ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಬಗ್ಗೆ ಕಟಕಿಯಾಡಿದ ಪಾಂಟಿಂಗ್ ಗೆ ತಿರುಗೇಟು ನೀಡಿದ ಗೌತಮ್ ಗಂಭೀರ್
ಪರ್ತ್ : “ವಿರಾಟ್ ಕೊಹ್ಲಿ ಕಳೆದ ಐದು ವರ್ಷಗಳಲ್ಲಿ ಕೇವಲ ಎರಡು ಟೆಸ್ಟ್ ಕ್ರಿಕೆಟ್ ಶತಕ ಗಳಿಸಿದ್ದು, ಬೇರೆ ಯಾವುದೇ ಅಂತಾರಾಷ್ಟ್ರೀಯ ತಂಡದಲ್ಲಾಗಿದ್ದರೆ ಸ್ಥಾನವನ್ನೇ ಪಡೆಯುತ್ತಿರಲಿಲ್ಲ” ಎಂಬ ಮಾಜಿ ಆಸ್ಟ್ರೇಲಿಯಾ ಆಟಗಾರ ರಿಕಿ ಪಾಂಟಿಂಗ್ ಹೇಳಿಕೆಗೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಪರ್ತ್ ನಲ್ಲಿ ನವೆಂಬರ್ 22ರಿಂದ ಪ್ರಾರಂಭಗೊಳ್ಳಲಿರುವ ಪ್ರಥಮ ಟೆಸ್ಟ್ ಗೂ ಮುನ್ನ, ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೌತಮ್ ಗಂಭೀರ್, ಪತ್ರಕರ್ತರಿಂದ ಕೆಲವು ಕಠಿಣ ಪ್ರಶ್ನೆಗಳನ್ನು ಎದುರಿಸಿದರು. ಆ ಪೈಕಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಬಗ್ಗೆ ರಿಕಿ ಪಾಂಟಿಂಗ್ ನೀಡಿರುವ ಹೇಳಿಕೆಯೂ ಒಂದಾಗಿತ್ತು. ಈ ಪ್ರಶ್ನೆ ಕೇಳುತ್ತಲೇ ಕುಪಿತರಾದ ಗೌತಮ್ ಗಂಭೀರ್, “ರಿಕಿ ಪಾಂಟಿಂಗ್ ಗೂ ಭಾರತ ತಂಡಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಆಸ್ಟ್ರೇಲಿಯ ಕ್ರಿಕೆಟ್ ತಂಡದ ಬಗ್ಗೆ ಕಾಳಜಿ ವಹಿಸುವುದು ಉತ್ತಮ” ಎಂದು ತಿರುಗೇಟು ನೀಡಿದ್ದಾರೆ.
ನಾಯಕ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಅದ್ಭುತ ಆಟಗಾರರಾಗಿದ್ದು, ಅವರಲ್ಲಿ ಆಟದ ಹಸಿವು ಎದ್ದು ಕಾಣುತ್ತಿದೆ. ಅವರು ಆಟದ ಬಗ್ಗೆ ಈಗಲೂ ಕಠಿಣ ಪರಿಶ್ರಮ ಹಾಕುತ್ತಿದ್ದು, ಆಟದ ಬಗ್ಗೆ ತೀವ್ರ ವ್ಯಾಮೋಹ ಹೊಂದಿದ್ದಾರೆ. ಡ್ರೆಸಿಂಗ್ ರೂಮ್ ನಲ್ಲಿನ ಈ ಹಸಿವು ನನಗೆ ಬಹಳ ಮುಖ್ಯವಾಗಿದೆ. ಡ್ರೆಸಿಂಗ್ ರೂಮ್ ನಲ್ಲಿ ಎಲ್ಲರ ಮಧ್ಯೆ ಅನ್ಯೋನ್ಯತೆಯಿದೆ. ಕಳೆದ ಸರಣಿಯ ಸೋಲಿನ ನಂತರ ವಿಶೇಷವಾಗಿ ಎಲ್ಲರಲ್ಲೂ ಆಟದ ಹಸಿವು ಹೆಚ್ಚಾಗಿದೆ” ಎಂದು ಅವರು ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
“ವಿರಾಟ್ ಕೊಹ್ಲಿ ಕಳೆದ ಐದು ವರ್ಷಗಳಲ್ಲಿ ಕೇವಲ ಎರಡು ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ ಎಂದು ನನಗೆ ತಿಳಿಯಿತು. ಇದು ನನಗೆ ಸರಿ ಕಾಣುತ್ತಿಲ್ಲ. ಒಂದು ವೇಳೆ ಇದು ಸರಿಯಾಗಿದ್ದರೆ, ಅಲ್ಲೇನೂ ಸಮಸ್ಯೆಯಿದೆ ಎಂದು ಅರ್ಥ” ಎಂದು ಐಸಿಸಿ ಪರಾಮರ್ಶೆ ಸಭೆಯಲ್ಲಿ ರಿಕಿ ಪಾಂಟಿಂಗ್ ಅಭಿಪ್ರಾಯ ಪಟ್ಟಿದ್ದರು.