ಎರಡನೇ ಟಿ20 | ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಜಯಭೇರಿ
ಬಾರ್ಬಡೋಸ್ : ನಾಯಕ ಜೋಸ್ ಬಟ್ಲರ್ ಭರ್ಜರಿ ಬ್ಯಾಟಿಂಗ್(83 ರನ್, 45 ಎಸೆತ, 8 ಬೌಂಡರಿ, 6 ಸಿಕ್ಸರ್)ನೆರವಿನಿಂದ ಇಂಗ್ಲೆಂಡ್ ಕ್ರಿಕೆಟ್ ತಂಡವು ವೆಸ್ಟ್ಇಂಡೀಸ್ ತಂಡದ ವಿರುದ್ಧದ ಎರಡನೇ ಟಿ20 ಅಂತರ್ರಾಷ್ಟ್ರೀಯ ಪಂದ್ಯವನ್ನು 7 ವಿಕೆಟ್ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡ 24 ಗಂಟೆಗಳ ನಂತರ ರವಿವಾರ ನಡೆದ 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ಗೆ ಇಳಿಸಲ್ಪಟ್ಟ ವೆಸ್ಟ್ಇಂಡೀಸ್ ತಂಡವು ಕೆಳ ಕ್ರಮಾಂಕದ ಬ್ಯಾಟರ್ ಗಳ ನೆರವಿನಿಂದ ಅಂತಿಮ 2 ಓವರ್ ಗಳಲ್ಲಿ 32 ರನ್ ಕಲೆ ಹಾಕಿ 20 ಓವರ್ ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 158 ರನ್ ಗಳಿಸಿತು.
ಗೆಲ್ಲಲು 159 ರನ್ ಗುರಿ ಪಡೆದ ಇಂಗ್ಲೆಂಡ್ ತಂಡವು 14.5 ಓವರ್ ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 161 ರನ್ ಗಳಿಸಿತು.
ಶನಿವಾರ ಮೊದಲ ಪಂದ್ಯದಲ್ಲಿ ಅಜೇಯ ಶತಕ ಗಳಿಸಿದ್ದ ಫಿಲ್ ಸಾಲ್ಟ್ (0)ಇಂಗ್ಲೆಂಡ್ನ ರನ್ ಚೇಸ್ ವೇಳೆ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು 4 ತಿಂಗಳ ನಂತರ ತಂಡಕ್ಕೆ ವಾಪಸಾಗಿರುವ ನಾಯಕ ಬಟ್ಲರ್ ಆರು ಸಿಕ್ಸರ್ ಗಳನ್ನು ಸಿಡಿಸಿ ಪ್ರವಾಸಿಗರು ಸರಣಿಯಲ್ಲಿ ಹಿಡಿತ ಸಾಧಿಸುವಲ್ಲಿ ನೆರವಾದರು. ಇನ್ನೋರ್ವ ಆರಂಭಿಕ ವಿಲ್ ಜಾಕ್ಸ್ (38 ರನ್, 29 ಎಸೆತ) ಜೊತೆಗೆ 2ನೇ ವಿಕೆಟ್ಗೆ 129 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು.
ಜಾಕ್ಸ್ ಹಾಗೂ ಬಟ್ಲರ್ ಬೆನ್ನುಬೆನ್ನಿಗೆ ಪೆವಿಲಿಯನ್ಗೆ ಸೇರಿದಾಗ ಔಟಾಗದೆ 23 ರನ್ (11 ಎಸೆತ, 3 ಬೌಂಡರಿ, 1 ಸಿಕ್ಸರ್) ಗಳಿಸಿದ ಲಿಯಾಮ್ ಲಿವಿಂಗ್ಸ್ಟೋನ್ ಸಿಕ್ಸರ್ ಸಿಡಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಇನ್ನೂ 5 ಓವರ್ ಬಾಕಿ ಇರುವಾಗಲೇ ಗೆಲುವಿನ ದಡ ಸೇರಿಸಿದರು. ಇಂಗ್ಲೆಂಡ್ ತಂಡವು ಗುರುವಾರ ನಡೆಯಲಿರುವ 3ನೇ ಪಂದ್ಯದಲ್ಲಿ ಜಯ ಸಾಧಿಸಿ ಇನ್ನೂ 2 ಪಂದ್ಯಗಳು ಬಾಕಿ ಇರುವಾಗಲೇ 2019ರ ನಂತರ ಕೆರಿಬಿಯನ್ ನಾಡಿನಲ್ಲಿ ಮೊದಲ ಬಾರಿ ಸೀಮಿತ ಓವರ್ ಕ್ರಿಕೆಟ್ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.
ಟಾಸ್ ಜಯಿಸಿದ ಇಂಗ್ಲೆಂಡ್ ನಾಯಕ ಬಟ್ಲರ್ ಆತಿಥೇಯರನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದರು. ಮೊದಲ ಟಿ20 ಪಂದ್ಯದಲ್ಲಿ ನಿರಾಶೆಗೊಳಿಸಿದ್ದ ಪ್ರಮುಖ ವೇಗದ ಬೌಲರ್ ಜೋಫ್ರಾ ಆರ್ಚರ್(1-31)ಎವಿನ್ ಲೆವಿಸ್(8 ರನ್)ವಿಕೆಟನ್ನು ಬೇಗನೆ ಉರುಳಿಸಿದರು. ಮೊದಲ 4 ಓವರ್ ಗಳಲ್ಲಿ ವೆಸ್ಟ್ಇಂಡೀಸ್ ತಂಡವು 35 ರನ್ಗೆ 3 ವಿಕೆಟ್ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು.
ನಾಯಕ ರೋವ್ಮನ್ ಪೊವೆಲ್ ಅವರ ಉಪಯುಕ್ತ 43 ರನ್(41 ಎಸೆತ, 2 ಬೌಂಡರಿ, 2 ಸಿಕ್ಸರ್) ಸಹಾಯದಿಂದ ವಿಂಡೀಸ್ ತಂಡವು ಚೇತರಿಸಿಕೊಂಡಿತು. 12 ಎಸೆತಗಳಲ್ಲಿ 22 ರನ್ ಗಳಿಸಿದ ರೊಮಾರಿಯೊ ಶೆಫರ್ಡ್ ಅವರು ವಿಂಡೀಸ್ಗೆ ಆಸರೆಯಾದರು.
ಇಂಗ್ಲೆಂಡ್ ಬೌಲಿಂಗ್ನಲ್ಲಿ ಲಿವಿಂಗ್ಸ್ಟೋನ್(2-16), ಸಾಕಿಬ್ ಮಹ್ಮೂದ್(2-20) ಹಾಗೂ ಡಾನ್ ಮೌಸ್ಲೆ (2-29)ತಲಾ 2 ವಿಕೆಟ್ಗಳನ್ನು ಪಡೆದರು.
83 ರನ್ ಗಳಿಸಿ ಇಂಗ್ಲೆಂಡ್ ತಂಡವು 31 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಲು ಕಾರಣವಾದ ಜೋಸ್ ಬಟ್ಲರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.