ ಖಾನ್ ತಮ್ಮದೇ ಪಾತ್ರ ನಿಭಾಯಿಸಿದ್ದಾರೆ. ಭಾರತ ತಂಡವು 2ನೇ ಟಿ20 ಪಂದ್ಯದಲ್ಲಿ ಮತ್ತೊಂದು ಉತ್ತಮ ಪ್ರದರ್ಶನ ನೀಡಿ ಸರಣಿಯಲ್ಲಿ 2-0 ಮುನ್ನಡೆ ಪಡೆಯುವ ವಿಶ್ವಾಸದಲ್ಲಿದೆ.
ಜೂನ್‌ನಲ್ಲಿ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಸೋತ ನಂತರ ದ.ಆಫ್ರಿಕಾ ತಂಡವು ಇದೀಗ ಭಾರತದ ಎದುರು ಸತತ 2ನೇ ಸೋಲು ಅನುಭವಿಸಿದೆ. ಪ್ರಮುಖ ಆಟಗಾರರಾದ ಕ್ವಿಂಟನ್ ಡಿಕಾಕ್, ಕಾಗಿಸೊ ರಬಾಡ, ಅನ್ರಿಚ್ ನೊರ್ಟ್ಚೆ ಹಾಗೂ ತಬ್ರೈಝ್ ಶಮ್ಸಿ ಸದ್ಯ ತಂಡದಲ್ಲಿ ಇಲ್ಲ. ಕೆಲವು ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಹರಿಣ ಪಡೆ ಪರದಾಡುತ್ತಿದೆ.
ಈ ಎಲ್ಲ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ 2ನೇ ಟಿ-20 ಪಂದ್ಯವು ದ.ಆಫ್ರಿಕಾದ ಪಾಲಿಗೆ ಕಠಿಣ ಸವಾಲಾಗಿದೆ. ವೆಸ್ಟ್‌ಇಂಡೀಸ್ ವಿರುದ್ಧ 0-3 ಸೋಲು ಹಾಗೂ ಐರ್‌ಲ್ಯಾಂಡ್ ವಿರುದ್ಧ ಡ್ರಾ ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡವು ನಾಯಕ ಮರ್ಕ್ರಮ್, ಡೇವಿಡ್ ಮಿಲ್ಲರ್ ಹಾಗೂ ಹೆನ್ರಿಕ್ ಕ್ಲಾಸೆನ್‌ರಂತಹ ಸೀನಿಯರ್ ಆಟಗಾರರ ಸಹಾಯದಿಂದ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ.